ವಿಜಯಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿಂದಾಸ್ ಆಗಿ ಸಿಗರೇಟ್ ಎಳಿತಿರುವ ಮಕ್ಕಳು:
ವಿಜಯಪುರ: ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಅಪ್ರಾಪ್ತ ಮಕ್ಕಳು ಬಿಂದಾಸ್ ಆಗಿ ಸಿಗರೇಟ್ ಸೇದ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮರಗೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿಗಳು ರೂಮ್‌ನಲ್ಲಿ ಸಾಮೂಹಿಕವಾಗಿ ಸಿಗರೇಟ್ ಸೇದುತ್ತಿದ್ದಾರೆ. ಒಂದೇ ಕೋಣೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳಿದ್ದು ಕೆಲವು ಮಕ್ಕಳು ಬರವಣಿಗೆಯಲ್ಲಿ ತೊಡಗಿದ್ದರೆ. ಇನ್ನೂ ಕೆಲವು ಮಕ್ಕಳು ಮಲಗಿದ್ದಾರೆ ಹಾಗೆಯೇ ಮತ್ತೆ ಕೆಲವು ಮೀಸೆ ಚಿಗುರಾದ ಮಕ್ಕಳು ಇಲ್ಲಿ ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಬಿಂದಾಸ್ ಆಗಿ ಧೂಮಪಾನ ಮಾಡ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆ, ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಾಸ್ಟೆಲ್ ವಾರ್ಡನ್ ಅವರ ಬೇಜಾಬ್ದಾರಿತನದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸರ್ಕಾರಿ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಬೇಕೆಂದರೆ ಮಕ್ಕಳು ಪರೀಕ್ಷೆ ಪಾಸು ಮಾಡಬೇಕಾಗುತ್ತದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಬಹುತೇಕ ಬಡ ಮಾಧ್ಯಮ ವರ್ಗದ ಮಕ್ಕಳು ಇಲ್ಲಿ ಕಲಿಯುತ್ತಿರುತ್ತಾರೆ. ಇವರ ಕೈಗೆ ಸಿಗರೇಟು ಹೇಗೆ ಸಿಕ್ತು ಎಂಬುದು ಈಗ ಪ್ರಶ್ನೆಯಾಗಿದ್ದು, ಅನೇಕರು ಮಕ್ಕಳನ್ನು ನೋಡಿಕೊಳ್ಳುವ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ನಿಧನ: ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?
ಮೋರಾರ್ಜಿ ವಸತಿ ಶಾಲೆಯಲ್ಲಿ ಓದುವ ಮಕ್ಕಳಿಗೆ ವಸತಿ ಊಟದಿಂದ ಹಿಡಿದು ಶಿಕ್ಷಣದವರೆಗೂ ಪ್ರತಿಯೊಂದು ಸಂಪೂರ್ಣ ಉಚಿತವಾಗಿದೆ. ಇವರಿಗೆ ಸಿಗರೇಟ್‌ಗೆ ಹಣ ಯಾರು ಕೊಟ್ಟರು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅನೇಕರು ಈ ಮಕ್ಕಳು ಕಾಣುವ ತರ ಏನಾದರು ಮಾಡ್ತಾರಾ, ಕದ್ದು ಮುಚ್ಚಿ ಇಂತಹ ಕೆಲಸ ಮಾಡ್ತಾರೆ ಇದು ವಾರ್ಡನ್‌ಗೆ ಹೇಗೆ ಗೊತ್ತಾಗುತ್ತೆ. ಇವರೇನು ಓದುವುದಕ್ಕೆ ಬಂದಿದ್ದಾರೋ ಮಜಾ ಮಾಡುವುದಕ್ಕೆ ಬಂದಿದ್ದಾರೋ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲಿ ಚಿನ್ನದ ಸರ ಕದ್ದಿದ್ದು ಬೇರೆ ಯಾರೋ ಅಲ್ಲ: 45 cctv ನೋಡಿ ಆರೋಪಿಯ ಬಂಧನ


