ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಟೀ ಕೆಟಲ್ ತೊಳೆಯುತ್ತಿರುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾರತದಲ್ಲಿ ರೈಲುಗಳಲ್ಲಿ ಜರ್ನಿ ಮಾಡುವಾಗ ಚಹಾ ಇಲ್ಲದೆ ಪ್ರಯಾಣ ಅಪೂರ್ಣ. ನೀವು ರೈಲಿನಲ್ಲಿ ಏನನ್ನಾದರೂ ನೋಡಬಹುದು ಅಥವಾ ನೋಡದೇ ಇರಬಹುದು. ಆದರೆ ನೀವು ಖಂಡಿತವಾಗಿಯೂ ಪ್ರತಿ 5 ನಿಮಿಷಗಳಿಗೊಮ್ಮೆ ಟೀ ಮಾರುವವರ ಧ್ವನಿ ಕೇಳಿರುತ್ತೀರಿ. ಕೇವಲ 5 ರಿಂದ 10 ರೂ.ಗೆ ಲಭ್ಯವಿರುವ ಈ ಚಹಾ ಕುಡಿಯಲು ರುಚಿಕರ ಅನಿಸಬಹುದು. ಆದರೆ ಈ ಚಹಾ ಹೇಗೆ ತಯಾರಿಸುತ್ತಾರೆಂದು ತಿಳಿದಿದ್ದೀರಾ?.
ಹೌದು, ಸಾಮಾನ್ಯವಾಗಿ ನಾವೆಲ್ಲರೂ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚು ಕೇಳುವ ಪದವೆಂದರೆ ಅದು ಚಹಾ..ಪ್ರತಿ ರೈಲು ನಿಲ್ದಾಣಗಳು ಬಂದಾಗ ಅಥವಾ ಕೆಲವು ನಿಮಿಷಗಳಿಗೊಮ್ಮೆ ರೈಲಿನಲ್ಲಿ ಬಿಸಿ ಬಿಸಿ ಟೀ, ಚಾಯ್ ಧ್ವನಿ ಪ್ರತಿಧ್ವನಿಸುತ್ತದೆ... ಆದರೆ ಈಗ ನೀವೇನಾದರೂ ಈ ವಿಡಿಯೋ ನೋಡಿದರೆ ರೈಲಿನಲ್ಲಿ ಚಾಯ್ ಎಂಬ ಶಬ್ದ ಕೇಳಿದ ತಕ್ಷಣ ಬೆಚ್ಚಿಬೀಳುತ್ತೀರಿ. ಕಾರಣವಿಷ್ಟೇ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ರೈಲಿನ ಶೌಚಾಲಯದಲ್ಲಿ ಕುಳಿತು ಟೀ ಕೆಟಲ್ (ಡೋಲ್ಚಿ) ತೊಳೆಯುತ್ತಿರುವುದು ಕಂಡುಬರುತ್ತದೆ.
ಕೇಳಿಯೇ ನಿಮಗೆ ಇಷ್ಟು ಅಸಹ್ಯವಾಗುತ್ತಿರಬೇಕಾದರೆ ಇನ್ನು ವಿಡಿಯೋ ನೋಡಿದರೆ ಏನ್ ಹೇಳ್ತೀರೋ. ಹೌದು ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ರೈಲಿನ ಕೊಳಕು ಶೌಚಾಲಯವನ್ನು ಬಳಸಿ, ಚಹಾ ತಯಾರಿಸುವ ಕೆಟಲ್ ಸ್ವಚ್ಛಗೊಳಿಸುತ್ತಿರುವುದರಿಂದ ಜನರು ಕೋಪಗೊಂಡಿದ್ದಾರೆ. ಆತ ನೋಡಲು ಚಹಾ ಮಾರುವನಂತೆಯೇ ಕಾಣುತ್ತಾನೆ. ಆ ವ್ಯಕ್ತಿ ಕೈಯ್ಯಲ್ಲಿ ಟೀ ಕೆಟಲ್ ಇದೆ. ಅದನ್ನು ಟಾಯ್ಲೆಟ್ ಸೀಟಿನ ಬಳಿ ಇಟ್ಟು ನೀರಿನಲ್ಲಿ ತೊಳೆಯುತ್ತಿರುವುದು ಕಂಡುಬರುತ್ತದೆ. ಈ ದೃಶ್ಯವು ಕೊಳಕಾಗಿ ಕಾಣಿಸುವುದು ಒಂದು ಕಡೆ ಇರಲಿ, ಪ್ರಯಾಣಿಕರ ಆರೋಗ್ಯಕ್ಕೂ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ನಾವು ರೈಲಿನಲ್ಲಿ ಕುಡಿಯುವ ಟೀ ಸ್ವಚ್ಛವಾಗಿರುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ನಾವು ಅವರನ್ನು ನಂಬಿ ಚಹಾ ಕುಡಿಯುತ್ತೇವೆ. ಆದರೆ ಈ ಜನರು ರೈಲಿನ ಕೊಳಕು ಶೌಚಾಲಯದ ಸೀಟ್ ಮೇಲೆ ಕೆಟಲ್ ಇಟ್ಟು ಸ್ವಚ್ಛಗೊಳಿಸುತ್ತಿದ್ದಾರೆ. ಹಾಗಾಗಿ ಇದು ನೋಡಲು ಮಾತ್ರ ಅಸಹ್ಯಕರವಲ್ಲ ರೋಗಗಳನ್ನು ಆಹ್ವಾನಿಸುತ್ತದೆ.
ವಿಡಿಯೋ ವೈರಲ್
ಯಾವ ರೈಲಿನಲ್ಲಿ ಈ ವಿಡಿಯೋವನ್ನು ಶೂಟ್ ಮಾಡಲಾಗಿದೆ?, ಯಾವಾಗ ಮಾಡಲಾಗಿದೆ ಎಂಬುದು ಕನ್‌ಫರ್ಮ್ ಆಗಿಲ್ಲ. ಆದರೆ ಇದನ್ನು ಎಕ್ಸ್ (ಈ ಹಿಂದೆ ಟ್ವಿಟರ್) ಬಳಕೆದಾರ @BhanuNand ಹಂಚಿಕೊಂಡಿದ್ದಾರೆ. ಇದನ್ನು ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು "ಮನುಷ್ಯ ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದಾ ಎಂದರೆ, ಮತ್ತೆ ಕೆಲವರು ಇನ್ನು ಮುಂದೆ ನಾನು ರೈಲಿನಿಂದ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸುವುದಿರಲಿ ತೆಗೆದುಕೊಳ್ಳುವುದು ಇಲ್ಲ ಎಂದು ಕಾಮೆಂಟ್ ಮಾಡಿರುವುದನ್ನು ಕಾಣಬಹುದು.
ವಿಡಿಯೋ ವೈರಲ್ ಆದ ತಕ್ಷಣ, ಭಾರತೀಯ ರೈಲ್ವೆಯ ಸೇವಾ ಹ್ಯಾಂಡಲ್ @RailwaySeva ಇದಕ್ಕೆ ಪ್ರತಿಕ್ರಿಯಿಸಿದೆ. ಅವರು, ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ನಮ್ಮ ಅಡುಗೆ ಸಿಬ್ಬಂದಿ ಅಂತಹ ಪಾತ್ರೆಗಳನ್ನು ಬಳಸುವುದಿಲ್ಲ. ವಿಡಿಯೋದಲ್ಲಿ ಕಂಡುಬರುವ ಪಾತ್ರೆಗಳು ಹೊಸದಾಗಿ ಕಾಣುತ್ತವೆ ಮತ್ತು ಇದು ಹೊರಗಿನವರ ಕೃತ್ಯವಾಗಿರಬಹುದು. ಆದರೆ ಅನೇಕ ಜನರು ಇದನ್ನು ನಂಬಲಿಲ್ಲ ಮತ್ತು ವಿಡಿಯೋ ನಿಜವೋ ಅಥವಾ ಸ್ಕ್ರಿಪ್ಟ್ ಕಾಪಿಯೋ ಎಂದೂ ತಿಳಿಯುತ್ತಿಲ್ಲ. ಇದರಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ರೈಲ್ವೆಗಳು ಈಗ ಅಡುಗೆ ಮತ್ತು ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಾಗಿರಬೇಕಾಗುತ್ತದೆ ಎಂದು ಹೇಳಿದರು.