ತಂತ್ರಜ್ಞಾನವೇ ಹಾಗೆ, ನಿನ್ನೆ ಇರುವುದು ಇಂದಿಗೆ ಹಳೆಯದು, ಇಂದಿನದ್ದು ನಾಳೆಗೆ, ಹಾಗೇ ನಾಳೆಯದ್ದು ಕೂಡಾ, ಹೀಗೆಯೇ ಮುಂದುವರಿಯುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಅಪ್ಡೇಟ್ ಆಗಬೇಕಷ್ಟೇ. ಆದರೂ, ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಹೊಸ ಸಾಧನದ ಆವಿಷ್ಕಾರ ನಮ್ಮ ಕೆಲಸವನ್ನು ಎಷ್ಟು ಸುಲಭ ಮಾಡುತ್ತದೋ, ಇನ್ನೊಂದು ಆವಿಷ್ಕಾರ ಅಷ್ಟೇ ಅಪಾಯವನ್ನು ತಂದೊಡ್ಡುತ್ತದೆ.
 
ಈಗ ಕಾರಿನ ತಂತ್ರಜ್ಞಾನವನ್ನೇ ತೆಗೆದುಕೊಳ್ಳೋಣ, ಕೀಲೆಸ್ ಡೋರ್ ಲಾಕ್ ಬಂದಿದೆ. ಆದರೆ, ಇದು ನಿಜಕ್ಕೂ ಸೇಫಾ? ಖಂಡಿತಾ ಅಲ್ಲ, ನೀವೇ ಕಳ್ಳರಿಗೆ ಆಹ್ವಾನ ಕೊಟ್ಟು ಕಾರನ್ನೂ ಕೊಟ್ಟು ಕಳುಹಿಸಿದಂತೆ. ನೀವು ಮನೆಯಲ್ಲೋ? ಕಚೇರಿಯಲ್ಲೋ ಇರುತ್ತೀರಿ, ಕಾರಿನ ಕೀಲೆಸ್ ಫೋಬ್ ನಿಮ್ಮ ಬಳಿಯೇ ಇರುತ್ತದೆ. ಆದರೆ, ವಾಪಸ್ ಬಂದು ನೋಡುವಾಗ ಮಾತ್ರ ಕಾರು ಇರುವುದಿಲ್ಲ.

ಇದನ್ನೂ ಓದಿ: CVT ಎಂಬ ಅಟೋಮ್ಯಾಟಿಕ್ ಲೋಕದಲ್ಲಿ ಬೆಸ್ಟ್ ರೈಡಿಂಗ್ ಮಾಡಿ!

ಇಂಥ ತಂತ್ರಜ್ಞಾನ ಇದ್ದಾಗ ಕಾರಿನ ಗಾಜನ್ನು ಒಡೆಯುವುದಿರಲಿ ಬಾಗಿಲಿನ ಹ್ಯಾಂಡಲ್ ಹಿಡಿದು ಅಲುಗಾಡಿಸಿದರೂ ಊರಿಗೇ ಕೇಳುವಂತೆ ಕೂಗಿಕೊಳ್ಳುವ ಕಾರು ಒಂದೂ ಶಬ್ದ ಮಾಡದೇ ಅವರ ಬಳಿ ಹೇಗೆ ಹೋಯಿತು ಎಂದು ತಲೆ ಚಚ್ಚಿಕೊಳ್ಳುವ ಸರದಿ ನಿಮ್ಮದಾಗುತ್ತದೆ. ಹಾಗಾದರೆ, ಈ ಕೀಲೆಸ್ ಸಿಸ್ಟಂ ಸೇಫ್ ಅಲ್ಲವೇ ಎಂದು ಪ್ರಶ್ನಿಸಬಹುದು. ಖಂಡಿತಾ ಸೇಫ್ ಹೌದು. ಆದರೆ, ನೀವು ಅದನ್ನು ಸೇಫ್ ಆಗಿ ಇಟ್ಟುಕೊಳ್ಳಬೇಕಷ್ಟೇ. 

ಕೀಲೆಸ್ ಎಂಟ್ರಿ ಸಿಸ್ಟಂ ಹೇಗಿರುತ್ತೆ?
ಕೀಲೆಸ್ ಎಂಟ್ರಿ ಸಿಸ್ಟಂ ರೇಡಿಯೋ (ತರಂಗಗಳ) ಸಿಗ್ನಲ್ ಮತ್ತು ಪ್ರಾಕ್ಸಿಮಿಟಿಯಿಂದ ಕಾರ್ಯನಿರ್ವಹಿಸುತ್ತದೆ. ಕೀಲೆಸ್ ಫೋಬ್ಸ್‌ನಲ್ಲಿ ಇಡೀ ಲಾಕಿಂಗ್ ವ್ಯವಸ್ಥೆ ನಿರ್ವಹಿಸಲು ಚಿಪ್ ಅಳವಡಿಕೆ ಮಾಡಲಾಗಿರುತ್ತದೆ. ಇದು ರೇಡಿಯೋ ಸಿಗ್ನಲ್‌ನ ಆದೇಶಕ್ಕೆ ಕಾಯುತ್ತಿರುತ್ತದೆ. ಈ ರೇಡಿಯೋ ಸಿಗ್ನಲ್‌ನಲ್ಲಿ ತುಂಬಾ ಕಡಿಮೆ ಅಂತರ ಇದ್ದು, ಸುಮಾರು 5 ಮೀಟರ್ ವ್ಯಾಪ್ತಿಯನ್ನೊಳಗೊಂಡಿರುತ್ತದೆ. ಯಾವಾಗ ವ್ಯಕ್ತಿಯು ಕಾರಿನ ಹ್ಯಾಂಡಲ್ ಮೇಲೆ ಕೈಯಿಟ್ಟಾಗ ಇಲ್ಲವೇ ಕೆಲ ಸಂದರ್ಭಗಳಲ್ಲಿ ಬಟನ್ ಒತ್ತಿ ಹೋದಲ್ಲಿ ಕಾರಿನಿಂದ ರೇಡಿಯೋ ಸಿಗ್ನಲ್ ಹೊರಡುತ್ತದೆ. ಜೊತೆಗೆ ಫೋಬ್ ಸಹ ಇದೇ ವ್ಯಾಪ್ತಿಯಲ್ಲಿದ್ದರೆ, ಅದೂ ಸಹ ತನ್ನ ಸಿಗ್ನಲ್ ಅನ್ನು ರವಾನಿಸುತ್ತದೆ. ಆಗ ಕಾರು ಆ ಸಿಗ್ನಲ್ ಅನ್ನು ಪರಿಗಣಿಸಿ ಡೋರ್ ಓಪನ್ ಮಾಡುತ್ತದೆ. ಬಳಿಕ ಕಾರಿನೊಳಗೆ ಸ್ಟಾರ್ಟ್ ಬಟನ್ ಒತ್ತಿ ಹೊರಡಬಹುದು. 

ಇದನ್ನೂ ಓದಿ: ಕೊರೋನಾ ಜ್ವರ ಗುರುತಿಸೋ ಕಾರು ಬರುತ್ತೆ!

ಇಲ್ಲೇ ಇರುವುದು ದೋಷ
ಒಂದು ವೇಳೆ ಕಳ್ಳನಿಗೆ ರಿಲೇ (ಸಿಗ್ನಲ್‌ಗಳ ಡಿಕೋಡಿಂಗ್) ತಂತ್ರ ಗೊತ್ತಿದ್ದರೆ ಕಾರು ಕಳ್ಳತನ ಸುಲಭವಾಗುತ್ತದೆ. ಇಲ್ಲಿ ಪ್ರಮುಖವಾಗಿ ಇಬ್ಬರು ವ್ಯಕ್ತಿಗಳು ಹಾಗೂ ಎರಡು ರಿಲೇ ಬಾಕ್ಸ್‌ಗಳು ಬೇಕಾಗುತ್ತವೆ. ಇಲ್ಲಿ ಮೊದಲ ವ್ಯಕ್ತಿ ಒಂದು ರಿಲೇ ಬಾಕ್ಸ್ ಅನ್ನು ಹೊತ್ತೊಯ್ದು, ಮನೆಯೊಳಗೆ ಇಡಲಾಗಿರುವ ಕೀಫೋಬ್ ಲೊಕೇಶನ್ ಹುಡುಕಾಟ ನಡೆಸುತ್ತಾನೆ. ಒಂದು ವೇಳೆ ಕೀಫೋಬ್‌ನಿಂದ ಆ ಮೊದಲ ರಿಲೇ ಬಾಕ್ಸ್ ಗೆ ಸಿಗ್ನಲ್ ಸಿಕ್ಕಿದ್ದೇ ಆದರೆ, ಆ ತರಂಗವನ್ನು ಹಾಗೆಯೇ ಸೆಳೆದು ಇವರ ಬಳಿ ಇರುವ ಇನ್ನೊಂದು ರಿಲೇ ಬಾಕ್ಸ್‌ಗೆ ಸಿಗ್ನಲ್ ಅನ್ನು ರವಾನಿಸುತ್ತದೆ. ಆಗ ಆ ಬಾಕ್ಸ್ ಅನ್ನು ಕಾರಿನ ಡೋರ್ ಬಳಿ ಇಟ್ಟುಕೊಂಡಿರುವ ಇನ್ನೊಬ್ಬನಿಗೆ ಡೋರ್ ತೆರೆಯಲು ಸುಲಭವಾಗಿ, ಹಾಗೆಯೇ ಕಾರನ್ನು ಚಲಾಯಿಸಿಕೊಂಡು ಹೋಗಬಹುದಾಗಿದೆ. 

ನಿಮ್ಮ ಕಾರಿನ ರಕ್ಷಣೆ ಹೇಗೆ?
- ನೀವು ನಿಮ್ಮ ಕಾರಿನ ಫೋಬ್ ಕೀ ಅನ್ನು ಫ್ರಿಜ್ ನಲ್ಲಿಡಬೇಕು. ಆಗ ಹೊರಗೆ ಸಿಗ್ನಲ್ ಸಿಗದಂತೆ ಬ್ಲಾಕ್ ಆಗುವುದರಿಂದ ಇದರ ಕಳ್ಳತನ ಸುಲಭವಾಗುವುದಿಲ್ಲ. 
- ಮುಖ್ಯವಾಗಿ ನಿಮ್ಮ ಫೋಬ್ ಕೀಯನ್ನು ಬಾಗಿಲು, ಇಲ್ಲವೇ ಕಿಟಗಿಯ ಬಳಿ ಇಡಲೇಬೇಡಿ. ಇದರಿಂದ ರಿಲೇ ಬಾಕ್ಸ್ ಮೂಲಕ ಸುಲಭವಾಗಿ ಸಿಗ್ನಲ್ ಪಡೆಯಬಹುದಾಗಿದೆ. 
- ಮೆಟಲ್ ಬಾಕ್ಸ್ ಒಳಗೆ ಕೀಯನ್ನಿಟ್ಟರೂ ಉತ್ತಮ. ಇಲ್ಲೂ ತಹ ಯಾವುದೇ ತರದಲ್ಲೂ ಸಿಗ್ನಲ್ ಹೊರಗೆ ಹೋಗದು.
- ಇನ್ನೊಂದು ಪ್ರಮುಖ ಅಂಶವೆಂದರೆ ನಿಮ್ಮ ಕಾರನ್ನು  ಒಮ್ಮೆ ಲಾಕ್ ಮಾಡಿದ್ದೀರೆಂದ ಮೇಲೆ 2 ಬಾರಿಯಾದರೂ ಡೋರ್ ಹ್ಯಾಂಡಲ್ ಅನ್ನು ಎಳೆದು ಪರಿಶೀಲಿಸಿಕೊಳ್ಳಿ. ಒಮ್ಮೆ ಸರಿಯಾಗಿ ಲಾಕ್ ಬಿದ್ದಿರುವುದಿಲ್ಲ. ಅದು ನಿಮ್ಮ ಗಮನಕ್ಕೂ ಬರುವುದಿಲ್ಲ. ಇದೂ ಸಹ ಕಳ್ಳತನಕ್ಕೆ ಅನುಕೂಲವಾಗುತ್ತದೆ. 
- ಸ್ಟೇರಿಂಗ್ ಹಾಗೂ ಗೇರ್ ಲಾಕ್ ಮಾಡುವುದರಿಂದ ನಿಮ್ಮ ಕಾರಿನ ಸುರಕ್ಷತೆ ಮತ್ತಷ್ಟು ಹೆಚ್ಚುತ್ತದೆ. ಒಂದು ವೇಳೆ ಕಳ್ಳರು ಮೊದಲ ಭಾಗವಾಗಿ ಕಾರಿನ ಡೋರ್ ಓಪನ್ ಮಾಡುವಲ್ಲಿ ಸಫಲರಾದರೂ, ಇಲ್ಲಿ ಸ್ಟೇರಿಂಗ್ ಮತ್ತು ಗೇರ್ ಲಾಕ್ ಸಿಸ್ಟಂ ಅನ್ನು ಭೇದಿಸುವುದಕ್ಕೆ ಮತ್ತೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇದು ತುಂಬಾ ರಿಸ್ಕಿಯೂ ಹೌದು. ಹಾಗಾಗಿ ಆ ಕಾರಿನ ತಂಟೆಯನ್ನು ಬಿಟ್ಟುಬಿಡಬಹುದು. 
- ಯಾವುದೇ ಕಾರಣಕ್ಕೂ ದುಬಾರಿ ಬೆಲೆಯ ವಸ್ತು ಗಳನ್ನು ಕಾಣುವಂತೆ ಕಾರಿನೊಳಗೆ ಇಟ್ಟುಹೋಗಬೇಡಿ. ಲ್ಯಾಪ್‌ಟ್ಯಾಪ್, ರೇಡಿಯೋ, ಮೊಬೈಲ್ ಫೋನ್, ಬ್ಯಾಗ್ ಹೀಗೆ ಇಂಥವುಗಳನ್ನು ಕಾಣುವ ಹಾಗೆ ಸೀಟಿನ ಮೇಲೆ ಇಡುವುದು ಒಳ್ಳೆಯದಲ್ಲ. ಇದು ಕಳ್ಳರನ್ನು ನೀವಾಗಿಯೇ ಆಹ್ವಾನಿಸಿದಂತೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!