Sea turtle slap: ಟ್ರಾವೆಲ್ ಕ್ರಿಯೇಟರ್ ಕ್ರಿಸ್ಟೋಫರ್ ಚಾಂಗ್ ಅವರಿಗೆ ಎದುರಾದ ಈ ವಿಚಿತ್ರ ಅನುಭವದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಮೆ ಯಾಕೆ ಹೊಡೆಯಿತು? ಆಮೇಲೆ ಏನಾಯಿತು? ಎಂಬ ರೋಚಕ ಮಾಹಿತಿ ಇಲ್ಲಿದೆ. 

ಮುದ್ರದ ಆಳದಲ್ಲಿ ಡೈವಿಂಗ್ ಮಾಡುವುದೆಂದರೆ ಅದೊಂದು ಅತ್ಯಂತ ಅದ್ಭುತ ಮತ್ತು ರೋಮಾಂಚಕಾರಿ ಅನುಭವ. ಆದರೆ ಪ್ರಖ್ಯಾತ ಟ್ರಾವೆಲ್ ಕ್ರಿಯೇಟರ್ ಕ್ರಿಸ್ಟೋಫರ್ ಚಾಂಗ್ ಅವರಿಗೆ ಎದುರಾದ ಅನುಭವ ಮಾತ್ರ ಅಕ್ಷರಶಃ ಅವಿಸ್ಮರಣೀಯ ಮತ್ತು ಅಷ್ಟೇ ವಿಚಿತ್ರವಾಗಿತ್ತು. ನೀಲಿ ಸಮುದ್ರದ ಆಳದಲ್ಲಿ ಈಜುತ್ತಿದ್ದ ಚಾಂಗ್ ಅವರಿಗೆ ಆಮೆಯೊಂದು ಬಂದು ಕಪಾಳಮೋಕ್ಷ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ 

ಕ್ರಿಸ್ಟೋಫರ್ ಚಾಂಗ್ ಎಂದಿನಂತೆ ಸಾಮಾನ್ಯ ಡೈವಿಂಗ್ ಆರಂಭಿಸಿದ್ದರು. ಹಠಾತ್ತನೆ ಎಲ್ಲಿಂದಲೋ ಬಂದ ಸಮುದ್ರದ ಆಮೆಯೊಂದು ಅವರನ್ನು ನಿರಂತರವಾಗಿ ಹಿಂಬಾಲಿಸಲು ಶುರುಮಾಡಿತು. ಸಾಮಾನ್ಯವಾಗಿ ಆಮೆಗಳು ಮನುಷ್ಯರನ್ನು ಕಂಡರೆ ದೂರ ಸರಿಯುತ್ತವೆ ಅಥವಾ ತಮ್ಮ ಪಾಡಿಗೆ ತಾವು ಸುಮ್ಮನೆ ಈಜಿಕೊಂಡು ಹೋಗುತ್ತವೆ. ಆದರೆ ಈ ಆಮೆ ಮಾತ್ರ ಸಂಪೂರ್ಣವಾಗಿ ಭಿನ್ನವಾಗಿತ್ತು. ಚಾಂಗ್ ಎತ್ತ ಹೋದರೂ ಆಮೆ ಅವರನ್ನು ಅತೀ ಸಮೀಪದಿಂದ ಬೆನ್ನಟ್ಟುತ್ತಲೇ ಇತ್ತು.

ಚಾಂಗ್ ಈ ಬಗ್ಗೆ ವಿವರಿಸುತ್ತಾ, "ನಾನು ಈ ಹಿಂದೆ ನನ್ನ ಡೈವಿಂಗ್ ವೃತ್ತಿಜೀವನದಲ್ಲಿ ನೂರಾರು ಬಾರಿ ಆಮೆಗಳನ್ನು ಕಂಡಿದ್ದೇನೆ. ಆದರೆ ಈ ಆಮೆಯ ಶಕ್ತಿ ಮತ್ತು ವೈಬ್‌ (Vibe) ತುಂಬಾ ವಿಭಿನ್ನವಾಗಿತ್ತು. ಅದು ನೇರವಾಗಿ ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿತ್ತು. ಯಾವುದೋ ವಿಷಯಕ್ಕೆ ನನ್ನನ್ನು ಪ್ರಶ್ನಿಸಲು ಬರುತ್ತಿರುವಂತೆ ಅಥವಾ ನನ್ನಿಂದ ಏನನ್ನೋ ಅತೀವವಾಗಿ ಬಯಸುತ್ತಿರುವಂತೆ ಅದರ ವರ್ತನೆ ಇತ್ತು. ಅದು ನನ್ನ ಮೇಲೆ ಒಂಥರಾ ಹುಚ್ಚು ವ್ಯಾಮೋಹ (Obsessed) ಬೆಳೆಸಿಕೊಂಡಂತೆ ಕಾಣುತ್ತಿತ್ತು" ಎಂದಿದ್ದಾರೆ.

ಕಪಾಳಮೋಕ್ಷ ಮಾಡಿ ಹೊರಟ ಆಮೆ

ಆಮೆ ಎಷ್ಟು ಹತ್ತಿರ ಬಂದಿತ್ತೆಂದರೆ, ಒಂದು ಹಂತದಲ್ಲಿ ಚಾಂಗ್ ಅವರ ಮುಖದ ಸನಿಹಕ್ಕೆ ಬಂದು ತನ್ನ ಕಾಲಿನಿಂದ ಮೆಲ್ಲನೆ ಒಂದು ಏಟು (Slap) ನೀಡಿತು. ಅಷ್ಟೇ ಅಲ್ಲದೆ, ಆ ಏಟು ಕೊಟ್ಟ ನಂತರ ಅದು ಏನೂ ಅರಿಯದಂತೆ ಅತ್ಯಂತ ಶಾಂತವಾಗಿ ಅಲ್ಲಿಂದ ನಿಧಾನವಾಗಿ ಈಜಿಕೊಂಡು ಹೊರಟುಹೋಯಿತು. ಆಮೆಯ ಈ ಹಠಾತ್ ನಡೆಯಿಂದ ಚಾಂಗ್ ಸಂಪೂರ್ಣವಾಗಿ ಗಲಿಬಿಲಿಗೊಂಡರು. "ಆಮೆ ಹೊಡೆದ ಮೇಲೆ ನಾನು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಬೋಟ್‌ಗೆ ಕೈಮಾಡಿ ಅಲ್ಲಿಂದ ಸಮುದ್ರದ ಹೊರಗೆ ಬರಲು ನಿರ್ಧರಿಸಿದೆ. ಒಂದು ವೇಳೆ ನಾನು ಅಲ್ಲೇ ಇದ್ದಿದ್ದರೆ ಅದು ಇನ್ನೂ ಯಾವ ರೀತಿ ವರ್ತಿಸುತ್ತಿತ್ತೋ ಗೊತ್ತಿಲ್ಲ" ಎಂದು ಅವರು ತಿಳಿಸಿದ್ದಾರೆ.

ಚಾಂಗ್ ಕಾಲೆಳೆದ ನೆಟ್ಟಿಗರು

'I got slapped by a turtle' ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. "ಆಮೆ ಬಹುಶಃ ಆತನಿಗೆ - ಬೇರೆಯವರ ಮನೆಯೊಳಗೆ ಬಂದು ಜಾಸ್ತಿ ಸದ್ದು ಮಾಡಬೇಡ ಎಂದು ಬುದ್ಧಿ ಕಲಿಸಿರಬಹುದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, "ಆಮೆಯ ಅನುಮತಿ ಪಡೆಯದೆ ವಿಡಿಯೋ ಮಾಡಿದ್ದಕ್ಕೆ ಅದು ಆತನಿಗೆ ಈ ರೀತಿ ಶಿಕ್ಷೆ ನೀಡಿದೆ" ಎಂದು ತಮಾಷೆ ಮಾಡಿದ್ದಾರೆ. ಈ ನಡುವೆ ಕೆಲವು ಡೈವರ್‌ಗಳು ತಮಗೂ ಇಂತಹ ವಿಚಿತ್ರ ಅನುಭವಗಳು ಈ ಹಿಂದೆ ಆಗಿವೆ ಎಂದು ತಮ್ಮ ಕಥೆಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ 'ಆಮೆಯ ಕಪಾಳಮೋಕ್ಷ' ಅಂತರ್ಜಾಲದಲ್ಲಿ ದೊಡ್ಡ ಮಟ್ಟದ ವೈರಲ್ ಸುದ್ದಿಯಾಗಿದೆ.

ಇಲ್ಲಿದೆ ನೋಡಿ ವಿಡಿಯೋ 

View post on Instagram