ಮಳೆಗಾಲದಲ್ಲಿ ಹೆಚ್ಚಾಗುವ ತೇವಾಂಶ ಮತ್ತು ಒದ್ದೆಯಾದ ವಾತಾವರಣಕ್ಕೆ ಹತ್ತಿ (ಕಾಟನ್) ಬಟ್ಟೆಗಳು ಅತ್ಯುತ್ತಮ ಆಯ್ಕೆಯಾಗಿದೆ. ಹಗುರ, ಗಾಳಿಯಾಡುವ ಮತ್ತು ಬೇಗನೆ ಒಣಗುವ ಗುಣ ಹೊಂದಿರುವ ಕಾಟನ್, ಚರ್ಮದ ಸೋಂಕುಗಳನ್ನು ತಡೆಯುವುದಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಸಡಿಲವಾದ ವಿನ್ಯಾಸ ಮತ್ತು ಗಾಢ ಬಣ್ಣಗಳನ್ನು ಆರಿಸಿಕೊಳ್ಳುವ ಮೂಲಕ ಈ ಋತುವನ್ನು ಸ್ಟೈಲಿಶ್ ಆಗಿ ಕಳೆಯಬಹುದು.

ಬೇಸಿಗೆಯ ಕಾವಿನಿಂದ ಮುಕ್ತಿ ನೀಡುವ ಮಳೆಗಾಲವು ವಾತಾವರಣಕ್ಕೆ ತಂಪು ತಂದರೂ, ನಮ್ಮ ದಿನನಿತ್ಯದ ಉಡುಪುಗಳ ಆಯ್ಕೆಗೆ ದೊಡ್ಡ ಸವಾಲನ್ನೇ ಒಡ್ಡುತ್ತದೆ. ಹೆಚ್ಚಾಗುವ ಗಾಳಿಯ ತೇವಾಂಶ (ಆರ್ದ್ರತೆ), ದಿಢೀರ್ ಸುರಿಯುವ ಮಳೆ ಮತ್ತು ಒದ್ದೆಯಾದ ವಾತಾವರಣದಿಂದಾಗಿ ಬಟ್ಟೆಗಳು ಭಾರವಾಗಿ, ಕಿರಿಕಿರಿ ಉಂಟುಮಾಡುತ್ತವೆ ಹಾಗೂ ಬೇಗನೆ ಒಣಗುವುದಿಲ್ಲ. ಇಂತಹ ಸಮಯದಲ್ಲಿ ಯಾವ ರೀತಿಯ ಉಡುಪು ಧರಿಸಬೇಕು ಎಂಬ ಗೊಂದಲ ಎಲ್ಲರಲ್ಲೂ ಇರುತ್ತದೆ. ಆದರೆ, ಮಳೆಗಾಲದ ಈ ಸವಾಲುಗಳಿಗೆ 'ಕಾಟನ್' (ಹತ್ತಿ) ಬಟ್ಟೆ ಅತ್ಯಂತ ಸೂಕ್ತ ಮತ್ತು ಪ್ರಾಯೋಗಿಕ ಆಯ್ಕೆ ಎಂದು ಫ್ಯಾಷನ್ ತಜ್ಞರು ಅಭಿಪ್ರಾಯಪಡುತ್ತಾರೆ.

ಮಳೆಗಾಲದಲ್ಲಿ ಕಾಟನ್ ಬಟ್ಟೆಯೇ ಏಕೆ ಉತ್ತಮ?

ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ 'ಫ್ಯಾಬ್‌ಇಂಡಿಯಾ' ಪ್ರಕಾರ, ಮಳೆಗಾಲ ಎಂದರೆ ಸಂಪೂರ್ಣ ವಾರ್ಡ್ರೋಬ್ ಅನ್ನು ಬದಲಾಯಿಸುವುದಲ್ಲ; ಬದಲಾಗಿ ಋತುಮಾನಕ್ಕೆ ತಕ್ಕಂತೆ ಜಾಣತನದ ಆಯ್ಕೆ ಮಾಡುವುದು. ಕಾಟನ್ ಬಟ್ಟೆಯು ಅತ್ಯಂತ ಹಗುರವಾಗಿದ್ದು, ಗಾಳಿಯಾಡುವ ನೈಸರ್ಗಿಕ ಗುಣವನ್ನು ಹೊಂದಿದೆ. ಇದು ಶರೀರಕ್ಕೆ ನಿರಂತರ ಗಾಳಿಯ ಸಂಚಾರವನ್ನು ಒದಗಿಸಿ, ಆರ್ದ್ರತೆಯ ದಿನಗಳಲ್ಲೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ.

ಯಾಕೆ ಸೂಕ್ತ?

ಇದರ ಬಹುಮುಖ ಬಳಕೆ ಮತ್ತೊಂದು ವಿಶೇಷ. ಗರಿಗರಿಯಾದ ಆಫೀಸ್ ಶರ್ಟ್, ವಾರಾಂತ್ಯದ ಸರಳ ಡ್ರೆಸ್ ಅಥವಾ ಸಂಜೆಯ ವಿಹಾರಕ್ಕೆ ಹೊಂದುವ ಮಿಡಿ ಉಡುಪು, ಹೀಗೆ ಪ್ರತಿಯೊಂದು ಸಂದರ್ಭಕ್ಕೂ ಕಾಟನ್ ಸಲೀಸಾಗಿ ಒಗ್ಗಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಕೇವಲ ಒಂದು ಋತುವಿಗೆ ಸೀಮಿತವಾಗುವ ಬಟ್ಟೆಗಳಿಗಿಂತ, ವರ್ಷಪೂರ್ತಿ ಧರಿಸಬಹುದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ನೈಸರ್ಗಿಕ ಬಟ್ಟೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ.

ಮಕ್ಕಳಿಗಂತೂ ವರ!

ಹೊರಾಂಗಣದಲ್ಲಿ ಹೆಚ್ಚಾಗಿ ಆಟವಾಡುವ ಮಕ್ಕಳಿಗೆ ಮಳೆಗಾಲದಲ್ಲಿ ಕಾಟನ್ ಉಡುಪುಗಳೇ ಅತ್ಯಂತ ಸುರಕ್ಷಿತ. ಮಕ್ಕಳ ಉಡುಪಿನ ಬ್ರ್ಯಾಂಡ್ 'ಎಡ್-ಎ-ಮಮ್ಮಾ' ನೀಡುವ ಮಾಹಿತಿಯಂತೆ, ಕಾಟನ್ ಬಟ್ಟೆಯು ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ ಮತ್ತು ಕೃತಕ ಬಟ್ಟೆಗಳಿಗಿಂತ ತೀವ್ರವಾಗಿ ಒಣಗುತ್ತದೆ. ಮಳೆಗಾಲದಲ್ಲಿ ಪಾಲಿಯೆಸ್ಟರ್ ಹೊಂದಿರುವ ಮಿಶ್ರಿತ ಬಟ್ಟೆಗಳನ್ನು ಮಕ್ಕಳಿಗೆ ತೊಡಿಸಬಾರದು. ಇವು ತೇವಾಂಶವನ್ನು ಬಟ್ಟೆಯಲ್ಲೇ ಹಿಡಿದಿಟ್ಟುಕೊಳ್ಳುವುದರಿಂದ ಮಕ್ಕಳಿಗೆ ಕಿರಿಕಿರಿಯಾಗುವುದಲ್ಲದೆ, ಚರ್ಮದ ದದ್ದುಗಳು ಹಾಗೂ ಶಿಲೀಂಧ್ರ (ಫಂಗಲ್) ಸೋಂಕಿಗೆ ಕಾರಣವಾಗಬಹುದು.

ವಿನ್ಯಾಸವೂ ಮುಖ್ಯ!

ಮಳೆಗಾಲದಲ್ಲಿ ಬಟ್ಟೆಯ ನೂಲು ಮಾತ್ರವಲ್ಲ, ಅದರ ವಿನ್ಯಾಸವೂ ಮುಖ್ಯವಾಗುತ್ತದೆ.
ಸಡಿಲವಾದ ಉಡುಪುಗಳು: ಚರ್ಮಕ್ಕೆ ತಾಗದಂತೆ ಸಡಿಲವಾಗಿರುವ ಬಟ್ಟೆಗಳನ್ನು ಆರಿಸಿಕೊಳ್ಳುವುದರಿಂದ ಗಾಳಿಯ ಸಂಚಾರ ಚೆನ್ನಾಗಿರುತ್ತದೆ ಮತ್ತು ಚರ್ಮದ ಕಿರಿಕಿರಿ ತಪ್ಪುತ್ತದೆ.
ಚಿಕ್ಕ ಬಟ್ಟೆಗಳ ಆಯ್ಕೆ: ನೆಲಕ್ಕೆ ತಗಲುವ ಪೂರ್ಣ ಪ್ರಮಾಣದ ಪ್ಯಾಂಟ್‌ಗಳಿಗಿಂತ ಶಾರ್ಟ್ಸ್, ಕ್ಯಾಪ್ರಿ, ಸ್ಕರ್ಟ್‌ ಅಥವಾ ಹಿಮ್ಮಡಿಯವರೆಗೆ ಇರುವ ಪ್ಯಾಂಟ್‌ಗಳು ಸೂಕ್ತ. ಇವು ಕೆಸರು ನೀರು ಚಿಮ್ಮಿ ಬಟ್ಟೆ ಹಾಳಾಗುವುದನ್ನು ತಡೆಯುತ್ತವೆ.
ಗಾಢ ಬಣ್ಣಗಳು; ಮಳೆಗಾಲದಲ್ಲಿ ತಿಳಿ ಬಣ್ಣಗಳಿಗಿಂತ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಮಳೆಯ ಚುಕ್ಕೆಗಳು ಮತ್ತು ಕಲೆಗಳು ಎದ್ದು ಕಾಣುವುದಿಲ್ಲ.

ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಫ್ಯಾಷನ್!

ಇಂದಿನ ಗ್ರಾಹಕರು ಸೌಕರ್ಯದ ಜೊತೆಗೆ ಪರಿಸರ ಕಾಳಜಿಗೂ ಆದ್ಯತೆ ನೀಡುತ್ತಿದ್ದಾರೆ. ಜಿಒಟಿಎಸ್ (GOTS) ಪ್ರಮಾಣೀಕೃತ ಸಾವಯವ ಕಾಟನ್ ಮತ್ತು ವಿಷಕಾರಿಯಲ್ಲದ ಬಣ್ಣಗಳಿಂದ ತಯಾರಿಸಿದ ಬಟ್ಟೆಗಳು ಮೃದುವಾಗಿದ್ದು, ಸೂಕ್ಷ್ಮ ಚರ್ಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಆರಾಮದಾಯಕ, ನೈಸರ್ಗಿಕ ಮತ್ತು ಕಾಲಾತೀತ ಗುಣ ಹೊಂದಿರುವ ಕಾಟನ್ ಬಟ್ಟೆಗಳನ್ನು ಆಯ್ಕೆ ಮಾಡುವ ಮೂಲಕ ಈ ಮಾನ್ಸೂನ್ ಅನ್ನು ಸುಲಭವಾಗಿ ಹಾಗೂ ಸ್ಟೈಲಿಶ್ ಆಗಿ ಕಳೆಯಬಹುದು.