ಸುರೇಂದ್ರ ಜೈನ್ ನಾರಾವಿ

ಇವರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಕುಪ್ಪಗುಡ್ಡೆಯ ರೈತ ಪರಶುರಾಮ. ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ.ಶಿಕ್ಷಣ 9ನೇ ಕ್ಲಾಸ್‌ಗೇ ಕೊನೆಯಾಯ್ತು. ತನ್ನ ಆಸಕ್ತಿಯ ಕೃಷಿ ಕ್ಷೇತ್ರದಲ್ಲೇ ಮುಂದುವರಿದರು. ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ. ಅಂಥ ಪ್ರಯೋಗಗಳಲ್ಲೊಂದು ಅಡಿಕೆ ಕೃಷಿಯ ನಡುವೆ ಬತ್ತ ಕೃಷಿ.

ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ

ಒಂದು ಎಕರೆ ಜಮೀನಿನಲ್ಲಿ 9*9 ಅಗಲದಲ್ಲಿ 500 ಅಡಿಕೆ ಸಸಿಗಳನ್ನು ನೆಟ್ಟು ಇದೀಗ 4 ವರ್ಷ ಆಗಿದೆ. ಅಡಿಕೆ ಗಿಡಕ್ಕೆ 2 ವರ್ಷ ಆದಾಗ ಇದರ ಮಧ್ಯ ಶುಂಠಿ, ಮೆಕ್ಕೆಜೋಳ ಬೆಳೆದು ಉತ್ತಮ ಫಸಲು ಪಡೆದರು. 3ನೇ ವರ್ಷಕ್ಕೆ ತರಕಾರಿ, ಮೆಣಸು, ಚೆಂಡು ಹೂಗಳನ್ನು ಬೆಳೆದು ಯಶಸ್ವಿಯಾದರು. ಇದೀಗ 4 ನೇ ವರ್ಷ ಅಂದರೆ 2019 ಜೂನ್‌ನಲ್ಲಿ ಹೊಸ ಪ್ರಯೋಗವಾಗಿ ಭತ್ತ ಬೆಳೆದಿದ್ದಾರೆ. ಬೇಸಾಯದ ವಿಧಾನ ಅಡಿಕೆ ತೋಟದ ನೆಲ ಹದಗೊಳಿಸಿ ಜೂನ್‌ನಲ್ಲಿ ಸಣ್ಣ ಕಾಳು ಬತ್ತದ ಬಿತ್ತನೆ ಮಾಡಿದರು. ಆಗಸ್ಟ್ ಮೊದಲ ವಾರ ನಾಟಿ ಕೆಲಸ. ಆ ಹೊತ್ತಿಗೆ ಒಂದು ಸಮಸ್ಯೆ ಎದುರಾಯ್ತು. ಸಾಮಾನ್ಯ ಬತ್ತಕ್ಕೆ ನೀರು ಹೆಚ್ಚು ಬೇಕು. ಅಡಿಕೆಗೆ ಆ ಪ್ರಮಾಣದಲ್ಲಿ ನೀರು ಬೇಡ. ಪರಶುರಾಮ ಅವರು ಈ ಬಗ್ಗೆ ಒಂದಿಷ್ಟು ಚಿಂತಿಸಿ ಹೆಚ್ಚು ನೀರು ನೀಡದೇ ಬತ್ತ ನಾಟಿ ಮಾಡಿದರು. ಉಳಿದೆಡೆ ಬತ್ತ ಕೃಷಿ ಮಾಡುವಂತೆ ನೀರನ್ನು ಬದು ಅಥವಾ ಕಟ್ಟೆ ಕಟ್ಟಿ ನಿಲ್ಲಿಸದೆ ಸಣ್ಣ ಜೆಟ್ ಪಂಪ್ ಮೂಲಕ ಹಾಯಿಸಿದರು. ಭತ್ತದ ತೆನೆ ಫಲವತ್ತಾಗಿ ಬೆಳೆಯಿತು. ಉತ್ತಮ ಇಳುವರಿಯೂ ಬಂತು. ‘ಮೊದಲ ಪ್ರಯತ್ನದಲ್ಲೇ ಅಂದಾಜು 18 ಕ್ವಿಂಟಾಲ್ ಭತ್ತದ ಫಸಲನ್ನು ಪಡೆದಿರುವುದು ನನಗೆ ತುಂಬಾ ಸಂತಸವನ್ನು ನೀಡಿದೆ’ ಎನ್ನುತ್ತಾರೆ ಪರಶುರಾಮ.  ಅಡಿಕೆ ತೋಟಕ್ಕೆ ಉಪ್ಪು ಸುಣ್ಣ ಹಾಕಿ ಗದ್ದೆ ಹದ ಮಾಡಿದ್ದರು. ಆ ನಂತರ ಹಟ್ಟಿ ಗೊಬ್ಬರ ಹಾಕಿದರು. 2 ತಿಂಗಳ ಒಳಗೆ ಸ್ವಲ್ಪಪಟ್ಟಿಗೆ ಪೊಟಾಸಿ ರಾಸಾಯನಿಕ ಗೊಬ್ಬರ ಹಾಕಿದ್ದಾರೆ.

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

ಹೊಸ ಪ್ರಯೋಗಕ್ಕೆ ಪ್ರಯತ್ನ

ಒಂದೇ ಬೆಳೆ ಬೆಳೆದರೆ ಉತ್ತಮ ಫಸಲು ನೀಡುವುದಿಲ್ಲ. ಕೃಷಿಯಲ್ಲಿ ಹೊಸತನ ತರಬೇಕು. ತಾವು ಉಣ್ಣುವ ಅನ್ನವನ್ನು ತಾವೇ ಬೆಳೆಯಬೇಕು. ಮಿಶ್ರ ಬೆಳೆಗೆ ಆದ್ಯತೆ ನೀಡಿ ವಾಣಿಜ್ಯ ಬೆಳೆಯೊಂದಿಗೆ ಆಹಾರ ಬೆಳೆಯನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಬೇಕು ಎಂಬ ಕನಸು ಇವರಿಗೆ ಬಾಲ್ಯದಿಂದಲೂ ಇತ್ತು. ಆ ಕನಸನ್ನೇ ಬೆಂಬತ್ತಿ ನಡೆದ ಪರಶುರಾಮ ಅವರಿಗೆ ಯಶಸ್ಸು ಸಿಕ್ಕಿದೆ. ಈ ಸಕ್ಸಸ್ಸು ಇನ್ನೊಂದಿಷ್ಟು ಹೊಸ ಪ್ರಯೋಗಗಳಿಗೆ ಸ್ಫೂರ್ತಿಯೂ ಆಗಿದೆ. ಪರಶುರಾಮ ಅವರ ಮೊಬೈಲ್ ಸಂಖ್ಯೆ 9632459621 ಸಂಪರ್ಕಿಸಿ.

ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!