ಶಾಕ್ ಆಯ್ತಾ.. ಆಗ್ಲೇಬೇಕು ಅಂತ ತಾನೇ ಹೀಗೆ ಮಾಡಿದ್ದು... ಕೆಲವ್ರು ಮಾಡೋ ಕುಚೇಷ್ಟೇ ಇಂದ್ಲೇ ನಾವೀಗ ಕಡಿವಾಣ ಹಾಕುತ್ತಿದ್ದೇವೆ ಎಂಬಂತಹ ಕಠಿಣ ನಿರ್ಣಯವನ್ನು ಜನಪ್ರಿಯ ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಫೇಸ್‌ಬುಕ್ ಒಡೆತನದ ವ್ಯಾಟ್ಸ್ಆ್ಯಪ್ ತೆಗೆದುಕೊಂಡಿದೆ. ಕೊರೋನಾ ಸುಳ್ಳು ಮಾಹಿತಿ ತಡೆಗೆ ಈ ನಿರ್ಧಾರ ಅನಿವಾರ್ಯ ಎಂಬ ಸ್ಪಷ್ಟೀಕರಣವನ್ನೂ ಕೊಟ್ಟಿದೆ.ಯಾವುದಾದರೂ ಒಂದು ಘಟನೆ ನಡೆಯಲಿ ಅದಕ್ಕೆ ಬಾಲದಿಂದ ಹಿಡಿದು ಕೊಂಬಿನವರೆಗೂ ತರಹೇವಾರು ಕಥೆ ಕಟ್ಟಿ ಹರಿಬಿಡಲಾಗುತ್ತಿರುತ್ತದೆ. ಈಗ ಕರೋನಾ ವೈರಸ್ ಸೋಂಕು ವಿಶ್ವಕ್ಕೇ ಕಂಟಕವಾಗಿರುವ ಸಂದರ್ಭದಲ್ಲಿ ಸುಳ್ಳು ಮೆಸೇಜ್‌ಗಳ ಕಂತೆಯೇ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಒಂದು ಫಾರ್ವಡ್ ಮೆಸೇಜ್ ಅನ್ನು ಒಂದು ಬಾರಿ ಒಬ್ಬರಿಗೆ ಮಾತ್ರ ಕಳುಹಿಸಲಾಗುವಂತೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?

ಏಕೆ ಈ ನಿರ್ಧಾರ?
ಈಗ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಬಹುತೇಕ ದೇಶಗಳು ಲಾಕ್‌ಡೌನ್ ಆಗಿವೆ. ಇದರಿಂದ ಹೆಚ್ಚಿನವರು ಮನೆಯಲ್ಲೇ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ನಿಯಂತ್ರಣ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಸುದ್ದಿಗಳು ನಿಧಾನಗತಿಯಲ್ಲಿ ಹರಡುವಂತಾಗಲಿ ಎಂಬ ಉದ್ದೇಶದಿಂದ ಒಂದು ಚಾಟ್ ಮೆಸೇಜ್ ಅನ್ನು ಒಮ್ಮೆ ಒಬ್ಬರಿಗೆ ಮಾತ್ರ ಫಾರ್ವರ್ಡ್ ಮಾಡುವಂತೆ ಮಾಡಿ ನಿರ್ಬಂಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ನಿರ್ಧಾರದಿಂದ ಏನಾಗುತ್ತೆ?
ಇದು ಮಹತ್ವದ ನಿರ್ಧಾರ ಎಂದೇ ಹೇಳಲಾಗುತ್ತಿದೆ. ಮನೆಯಲ್ಲಿ ಯಾರೂ ಎಷ್ಟೇ ಆರಾಮಾಗಿದ್ದರೂ ಒಂದು ಮೆಸೇಜ್ ಅನ್ನು ಒಮ್ಮೆಲೆ ಎಲ್ಲರಿಗೂ ಕಳುಹಿಸುವುದಕ್ಕೂ ಹಾಗೂ ಒಂದು ಫಾರ್ವರ್ಡ್ ಮೆಸೇಜ್ ಅನ್ನು ಕಾಪಿ ಮಾಡಿ ಪ್ರತಿಯೊಂದು ವೈಯುಕ್ತಿಕ ಖಾತೆಗಳಿಗೆ ಪ್ರತ್ಯೇಕವಾಗಿ ಪೇಸ್ಟ್ ಮಾಡಿ ಮೆಸೇಜ್ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುವುದಲ್ಲದೆ, ಬೇಜಾರಿನ ಸಂಗತಿ ಕೂಡಾ. ಹೀಗಾಗಿ ಬಹುತೇಕರು ಒಬ್ಬರಿಗೋ, ಇಬ್ಬರಿಗೋ, ಇಲ್ಲವೇ ತಮ್ಮ ಬೆರಳೆಣಿಕೆಯಷ್ಟು ಆಪ್ತರಿಗೋ ಕಳುಹಿಸಬಹುದಾಗಿದೆ. ಇದರಿಂದಾಗಿ "ಸುಳ್ಳು ಸಾಂಕ್ರಾಮಿಕ" ಸಂದೇಶ ಹರಡುವಿಕೆಗೆ ಕಡಿವಾಣ ಬೀಳಲಿದೆ.

ಇದನ್ನೂ ಓದಿ: ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!

2 ಬಿಲಿಯನ್ ಬಳಕೆದಾರರು
ವಿಶ್ವದಲ್ಲಿ ಸುಮಾರು 2 ಬಿಲಿಯನ್‌ಗೂ ಹೆಚ್ಚು ವಾಟ್ಸ್‌ಆ್ಯಪ್ ಬಳಕೆದಾರರು ಇದ್ದು, ಭಾರತದಲ್ಲೇ 400 ಮಿಲಿಯನ್‌ನಷ್ಟು ಮಂದಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅತಿ ಸುಲಭವಾಗಿ ಯಾವುದೇ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪುತ್ತವೆ. ಅದು ಸುಳ್ಳಾಗಿರಬಹುದು, ಇಲ್ಲವೇ ಸತ್ಯವೇ ಆಗಿರಬಹುದು. ಇಲ್ಲಿ ಪರಾಮರ್ಶೆ ಮಾಡುವ ಗೋಜಿಗೆ ಬಹುತೇಕರು ಹೋಗುವುದಿಲ್ಲ.
 
ಶೇ. 25ರಷ್ಟು ಕುಸಿದ ಸುಳ್ಳುಕಥೆ!
ಮೊದಲಿಗೆ ಒಂದೇ ಬಾರಿ ಬಹಳಷ್ಟು ಮಂದಿಗೆ ತಲುಪುವಂತೆ ಮಾಡಬಹುದಿತ್ತು. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಬಳಕೆದಾರರಿಗೆ ಮೆಸೇಜಿನ ಹಿನ್ನೆಲೆಯನ್ನು ಅರ್ಥ ಮಾಡಿಸುವ ಸಲುವಾಗಿ ಬಹಳಷ್ಟು ಬಾರಿ ರವಾನೆಯಾಗಿದ್ದರೆ, ಫ್ರೀಕ್ವೆಂಟ್ಲಿ ಫಾರ್ವರ್ಡೆಡ್ ಎಂಬ ಮೆಸೇಜ್ ಲೇಬಲ್ ಕಾಣುವಂತೆ ಮಾಡಲಾಗಿತ್ತು. ಇದನ್ನು ಗಮನಿಸಿಯಾದರೂ ಆ ಸಂದೇಶವನ್ನು ಓದಿ ಅಲ್ಲಿಯೇ ಡಿಲೀಟ್ ಮಾಡಲಿ ಎಂಬ ಉದ್ದೇಶ ಇದರ ಹಿಂದಿತ್ತು. 2018ರಲ್ಲಿ ಭಾರತದಲ್ಲಿ ತಪ್ಪು ಸಂದೇಶಗಳ ರವಾನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದು ಫಾರ್ವರ್ಡ್ ಮೆಸೇಜ್ ಅನ್ನು ಒಂದು ಬಾರಿ ಐವರಿಗೆ ಮಾತ್ರ ಫಾರ್ವಡ್ ಮಾಡುವ ಆಯ್ಕೆಯನ್ನು ನೀಡಲಾಗಿತ್ತು. ಈ ನಿರ್ಧಾರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಕಳೆದ ವರ್ಷ ಜನವರಿಯಲ್ಲಿ ಈ ಆಯ್ಕೆಯನ್ನು ವಿಶ್ವದ ಎಲ್ಲ ಕಡೆ ಅನುಷ್ಠಾನಕ್ಕೆ ತರಲಾಗಿತ್ತು. ಇದರಿಂದ ಇಂಥ ಸುಳ್ಳು ಸುದ್ದಿ ಹರಡುವ ಪ್ರಮಾಣ ವಿಶ್ವಾದ್ಯಂತ ಶೇ. 25ರಷ್ಟು ಇಳಿಮುಖ ಕಂಡಿತ್ತು ಎಂದು ಅಧ್ಯಯನಗಳ ವರದಿ ಹೇಳುತ್ತದೆ.

ಇದನ್ನೂ ಓದಿ: ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಬಂದಿದೆ ಮ್ಯಾಗ್ನಿಫೈಯಿಂಗ್ ಗ್ಲಾಸ್ ಐಕಾನ್
ಫಾರ್ವರ್ಡ್ ಮೆಸೇಜ್‌ಗಳ ಸತ್ಯಾಸತ್ಯತೆ ಅರಿಯಲು ಆನ್‌ಲೈನ್ ಮೂಲಕ ಪರಿಶೀಲಿಸುವ ಫೀಚರ್ ಒಂದನ್ನು ಕಳೆದ ತಿಂಗಳಷ್ಟೇ ವಾಟ್ಸ್‌ಆ್ಯಪ್ ಕಲ್ಪಿಸಿತ್ತು. ಅಲ್ಲದೆ, ಕೆಲವು ಹೊಸ ಬೇಟಾ ವರ್ಶನ್‌ಗಳಲ್ಲಿ ಈಗಾಗಲೇ ಮ್ಯಾಗ್ನಿಫೈಯಿಂಗ್ ಗ್ಲಾಸ್ ಐಕಾನ್ ತೋರಿಸುವ ಫೀಚರ್‌ ನೀಡಲಾಗಿದ್ದು, ಬಳಕೆದಾರರು ವೆಬ್‌ಸರ್ಚ್ ಮೂಲಕ ಆ ಸುದ್ದಿಯ ನೈಜತೆ ಬಗ್ಗೆ ಖಾತ್ರಿ ಮಾಡಿಕೊಳ್ಳಬಹುದಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇದು ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

"