ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ವಿವರಗಳಿಲ್ಲದೆ ಕೇವಲ 'ನನ್ನ ಪೂರ್ತಿ ಪ್ರತಿಭೆ ಹೊರತರಲು ಕೆಲಸಕ್ಕೆ ತಗೊಳ್ಳಿ' ಎಂದು ಬರೆದಿರುವ ಅರ್ಧ ರೆಸ್ಯೂಮ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದನ್ನು ಕ್ರಿಯೇಟಿವ್ ಎಂದರೆ, ತಜ್ಞರು ಎಟಿಎಸ್ (ATS) ತಂತ್ರಜ್ಞಾನದಿಂದಾಗಿ ಇದು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ಕೆಲಸ ಹುಡುಕುವ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೂ (Job Seeker) ರೆಸ್ಯೂಮ್ (Resume) ಅಥವಾ ಸಿವಿ ಅತ್ಯಂತ ಮುಖ್ಯವಾದ ಅಸ್ತ್ರ. ಸಾಮಾನ್ಯವಾಗಿ ಜನರು ತಮ್ಮ ಶಿಕ್ಷಣ, ಹಿಂದಿನ ಕಂಪನಿಗಳ ಅನುಭವ, ಕೌಶಲ್ಯಗಳು ಹಾಗೂ ಮೊಬೈಲ್ ನಂಬರ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ರೆಸ್ಯೂಮ್ ಸಿದ್ಧಪಡಿಸುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾಡಿರುವ ಕೆಲಸ ಈಗ ಇಂಟರ್ನೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅರ್ಧ ಮಾತ್ರ ಪ್ರಿಂಟ್ ಆಗಿರುವ ಇವರ ರೆಸ್ಯೂಮ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ!
'ಪೂರ್ತಿ ಟ್ಯಾಲೆಂಟ್ ನೋಡೋಕೆ ಕೆಲಸ ಕೊಡಿ!'
ಪ್ರಸಿದ್ಧ ಸೋಷಿಯಲ್ ಮೀಡಿಯಾ ವೇದಿಕೆ ರೆಡ್ಡಿಟ್‌ನ (Reddit) ‘r/recruitinghell’ ಎಂಬ ಗ್ರೂಪ್‌ನಲ್ಲಿ ಈ ವಿಚಿತ್ರ ಜಾಬ್ ಅಪ್ಲಿಕೇಶನ್‌ನ ಫೋಟೋ ಶೇರ್ ಮಾಡಲಾಗಿದೆ. ಈ ರೆಸ್ಯೂಮ್‌ಯ ಮೇಲ್ಭಾಗದಲ್ಲಿ ಅಭ್ಯರ್ಥಿಯ ಅರ್ಧ ಫೋಟೋ ಹಾಗೂ ಕಂಪನಿ ಸೇರಿ ಹೊಸ ಕೌಶಲ್ಯ ಕಲಿಯುವ ಆಸೆ ವ್ಯಕ್ತಪಡಿಸುವ ‘ಕರಿಯರ್ ಆಬ್ಜೆಕ್ಟಿವ್’ ಇದೆ.
ಆದರೆ ಅಸಲಿ ಟ್ವಿಸ್ಟ್ ಇರುವುದೇ ಪುಟದ ಕೆಳಭಾಗದಲ್ಲಿ! ಅಲ್ಲಿ ಅಭ್ಯರ್ಥಿಯ ವಿದ್ಯಾರ್ಹತೆ, ಅನುಭವ, ಫೋನ್ ನಂಬರ್ ಅಥವಾ ಇಮೇಲ್ ಐಡಿ ಯಾವುದೂ ಇಲ್ಲ. ಬದಲಾಗಿ, ಇಡೀ ಖಾಲಿ ಜಾಗದಲ್ಲಿ ದಪ್ಪ ಅಕ್ಷರಗಳಲ್ಲಿ 'ನನ್ನ ಪೂರ್ತಿ ಪ್ರತಿಭೆ ಹೊರತರಲು ನನ್ನನ್ನು ಕೆಲಸಕ್ಕೆ ತಗೊಳ್ಳಿ' (Hire me to unlock full potential) ಎಂದು ಬರೆಯಲಾಗಿದೆ. ಗೇಮ್‌ಗಳಲ್ಲಿ ಲಾಕ್ ಆಗಿರುವ ಕ್ಯಾರೆಕ್ಟರ್‌ಗಳನ್ನು 'ಅನ್‌ಲಾಕ್' ಮಾಡುವ ಮಾದರಿಯಲ್ಲಿ ಈ ಸಂದೇಶವಿದೆ!
ಡೆಮೋ ವರ್ಷನ್ ಎಂದ ನೆಟ್ಟಿಗರು:
ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯ ಕಮೆಂಟ್‌ಗಳನ್ನು ಹರಿಸುತ್ತಿದ್ದಾರೆ. ಕೆಲವರು ಇದನ್ನ ಬೇಕಂತಲೇ ಮಾಡಿರುವ 'ಔಟ್ ಆಫ್ ದಿ ಬಾಕ್ಸ್' ಕ್ರಿಯೇಟಿವಿಟಿ ಎಂದರೆ, ಇನ್ನು ಕೆಲವರು ಪ್ರಿಂಟರ್ ಅರ್ಧಕ್ಕೆ ಕೈಕೊಟ್ಟಾಗ ಮಾಡಿದ ತಂತ್ರವಿರಬಹುದು ಎಂದು ಊಹಿಸಿದ್ದಾರೆ. ಒಬ್ಬ ಬಳಕೆದಾರ ಇದನ್ನು "ಕ್ಯಾಂಡಿಡೇಟ್‌ನ ಫ್ರೀ ಡೆಮೋ ವರ್ಷನ್" ಎಂದು ಕರೆದರೆ, ಮತ್ತೊಬ್ಬರು 'ಇದು ರಿಯಲ್ ಲೈಫ್ ಲೂಟ್ ಬಾಕ್ಸ್ (Loot Box) ಥರ ಇದೆ, ಕೆಲಸ ಕೊಟ್ಟ ಮೇಲಷ್ಟೇ ಒಳಗೇನಿದೆ ಎಂದು ಗೊತ್ತಾಗುತ್ತೆ' ಎಂದು ಕಾಲೆಳೆದಿದ್ದಾರೆ. ಹಲವರು ಅಭ್ಯರ್ಥಿಯ ಧೈರ್ಯವನ್ನು ಮೆಚ್ಚಿಕೊಂಡು, 'ನಾನೇನಾದರೂ ಕಂಪನಿಯ ಹೆಚ್‌ಆರ್ (HR) ಆಗಿದ್ದರೆ ಖಂಡಿತ ಇಂಟರ್ವ್ಯೂಗೆ ಕರೆಯುತ್ತಿದ್ದೆ' ಎಂದು ಬೆಂಬಲಿಸಿದ್ದಾರೆ.
ಕ್ರಿಯೇಟಿವಿಟಿ ಓಕೆ, ಆದರೆ ಕೆಲಸ ಸಿಗುತ್ತಾ?
ಈ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆ ನೀಡಿದ್ದರೂ, ವಾಸ್ತವದಲ್ಲಿ ಇದು ವರ್ಕೌಟ್ ಆಗುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಬಹುತೇಕ ಕಂಪನಿಗಳು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ‘ಅಪ್ಲಿಕಂಟ್ ಟ್ರ್ಯಾಕಿಂಗ್ ಸಿಸ್ಟಮ್’ (ATS - Applicant Tracking System) ಎಂಬ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸುತ್ತವೆ. ಇಂತಹ ರೆಸ್ಯೂಮ್‌ಗಳಲ್ಲಿ ಅಗತ್ಯ ಕೀವರ್ಡ್‌ಗಳು, ವಿದ್ಯಾರ್ಹತೆ ಮತ್ತು ಅನುಭವದ ವಿವರಗಳೇ ಇಲ್ಲದಿರುವುದರಿಂದ ಸಾಫ್ಟ್‌ವೇರ್‌ಗಳು ಮೊದಲ ಹಂತದಲ್ಲೇ ಇವನ್ನು ತಿರಸ್ಕರಿಸುವ (Reject) ಸಾಧ್ಯತೆ ನೂರಕ್ಕೆ ನೂರರಷ್ಟಿರುತ್ತದೆ. ಜೊತೆಗೆ ಕಾಂಟ್ಯಾಕ್ಟ್ ನಂಬರ್ ಇಲ್ಲದೆ ಹೆಚ್‌ಆರ್ ಸಂಪರ್ಕಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉಳಿದಿದೆ.
ಒಟ್ಟಿನಲ್ಲಿ ಕೆಲಸ ಸಿಗುತ್ತೋ ಬಿಡುತ್ತೋ, ಉದ್ಯೋಗ ಮಾರುಕಟ್ಟೆಯಲ್ಲಿ ತನ್ನತ್ತ ಎಲ್ಲರ ಗಮನ ಸೆಳೆಯುವಲ್ಲಿ ಮಾತ್ರ ಈ ಉದ್ಯೋಗಾಕಾಂಕ್ಷಿ ಪೂರ್ಣ ಅಂಕ ಗಿಟ್ಟಿಸಿಕೊಂಡಿದ್ದಾನೆ!


