ಗೇರ್ ಕಾರಿಗೂ ಗೇರ್ ಲೆಸ್ (CVT- ಅಟೋಗೇರ್) ಕಾರಿಗೂ ಇರುವ ವ್ಯತ್ಯಾಸ ಬಹಳವೇ ಇದ್ದರೂ ಅಟೋಗೇರ್‌ನತ್ತ ಅಷ್ಟಾಗಿ ಜನ ಮನಸ್ಸು ಮಾಡುವುದಿಲ್ಲ. ಒಂದು ಇದರ ದರ ಹಾಗೂ ಎರಡನೆಯದಾಗಿ ಮೈಲೇಜ್ ಸಮಸ್ಯೆ, ಇನ್ನು ಮೂರನೆಯ ಬಹುಮುಖ್ಯವಾಗಿ ಕನ್ಫ್ಯೂಶನ್. ಹೌದು ಇಲ್ಲಿ ಗೊಂದಲಕ್ಕೆ ಕಾರಣ ಕ್ಲಚ್ ಇಲ್ಲದಿರುವುದು. ಹಾಗಾದರೆ ಸಿವಿಟಿ ಕಾರುಗಳು ಯೂಸರ್ ಫ್ರೆಂಡ್ಲಿ ಅಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಂಡಿತಾ ಯೂಸರ್ ಫ್ರೆಂಡ್ಲಿ, ಇದರಲ್ಲಿ ಎರಡು ಮಾತಿಲ್ಲ. ಆದರೆ ನಾವದನ್ನು ಹೇಗೆ ಬಳಕೆ ಮಾಡುತ್ತೇವೆಂಬುದು ಮುಖ್ಯ.
 
ಅಟೋಗೇರ್ ಇದ್ದಲ್ಲಿ ನಿಮಗೆ ಯಾವುದೇ ತರನಾಗಿ ಗೇರ್ ಬದಲಾಯಿಸುವ ತಾಪತ್ರಯ ಇರುವುದಿಲ್ಲ. ಇನ್ನು ಇಲ್ಲಿ ಚಾಲನೆ ಮಾಡುವಾಗ ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ತಿದ್ದುಕೊಂಡರೆ ಮೈಲೇಜ್ ಸಹ ದೊರೆಯುತ್ತದೆ. ಗೇರ್ ಕಾರುಗಳಲ್ಲಿರುವಂತೆ ಇಲ್ಲಿ ಕ್ಲಚ್ ಇಲ್ಲ. ಹಾಗಾಗಿ ಇಲ್ಲಿರುವ ಎಕ್ಸಲೇಟರ್ ಹಾಗೂ ಬ್ರೇಕ್‌ಪ್ಯಾಡ್ ಗಳ ಮೇಲೆ ಎರಡೂ ಕಾಲುಗಳನ್ನಿಟ್ಟು ಚಲಾಯಿಸುತ್ತೇವೆ. ಇಲ್ಲೇ ನಾವು ದೊಡ್ಡ ತಪ್ಪು ಮಾಡುತ್ತಿರುವುದು. ಈ ಮಾದರಿಯ ಕಾರುಗಳನ್ನು ಚಲಾಯಿಸುವಾಗ ಒಂದೇ ಕಾಲನ್ನು ಬಳಸಿದರೆ ಸೂಕ್ತ. ಹಾಗಾದರೆ, ನಾವಿದನ್ನು ಹೇಗೆ ಸಮರ್ಥವಾಗಿ, ಪರಿಣಾಮಕಾರಿಯಾಗಿ ಚಲಾಯಿಸಬಹುದು ಎಂಬ ಬಗ್ಗೆ ಇಲ್ಲಿದೆ ಕೆಲವು ಟಿಪ್ಸ್.
 
ಸಿವಿಟಿ ಕಾರುಗಳ ಸಮರ್ಥ ಚಾಲನೆ ಹೇಗೆ?

1. ಸ್ಥಿರ ಚಾಲನೆ ಇರಲಿ
ಸಿವಿಟಿ ಕಾರು ಚಲಾವಣೆ ವೇಳೆ ಹೇಗೂ ಗೇರ್‌ಗಳಿಲ್ಲವೆಂದು ಅತಿಯಾಗಿ ಎಕ್ಸಲೇಟರ್ ಒತ್ತುವುದು, ಒಮ್ಮೆಲೆ ತಗ್ಗಿಸುವುದನ್ನು ಮಾಡಬಾರದು. ಇದು ನಿಮ್ಮ ಚಾಲನೆಗೆ ಖುಷಿಕೊಟ್ಟರೂ ಕಾರಿನ ಆರೋಗ್ಯ ಕೆಡುತ್ತದೆ ಎಂಬುದು ಗಮನದಲ್ಲಿರಲಿ. ಅಂದರೆ, ಅದರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸ್ಥಿರ ಚಾಲನೆ ಇದ್ದಲ್ಲಿ ಇಂಜಿನ್ ಉತ್ತಮವಾಗಿ ಕೆಲಸ ಮಾಡುವುದಲ್ಲದೆ, ಇಂಧನ ಉಳಿತಾಯವೂ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕಾರು ಮೇಂಟೇನ್ ಸೀಕ್ರೆಟ್ ಕೊಟ್ಟ ಅಟೋ ಕಂಪನಿಗಳು

2. ಬ್ರೇಕ್ ಪೆಡಲ್ ಮೇಲೆ ಕಾಲಿಡಬೇಡಿ
ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಗೇರ್ ವಾಹನಗಳನ್ನು ಓಡಿಸಿ ಅಭ್ಯಾಸ ಇರುವವರು ಎರಡೂ ಕಾಲನ್ನು ಬಳಸಿ ಅನುಭವ ಇರುತ್ತದೆ. ಹೀಗಾಗಿ ಇಲ್ಲೂ ಎರಡೂ ಕಾಲುಗಳನ್ನು ಬಳಸಲು ಮುಂದಾಗುತ್ತಾರೆ. ಆದರೆ, ಇದು ತಪ್ಪು. ಇಲ್ಲಿ ಒಂದೇ ಕಾಲಿನಲ್ಲಿ ಎಕ್ಸಲೇಟರ್ ಹಾಗೂ ಬ್ರೇಕ್‌ಪೆಡಲ್ ಅನ್ನು ಬಳಸಬೇಕು. ಕೆಲವೊಮ್ಮ ಗಮನ ಬೇರೆಡೆ ಇದ್ದಾಗ ಹಳೇ ನೆನಪಲ್ಲಿ ಕ್ಲೆಚ್ ಎಂದು ಎಕ್ಸಲೇಟರ್ ಅನ್ನು ಒತ್ತಿದರೆ ಅಪಘಾತದಂತ ಸನ್ನಿವೇಶಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಎಡಗಾಲನ್ನು ಬ್ರೇಕ್‌ಪೆಡಲ್ ಮೇಲೆ ಇಡಬೇಡಿ. ಹೀಗೆ ಆಗಾಗ ಬ್ರೇಕ್ ಹಾಕುತ್ತಿದ್ದರೆ, ಎಂಜಿನ್ ಮೇಲೆ ಒತ್ತಡ ಹೆಚ್ಚುವುದಲ್ಲದೆ, ಇಂಧನ ಬಳಕೆಯೂ ಹೆಚ್ಚುತ್ತದೆ. 
 
3. ಅಗ್ರೆಸ್ಸೀವ್ ಡ್ರೈವಿಂಗ್ ಬೇಡ
ನೀವು ಒಮ್ಮಿಂದೊಮ್ಮೆಲೆ ಆಕ್ರಮಣಕಾರಿಯಾಗಿ ಕಾರು ಚಲಾಯಿಸುವುದೂ ಒಳ್ಳೆಯದಲ್ಲ. ಹೀಗೆ ಅಗ್ರೆಸ್ಸೀವ್ ಚಾಲನೆ ಮಾಡಿದರೆ ಇಂಜಿನ್ ಸಹ ಅಷ್ಟೇ ವೇಗವಾಗಿ ಬಿಸಿಯಾಗಿ, ಹೆಚ್ಚಿನ ಇಂಧನವನ್ನು ಬಯಸುತ್ತದೆ. ಈ ರೀತಿಯ ಚಾಲನೆಯಿಂದ ಇಂಧನದ ದಕ್ಷತೆಯನ್ನು ಶೇ. 33ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.
 
4. ಓವರ್ ಟೇಕ್ ಮಾಡುವಾಗ ಯೋಚಿಸಿ

ನೆನಪಿಡಿ, ನೀವಿಲ್ಲಿ ಚಲಾಯಿಸುತ್ತಿರುವುದು ಅಟೋಗೇರ್ ವಾಹನ, ಗೇರ್ ಕಾರಲ್ಲ. ಅಲ್ಲಾದರೆ ನೀವು ಅಗತ್ಯಕ್ಕೆ ತಕ್ಕಂತೆ ಗೇರ್ ಬದಲಾಯಿಸಿಕೊಂಡು ನಿಮ್ಮ ವೇಗವನ್ನು ಹೆಚ್ಚಿಸಿಕೊಂಡು, ಮುಂದಿನ ವಾಹನದ ವೇಗವನ್ನು ಅಂದಾಜಿಸಿ ಓವರ್ ಟೇಕ್ ಮಾಡಿಬಿಟ್ಟಿರುತ್ತಿದ್ದಿರಿ. ಆದರೆ, ಇಲ್ಲಿ ಆ ಆಯ್ಕೆ ನಿಮ್ಮ ಕೈಯಲ್ಲಿರುವುದಿಲ್ಲ. ನಿಮ್ಮ ಮೋಟಾರ್ ಸಮರ್ಪಕ ಆರ್‌ಪಿಎಂನಲ್ಲಿಲ್ಲದಿದ್ದರೆ ಕಷ್ಟವಾಗುತ್ತದೆ. ಏಕಾಏಕಿ ಸ್ಪೀಡ್ ತೆಗೆದುಕೊಂಡರೂ ಅದು ಇಂಜಿನ್ ಹಾಗೂ ಇಂಧನ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!

5. ಟ್ರಾಫಿಕ್ ಸಿಗ್ನಲ್‌ನಲ್ಲಿ ನ್ಯೂಟ್ರಲ್ ಮೋಡ್ ಇರಲಿ
ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸುವಾಗ ನೀವು ಡ್ರೈವ್ ಮೋಡ್‌ನಿಂದ ನ್ಯೂಟ್ರಲ್ ಮೋಡ್‌ಗೆ ಬರುವುದು ಸೂಕ್ತ. ಜೊತೆಗೆ ಹ್ಯಾಂಡ್ ಬ್ರೇಕ್ ಹಾಕುವುದರಿಂದ ಇಂಜಿನ್ ಮೇಲೆ ಒತ್ತಡ ಬೀಳುವುದು ತಪ್ಪುವುದಲ್ಲದೆ ಇಂಧನ ಬಳಕೆ ಪ್ರಮಾಣವೂ ತಗ್ಗುತ್ತದೆ.
 
6. ನಿಮ್ಮ ಕಾರಿನ ಇಂಜಿನ್/ಸಿವಿಟಿ ಬಗ್ಗೆ ಅರಿಯಿರಿ
ನಿಮ್ಮ ಕಾರಿನ ಇಂಜಿನ್/ಸಿವಿಟಿ ಬಗ್ಗೆ ನಿಮಗೆ ಸಂಪೂರ್ಣ ಅರಿವಿರುವುದು ಬಹಳ ಮುಖ್ಯ. ಯಾವ ವೇಗದಿಂದ ಯಾವ ವೇಗವನ್ನು ಎಷ್ಟು ಕ್ಷಣದಲ್ಲಿ ಪಡೆಯಬಹುದು, ಆ ವೇಗವನ್ನು ಕಾರು ನಿಭಾಯಿಸಬಹುದೇ? ಆರ್‌ಪಿಎಂ ಬದಲಾವಣೆ ಮಧ್ಯೆಯೂ ಇಂಜಿನ್ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸುವುದೇ? ಎಂಬುದು ನಿಮ್ಮ ಗಮನಕ್ಕೆ ಬಂದಿದ್ದರೆ ಚಾಲನೆ ಸುಲಭ ಹಾಗೂ ಸುಗಮವಾಗುತ್ತದೆ.

ಇದನ್ನೂ ಓದಿ: ಬುಕ್ ಮಾಡಿದ ಹತ್ತೇ ದಿನದಲ್ಲಿ ಕೈಸೇರಲಿದೆ ಜಾವಾ; ಫುಲ್ ಖುಷ್ ಹುವಾ!
 
7. ಮೇಂಟೇನೆನ್ಸ್ ಬಹಳ ಮುಖ್ಯ
ಕಾರು ಮೇಂಟೇನೆನ್ಸ್ ಹಾಗೂ ಅದರ ಕಾಳಜಿ ಬಹಳ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಇಂಜಿನ್ ಆಯಿಲ್ ಬದಲಾವಣೆ, ಗಾಳಿ ಮತ್ತು ಆಯಿಲ್ ಫಿಲ್ಟರ್, ವೀಲ್ ಅಲೈನ್ಮೆಂಟ್‌ಗಳ ಪರಿಶೀಲನೆ ಮಾಡಿಸುತ್ತಿರಬೇಕು. ಇದರಿಂದ ಲಾಂಗ್ ಡ್ರೈವ್ ಸಂದರ್ಭದಲ್ಲಿ ಯಾವುದೇ ಆತಂಕ ಇರುವುದಿಲ್ಲ.

"