ಪಶ್ಚಿಮ ಬಂಗಾಳದ 80 ವರ್ಷದ ಗೋಪಾಲ್ ಡೇ ಅವರು ಕಳೆದ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ಊಟ ನೀಡುತ್ತಾ ಬಂದಿದ್ದಾರೆ. ಹಣದುಬ್ಬರದ ನಡುವೆಯೂ, ದಿನಗೂಲಿ ಕಾರ್ಮಿಕರು ಮತ್ತು ಬಡವರಿಗಾಗಿ ತಮ್ಮ ಈ ನಿಸ್ವಾರ್ಥ ಸೇವೆಯನ್ನು ಅವರು ಮುಂದುವರಿಸಿದ್ದಾರೆ. ಇವರ ಈ ಹೃದಯ ಶ್ರೀಮಂತಿಕೆಯ ಕಾಯಕವು ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.

ಆಸ್ತಿ, ಅಂತಸ್ತು, ಐಶ್ವರ್ಯ ಎಷ್ಟೇ ಇದ್ದರೂ ಹೃದಯ ಶ್ರೀಮಂತಿಕೆ ಇಲ್ಲದಿದ್ದರೆ ಅಂಥ ವ್ಯಕ್ತಿ ಬದುಕಿದ್ದೂ ಸತ್ತಂತೆಯೇ ಸರಿ. ತನ್ನವರಿಗಾಗಿ, ತನ್ನ ಐದಾರು ಪೀಳಿಗೆಯವರಿಗಾಗಿ ಸಿಕ್ಕಷ್ಟೂ ಬಾಚಿಕೊಳ್ಳುವ, ಬೇರೆಯವರ ಆಸ್ತಿಯನ್ನೂ ಲಪಟಾಯಿಸುವ, ಹಣಕ್ಕಾಗಿ ಎಂಥ ಹೇಸಿಗೆ ಕಾರ್ಯ ಮಾಡಲೂ ಹಿಂದೆ ಮುಂದೆ ನೋಡದ, ಇದ್ದಷ್ಟೂ ಮತ್ತಷ್ಟು ಬೇಕು ಎನ್ನುವವರ ನಡುವೆ ಹೃದಯ ಶ್ರೀಮಂತಿಕೆಯ ವ್ಯಕ್ತಿಗಳು ಸದ್ದಿಲ್ಲದೇ ತಮ್ಮ ಸೇವಾ ಕೈಂಕರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮೌನವಾಗಿದ್ದುಕೊಂಡೇ ಪ್ರಚಾರ ಬಯಸದೇ ಜನ ಸೇವೆಯಲ್ಲಿ ತೊಡಗಿಸಿಕೊಂಡಿವರು ಸಾಕಷ್ಟು ಜನರಿದ್ದಾರೆ. ತಮ್ಮ ಕೈಯಲ್ಲಿ ದುಡ್ಡು ಇಲ್ಲದಿದ್ದರೂ, ಶ್ರೀಮಂತಿಕೆ ಸಮೀಪ ಬರದಿದ್ದರೂ, ಬೇರೆಯವರ ಕಣ್ಣೀರನ್ನು ಒರೆಸುವಷ್ಟು ಹೃದಯ ಶ್ರೀಮಂತಿಕೆ ಇವರಲ್ಲಿ ಕಾಣಿಸುತ್ತದೆ.

ಒಂದು ರೂಪಾಯಿ ಊಟ

ಹೀಗೆ ಮೌನವಾಗಿದ್ದುಕೊಂಡೇ ಕೆಲಸ ಮಾಡುವ ಕರ್ಮಿಗಳು, ಅದ್ಹೇಗೋ ಕೆಲವೊಮ್ಮೆ ಸೋಷಿಯಲ್​ ಮೀಡಿಯಾಗಳ ಕಂಟೆಂಟ್​ ಕ್ರಿಯೇಟರ್​ ಗಮನಕ್ಕೆ ಬಂದು ಫೇಮಸ್​ ಆಗಿಬಿಡುತ್ತಾರೆ. ಪ್ರಚಾರದ ಹುಚ್ಚೇ ಬೇಡ ಎಂದು ತಣ್ಣಗೆ ಕೆಲಸ ಮಾಡಿಕೊಂಡು ಇದ್ದವರ ಈ ಹೃದಯ ಶ್ರೀಮಂತಿಕೆ ಕಂಡು ಜನರೇ ನಿಬ್ಬೆರಗಾಗುವಂಥದ್ದೂ ನಡೆಯುತ್ತದೆ. ಅಂಥ ಹೃದಯ ಶ್ರೀಮಂತರಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಗೋಪಾಲ್ ಡೇ. ಸಂಪತ್ತಿನಲ್ಲಿ ಶ್ರೀಮಂತರಲ್ಲದ ಗೋಪಾಲ್​ ಅವರು ಕಳೆದ ಆರು ದಶಕ ಅರ್ಥಾತ್​ 60 ವರ್ಷಗಳಿಂದ ಕೇವಲ ಒಂದು ರೂಪಾಯಿಗೆ ಊಟ ನೀಡುತ್ತಿದ್ದಾರೆ.

ಹಣದುಬ್ಬರದ ನಡುವೆಯೂ ಕಾಯಕ

ಪಶ್ಚಿಮ ಬಂಗಾಳದ ಸಲಾಪ್ ಬಜಾರ್‌ನಲ್ಲಿರುವ ತಮ್ಮ ಸಣ್ಣ ಆಹಾರ ಮಳಿಗೆಯಲ್ಲಿ ಇವರು ಈ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 80 ವರ್ಷ ವಯಸ್ಸಿನ ಗೋಪಾಲ್​ ಅವವರು 20ನೇ ವಯಸ್ಸಿನಲ್ಲಿಯೇ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಹೊರತಾಗಿಯೂ, ಅವರು ತಮ್ಮ ಬೆಲೆಗಳನ್ನು ಹೆಚ್ಚಿಸಲು ನಿರಾಕರಿಸಿದ್ದಾರೆ, ದಿನಗೂಲಿ ಕಾರ್ಮಿಕರು ಮತ್ತು ಅಗತ್ಯವಿರುವವರು ಎಂದಿಗೂ ಹಸಿವಿನಿಂದ ಬಳಲುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ತಮ್ಮ ಕುಟುಂಬದ ಬೆಂಬಲದೊಂದಿಗೆ, ಗೋಪಾಲ್ ಪ್ರತಿದಿನ ತಮ್ಮ ನಿಸ್ವಾರ್ಥ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ, ನಿಜವಾದ ಸಂಪತ್ತು ದಯೆಯಲ್ಲಿದೆ ಎಂದು ಸಾಬೀತುಪಡಿಸುತ್ತಿದ್ದಾರೆ. ಇವರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಕಂಟೆಂಟ್​ ಕ್ರಿಯೇಟರ್​ ಒಬ್ಬರು ಪ್ರಚಾರ ಮಾಡಿದಾಗಲೇ ಮೂಲೆಯಲ್ಲಿ ಸುಮ್ಮನೇ ತಮ್ಮ ಸೇವೆ ಮುಂದುವರೆಸಿಕೊಂಡು ಹೋಗುತ್ತಿದ್ದ ಗೋಪಾಲ್​ ಅವರು ಬೆಳಕಿಗೆ ಬಂದಿದ್ದಾರೆ.