ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!
ಫೇಕ್‌ನ್ಯೂಸ್ ವಿರುದ್ಧ ವಾಟ್ಸ್ಆ್ಯಪ್ ವಾರ್ ಶುರು ಮಾಡಿದೆ. ಕೋವಿಡ್-19 ಸಂದರ್ಭದಲ್ಲಿ ಪ್ರಪಂಚದಾದ್ಯಂತ ಸುಳ್ಳುಗೋಪುರಗಳನ್ನು ಸತ್ಯಸಂಗತಿಗಳನ್ನೂ ನಾಚಿಸುವಂತೆ ಕಟ್ಟಿಕೊಳ್ಳತೊಡಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಒಂದೊಂದಾಗಿಯೇ ಕೆಡವಲು ಖೆಡ್ಡಾಗಳನ್ನು ತೋಡುತ್ತಲೇ ಇದೆ. ಈಗ ಚಾಟ್‌ಬಾಟ್‌ವೊಂದು ಸಿದ್ಧವಾಗಿದೆ. ಈಗಾಗಲೇ ಸುಳ್ಳುಕೋರರ ಮಾಹಿತಿಗಳಿಗೆ ಬ್ರೇಕ್ ಬೀಳುತ್ತಿದೆ. ಹಾಗಾದರೆ ಏನಿದು.. ನೋಡೋಣ ಬನ್ನಿ...
ಕೋವಿಡ್-19 ಎಂಬ ವೈರಾಣು ಕೊರೋನಾ ಎಂಬ ಮಹಾಮಾರಿ ಮನುಷ್ಯನ ದೇಹದೊಳಗೆ ನುಸುಳಿ ಪ್ರಾಣವನ್ನು ಕಿತ್ತು ತಿನ್ನುತ್ತಿದ್ದರೆ, ಇತ್ತ ಅದೇ ಕೋವಿಡ್-19ರ ಮಹಾ ಸುಳ್ಳುಸುದ್ದಿ ರೂಪವನ್ನು ತಾಳಿ ಸಾಮಾಜಿಕ ಜಾಲತಾಣವೆಂಬ ಬೃಹತ್ ಕೂಪದೊಳಗೆ ನುಸುಳಿ ಮನುಷ್ಯನ ಮನಸ್ಸಿನ ಒಳಹೊಕ್ಕು ಭಯ-ಆತಂಕವನ್ನು ಸೃಷ್ಟಿಮಾಡುತ್ತಿದೆ. ಮೊದಲಿನಿಂದಲೂ ಇಂಥ ಸುಳ್ಳು ಸುದ್ದಿಗಳ ತಡೆಗೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿರುವ ವಾಟ್ಸ್ಆ್ಯಪ್ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಐಎಫ್‌ಸಿಎನ್ ಚಾಟ್‌ಬಾಟ್ ಅನ್ನು ಪರಿಚಯಿಸಿದೆ.
ಫೇಕ್‌ನ್ಯೂಸ್ ವಿರುದ್ಧ ಸಮರ ಸಾರಿರುವ ವಾಟ್ಸ್ಆ್ಯಪ್ ಅದರಲ್ಲೂ ಕೋವಿಡ್-19ರ ಸಂಬಂಧ ಬರುವ ಎಲ್ಲ ಸುದ್ದಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈಗ ಐಎಫ್‌ಸಿಎನ್ (Poynter Institute’s International Fact Checking Network - IFCN) ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕಲಾಗುತ್ತಿದೆ.
ಈಗೆಲ್ಲವೂ ಪ್ರೊಫೆಶನಲ್
ಹೌದು, ಸುಳ್ಳು ಸುದ್ದಿ ಹರಡುವಿಕೆ, ಅದರ ಸತ್ಯಾಸತ್ಯತೆ ಏನೆಂಬುದನ್ನೂ ಗಮನಿಸಿದೆ ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿಯೂ, ಇನ್ನು ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೋ ಆ ಮೆಸೇಜ್‌ನ ನೈಜತೆಯನ್ನು ಮರುಪರಿಶೀಲಿಸುವ ಗೋಜಿಗೇ ಹೋಗದೆ ಫಾರ್ವರ್ಡ್ ಮಾಡಿಬಿಟ್ಟಿರುತ್ತಾರೆ. ಹೀಗಾಗಿ ಇಂಥ ಕೆಲಸವನ್ನು ತಾವಾದರೂ ಮಾಡಬೇಕು ಎಂಬ ನಿಟ್ಟಿನಲ್ಲಿ ಪ್ರೊಫೆಶನಲ್ ಫ್ಯಾಕ್ಟ್ ಚೆಕರ್ಸ್ ಬಳಿಯೇ ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚಿಸಲಾಗುತ್ತದೆ.
ಇದನ್ನು ಓದಿ; ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ...
4 ಸಾವಿರ ಸುಳ್ಳು ಸುದ್ದಿ ಪತ್ತೆ
ಪಾಯಿಂಟರ್ ಇನ್‌ಸ್ಟಿಟ್ಯೂಟ್ ಈ ಸುಳ್ಳು ಸುದ್ದಿ ಪತ್ತೆ ಮಾಡಿದ್ದರ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಇದುವರೆಗೆ 74 ದೇಶಗಳಲ್ಲಿ ಕೋವಿಡ್-19ಕ್ಕೆ ಸಂಬಂಧಪಟ್ಟಂತೆ ಸುಮಾರು 4 ಸಾವಿರಕ್ಕೂ ಹೆಚ್ಚು ಸುಳ್ಳುಸುದ್ದಿಗಳನ್ನು ಪತ್ತೆಹಚ್ಚಿ ತಡೆ ನೀಡಲಾಗಿದೆ. ಅಲ್ಲದೆ, ಐಎಫ್‌ಸಿಎನ್ ನಿಂದ ಪ್ರತಿದಿನ ಡೇಟಾಬೇಸ್ ಅಪ್ಡೇಡ್ ಆಗುತ್ತಲೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಒಮ್ಮೆಲೆ ಕೋಟ್ಯಂತರ ಮಂದಿ ತಮ್ಮ ಸ್ನೇಹಿತರು, ಕುಟುಂಬದವರು, ಆಪ್ತರ ಬಳಿ ವಾಟ್ಸ್ಆ್ಯಪ್ ಬಳಕೆ ಮಾಡುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಸಿಗುವ ಒಂದು ಸುಳ್ಳು ಸುದ್ದಿಗೆ ಯಾವುದೇ ರೀ-ಚೆಕ್ ನಡೆಯದಿದ್ದರೆ ಕೊನೆಗೆ ಅದು ಮಾಡುವ ಎಡವಟ್ಟು ಎಷ್ಟು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ. ಆದರೆ, ಇಷ್ಟೆಲ್ಲ ಮಂದಿ ಫಾರ್ವರ್ಡ್ ಮಾಡಿಕೊಳ್ಳುವ ಕೋಟ್ಯಂತರ ಮೆಸೇಜ್‌ಗಳಲ್ಲಿ ಸುಳ್ಳು ಸುದ್ದಿ ಪತ್ತೆಹಚ್ಚುವುದೂ ನಿಜವಾದ ಸಾಹಸವೇ ಸರಿ ಎಂದು ವಾಟ್ಸ್ಆ್ಯಪ್ ಹೇಳಿಕೊಂಡಿದೆ.
ಇದನ್ನು ಓದಿ; ಲಾಕ್‌ಡೌನ್ ಅವಧಿಯಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಗಳಿವು!...
ಐಎಫ್‌ಸಿಎನ್ ಚಾಟ್‌ಬಾಟ್ ಬಳಕೆ ಹೇಗೆ?
ಈ ಐಎಫ್‌ಸಿಎನ್ ಚಾಟ್‌ಬಾಟ್ ಅನ್ನು ಬಳಸಬೇಕಾದರೆ, +1 (727)2912606 ನಂಬರ್ ಅನ್ನು ಸೇವ್ ಮಾಡಿಕೊಳ್ಳಬೇಕು. ಬಳಿಕ ಅದಕ್ಕೆ ನಿಮ್ಮ ವಾಟ್ಸ್ಆ್ಯಪ್ ನಿಂದ ಹಾಯ್ (HI) ಎಂದು ಮೆಸೇಜ್ ಟೈಪಿಸಿ ಹಾಕಬೇಕು. ಇಲ್ಲವಾದರೆ, poy.nu/ifcnbot ಗೆ ಭೇಟಿ ಕೊಟ್ಟು ಕ್ಲಿಕ್ ಮಾಡಿದರೂ ಸಾಕು.
ಸದ್ಯ ಇಂಗ್ಲಿಷ್‌ನಲ್ಲಿ ಮಾತ್ರ
ಈ ಚಾಟ್‌ಬಾಟ್ ಸದ್ಯ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದ್ದು, ಆದಷ್ಟು ಶೀಘ್ರದಲ್ಲಿ ಹಿಂದಿ, ಸ್ಪ್ಯಾನಿಷ್ ಸೇರಿದಂತೆ ಉಳಿದ ಭಾಷೆಗಳಲ್ಲೂ ಬರಲಿದೆ ಎಂದು ವಾಟ್ಸ್ಆ್ಯಪ್ ಹೇಳಿಕೊಂಡಿದೆ. ಹೀಗೆ ಎಲ್ಲ ಭಾಷೆಗಳಲ್ಲೂ ಬಳಕೆ ಪ್ರಾರಂಭವಾದ ಮೇಲೆ ಇನ್ನೂ ಹೆಚ್ಚಿನ ಸುಳ್ಳುಸುದ್ದಿಗಳಿಗೆ ಕಡಿವಾಣ ಬೀಳಲಿದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದೆ.
ಇದನ್ನು ಓದಿ; ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!...
ಈ ಹಿಂದಿನ ಪ್ರಮುಖ ಕ್ರಮಗಳು
ಈಗಾಗಲೇ ಬಹಳಷ್ಟು ಬಾರಿ ಫಾರ್ವರ್ಡ್ ಆಗಿರುವ ಮೆಸೇಜ್‌ಗಳಿಗೆ ಕೊಕ್ಕೆ ಹಾಕಿ, ಅಂಥ ಮೆಸೇಜ್‌ಗಳನ್ನು ಒಬ್ಬರು ಒಮ್ಮೆ ಒಬ್ಬರಿಗೆ ಮಾತ್ರ ಕಳಿಸಲು ಸಾಧ್ಯವಾಗುಂತಹ ಫೀಚರ್ ಅನ್ನು ಪರಿಚಯಿಸಿತ್ತು. ಅಲ್ಲದೆ, ಬಹಳಷ್ಟು ಬಾರಿ ಫಾರ್ವಡ್ ಆಗುತ್ತಿರುವ ಸುದ್ದಿಗಳ ನೈಜತೆ ತಿಳಿದುಕೊಳ್ಳಲು ಆ ಫಾರ್ವರ್ಡ್ ಐಕಾನ್ ಪಕ್ಕದಲ್ಲಿ ಸರ್ಚ್ ಬಾರ್ ಅನ್ನು ನೀಡುವ ಮೂಲಕ ಅದರ ಮೇಲೆ ಕ್ಕಿಕ್ಕಿಸಿದರೆ ಫ್ಯಾಕ್ಟ್ ಚೆಕ್ ಆಯ್ಕೆಗೆ ಹೋಗುವಂತಹ ಫೀಚರ್ ಅನ್ನೂ ಪರಿಚಯಿಸಿ, ಆ ಸುದ್ದಿಯ ನೈಜತೆಯನ್ನು ಸ್ವತಃ ಅರಿಯುವ ಅವಕಾಶವನ್ನು ಕಲ್ಪಿಸಿತ್ತು. ಇಂತಹ ಹಲವಾರು ಕಠಿಣ ಕ್ರಮಗಳಿಂದ ಸುಳ್ಳು ಸುದ್ದಿಗಳ ಶೇರಿಂಗ್ ಪ್ರಮಾಣ ಶೇ. 70ರಷ್ಟು ಕಡಿಮೆಯಾಗುವ ಮೂಲಕ ಮೂಲ ಉದ್ದೇಶ ಯಶಸ್ವಿಯಾಗುವಂತೆ ಮಾಡಿತ್ತು.