ದಕ್ಷಿಣ ರೈಲ್ವೆಯ ಗೇಟ್‌ಮನ್ ಸಂದೀಪ್ ಚಹರ್, ಅರಸೂರು ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲಿಗೆ ಸಿಲುಕಲಿದ್ದ ವ್ಯಕ್ತಿಯನ್ನು ಕೂದಲೆಳೆಯ ಅಂತರದಲ್ಲಿ ರಕ್ಷಿಸಿದ್ದಾರೆ. ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯದ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

ಸಮಯಪ್ರಜ್ಞೆ ಮತ್ತು ಧೈರ್ಯವಿದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜೀವ ಉಳಿಸಬಹುದು ಎಂಬುದಕ್ಕೆ ದಕ್ಷಿಣ ರೈಲ್ವೆಯ ಗೇಟ್‌ಮನ್ ಸಂದೀಪ್ ಚಹರ್ ಸಾಕ್ಷಿಯಾಗಿದ್ದಾರೆ. ಅರಸೂರು ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲು ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬರನ್ನು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು ಮಾಡುವ ಮೂಲಕ ಸಂದೀಪ್ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಪ್ರಾಣದ ಹಂಗು ತೊರೆದು ರಕ್ಷಣೆ

ದಕ್ಷಿಣ ರೈಲ್ವೆಯ ತಿರುಚ್ಚಿರಾಪಳ್ಳಿ ವಿಭಾಗದ ಗೇಟ್ ನಂಬರ್ 214 ರಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ವ್ಯಕ್ತಿಯೊಬ್ಬರು ವೇಗವಾಗಿ ಬರುತ್ತಿರುವ ರೈಲನ್ನು ಗಮನಿಸದೆ ಹಳಿ ದಾಟುತ್ತಿದ್ದರು. ಇದನ್ನು ಕಂಡ ಗೇಟ್‌ಮನ್ ಸಂದೀಪ್ ಚಹರ್, ಪ್ರಾಣದ ಹಂಗು ತೊರೆದು ಹಳಿಗಳ ಮೇಲೆ ಓಡಿ ಹೋಗಿ ಆ ವ್ಯಕ್ತಿಯನ್ನು ಹಿಂದಕ್ಕೆ ಎಳೆದಿದ್ದಾರೆ. ಮರುಕ್ಷಣವೇ ರೈಲು ಅದೇ ಹಳಿಯಲ್ಲಿ ವೇಗವಾಗಿ ಸಾಗಿಹೋಗಿದೆ.

'ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಆದ್ಯ ಕರ್ತವ್ಯ' ಎಂದು ಸಂದೀಪ್ ವಿನಮ್ರವಾಗಿ ತಿಳಿಸಿದ್ದಾರೆ. ಇವರು ಕಳೆದ 7 ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ರೋಮಾಂಚಕ ವಿಡಿಯೋವನ್ನು ದಕ್ಷಿಣ ರೈಲ್ವೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಂದೀಪ್ ಅವರ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ನೆಟ್ಟಿಗರು ಕೂಡ ಸಂದೀಪ್ ಅವರನ್ನು 'ನಿಜ ಜೀವನದ ಹಿರೋ' ಎಂದು ಕೊಂಡಾಡುತ್ತಿದ್ದಾರೆ.

Scroll to load tweet…