ಕೊಂಬು, ಚೈನ್‍ಸಾ ಮತ್ತು ನಾಲ್ಕು ಕಾಲುಗಳಿರುವ 'ತ್ರೀಹಾಲ್ವ್ಸ್' ಎಂಬ ರೋಬೋಟ್ ತನ್ನ ಭಯಾನಕ ರೂಪದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಕಾಡು ಕಡಿಯುವಂತಹ ಅಪಾಯಕಾರಿ ಕೆಲಸಗಳಲ್ಲಿ ಮನುಷ್ಯರಿಗೆ ಸಹಾಯ ಮಾಡಲು ಕ್ಯಾಲಿಫೋರ್ನಿಯಾದ 'ಸ್ಯಾಟಿರಸ್' ಕಂಪನಿ ಇದನ್ನು ವಿನ್ಯಾಸಗೊಳಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ರೋಬೋಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕಂದ್ರೆ, ಅದಕ್ಕೆ ನಾಲ್ಕು ಕಾಲು, ಕೊಂಬು, ಕೈಯಲ್ಲಿ ಮರ ಕತ್ತರಿಸೋ ಮಷಿನ್ ಎಲ್ಲ ಇದೆ. ನೋಡೋಕೆ ಯಾವುದೋ ಹಾಲಿವುಡ್ ಹಾರರ್ ಸಿನಿಮಾದ ರಾಕ್ಷಸದ ತರ ಕಾಣುತ್ತೆ. ಆದ್ರೆ, ಇದನ್ನ ತಯಾರಿಸಿದ ಕಂಪನಿ ಹೇಳೋದೇ ಬೇರೆ. ಮನುಷ್ಯರ ಕಠಿಣ ಕೆಲಸಗಳನ್ನ ಸುಲಭ ಮಾಡೋಕೆ ಅಂತಾನೇ ಈ ರೋಬೋಟ್ ಬಂದಿದೆಯಂತೆ.
ಕ್ಯಾಲಿಫೋರ್ನಿಯಾದ 'ಸ್ಯಾಟಿರಸ್'(Satyrus) ಹೆಸರಿನ ಸ್ಟಾರ್ಟಪ್ ಕಂಪನಿಯೊಂದು ಈ ರೋಬೋಟ್ ತಯಾರಿಸಿದೆ. ಸದ್ಯಕ್ಕೆ ಇದು ಪ್ರೊಟೊಟೈಪ್ ಹಂತದಲ್ಲಿದ್ದು, ಇದಕ್ಕೆ 'ತ್ರೀಹಾಲ್ವ್ಸ್' (Threehalves) ಅಂತ ಹೆಸರಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನ ಇದರ ವಿಚಿತ್ರ ರೂಪ ನೋಡಿ ಭೂತ, ರಾಕ್ಷಸ ಎಂದೆಲ್ಲ ಕಾಮೆಂಟ್ ಮಾಡ್ತಿದ್ದಾರೆ. ಆದರೆ ಕಂಪನಿಯ ಸಂಸ್ಥಾಪಕ ಬ್ಯೂ ಜಿ (Beau G) ಹೇಳುವಂತೆ, ಜನರನ್ನು ಹೆದರಿಸುವುದು ನಮ್ಮ ಉದ್ದೇಶವಲ್ಲ. ಬದಲಾಗಿ ಅಪಾಯಕಾರಿ ಕೆಲಸಗಳಿಂದ ಮನುಷ್ಯರನ್ನು ರಕ್ಷಿಸುವುದೇ ನಮ್ಮ ಗುರಿ ಎಂದು ಅವರು ನ್ಯೂಯಾರ್ಕ್ ಪೋಸ್ಟ್ ಗೆ ತಿಳಿಸಿದ್ದಾರೆ.
ಅಪಾಯಕಾರಿ ಸ್ಥಳದಲ್ಲಿ ಮನುಷ್ಯನ ಸಹಾಯಕ
ಹಾಗಾದ್ರೆ ಈ ರೋಬೋಟ್ ಏನೆಲ್ಲಾ ಕೆಲಸ ಮಾಡುತ್ತೆ ಅಂತಾ ಕೇಳ್ತಿರಾ? ಹೌದು ಈ ರೋಬೋಟ್ ಕೆಲಸ ಕೇಳಿದ್ರೆ ಅಚ್ಚರಿ ಪಡ್ತೀರಿ, ನಮಗೂ ಇಂಥ ಜೊತೆಗಿದ್ದಿದ್ರೆ ಅಂತಾ ಅಂದ್ಕೊಳ್ತಿರೆನೋ. ಹಹಹ, ಈ ರೋಬೋಟ್ ಮರಗಳನ್ನು ಕಡಿಯುತ್ತೆ, ಸುಮ್ಮನೆ ಸುಮ್ಮನೆ ಮರ ಕಡಿಯೋದಲ್ಲ. ವಿದ್ಯುತ್ ಲೈನ್‌ಗಳ ಬಳಿ ಅಪಾಯಕಾರಿಯಾಗಿ ಬೆಳೆದ ಮರ, ಮರದ ಕೊಂಬೆಗಳನ್ನ ಕತ್ತರಿಸುವುದು, ಕಾಳ್ಗಿಚ್ಚು ಅಥವಾ ಭೂಕುಸಿತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು, ಕುಸಿದ ಕಟ್ಟಡಗಳಲ್ಲಿ ಸಿಲುಕಿದವರ ರಕ್ಷಣೆ ಸೇರಿದಂತೆ ಮನುಷ್ಯರ ಪ್ರಾಣಕ್ಕೆ ಅಪಾಯವಿರುವ ಕಡೆ ಈ ರೋಬೋಟ್ ಕೆಲಸ ಮಾಡಲಿದೆ. ಈ ರೋಬೋಟ್ ತಯಾರಿಸಿದ ಉದ್ದೇಶವೂ ಇದೇ ಆಗಿದೆ ಎಂದು ಕಂಪನಿ ಹೇಳಿದೆ.
ನಾಲ್ಕು ಕಾಲಿನ 'ಸೆಂಟಾರ್' ರೋಬೋಟ್
ಸಾಮಾನ್ಯವಾಗಿ ಹ್ಯೂಮನಾಯ್ಡ್ ರೋಬೋಟ್‌ಗಳು ಎರಡು ಕಾಲಲ್ಲಿ ನಡೆಯುತ್ತವೆ. ಆದರೆ ತ್ರೀಹಾಲ್ವ್ಸ್ ರೋಬೋಟ್ ಹಾಗಲ್ಲ. ಇದಕ್ಕೆ ನಾಲ್ಕು ಕಾಲುಗಳಿವೆ. ಗ್ರೀಕ್ ಪುರಾಣದಲ್ಲಿ ಬರುವ 'ಸೆಂಟಾರ್' (Centaur) ಪ್ರಾಣಿಯಂತೆ ಇದರ ವಿನ್ಯಾಸಗೊಳಿಸಲಾಗಿದೆ. ಅಂದ್ರೆ ಕೆಳಭಾಗದಲ್ಲಿ ನಾಲ್ಕು ಕಾಲು, ಮೇಲ್ಭಾಗದಲ್ಲಿ ಮನುಷ್ಯನ ದೇಹದಂತಹ ರಚನೆ. ಈ ರೀತಿ ಬಾಡಿ ರಚನೆಯಿಂದಾಗಿ ತಗ್ಗು-ದಿಣ್ಣೆಗಳಲ್ಲೂ ಕೆಳಗೆ ಬೀಳದಂತೆ ಗಟ್ಟಿಯಾಗಿ ನಿಲ್ಲಲು ಈ ನಾಲ್ಕು ಕಾಲುಗಳು ಸಹಾಯ ಮಾಡುತ್ತವೆ. ಇದರ ಕೈಗಳಿಗೆ ಚೈನ್‍ಸಾ ಅಂದರೆ ಮರ ಕತ್ತರಿಸುವ ಮಷಿನ್ ಇದೆ, ಡ್ರಿಲ್. ಹೀಗೆ ಬೇರೆ ಬೇರೆ ಉಪಕರಣಗಳನ್ನು ಜೋಡಿಸಬಹುದು. ಸುಮಾರು 7 ಅಡಿ (2 ಮೀಟರ್) ಎತ್ತರವಿರುವ ಈ ರೋಬೋಟ್ ಅನ್ನು ಒಂದು ಪಿಕ್‌ಅಪ್ ಟ್ರಕ್‌ನಲ್ಲಿ ಸುಲಭವಾಗಿ ಸಾಗಿಸಬಹುದು.
ರೋಬೋಟ್ ಕಂಟ್ರೋಲ್ ಮಾಡೋದು ಯಾರು?
ಈ ರೋಬೋಟ್ ತಾನಾಗಿಯೇ ಯೋಚಿಸಿ ಕೆಲಸ ಮಾಡಲ್ಲ. ಒಬ್ಬ ಮನುಷ್ಯ ದೂರದಲ್ಲಿ ನಿಂತು ಇದನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುತ್ತಾನೆ. ಡ್ರೋನ್ ಹಾರಿಸ್ತಿರಲ್ಲ ಹಾಗೆ. ಜಾಯ್‌ಸ್ಟಿಕ್, ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಬಳಸಿ ಇದನ್ನು ನಿಯಂತ್ರಿಸಬಹುದು. ಇದರಿಂದಾಗಿ ಕಾಳ್ಗಿಚ್ಚು, ವಿದ್ಯುತ್ ತಂತಿಗಳಿರುವ ಅಪಾಯಕಾರಿ ಜಾಗಗಳಲ್ಲಿ ರೋಬೋಟ್ ಕೆಲಸ ಮಾಡುವಾಗ ಅದನ್ನು ಆಪರೇಟ್ ಮಾಡುವ ವ್ಯಕ್ತಿ ಸುರಕ್ಷಿತ ಜಾಗದಲ್ಲಿರಬಹುದು.
ಕೊಂಬುಗಳ ಒಳಗಿದೆ ಟೆಕ್ನಾಲಜಿ ಏನು?
ರೋಬೋಟ್‌ನ ತಲೆಯ ಮೇಲಿರುವ ಕೊಂಬುಗಳು ಕೇವಲ ಡಿಸೈನ್‌ಗಾಗಿ ಅಲ್ಲ. ಅವುಗಳ ಒಳಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರೋಬೋಟ್‌ನ ಕೈಗಳು ಮತ್ತು ಉಪಕರಣಗಳ ಚಲನವಲನವನ್ನು ನಿಖರವಾಗಿ ನೋಡಲು ಈ ಕ್ಯಾಮೆರಾಗಳು ಸಹಾಯ ಮಾಡುತ್ತವೆ. ಜೊತೆಗೆ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಏನಾದರೂ ತೊಂದರೆಯಾದರೆ ತಕ್ಷಣ ಆಫ್ ಆಗುವ ಸೇಫ್ಟಿ ಫೀಚರ್‌ಗಳೂ ಇದರಲ್ಲಿವೆ.
ಈ ರೋಬೋಟ್ ತಯಾರಿಸಲು ಪ್ರೇರಣೆ ಏನು?
ಈ ರೋಬೋಟ್ ತಯಾರಿಸಲು ಸಂಸ್ಥಾಪಕ ಬ್ಯೂ ಜಿ ಅವರಿಗೆ ತಮ್ಮ ಸ್ವಂತ ಅನುಭವವೇ ಪ್ರೇರಣೆಯಂತೆ. ಕ್ಯಾಲಿಫೋರ್ನಿಯಾದ ಟಾಹೋ ನ್ಯಾಷನಲ್ ಫಾರೆಸ್ಟ್ ಬಳಿ ಇರುವ ಅವರ ಜಾಗದಲ್ಲಿ ಒಮ್ಮೆ ಬಿರುಗಾಳಿಗೆ ಮರಗಳು ಬಿದ್ದಿದ್ದವು. ಆಗ ಅಪಾಯಕಾರಿ ಮರಗಳನ್ನು ಕಡಿಯುವ ಕೆಲಸಗಾರರ ಕಷ್ಟವನ್ನು ಅವರು ಹತ್ತಿರದಿಂದ ನೋಡಿದ್ದರು. ಮನುಷ್ಯರ ಜೀವವನ್ನು ಪಣಕ್ಕಿಡದೆ ಈ ಕೆಲಸಗಳನ್ನು ಮಾಡಲು ಒಂದು ಯಂತ್ರ ಬೇಕು ಅನ್ನೋ ಯೋಚನೆಯೇ 'ತ್ರೀಹಾಲ್ವ್ಸ್' ಹುಟ್ಟಿಗೆ ಕಾರಣವಾಯ್ತು ಅಂತ ಅವರು ಹೇಳಿದ್ದಾರೆ.
ಸದ್ಯಕ್ಕೆ ಇದು ಪ್ರೊಟೊಟೈಪ್ ಮಾತ್ರ
'ತ್ರೀಹಾಲ್ವ್ಸ್' ಅನ್ನು ಅಭಿವೃದ್ಧಿಪಡಿಸಲು ಈಗಾಗಲೇ 1.5 ಲಕ್ಷ ಡಾಲರ್‌ಗಿಂತ ಹೆಚ್ಚು ಹಣ ಖರ್ಚಾಗಿದೆ. ಆದರೆ, ಇದು ಸದ್ಯಕ್ಕೆ ಒಂದು ಪ್ರೊಟೊಟೈಪ್ ಮಾತ್ರ. ಮಾರುಕಟ್ಟೆಗೆ ಯಾವಾಗ ಬರುತ್ತೆ, ಇದರ ಬೆಲೆ ಎಷ್ಟು ಕಂಪನಿ ಇನ್ನೂ ಘೋಷಿಸಿಲ್ಲ. ಜನರನ್ನು ಹೆದರಿಸುವುದು ನಮ್ಮ ಗುರಿಯಲ್ಲ, ಬದಲಿಗೆ ಜಗತ್ತಿನ ಅತ್ಯಂತ ಅಪಾಯಕಾರಿ ಕೆಲಸಗಳನ್ನು ಸುರಕ್ಷಿತವಾಗಿಸುವುದು ನಮ್ಮ ಗುರಿ ಅಂತ ಸ್ಯಾಟಿರಸ್ ಕಂಪನಿ ಸ್ಪಷ್ಟಪಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಯ ಮತ್ತು ತಮಾಷೆ
ಆದರೆ ಇಂಟರ್‌ನೆಟ್‌ನಲ್ಲಿ ಈ ರೋಬೋಟ್‌ನ ರೂಪ ನೋಡಿ ಜನ ವಿಚಿತ್ರ ಕಾಮೆಂಟ್ಸ್ ಮಾಡಿದ್ದಾರೆ. ಮನುಷ್ಯನ ದೇಹ ಮತ್ತು ನಾಲ್ಕು ಕಾಲುಗಳ ವಿನ್ಯಾಸ ಇರುವುದರಿಂದ ನೆಟ್ಟಿಗರು ಇದನ್ನು ಸೆಂಟಾರ್ ರೋಬೋಟ್ ಅಂತ ಕರೆಯುತ್ತಿದ್ದಾರೆ. ಕಾಳ್ಗಿಚ್ಚಿನ ಹೊಗೆಯ ಮಧ್ಯದಿಂದ ನಮ್ಮನ್ನು ರಕ್ಷಿಸೋಕೆ ಈ ರೋಬೋಟ್ ಬಂದ್ರೆ, ನಾವು ಬೆಂಕಿಯಿಂದ ದೂರ ಓಡೋ ಬದಲು ಬೆಂಕಿಯ ಹತ್ತಿರಕ್ಕೇ ಓಡಿ ಹೋಗ್ತೀವಿ' ಅಂತೆಲ್ಲಾ ಕೆಲವರು ತಮಾಷೆ ಮಾಡಿದ್ದಾರೆ. ಕೈಯಲ್ಲಿ ಚೈನ್‍ಸಾ ಹಿಡಿದ ರೋಬೋಟ್ ಅನ್ನೋ ಕಲ್ಪನೆಯೇ ಭಯಾನಕವಾಗಿದೆ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸ್ಯಾಟಿರಸ್ ಕಂಪನಿಯ ವಾದ ಸ್ಪಷ್ಟವಾಗಿದೆ - ಇದು ಹೆದರಿಸಲಿಕ್ಕಲ್ಲ, ಜೀವ ಉಳಿಸಲಿಕ್ಕೆ.


