ಈ ಕೊರೋನಾ ಮಹಾಮಾರಿ ಬಂದು ಸಾವಿರಾರು ಮಂದಿಯ ಜೀವ ಹೋಗಿದ್ದರೆ, ಲಕ್ಷಾಂತರ ಮಂದಿ ಜೀವಕ್ಕೆ ಕುತ್ತು ಬಂದಿದೆ. ಇದು ಅದೆಷ್ಟೋ ಮಂದಿಯ ಜೀವನವನ್ನು ಕಿತ್ತುಕೊಂಡಂತಾಗಿದೆ. ಎಲ್ಲಿಂದಲೋ ಬಂದು ಯಾವುದೋ ಗೊತ್ತಿಲ್ಲದ ಊರಿನಲ್ಲಿ ಅಂದಿನ ತುತ್ತಿಗೆ ಅಂದೇ ದುಡಿದು ತಿನ್ನುವವರ ಪರಿಸ್ಥಿತಿ ಹೇಳತೀರದಾಗಿದೆ. ಇಂಥವರ ನೆರವಿಗೆಂದು ಸರ್ಕಾರಗಳು, ಪ್ರಮುಖ ನಗರಗಳಲ್ಲಿ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿದೆ. ಇದಕ್ಕೆ ಈಗ ಗೂಗಲ್ ಸಹ ಕೈಜೋಡಿಸಿದೆ.

ಇದಕ್ಕಾಗಿ ಸರ್ಕಾರದಿಂದ ಚಾಲ್ತಿಯಲ್ಲಿರುವ ವಸತಿ ವ್ಯವಸ್ಥೆಯ ಫುಲ್ ಡೀಟೇಲ್ಸ್ ಗೂಗಲ್ ಬಳಿ ಲಭ್ಯವಿದ್ದು, ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಮತ್ತು ಗೂಗಲ್ ಅಸಿಸ್ಟಂಟ್‌ಗಳಲ್ಲಿ ಯಾವುದಾದರೂ ಒಂದರಲ್ಲಿ ಹುಡುಕಿದರೂ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗಲಿದೆ. ಗೂಗಲ್‌ ಮಾಹಿತಿ ಪ್ರಕಾರ, ಪ್ರಸ್ತುತ 30ಕ್ಕೂ ಹೆಚ್ಚು ನಗರಗಳಲ್ಲಿ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೂ ಹೆಚ್ಚಿನ ನಗರಗಳಲ್ಲಿ ಇರುವ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಗೂಗಲ್ ಕಾರ್ಯೋನ್ಮುಖವಾಗಿದೆ. ಈ ಮೂಲಕ ವಲಸೆ ಕಾರ್ಮಿಕರ ನೆರವಿಗೆ ಸರ್ಕಾರದ (mygovindia) ಜೊತೆ ಕೈಜೋಡಿಸಿದೆ.

ಇದನ್ನೂ ಓದಿ: ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ಇಂಗ್ಲಿಷ್‌ನಲ್ಲಿದೆ ಪ್ರಾದೇಶಿಕ ಭಾಷೆಯಲ್ಲೂ ಬರತ್ತೆ
ಸದ್ಯ ಈ ಎಲ್ಲ ಮಾಹಿತಿಗಳು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಾಗುತ್ತಿದ್ದು, ಶೀಘ್ರದಲ್ಲಿ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ನೀಡಲಾಗುತ್ತದೆ ಎಂದು ಗೂಗಲ್ ತಿಳಿಸಿದೆ. ಅಲ್ಲದೆ, ಇದರ ಅಗತ್ಯ ಇರುವವರು ನಿಮ್ಮ ಕಣ್ಣಿಗೆ ಬಿದ್ದರೆ ಸ್ವಪ್ರೇರಣೆಯಿಂದ ನೀವೇ ಈ ಜಾಗಗಳನ್ನು ಗೂಗಲ್ ಮೂಲಕ ಪರಿಶೀಲಿಸಿ ಅಂಥವರಿಗೆ ತಿಳಿಸಿ ಎಂದು ಸಂಸ್ಥೆ ಕೇಳಿಕೊಂಡಿದೆ. 

ಸ್ಥಳ ನೋಡಲು ನೀವೇನು ಮಾಡಬೇಕು?
ಫುಡ್ ಶೆಲ್ಟರ್ ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ, <ನಗರ ಹೆಸರು > ಅಥವಾ ನೈಟ್ ಶೆಲ್ಟರ್ ಎಂದು ಟೈಪ್ ಮಾಡಿ, <ನಗರ ಹೆಸರು > ಹಾಕಿದರೆ ಸಾಕು. ಇನ್ನು ಇದೇ ಮಾದರಿಯಲ್ಲಿ ವಾಯ್ಸ್ ಮೂಲಕ ಹೇಳಿದರೆ ಸಾಕು. ಜಿಯೋ ಫೋನ್ ಬಳಕೆದಾರರು ಗೂಗಲ್ ಅಸಿಸ್ಟಂಟ್ ಮೂಲಕ ವಾಸ್ತವ್ಯದ ಮಾಹಿತಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?

ಫೋನ್ ಇಲ್ಲದಿದ್ದವರಿಗೆ ಸಹಾಯ ಮಾಡಿ
ಹೀಗೆ ಎಲ್ಲ ಕಾರ್ಮಿಕರು, ನಿರಾಶ್ರಿತರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಜೊತೆಗೆ ಸರ್ಕಾರದಿಂದ ಇಂಥದ್ದೊಂದು ವ್ಯವಸ್ಥೆ ಇದೆ ಎಂಬುದೂ ಇವರ ಗಮನಕ್ಕೆ ಬಂದಿರುವುದಿಲ್ಲ. ಈ ಕಾರಣಕ್ಕಾಗಿಯೇ ಸ್ವಯಂಸೇವಕರು, ಎನ್‌ಜಿಒಗಳು ಮತ್ತು ಟ್ರಾಫಿಕ್ ಅಧಿಕಾರಿಗಳ ಸಹಾಯವನ್ನು ಗೂಗಲ್ ಯಾಚಿಸಿದೆ. ಇಂಥವರು ಕಂಡರೆ ಮಾಹಿತಿ ನೀಡಿ ಸಹಾಯ ಮಾಡಿ ಎಂದು ಕೋರಿಕೊಂಡಿದೆ. ಆದರೆ, ಇದು ಪ್ರಾದೇಶಿಕ ಭಾಷೆಯಲ್ಲಿ ಇನ್ನೂ ಬಂದಿಲ್ಲ ಹಾಗೂ ಇಂತಹದ್ದೊಂದು ಮಾಹಿತಿ ಇದೆ ಎಂಬುದೇ ಗೊತ್ತಿಲ್ಲದ ಇಂಥವರಿಗೆ ತಿಳಿ ಹೇಳುವಷ್ಟರಲ್ಲಿ ಇನ್ನೊಂದಿಷ್ಟು ಸಮಸ್ಯೆಗೊಳಗಾಗಿರುತ್ತಾರೆ. ಹೀಗಾಗಿ ನಿಜಕ್ಕೂ ಇದು ವರ್ಕ್ ಆಗುತ್ತಾ ಎಂಬ ಸಂಶಯವನ್ನು ಹಲವು ಟೆಕ್ ತಜ್ಞರು ಹೊರಹಾಕಿದ್ದಾರೆ. ಆದರೆ, ಪ್ರಯತ್ನ ಮಾತ್ರ ಒಳ್ಳೆಯದು ಸಾರ್ವಜನಿಕರ ಸಹಕಾರ ಇದ್ದರೆ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಇನ್ನೊಂದು ವರ್ಗದ ಅಭಿಮತ.

 


ಬಹಳಷ್ಟು ಮಂದಿ ಊರು ಬಿಟ್ಟರು
ಲಾಕ್‌ಡೌನ್ ಎಂದು ಘೋಷಣೆಯಾಗುತ್ತಿದ್ದಂತೆ ಎಚ್ಚೆತ್ತ ಬಹುತೇಕ ವಲಸೆ ಕಾರ್ಮಿಕರು ಊರು ಬಿಟ್ಟರು. ಕೆಲವರಿಗೆ ಸಾರಿಗೆ ವ್ಯವಸ್ಥೆ ಸಿಗದೆ ನಡೆದುಕೊಂಡೇ ತಮ್ಮ ತಮ್ಮ ಊರು ಸೇರಿಕೊಂಡರು. ಮತ್ತಷ್ಟು ಜನ ಅರ್ಧ ದಾರಿಗಳಲ್ಲಿ ಬಾಕಿಯಾದರು. ಕೆಲವರು ಇದ್ದಲ್ಲೇ ಉಳಿದುಕೊಂಡಿದ್ದಾರೆ. ಹೀಗೆ ಮನೆಯಿಲ್ಲದೆ ನಿರಾಶ್ರಿತರಾಗಿರುವ ಅದೆಷ್ಟೋ ಮಂದಿಗೆ ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ: ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಈ ಬಗ್ಗೆ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಸಹ ಟ್ವೀಟ್ ಮಾಡಿದ್ದು, ಗೂಗಲ್ ಮ್ಯಾಪ್, ಸರ್ಚ್ ಮತ್ತು ಗೂಗಲ್ ಅಸಿಸ್ಟೆಂಟ್‌ಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.