ಕೇರಳದ ಪ್ರಸಿದ್ಧ ಕೊಡುಂಗಲ್ಲೂರು ಭರಣಿ ಉತ್ಸವದಲ್ಲಿ ಅಲ್ಲಿನ ಆಚರಣೆಗಳನ್ನು ಚಿತ್ರೀಕರಿಸುತ್ತಿದ್ದ ವಿದೇಶಿ ವ್ಲಾಗರ್ ಯುವತಿ ಏಕಾಏಕಿ ಆವೇಶಭರಿತರಾಗಿ ಕುಣಿಯಲು ಪ್ರಾರಂಭಿಸಿದಳು. ಇದ್ದಕ್ಕಿದ್ದಂತೆ ಹೀಗಾದದ್ದು ಆಕೆಯ ಜೊತೆಗಾರರಿಗೆ ಆತಂಕ ತಂದರೆ, ಸ್ಥಳೀಯರಿಗೆ ಸಹಜ ಎನಿಸಿತು.
ಇತ್ತೀಚೆಗೆ ಕೇರಳದ ಕೊಡುಂಗಲ್ಲೂರು ಭರಣಿ ಉತ್ಸವದಲ್ಲಿ ಒಂದು ನಂಬಲಸಾಧ್ಯವಾದ, ಅಚ್ಚರಿದಾಯಕ ದೃಶ್ಯ ಕಂಡುಬಂತು. ಅದಕ್ಕೆ ಮೊದಲು ಕೊಡುಂಗಲ್ಲೂರು ಭರಣಿ ಉತ್ಸವದ ಬಗ್ಗೆ ಸ್ವಲ್ಪ ಹೇಳಬೇಕು.
ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಪಟ್ಟಣದಲ್ಲಿರುವ ಪ್ರಸಿದ್ಧ ದೇವಸ್ಥಾನ ಶ್ರೀ ಕುರುಂಬಾ ಭಗವತಿ ದೇವಸ್ಥಾ, ಶಕ್ತಿಸ್ವರೂಪಿಣಿಯಾದ ಭಗವತಿ ಇಲ್ಲಿನ ದೇವತೆ. ಆಕೆಯೇ ಭದ್ರಕಾಳಿ ದೇವಿ, ಉಗ್ರ ಸ್ವರೂಪದಲ್ಲಿ ಉಪಾಸನೆ ಪಡೆಯುವವಳು. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೋತ್ಸವದ ವೈಭವ ನೋಡಲು ಎರಡು ಕಣ್ಣು ಸಾಲವು. ಭದ್ರಕಾಳಿ ದೇವಿಯು ದಾರಿಕಾಸುರ ಎಂಬ ದೈತ್ಯನನ್ನು ಸಂಹರಿಸಿದ ನೆನಪಿನ ವಿಜಯೋತ್ಸವ ಅದು. ಅದನ್ನೇ ʼಭರಣಿʼ ಎಂದು ಕರೆಯುತ್ತಾರೆ. ಈ ಉತ್ಸವಕ್ಕೆ ಲಕ್ಷಾಂತರ ಮಂದಿ ರಾಜ್ಯ- ದೇಶದ ಭಕ್ತಾದಿಗಳು ಬಂದರೆ, ಈ ವಿಶಿಷ್ಟ ಉತ್ಸವ ನೋಡಲು ವಿದೇಶೀಯರೂ ಬರುತ್ತಾರೆ.
ಸಾಮಾನ್ಯವಾಗಿ ಮಾರ್ಚ್–ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಜಾತ್ರೆ, ಭಕ್ತಿಯೊಂದಿಗೆ ಆವೇಶ ಮತ್ತು ಸಂಪ್ರದಾಯಗಳ ಸಂಗಮ. ಈ ಉತ್ಸವದ ಅತ್ಯಂತ ಗಮನ ಸೆಳೆಯುವ ಅಂಶವೆಂದರೆ ʼವೆಳಿಚಪ್ಪಾಡುಗಳು.ʼ ಹಾಗೆಂದರೆ, ಸಾವಿರಾರು ಪುರುಷರು ಮತ್ತು ಮಹಿಳೆಯರು ಕೆಂಪು ಬಟ್ಟೆ ಧರಿಸಿ, “ಭರಣಿ ಪಾಟು”ಗಳನ್ನು ಹಾಡುತ್ತಾ ಉತ್ಸಾಹಭರಿತ ನೃತ್ಯ ಮಾಡುತ್ತಾರೆ. ಈ ನೃತ್ಯ ಹೆಚ್ಚಾಗಿ ಆವೇಶಭರಿತ ಸ್ಥಿತಿಯಲ್ಲಿರುತ್ತದೆ. ಇದು ದೈವಾವೇಶ ಎಂಬುದು ಭಕ್ತರ ನಂಬಿಕೆ.
ʼಕಾವು ತೀಂದಲ್ʼ ಎಂಬುದು ಇನ್ನೊಂದು ತೀವ್ರ ಆಚರಣೆ. ಕಾವು ತೀಂದಲ್ ವೇಳೆ ಭಕ್ತರು ಆವೇಶದಿಂದ ದೇವಾಲಯದ ಸುತ್ತ ಓಡುತ್ತಾರೆ. ಹಳದಿ ಪುಡಿ ಎಸೆಯುತ್ತಾರೆ. ದೇವಾಲಯದ ಮೇಲ್ಛಾವಣಿಗೆ ವಿವಿಧ ವಸ್ತುಗಳನ್ನು ಅರ್ಪಿಸುತ್ತಾರೆ. ಇದು ದೇವಿ ದೇವಾಲಯದೊಳಗೆ ಪ್ರವೇಶಿಸಿದ ಕ್ಷಣವನ್ನು ಸಂಭ್ರಮಿಸುವ ವಿಧಾನ. ಮತ್ತೊಂದು ವಿಧಿ ಕೊಳಿಕ್ಕಲ್ಲು ಮೂಡಲ್. ಈ ಆಚರಣೆಯಲ್ಲಿ ಕೋಳಿಗಳ ಬಲಿ ನೀಡುವುದು ಮತ್ತು ದೇವಿಗೆ ರಕ್ತ ಸಮರ್ಪಣೆ ಮಾಡುವುದು ಸೇರಿದೆ. ಇದು ಪ್ರಾಚೀನ ಕಾಲದಿಂದ ಬಂದಿರುವ ಸಂಪ್ರದಾಯ. ದೇವಿಯ ಉಗ್ರ ಸ್ವರೂಪವನ್ನು ಇದು ತೃಪ್ತಿಪಡಿಸುವುದಾಗಿ ನಂಬಲಾಗಿದೆ.
ಫಾರಿನ್ ಯುವತಿಯ ಮೈಯಲ್ಲಿ ದೇವಿ ಆವೇಶ!
ಈ ವರ್ಷ ನಡೆದ ಭರಣಿ ಉತ್ಸವದ ವೆಳಿಚೆಪ್ಪಾಡು ವೇಳೆ, ಅಲ್ಲೇ ಜನಜಂಗುಳಿಯಲ್ಲಿ ನಿಂತುಕೊಂಡು ಆಚರಣೆಗಳನ್ನು ತನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಫಾರಿನ್ ಯುವತಿಯ ಮೇಲೆ ಆವೇಶ ಉಕ್ಕಿ ಬಂತು. ಆಕೆ ಒಬ್ಬ ವಿದೇಶಿ ವ್ಲಾಗರ್. ಉತ್ಸವ ತಾರಕಕ್ಕೇರಿದ ಕ್ಷಣದಲ್ಲಿ ಏಕಾಏಕಿ ಆಕೆ ವಾದ್ಯಗಳ ಸದ್ದಿಗೆ ತಕ್ಕಂತೆ ಮೈ ನಡುಗಿಸುತ್ತ ಕುಣಿಯತೊಡಗಿದಳು. ಆಕೆ ಪ್ರಜ್ಞಾವಸ್ಥೆಯಲ್ಲಿ ಅದನ್ನು ಮಾಡಿದಂತೆ ಯಾರಿಗೂ ಅನಿಸಲಿಲ್ಲ. ಅಂದರೆ ಒಂದು ರೀತಿಯ ಸಮ್ಮೋಹನ ಸ್ಥಿತಿ, ಆವೇಶದ ಸ್ಥಿತಿಗೆ ಆಕೆ ಹೋಗಿದ್ದಳು. ಕುಣಿಕುಣಿದು ಬಳಲಿದ ಆಕೆಯನ್ನು ಆಮೇಲೆ ಇತರರು ಉಪಚರಿಸಿದರು. ಆದರೆ ಇದ್ಯಾವುದೂ ಆಕೆಗೆ ಗೊತ್ತಿರಲೇ ಇಲ್ಲ. ತನಗೆ ಏನಾಯ್ತು ಎಂಬುದು ಆಕೆಯ ಅರಿವಿಗೆ ಬಂದಂತಿರಲಿಲ್ಲ.
ಭಕ್ತಾದಿಗಳಿಗೆ ಇದರಲ್ಲೇನೂ ಅಚ್ಚರಿಯಾಗಿಲ್ಲ. ಅವರು ಇದು ಸಹಜ ಎಂದಿದ್ದಾರೆ. ಭಕ್ತರ ಪ್ರಕಾರ ಆಕೆಯ ಮೈಮೇಲೆ ದೇವಿಯ ಆವೇಶವಾಗಿದೆ. ದೇವಿ ತನ್ನ ಮಹಿಮೆ ತೋರಿಸಲು ಈಕೆಯನ್ನು ಆಯ್ದುಕೊಂಡಿದ್ದಾಳೆ ಎಂದಿದ್ದಾರೆ. ಈಕೆಯ ವರ್ತನೆ ವೈರಲ್ ಆಗಿದೆ.
ಉತ್ಸವವನ್ನು ಚೆನ್ನಾಗಿ ಅರಿತಿರುವ ಸ್ಥಳೀಯರು, ತಜ್ಞರು ಹೇಳುವ ಪ್ರಕಾರ ಭರಣಿ ಉತ್ಸವ ತನ್ನ ಆವೇಶಕ್ಕಾಗಿ ಪ್ರಸಿದ್ಧ. ಜೋರಾದ ಮಂತ್ರಘೋಷ, ವಾದ್ಯಗಳ ನುಡಿತ, ಉತ್ಸಾಹಭರಿತ ಆಚರಣೆಗಳು, ಆಳವಾದ ಭಕ್ತಿಭಾವ ಈ ಜಾತ್ರೆಯ ವಿಶೇಷತೆ. ಮೊದಲ ಬಾರಿಗೆ ಭಾಗವಹಿಸುವವರಿಗೆ ಈ ವಾತಾವರಣ ಮನಸ್ಸಿನ ಮೇಲೆ ಅತಿಯಾದ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೊಂದು ಅತೀ ಸಹಜವಾದ ಭಾವೋದ್ರೇಕ. ಆ ಕ್ಷಣದ ಉತ್ಸಾಹ, ಗದ್ದಲ ಮತ್ತು ಆಧ್ಯಾತ್ಮಿಕ ತೀವ್ರತೆ ಸೇರಿ ಉಂಟಾಗುವ ಮಾನಸಿಕ ಪರಿಣಾಮವದು.
ಈ ಘಟನೆ ಮತ್ತೊಮ್ಮೆ ಭಾರತೀಯ ಆಚರಣೆಗಳ ಗಾಢತೆಯನ್ನು, ಅವುಗಳ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಪ್ರಭಾವವನ್ನು ಬೆಳಕಿಗೆ ತಂದಿದೆ. ಇಂತಹ ಅನುಭವಗಳು ವಿದೇಶಿಗರಿಗೆ ಆಕರ್ಷಕ ಹಾಗೂ ಆಶ್ಚರ್ಯಕರವಾಗಿ ಕಾಣಿಸಿಕೊಳ್ಳುತ್ತದೆ. ಕೊಡುಂಗಲ್ಲೂರು ಭರಣಿ ಉತ್ಸವ ಸಾಮಾನ್ಯ ಜಾತ್ರೆಯಲ್ಲ. ಇದು ಭಕ್ತಿಯ ತೀವ್ರ ಅಭಿವ್ಯಕ್ತಿ. ಇಲ್ಲಿ ಆಚರಣೆಗಳು ಹೊರಗಿನಿಂದ ನೋಡುವವರಿಗೆ ಅಚ್ಚರಿಯನ್ನೂ ದಿಗ್ಭ್ರಮೆಯನ್ನೂ ಉಂಟುಮಾಡಬಹುದು. ಆದರೆ ಭಕ್ತರಿಗೆ ಇದು ದೈವಿಕ ಅನುಭವ. ಭಾರತದ ಸಂಪ್ರದಾಯಗಳು ಎಷ್ಟು ಆಳವಾಗಿವೆ ಮತ್ತು ಭಾವನಾತ್ಮಕವಾಗಿ ಪ್ರಭಾವ ಬೀರುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ.


