ಸ್ಪೇನ್‌ನ ಪ್ರಸಿದ್ಧ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ 81 ವರ್ಷದ ವೃದ್ಧನೊಬ್ಬ ಕಾರು ಚಲಾಯಿಸಿ ಸಿಲುಕಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯ ಎನಿಸಿದೆ. ಟ್ರಾಫಿಕ್‌ನಿಂದ ತುಂಬಿರುವ ಮಹಾನಗರಗಳಲ್ಲಿ(Metro city) ಸಂಚಾರ ನಿಯಮ ಉಲ್ಲಂಘನೆಗೆ ಮಿತಿ ಎಂಬುದೇ ಇರುವುದಿಲ್ಲ, ಸಂಚಾರ ನಿಯಮ ಉಲ್ಲಂಘನೆ ಮಾಡಿ ಜನ ಕಟ್ಟುವ ದಂಡದ ಮೊತ್ತವೇ ಕೋಟಿಗಟ್ಟಲೇ ಆಗಿರುತ್ತದೆ. ಇದರಲ್ಲೇ ನೀವು ಜನ ಟ್ರಾಫಿಕ್ ನಿಯಮ(trafic rules) ಉಲ್ಲಂಘಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜನ ಫುಟ್‌ಪಾತ್‌ಗಳ ಮೇಲೂ ಗಾಡಿ ಓಡಿಸಿಕೊಂಡು ಹೋಗುವುದು ಇಲ್ಲಿ ಸಾಮಾನ್ಯ ಎನಿಸಿದೆ. ಹೀಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರು ಬಹುತೇಕ ತರುಣರೇ ಆಗಿರುತ್ತಾರೆ. ಆದರೆ ಇಲ್ಲೊಂದು ಕಡೆ 81 ವರ್ಷದ ವೃದ್ಧರೊಬ್ಬರು ಸಂಚಾರ ನಿಯಮ ಉಲ್ಲಂಘಿಸಿ ಮೆಟ್ಟಿಲುಗಳ ಮೇಲೆ ಕಾರು ಓಡಿಸಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಸ್ಪೇನ್‌ನಲ್ಲಿ(Spain) ನಡೆದಿದ್ದು ವೀಡಿಯೋ ವೈರಲ್ ಆಗಿದೆ.
ಮೆಟ್ಟಿಲುಗಳ ಮೇಲೆ ಕಾರು ಇಳಿಸಿದ ವೃದ್ಧ:
ಸ್ಪೇನ್‌ನ ರೋಮ್‌ನಲ್ಲಿ ಘಟನೆ ನಡೆದಿದೆ. ಇಲ್ಲಿನ ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ( Spanish Steps) ಮೇಲೆ 81 ವರ್ಷದ ವೃದ್ಧ ತನ್ನ ಕಾರನ್ನು ಇಳಿಸಿದ್ದು, ಇದು ನಂತರದಲ್ಲಿ ಮೆಟ್ಟಿಲುಗಳ ಮೇಲೆಯೇ ಸ್ಟಕ್ ಆಗಿದೆ. ಈ ಸ್ಪ್ಯಾನಿಷ್ ಸ್ಟೆಪ್ ತುಂಬಾ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು, ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತದೆ. ಇಂತಹ ಪ್ರವಾಸಿಗರ ತಾಣದಲ್ಲೇ ವೃದ್ಧರೊಬ್ಬರು ತಮ್ಮ ಕಾರನ್ನು ಇಳಿಸಿದ್ದು, ಆ ಕಾರು ಮೆಟ್ಟಿಲುಗಳ ಮೇಲೆಯೇ ಸ್ಟಕ್ ಆಗಿ ನಿಂತಿದೆ. ಹಾಗಂತ ಈ ವೃದ್ಧನೇನು ಪಾನಮತ್ತನಾಗಿ ಗಾಡಿ ಓಡಿಸುತ್ತಿರಲಿಲ್ಲ ಎಂದು ಕೆಲ ವರದಿಗಳು ಹೇಳಿವೆ. ಆತನ ಕಾರು ಮೆಟ್ಟಿಲುಗಳ ಮೇಲೆ ಸ್ಟಕ್ ಆದ ನಂತರ ಪೊಲೀಸರು ಬಂದಿದ್ದು, ಆ ವೃದ್ಧನಿಗೆ ಮದ್ಯಪಾನ ಮಾಡಿದ್ದಾನೆಯೇ ಇಲ್ಲವೇ ಎಂದು ತಪಾಸಣೆ ಮಾಡಿದ್ದಾರೆ. ಈ ವೇಳೆ ಆತ ಮದ್ಯಸೇವಿಸಿಲ್ಲ ಎಂಬುದು ಸಾಬೀತಾಗಿದೆ. ಅಲ್ಲದೇ ಆತ ಕಾರಿನಲ್ಲಿ ತನ್ನ ದೈನಂದಿನ ಕೆಲಸಕ್ಕೆ ಹೋಗುತ್ತಿದ್ದ ಎಂದು ಬಿಬಿಸಿ ವರದಿ ಮಾಡಿದೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್
ಈ ವೀಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಯಾವತ್ತೂ ಗೂಗಲ್ ಮ್ಯಾಪ್ ಅನ್ನು ಕಣ್ಣುಮುಚ್ಚಿ ನಂಬಲು ಹೋಗಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತುಳಿದ ಅನೇಕರು ವೃದ್ಧನ(Elderly man) ಈ ಕೃತ್ಯ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮೆಟ್ಟಿಲುಗಳ ಮೇಲೆ ವಾಹನಗಳಿಗೆ ಹೋಗುವುದಕ್ಕೆ ಅವಕಾಶವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. mianshahidzaman ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ
ಹೀಗೆ ವೃದ್ಧನೊರ್ವ ಮೆಟ್ಟಿಲುಗಳ ಮೇಲೆ ವಾಹನ ಇಳಿಸಿದ್ದಕ್ಕೆ ಹಲವು ತಮಾಷೆಯ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದು, ಇವರು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈತನಿಗೆ ಈ ದಾರಿಯಲ್ಲಿ ಸಾಗು ಎಂದು ಗೂಗಲ್ ಮ್ಯಾಪ್ ನಿರ್ದೇಶಿಸಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಇವರು ಗೂಗಲ್ ಮ್ಯಾಪ್‌ನಲ್ಲಿ(Google Map) ಸೆಟ್ಟಿಂಗ್ ಅನ್ನು ವಾಕ್‌ನಿಂದ ಡ್ರೈವ್‌ಗೆ ಬದಲಾಯಿಸಿರಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇದು ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ಸರೆಂಡರ್ ಮಾಡುವ ಸಮಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೋಕ್‌ಗಳ ಆಚೆಗೆ ಇಲ್ಲಿಗೆ ನಿಜವಾಗಿಯೂ ಪ್ರವಾಸ ಬಂದಿರುವ ವ್ಯಕ್ತಿ ಏನೆಂದು ಭಾವಿಸಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಲಿವುಡ್ ನಟರಾದ ಟಾಮ್ ಕ್ರೂಸಿ ಹಾಗೂ ವಿನ್ ಡಿಸಿಲ್ ಅವರು ಇದೇ ರೀತಿ ಮೆಟ್ಟಿಲುಗಳ ಮೇಲೆ ಸಾಹಸ ಮಾಡಿದ್ದಾರೆ. ಆ ಸಾಹಸ ನೋಡಿದ ಪ್ರತಿಯೊಬ್ಬರು ಅದನ್ನು ಬಹಳ ಕೂಲ್ ಎಂದು ಭಾವಿಸಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋ ಬಗ್ಗೆ ನಿಮಗೇನನಿಸಿತು. ಕಾಮೆಂಟ್ ಮಾಡಿ.


