ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಡ್ರೈವಿಂಗ್ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದ ಆತಂಕಕಾರಿ ಘಟನೆ ನಡೆದಿದೆ. ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾ ಮತ್ತು ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿನ ರೀಲ್ಸ್ ವಿಡಿಯೋಗಳ ಹುಚ್ಚಾಟ ಇದೀಗ ಕೈಮೀರಿ ಹೋಗುತ್ತಿದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಹೋಗುವಾಗ ಚಾಲಕನ ವರ್ತನೆ ಕಂಡು ಬೆಚ್ಚಿಬಿದ್ದಿದ್ದಾರೆ. ಆಟೋ ಚಾಲಕ ಡ್ರೈವಿಂಗ್ ಮಾಡುವಾಗ ಒಂದೇ ಸಮನೆ ಮೊಬೈಲ್‌ನಲ್ಲಿ ರೀಲ್ಸ್ ಮತ್ತು ಇತರ ವಿಡಿಯೋಗಳನ್ನು ನೋಡುತ್ತಿದ್ದ.

Add Asianetnews Kannada as a Preferred SourcegooglePreferred

ಮಹಿಳಾ ಪ್ರಯಾಣಿಕಳು ಹೇಳುವಂತೆ, 'ನಾನು ಮೊನ್ನೆ ಆಟೋದಲ್ಲಿ ಹೋಗುತ್ತಿದ್ದೆ. ಚಾಲಕ ಡ್ರೈವಿಂಗ್ ಮಾಡುವಾಗ ಸತತವಾಗಿ ಶಾರ್ಟ್ ವಿಡಿಯೋಗಳನ್ನು ನೋಡುತ್ತಿದ್ದ. ಸುಮ್ಮನೆ ಆಗಾಗ ನೋಡುವುದಲ್ಲ, ಆತ ಸಂಪೂರ್ಣವಾಗಿ ಮೊಬೈಲ್‌ನಲ್ಲೇ ಮುಳುಗಿಹೋಗಿದ್ದ. ರಸ್ತೆಯ ಕಡೆಗೆ ಆತನ ಗಮನವೇ ಇರಲಿಲ್ಲ' ಎಂದು ಆ ಪ್ರಯಾಣಿಕ ಮಹಿಳೆ ತಮ್ಮ ಪೋಸ್ಟ್‌ನಲ್ಲಿ ಚಾಲಕನ ಬೇಜವಾಬ್ದಾರಿತನವನ್ನು ವಿವರಿಸಿದ್ದಾರೆ.

ಮುಖ್ಯ ರಸ್ತೆಗೆ ಬಂದರೂ ಚಾಲಕನಿಗೆ ಯಾವುದೇ ಚಿಂತೆ ಇರಲಿಲ್ಲ. ಆತ ರಸ್ತೆ ಮತ್ತು ಎದುರಿನಿಂದ ಬರುವ ವಾಹನಗಳ ಕಡೆ ಗಮನ ಕೊಡುವ ಬದಲು, ಮೊಬೈಲ್ ಸ್ಕ್ರೀನ್‌ ನೋಡುತ್ತಲೇ ಆಟೋ ಓಡಿಸುತ್ತಿದ್ದ. ಈ ವೇಳೆ ಆತನ ಹಿಂದೆಯೇ ಕುಳಿತಿದ್ದ ಮಹಿಳೆ, ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಹಂತದಲ್ಲಿ, ಆಟೋದ ಮುಂದಿದ್ದ ಟ್ರಕ್ ಒಂದು ರಿವರ್ಸ್ ಬರಲು ಶುರುಮಾಡಿತು. ಇದನ್ನು ಚಾಲಕ ಗಮನಿಸಲೇ ಇಲ್ಲ.

'ನಾನು 'ಅಣ್ಣಾ, ಮುಂದೆ ನೋಡಿ' ಎಂದು ಕಿರುಚಿದಾಗ, ಆತ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಿದ. ನಾನು ಆತನಿಗೆ ಸಮಾಧಾನದಿಂದ, 'ಡ್ರೈವಿಂಗ್ ಮಾಡುವಾಗ ವಿಡಿಯೋ ನೋಡಬೇಡಿ. ನನ್ನ ಜೊತೆ ಇರುವಾಗ ಮಾತ್ರವಲ್ಲ, ನೀವು ಒಬ್ಬರೇ ಇರುವಾಗಲೂ ಹೀಗೆ ಮಾಡಬೇಡಿ' ಎಂದು ಹೇಳಿದೆ. ಅದಕ್ಕೆ ಆತ ಒಪ್ಪಿಕೊಂಡ. ಆದರೆ, 5 ನಿಮಿಷದ ನಂತರ ಮತ್ತೆ ಅದೇ ಚಾಳಿ ಮುಂದುವರಿಸಿದ' ಎಂದು ಮಹಿಳೆ ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

Scroll to load tweet…

ಸೋಶಿಯಲ್ ಮೀಡಿಯಾದಲ್ಲಿ ಜನ ಏನಂದ್ರು?

ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಡ್ರೈವಿಂಗ್ ವೇಳೆ ಅಜಾಗರೂಕತೆ ತೋರುವವರ ವಿರುದ್ಧ ಕಠಿಣ ಸಂಚಾರ ನಿಯಮಗಳನ್ನು ಜಾರಿಗೊಳಿಸಬೇಕು ಮತ್ತು ದಂಡ ವಿಧಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇಂತಹ ನಿರ್ಲಕ್ಷ್ಯ ಕೇವಲ ಚಾಲಕನಿಗೆ ಮಾತ್ರವಲ್ಲ, ಪ್ರಯಾಣಿಕರು, ಪಾದಚಾರಿಗಳು ಮತ್ತು ಇತರ ವಾಹನ ಸವಾರರ ಜೀವಕ್ಕೂ ಅಪಾಯ ತರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆಯು, ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಆಟೋ ಚಾಲಕರಂತಹ ವಾಣಿಜ್ಯ ಚಾಲಕರ ಹೊಣೆಗಾರಿಕೆಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.

'ಇದು ಅಪಾಯಕಾರಿ ಎಂದು ನೀವು ಗುರುತಿಸಿದ್ದು ಖುಷಿಯ ವಿಚಾರ. ಮುಂದಿನ ಬಾರಿ ಹೀಗಾದ್ರೆ, ದಯವಿಟ್ಟು ಆಟೋದಿಂದ ಇಳಿದುಬಿಡಿ' ಎಂದು ಒಬ್ಬರು ಬರೆದಿದ್ದಾರೆ. 'ಭಾರತದಲ್ಲಿ ಅಗ್ಗದ ಇಂಟರ್ನೆಟ್ ಮತ್ತು ಅದರಿಂದ ಸಿಗುವ ಖುಷಿ ಒಂದು ದೊಡ್ಡ ಸಮಸ್ಯೆಯಾಗಿದೆ. ದೇಶದ ಪ್ರಗತಿ ನಿಲ್ಲಿಸಬೇಕಾ? ಹಾಗಿದ್ರೆ ಇಲ್ಲಿನ ಪುರುಷರನ್ನು ಫೋನ್‌ನಲ್ಲಿ ಬ್ಯುಸಿ ಮಾಡಿ ಸಾಕು. ಅವರು ಒಂದು ಭ್ರಮೆಯಲ್ಲೇ ಬದುಕುತ್ತಾರೆ, ಇದರಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ' ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ರಸ್ತೆ ಸುರಕ್ಷತಾ ತಜ್ಞರು ಹೇಳುವ ಪ್ರಕಾರ, ಇಂತಹ ವರ್ತನೆ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಅದರಲ್ಲೂ, ಬಳಕೆದಾರರ ಗಮನವನ್ನು ಸೆಳೆಯಲೆಂದೇ ವಿನ್ಯಾಸಗೊಳಿಸಲಾದ ಶಾರ್ಟ್-ಫಾರ್ಮ್ ವಿಡಿಯೋ ಪ್ಲಾಟ್‌ಫಾರ್ಮ್‌ಗಳ ಬಂದ ನಂತರ ಇದು ಹೆಚ್ಚಾಗಿದೆ. ಡ್ರೈವಿಂಗ್ ಮಾಡುವಾಗ ಕೇವಲ 2 ಸೆಕೆಂಡ್ ರಸ್ತೆಯಿಂದ ಕಣ್ಣು ಬೇರೆಡೆ ಹರಿಸಿದರೂ ಅಪಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ಶಾರ್ಟ್-ಫಾರ್ಮ್ ವಿಡಿಯೋಗಳನ್ನು ನೋಡುವಾಗ 5-10 ಸೆಕೆಂಡುಗಳ ಕಾಲ ಗಮನ ಬೇರೆಡೆ ಹೋಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.