ಈ ಕೊರೋನಾ ಮಹಾಮಾರಿ ಜೀವಕಂಟಕವಾಗಿದ್ದಲ್ಲದೆ, ಹಲವಾರು ಸಮಸ್ಯೆ, ಸವಾಲುಗಳನ್ನು ಹುಟ್ಟುಹಾಕಿದೆ. ಇದು ದೇಶಗಳನ್ನಷ್ಟೇ ಲಾಕ್ ಡೌನ್ ಮಾಡಿಲ್ಲ, ಪ್ರತಿ ಚಟುವಟಿಕೆಯನ್ನೂ ಲಾಕ್ ಮಾಡಿಬಿಟ್ಟಿದೆ. ಬಹುತೇಕ ಕಡೆ ಉತ್ಪಾದನೆಗಳು ನಿಂತುಹೋಗಿವೆ. ಇನ್ನು ಐಟಿ, ಬಿಟಿ ಕ್ಷೇತ್ರಗಳನ್ನು ಕೇಳಬೇಕೇ? ಇವರ ಸ್ಥಿತಿಯೂ ಅಯೋಮಯ.

ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೇ ಸಿಗಲಿದೆ. ಇದೆಲ್ಲದರ ಜೊತೆ ಇತರ ಕ್ಷೇತ್ರಗಳೂ ವರ್ಕ್ ಫ್ರಂ ಹೋಂ ಕಲ್ಚರ್‌ಗೆ ಒಗ್ಗಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಈ ಮೂಲಕ ಹಲವಾರು ಮೂಲದಲ್ಲಿ ವೆಚ್ಚ ನಿಯಂತ್ರಣಕ್ಕೂ ಚಿಂತನೆಯನ್ನು ಮಾಡುತ್ತಿವೆ. 

ಲಾಕ್‌ಡೌನ್ ಅನ್ನು ಈಗೇನೋ ಏ.14ರವರೆಗೆ ಎಂದು ಘೋಷಿಸಲಾಗಿದೆ. ಆದರೆ, ಪರಿಸ್ಥಿತಿಯ ತೀವ್ರತೆಯನ್ನು ನೋಡಿಕೊಂಡು ಮುಂದುವರಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಮಧ್ಯೆ ಲಾಕ್‌ಡೌನ್‌ನಿಂದ ದೇಶ ಮುಕ್ತವಾದರೂ ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ಮತ್ತೆ ಕೆಲ ಕಾಲ ವರ್ಕ್ ಫ್ರಂ ಹೋಂ ಸೇವೆಯನ್ನೇ ಬಯಸಬಹುದು. ಆ ನಿಟ್ಟಿನಲ್ಲಿ ಪೂರಕ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಮುಂದಾಗಬಹುದಾಗಿದೆ. ಕ್ರಮೇಣ ಇದರಿಂದ ಧನಾತ್ಮಕ ಫಲಿತಾಂಶ (ಪಾಸಿಟೀವ್ ಔಟ್‌ಪುಟ್) ಸಿಕ್ಕರೆ ಈ ವ್ಯವಸ್ಥೆಯತ್ತಲೇ ಹೆಚ್ಚಿನ ಫೋಕಸ್ ಮಾಡಬಹುದು ಎಂಬ ವಿಶ್ಲೇಷಣೆಗಳು ಟೆಕ್ ತಜ್ಞರಿಂದ ಕೇಳಿಬರುತ್ತಿದೆ.

ಇದನ್ನೂ ಓದಿ: ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!

ಏನಿದೆ ಸವಾಲುಗಳು?
ಭಾತರದಲ್ಲಿ ಈಗ ಬೆಂಗಳೂರೂ ಸೇರಿದಂತೆ ತುಂಬಾ ಕಡೆ ವರ್ಕ್ ಫ್ರಂ ಹೋಂ ಸೌಲಭ್ಯವನ್ನು ಹೊಂದಿಲ್ಲ. ಆ ರೀತಿಯ ವರ್ಕಿಂಗ್ ನೇಚರ್ ಅನ್ನೇ ಬಳಸಿಕೊಂಡಿಲ್ಲ. ಒಂದು ಮಾಹಿತಿ ಪ್ರಕಾರ, ಶೇ. 50ರಿಂದ 56ರಷ್ಟು ಕಂಪನಿಗಳು ಈ ಸೌಲಭ್ಯವನ್ನೇ ಹೊಂದಿಲ್ಲ ಎಂಬ ವಿಷಯ ಈಚೆಗಷ್ಟೇ ವರದಿಯಾಗಿತ್ತು.
ಈಗ ಬೆಂಗಳೂರಿನಲ್ಲೇ ಬಹಳಷ್ಟು ಕಚೇರಿಗಳಲ್ಲಿ ವರ್ಕ್ ಫ್ರಂ ಹೋಂಗೆ ಬೇಕಾದ ಪೂರಕ ಸೌಲಭ್ಯವಿಲ್ಲದೆ, ಕೆಲಸ ಸ್ಥಗಿತಗೊಳಿಸಿದ್ದರೆ ಮತ್ತೆ ಕೆಲವು ಕಡೆ ತಮ್ಮ ಡೆಸ್ಕ್‌ಟಾಪ್‌ಗಳನ್ನೇ ಅವರವರ ಮನೆಗೆ ಕಳುಹಿಸಿಕೊಟ್ಟು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಪಿಜಿಗಳಲ್ಲಿರುವವರಿಗೆ ಡೆಸ್ಕ್‌ಟಾಪ್ ಅಳವಡಿಸಿಕೊಳ್ಳಲು ಸಮಸ್ಯೆಯಾಗುವ ನಿಟ್ಟಿನಲ್ಲಿ ಅಂಥವರಿಗೆ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಹ್ಯಾಕರ್ಸ್‌ಗಳ ಕಾಟ ತಪ್ಪಿಲ್ಲ
ದೇಶವ್ಯಾಪಿ ವರ್ಕ್ ಫ್ರಂ ಹೋಂ ಸೌಲಭ್ಯ ಒದಗಿಸುವುದು ಸಹ ಇದೇ ಕಾರಣಕ್ಕೆ ಕಷ್ಟವಾಗಿದೆ. ಮೇಲಾಗಿ ಪ್ರೈವೆಸಿ, ಡಾಟಾ ಟ್ರಾನ್ಸಿಶನ್ ಸಹ ಅಷ್ಟೇ ಕಷ್ಟಕರವಾಗಿದೆ. ಹೀಗಾಗಿ ಅಗತ್ಯ ನಿರ್ವಹಣೆ ಹಾಗೂ ಮೇಲ್ವಿಚಾರಣೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಳ್ಳುವ ಅವಶ್ಯಕತೆ ಇದೆ. 

ಈ ಮಧ್ಯೆ ವಿಡಿಯೋ ಕಾನ್ಫರೆನ್ಸ್ ಮಾಡುವುದಿದ್ದರೆ ಸೂಕ್ತ ವ್ಯವಸ್ಥೆಗಳಿಲ್ಲ. ಕೆಲವು ಆ್ಯಪ್‌ಗಳ ಮೂಲಕವೇ ಮೀಟಿಂಗ್‌ಗಳನ್ನು ಕಂಪನಿಗಳು ಕೈಗೊಳ್ಳುತ್ತಿವೆ. ಕೆಲವು ಆನ್‌ಲೈನ್ ಕ್ಲಾಸ್‌ಗಳು ಸಹ ಇವುಗಳ ಮೂಲಕವೇ ನಡೆಯುತ್ತಿವೆ. ಆದರೆ, ಈಚೆಗಷ್ಟೇ ಜೂಮ್ ಆ್ಯಪ್‌ ಮೇಲೆ ಹ್ಯಾಕರ್ಸ್‌ಗಳ ಕಣ್ಣುಬಿದ್ದಿದೆ. ಹಾಗಾಗಿ ಇದೂ ಸುರಕ್ಷತೆಯನ್ನು ಪ್ರಶ್ನೆ ಮಾಡುತ್ತಿದೆ. ಇದಕ್ಕೆ ಪರ್ಯಾಯ ಎಂಬಂತೆ ಸ್ಕೈಪ್ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ನೀಡುತ್ತಿರುವುದಾಗಿ ಹೇಳಿಕೊಂಡರೂ ಎಷ್ಟರಮಟ್ಟಿಗೆ ಸೇಫ್ ಎಂಬ ಬಗ್ಗೆ ಇನ್ನೂ ತಿಳಿದಿಲ್ಲ.
 
ಚಿಂತನೆ ಬದಲು, ಮತ್ತಷ್ಟು ಉದ್ಯೋಗ?
ಹೀಗೆ ವರ್ಕ್ ಫ್ರಂ ಹೋಂ ಕೊಡುವುದರಿಂದ ಜಾಗ, ನೀರು, ವಿದ್ಯುತ್ ಉಳಿತಾಯ ಆಗುತ್ತದೆ. ಈ ರೀತಿ ಅನೇಕ ದುಂದುವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ಇನ್ನಷ್ಟು ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.  
ಮತ್ತೆ ಇನ್ನೊಂದು ಪ್ರಮುಖಾಂಶವೆಂದರೆ ಉದ್ಯೋಗಿಯು ಟ್ರಾವೆಲ್ ಮಾಡುವ ಸಮಯವೂ ಉಳಿತಾಯವಾಗುತ್ತದೆ. ಬೆಂಗಳೂರಿನಂತ ಮಹಾನಗರಿಯಲ್ಲಿ ಟ್ರಾಫಿಕ್‌ನಲ್ಲಿಯೇ ಕನಿಷ್ಠ ಪಕ್ಷ ಹೋಗಿಬರುವುದರ ಸಮಯ ಏನಿಲ್ಲವೆಂದರೂ ಎರಡೂವರೆಯಿಂದ ಮೂರೂವರೆ ಗಂಟೆ ಬೇಕು. ಅದೇ ಮನೆಯಲ್ಲಾದರೆ ದಿನದ ಅವಧಿಗಿಂತ ಒಂದು ಗಂಟೆ ಹೆಚ್ಚೂ ಕೆಲಸ ಮಾಡಬಹುದು. ಇಲ್ಲವೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ನೌಕರರ ಮನಸ್ಸು ಪ್ರಶಾಂತವಾಗುವುದರಿಂದ ಮತ್ತಷ್ಟು ಕ್ವಾಲಿಟಿ ವರ್ಕ್ ಅನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ: ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್‌

ಡಿಜಿಟಲ್, ಮುದ್ರಣ ಮಾಧ್ಯಮಗಳೂ ಬದಲು
ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಪತ್ರಿಕೆಗಳು ಸಹ ಈಗ ವರ್ಕ್ ಫ್ರಂ ಹೋಂ ದಾರಿಯತ್ತ ಮುಖಮಾಡಿದ್ದು, ಕೆಲವೇ ಕೆಲವು ಸಿಬ್ಬಂದಿಯನ್ನು ಮಾತ್ರ ಕಚೇರಿಯಲ್ಲಿಟ್ಟುಕೊಂಡು ಉಳಿದವರಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವ ಸೂಚನೆಯನ್ನು ನೀಡಿವೆ. ಇದಕ್ಕೆ ಡಿಜಿಟಲ್ ಮಾಧ್ಯವೂ ಹೊರತಾಗಿಲ್ಲ. ಇಲ್ಲೂ ಸಹ ಅನೇಕ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈಗ ವಿಶ್ವವೇ ಇನ್ನೊಂದು ಮಜಲಿನತ್ತ ಮುಖಮಾಡುವ ಸಾಧ್ಯತೆ ದಟ್ಟವಾಗಿದೆ.