ಬೆಂಗಳೂರು ನನ್ನ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಿಸಿತು; ಮೊದಲೇ ಬಂದಿದ್ದರೆ ಇನ್ನಷ್ಟು ಸಾಧಿಸಬಹುದಿತ್ತು ಎಂದು AI ಸಾಫ್ಟ್‌ವೇರ್ ಆರ್ಕಿಟೆಕ್ಟ್ ಭುವನೇಶ್ ಆರ್ಯ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುವ ಟೆಕ್ಕಿಯೊಬ್ಬರು ಭಾರತದ ತಂತ್ರಜ್ಞಾನ ರಾಜಧಾನಿ ತಮ್ಮ ವೃತ್ತಿಜೀವನಕ್ಕೆ ಹೇಗೆ ಹೊಸ ತಿರುವು ನೀಡಿತು ಎಂಬುದನ್ನು ವಿವರಿಸಿ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ. ವೆಸ್ಕೊ ಕಂಪನಿಯಲ್ಲಿ AI ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಿರುವ ಭುವನೇಶ್ ಆರ್ಯ ಅವರು ಬೆಂಗಳೂರಿನಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಈ ನಗರವು ತಾವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಪುಣೆ, ಮುಂಬೈ, ಹೈದರಾಬಾದ್ ಹಾಗೂ ದೆಹಲಿ-ಎನ್‌ಸಿಆರ್‌ನಲ್ಲಿ ಕೆಲಸ ಮಾಡಿರುವುದನ್ನು ನೆನಪಿಸಿಕೊಂಡಿರುವ ಅವರು, ಪ್ರತಿಯೊಂದು ನಗರವೂ ತಮ್ಮ ಬೆಳವಣಿಗೆಗೆ ಕೊಡುಗೆ ನೀಡಿದ್ದರೂ, ಬೆಂಗಳೂರಿನಷ್ಟು ತಮ್ಮ ವೃತ್ತಿಪರ ಬದುಕಿನ ಮೇಲೆ ಪ್ರಭಾವ ಬೀರಿದ ನಗರ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರನ್ನು ಹೊಗಳಿದ ಟೆಕ್ಕಿ
"ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳಾಗಿವೆ. ಈ ನಗರ ನನಗೆ ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡಿದೆ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ," ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕೇವಲ ನಾಲ್ಕು ವರ್ಷಗಳಲ್ಲೇ ತಮ್ಮ ವೃತ್ತಿಜೀವನದಲ್ಲಿ ಭಾರೀ ಬದಲಾವಣೆ ಕಂಡಿರುವುದಾಗಿ ಹೇಳಿರುವ ಅವರು, ಉತ್ತಮ ಉದ್ಯೋಗಾವಕಾಶಗಳು, ಹೆಚ್ಚಿನ ಸಂಬಳದ ಬೆಳವಣಿಗೆ, ಬಲವಾದ ನೆಟ್‌ವರ್ಕಿಂಗ್, ಉದ್ಯಮದ ಪ್ರಮುಖರೊಂದಿಗೆ ಸಂಪರ್ಕ, ವಿವಿಧ ಟೆಕ್ ಕಾರ್ಯಕ್ರಮಗಳು, ಸಮ್ಮೇಳನಗಳು ಹಾಗೂ ಭಾಷಣಗಳಿಗೆ ಆಹ್ವಾನಗಳು ದೊರೆತಿವೆ ಎಂದು ತಿಳಿಸಿದ್ದಾರೆ. ಜೊತೆಗೆ, ಬೆಂಗಳೂರನ್ನು "ಮತ್ತೆ ಮರಳಲು ಅತ್ಯುತ್ತಮ ಮನೆ" ಎಂದೂ ಬಣ್ಣಿಸಿದ್ದಾರೆ.
ಆರ್ಯ ತಮ್ಮ ಪೋಸ್ಟ್ ಯಾವುದೇ ನಗರವನ್ನು ಮತ್ತೊಂದು ನಗರದೊಂದಿಗೆ ಹೋಲಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಇದು ನಗರಗಳ ಹೋಲಿಕೆಯಲ್ಲ. ನನ್ನ ಬದುಕಿನಲ್ಲಿ ಹೊಸ ಸಾಧ್ಯತೆಗಳ ಬಾಗಿಲು ತೆರೆದ ಬೆಂಗಳೂರಿಗೆ ಸಲ್ಲಿಸುವ ಕೃತಜ್ಞತೆಯ ನಮನ ಮಾತ್ರ," ಎಂದು ಅವರು ಹೇಳಿದ್ದಾರೆ.
ಸವಾಲುಗಳನ್ನು ಮೀರಿ ನೋಡಿದರೆ ಅವಕಾಶಗಳ ಸಾಗರ
ಬೆಂಗಳೂರು ಟ್ರಾಫಿಕ್, ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, "ಈ ಸವಾಲುಗಳನ್ನು ಮೀರಿ ನೋಡಿದರೆ, ಇಲ್ಲಿ ಅಂತ್ಯವಿಲ್ಲದ ಅವಕಾಶಗಳ ಸಾಗರವೇ ಕಾಣುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, "ನಾನು ಬೆಂಗಳೂರಿಗೆ ಇನ್ನೂ ಮೊದಲೇ ಬಂದಿದ್ದರೆ ನನ್ನ ವೃತ್ತಿಜೀವನ ಎಷ್ಟು ವಿಭಿನ್ನವಾಗಿರುತ್ತಿತ್ತೋ ಎಂದು ಕೆಲವೊಮ್ಮೆ ಅನಿಸುತ್ತದೆ. ಆಗ ಅವಕಾಶಗಳಿದ್ದರೂ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ. ಅದಕ್ಕೆ ಈಗ ಕೆಲವೊಮ್ಮೆ ವಿಷಾದವಾಗುತ್ತದೆ," ಎಂದು ಅವರು ಮನದಾಳದ ಮಾತು ಹಂಚಿಕೊಂಡಿದ್ದಾರೆ.
ತಮ್ಮ ಮಾತಿಗೆ ಉದಾಹರಣೆಯಾಗಿ ಅವರು ನೀಡಿದ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಗಮನ ಸೆಳೆದಿದೆ. "ರೈಲು ನಿಲ್ದಾಣದಲ್ಲಿ ₹10 ಬೆಲೆಯ ನೀರಿನ ಬಾಟಲಿ, ವಿಮಾನ ನಿಲ್ದಾಣದಲ್ಲಿ ₹100 ಹಾಗೂ ಪಂಚತಾರಾ ಹೋಟೆಲ್‌ನಲ್ಲಿ ₹500 ಆಗುತ್ತದೆ. ಅದೇ ರೀತಿ ಸರಿಯಾದ ಸ್ಥಳದಲ್ಲಿದ್ದರೆ ನಿಮ್ಮ ಮೌಲ್ಯವೂ ಹಲವು ಪಟ್ಟು ಹೆಚ್ಚಾಗುತ್ತದೆ. ನನಗೆ ಆ ಸ್ಥಳ ಬೆಂಗಳೂರು," ಎಂದು ಅವರು ಹೇಳಿದ್ದಾರೆ.
ಕೊನೆಯಲ್ಲಿ, "ಬೆಂಗಳೂರು ನಿಜಕ್ಕೂ ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರಿಗೆ ಅರ್ಹವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ನಗರ ನನಗೆ ನೀಡಿದ ಎಲ್ಲ ಅವಕಾಶಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ," ಎಂದು ಭುವನೇಶ್ ಆರ್ಯ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.
ಅವರ ಈ ಪೋಸ್ಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಅನೇಕ ಟೆಕ್ಕಿಗಳು ಬೆಂಗಳೂರಿನಲ್ಲಿರುವ ಉದ್ಯೋಗಾವಕಾಶಗಳು, ಸ್ಟಾರ್ಟ್‌ಅಪ್ ಪರಿಸರ ಮತ್ತು ವೃತ್ತಿಪರ ಬೆಳವಣಿಗೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ನಗರದ ಟ್ರಾಫಿಕ್ ಮತ್ತು ಮೂಲಸೌಕರ್ಯದ ಸಮಸ್ಯೆಗಳನ್ನೂ ಪ್ರಸ್ತಾಪಿಸಿದರೆ, ಇನ್ನೂ ಹಲವರು "ಅವಕಾಶಗಳ ನಗರ" ಎಂದು ಬೆಂಗಳೂರನ್ನು ಹೊಗಳಿದ್ದಾರೆ.


