ಜೂನ್ 23 ರಂದು ಗುವಾಂಗ್‌ಡಾಂಗ್ ಪ್ರಾಂತ್ಯದ ಕ್ವಿಂಗ್‌ಯುವಾನ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತು. ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಿಗೆ ಓಡುತ್ತಿದ್ದಾಗ ಈ ಹುಡುಗ ಮಾತ್ರ ಏನ್ ಮಾಡ್ದ ನೋಡಿ...
ಚಿಕ್ಕ ಮಕ್ಕಳಿಗೆ ಅವರ ನೆಚ್ಚಿನ ವಸ್ತುಗಳು ವಿಶೇಷವಾಗಿ ಅವರ ನೆಚ್ಚಿನ ಆಹಾರ ಎಲ್ಲದಕ್ಕಿಂತಲೂ ಹೆಚ್ಚು ಮುಖ್ಯ ಎಂಬುದನ್ನು ನಾವೇನೂ ಬಿಡಿಸಿ ಹೇಳಬೇಕಿಲ್ಲ ಅಲ್ಲವೇ. ಚಿಕ್ಕ ಮಕ್ಕಳಿರುವ ಮನೆಯಲ್ಲಿ ನಾವಿದನ್ನ ಕಣ್ಣಾರೆ ಕಂಡಿರುತ್ತೇವೆ. ಆದರೆ ಚೀನಾದಲ್ಲಿ ಒಬ್ಬ ಹುಡುಗ ತನ್ನ ನೆಚ್ಚಿನ ಆಹಾರವನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಾನೆ ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ. ಮೂಲತಃ ದಕ್ಷಿಣ ಚೀನಾದ ಈ ವಿಡಿಯೋವನ್ನು ಜನರು ತಮಾಷೆಯಾಗಿ ನೋಡುತ್ತಿದ್ದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಇದರಲ್ಲಿ ಒಬ್ಬ ಹುಡುಗ ಭೂಕಂಪದ ಸಮಯದಲ್ಲಿ ತನ್ನ ಜೀವವನ್ನು ಉಳಿಸಿಕೊಳ್ಳಲು ಓಡುವ ಬದಲು ತನ್ನ ಆಹಾರದ ಮೇಲೆ ಕೇಂದ್ರೀಕರಿಸುತ್ತಾನೆ. ಇಡೀ ಕುಟುಂಬಕ್ಕೆ ಕುಟುಂಬವೇ ಜೀವ ಉಳಿಸಿಕೊಳ್ಳಲು ಎದ್ದೆವೊ ಬಿದ್ದೆವೊ ಎಂದು ಓಡುತ್ತಿದ್ದರೆ ಈ ಹುಡುಗ ಮಾತ್ರ ಮನೆಯಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮಧ್ಯೆ ಸಾಧ್ಯವಾದಷ್ಟು ತನ್ನ ನೆಚ್ಚಿನ ಆಹಾರವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ.
ಆಗಿದ್ದಿಷ್ಟು…
ಜೂನ್ 23 ರಂದು ಗುವಾಂಗ್‌ಡಾಂಗ್ ಪ್ರಾಂತ್ಯದ ಕ್ವಿಂಗ್‌ಯುವಾನ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತು. ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಿಗೆ ಓಡುತ್ತಿದ್ದಾಗ ಈ ಹುಡುಗನ ಆದ್ಯತೆಗಳನ್ನು ನೋಡಿ ಇಂಟರ್ನೆಟ್ ಮಂದಿ ಮನದಲ್ಲಿ ಕಚಗುಳಿ ಇಟ್ಟಂತೆ ಆಗಿದೆ.
ಆಹಾರ ತೆಗೆದುಕೊಂಡು ಓಡಿಹೋದ!
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ನೋಡುವ ಹಾಗೆ ಭೂಕಂಪದ ಸಮಯದಲ್ಲಿ ಕುಟುಂಬವು ಮನೆಯಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಲಿ ಎಂಬ ಉಪನಾಮದಿಂದ ಮಾತ್ರ ಗುರುತಿಸಲ್ಪಡುವ ತಂದೆ ತನ್ನ ಕಿರಿಯ ಮಗನನ್ನು ಹಿಡಿದು ಬಾಗಿಲಿನ ಕಡೆಗೆ ಓಡಿದನು. ಹಿರಿಯ ಮಗ ಕೂಡ ಅವನ ಹಿಂದೆ ಓಡುತ್ತಾನೆ. ಆದರೆ ನಂತರ ಅವನಿಗೆ ತನ್ನ ನೆಚ್ಚಿನ ಆಹಾರವನ್ನು ಮೇಜಿನ ಮೇಲೆ ಇಟ್ಟಿರುವುದು ಅರಿವಾಗುತ್ತದೆ. ಆಗ ಅವನು ಭೂಕಂಪದ ಮಧ್ಯೆಯೇ ಮತ್ತೆ ಹಿಂತಿರುಗಿ ಬಂದು ಆಹಾರ ತೆಗೆದುಕೊಂಡು ಓಡಿಹೋಗುತ್ತಾನೆ.
ಹೊರಗೆ ಹೋಗುವಾಗ ಅವನು ಒಂದು ಬಟ್ಟಲು ಅನ್ನದೊಂದಿಗೆ ತರಕಾರಿಗಳ ತಟ್ಟೆಯನ್ನು ತೆಗೆದುಕೊಂಡು ಹೋಗಲು ಸಹ ಪ್ರಯತ್ನಿಸುತ್ತಾನೆ. ಬಿಸಿ ತಿನಿಸುಗಳೊಂದಿಗೆ ಒಂಬತ್ತು ಮಹಡಿಗಳ ಮೆಟ್ಟಿಲುಗಳನ್ನು ಹತ್ತಬೇಕಾದರೆ ಗಾಯವಾಗಬಹುದು ಎಂದು ಕಳವಳಗೊಂಡ ಲೀ, ತನ್ನ ಮಗನಿಗೆ ಆಹಾರವನ್ನು ಹಿಂದಕ್ಕೆ ಇರಿಸಿ ಸುರಕ್ಷಿತವಾಗಿ ಅಲ್ಲಿಂದ ಹೊರಡುವತ್ತ ಗಮನಹರಿಸಲು ಹೇಳುತ್ತಾನೆ. ಹುಡುಗ ಆಹಾರದ ಬಟ್ಟಲನ್ನು ಹಿಂದಕ್ಕೆ ಇಡುತ್ತಾನೆ. ಆದರೆ ಹೊರಡುವ ಮೊದಲು ಆತುರದಿಂದ ತಿನ್ನಲು ಪ್ರಾರಂಭಿಸುತ್ತಾನೆ.
"ಆ ಸಮಯದಲ್ಲಿ, ನಾನು ತುಂಬಾ ನರ್ವಸ್ ಆಗಿದ್ದೆ. ಅವನಿಗೆ ಓಡು, ಓಡು ಎಂದು ಹೇಳುತ್ತಲೇ ಇದ್ದೆ. ಅವನಿಗೆ ಸಹಜ ಹಾಸ್ಯಪ್ರಜ್ಞೆ ಇದೆ. ವಿಡಿಯೋ ನೋಡಿದ ನಂತರವೇ ಅದು ಎಷ್ಟು ತಮಾಷೆಯಾಗಿತ್ತು ಎಂದು ನನಗೆ ಅರಿವಾಯಿತು" ಎಂದು ಜಿಮು ನ್ಯೂಸ್‌ಗೆ ಮಾತನಾಡಿದ ಲೀ, ಮನೆಗೆ ಓಡಿ ಬಂದು ತಿನ್ನುವ ಭಕ್ಷ್ಯಗಳು ನೆಚ್ಚಿನವುಗಳಲ್ಲ, ಬದಲಾಗಿ ಅವನು ಕೇವಲ ಆಹಾರಪ್ರಿಯ ಮತ್ತು ತಿನ್ನಲು ಹೆಚ್ಚು ಇಷ್ಟಪಡುತ್ತಾನೆ ಎಂದು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋವನ್ನು ಚೀನಾದ ಟಿಕ್‌ಟಾಕ್, ಎಕ್ಸ್ (ಈ ಹಿಂದೆ ಟ್ವಿಟರ್) ಮತ್ತು ಡೌಯಿನ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅನೇಕ ವೀಕ್ಷಕರು ಇದನ್ನು ತಮಾಷೆಯಾಗಿ ನೋಡುತ್ತಿದ್ದಾರೆ. ಕೆಲವು ಬಳಕೆದಾರರು “ಹೌದು.. ಅವನು ತಿನ್ನಲು ಬದುಕುತ್ತಿದ್ದಾನೆ, ಬದುಕಲು ತಿನ್ನುತ್ತಿಲ್ಲ.. ನನಗೆ ಈ ಹುಡುಗ ಈಗಾಗಲೇ ಇಷ್ಟವಾಗಿದ್ದಾನೆ. ಆಹಾರ ಜೀವನಕ್ಕಿಂತ ಮುಖ್ಯ" ಎಂದೆಲ್ಲಾ ನೆಟ್ಟಿಗರು ಸಹ ತಮಾಷೆಯಾಗಿ ಕಾಮೆಂಟ್ ಮಾಡಿರುವುದನ್ನು ನೋಡಬಹುದು.