Unique funeral : ಸೋಶಿಯಲ್ ಮೀಡಿಯಾದಲ್ಲಿ ಅಂತಿಮಯಾತ್ರೆಯ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ತಾಯಿಯ ಅಂತಿಮ ಯಾತ್ರೆಗೆ ಮಕ್ಕಳು ಮಾಡಿದ್ದ ತಯಾರಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ನಡೆದ ಅಂತಿಮ ಯಾತ್ರೆಯೊಂದು ಎಲ್ಲರ ಗಮನ ಸೆಳೆದಿದೆ. 74 ವರ್ಷದ ರಾಮಬೇಟಿ ದೇವಿಗೆ ಅಂತಿಮ ವಿದಾಯ ನೀಡಲು ಕುಟುಂಬಸ್ಥರು ಸುಮಾರು 15 ಕಿಲೋಮೀಟರ್ ಉದ್ದದ ವಿಶಿಷ್ಟ ಅಂತಿಮ ಯಾತ್ರೆಯನ್ನು ಆಯೋಜಿಸಿದ್ದರು. ಈ ಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ಗಳು ಕೂಡ ಮೆರವಣಿಗೆಯಲ್ಲಿ ಸಾಗಿದ್ದವು.
ಅಮ್ಮನಿಗಾಗಿ ವಿಶೇಷ ಅಂತಿಮಯಾತ್ರೆ
ರಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯೌರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅಲಿಗಢದ ಆಸ್ಪತ್ರೆಯಲ್ಲಿ ರಾಮಬೇಟಿ ದೇವಿ ಮೃತಪಟ್ಟಿದ್ದರು. ಅವರ ಅಂತಿಮ ಸಂಸ್ಕಾರಕ್ಕಾಗಿ ಗ್ರಾಮದಿಂದ ರಾಜ್ಘಾಟ್ ಗಂಗಾ ತೀರದವರೆಗೆ ಅಂತಿಮ ಯಾತ್ರೆಯನ್ನು ನಡೆಸಲಾಯಿತು.
ಈ ಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ರಾಮಬೇಟಿ ದೇವಿ ಸಾಕಿದ್ದ ಎರಡು ಆನೆಗಳು. ಮೋಹನ್ ಮತ್ತು ಪರ್ಮಾ ಹೆಸರಿನ ಆನೆಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಮೃತದೇಹವನ್ನು ಹೊತ್ತ ಮೆರವಣಿಗೆಯ ಮುಂಭಾಗದಲ್ಲಿ ಈ ಎರಡೂ ಆನೆಗಳು ಸಾಗುತ್ತಿದ್ದವು. ಅವುಗಳ ಹಿಂದೆ ರಾಮಬೇಟಿ ದೇವಿ ಅವರ ಪಾರ್ಥಿವ ಶರೀರವಿದ್ದ ವಾಹನ, ಶಿವ ಮತ್ತು ಶ್ರೀಕೃಷ್ಣನ ಧಾರ್ಮಿಕ ಸ್ತಬ್ಧಚಿತ್ರ ಹಾಗೂ ನೂರಾರು ಟ್ರ್ಯಾಕ್ಟರ್ಗಳ ಭಾರೀ ಕಾಫಿಲಾ ಸಾಗಿತ್ತು.
ರಾಮಬೇಟಿ ದೇವಿ ಅವರಿಗೆ ತಮ್ಮ ಸಾಕು ಆನೆಗಳ ಮೇಲೆ ಬಹಳ ಆಪ್ತವಾದ ಸಂಬಂಧವಿತ್ತು ಎಂದು ಅವರ ಪುತ್ರ ಮನ್ವೀರ್ ತಿಳಿಸಿದ್ದಾರೆ. 2012ರಲ್ಲಿ ತಂದೆಯ ನಿಧನದ ಬಳಿಕ ತಾಯಿ ಮೋಹನ್ ಮತ್ತು ಪರ್ಮಾ ಎಂಬ ಆನೆಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಆನೆಗಳು ಮನೆಯ ಸದಸ್ಯರಂತೆ ಕುಟುಂಬದೊಂದಿಗೆ ಬೆರೆತಿದ್ದವು. ಹೀಗಾಗಿ ಈ ಕುಟುಂಬವನ್ನು ಸ್ಥಳೀಯರು ಆನೆಗಳ ಕುಟುಂಬ ಎಂದೇ ಕರೆಯುತ್ತಿದ್ದರು. ತಾಯಿ ಮೃತಪಟ್ಟ ಬಳಿಕ ಎರಡೂ ಆನೆಗಳು ಕೂಡ ದುಃಖದಲ್ಲಿರುವಂತೆ ಕಾಣುತ್ತಿವೆ ಎಂದು ಮನ್ವೀರ್ ಹೇಳಿದ್ದಾರೆ.
ತಾಯಿಗೆ ವಿಶೇಷ ರೀತಿಯಲ್ಲಿ ಅಂತಿಮ ವಿದಾಯ ನೀಡಬೇಕು ಎಂದು ಪುತ್ರರಾದ ಮನ್ವೀರ್ ಮತ್ತು ಚರಣ್ ಸಿಂಗ್ ನಿರ್ಧರಿಸಿದ್ದರು. ಅದರಂತೆ ಗ್ರಾಮದಿಂದ ರಾಜ್ಘಾಟ್ ಗಂಗಾ ತೀರದವರೆಗೆ ಸುಮಾರು 15 ಕಿಲೋಮೀಟರ್ಗಳಷ್ಟು ಉದ್ದದ ಮೆರವಣಿಗೆ ನಡೆಯಿತು. ಈ ವಿಶಿಷ್ಟ ಅಂತಿಮ ಯಾತ್ರೆಯನ್ನು ನೋಡಲು ರಸ್ತೆಯುದ್ದಕ್ಕೂ ಜನರು ಜಮಾಯಿಸಿದ್ದರು. ಸುಮಾರು 1000 ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಇದೀಗ ಈ ಅಂತಿಮ ಯಾತ್ರೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಮಬೇಟಿ ದೇವಿ ಮತ್ತು ಅವರ ಸಾಕು ಆನೆಗಳ ನಡುವಿನ ಬಾಂಧವ್ಯದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.


