₹8.7 ಲಕ್ಷ ವಾರ್ಷಿಕ ಸಂಬಳ ಪಡೆಯುತ್ತಿದ್ದ ಟೆಕ್ಕಿಗೆ ₹14 ಲಕ್ಷದ ಮತ್ತೊಂದು ಆಫರ್ ಇದ್ದರೂ, ಎರಡು ಸಂದರ್ಶನ ಸುತ್ತುಗಳ ಬಳಿಕ ಇನ್ಫೋಸಿಸ್ ಕೇವಲ ₹7.5 ಲಕ್ಷದ ಆಫರ್ ನೀಡಿದೆ ಎನ್ನಲಾಗಿದೆ. ಆರಂಭದಲ್ಲಿ ಒಪ್ಪಿಕೊಂಡರೂ, ಬಳಿಕ ಕಡಿಮೆ ಸಂಬಳ ಕಾರಣ ನೀಡಿ ಟೆಕ್ಕಿ ಆಫರ್ ತಿರಸ್ಕರಿಸಿದ್ದಾರೆ. ಘಟನೆ ಆನ್‌ಲೈನ್‌ನಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

₹8.7 ಲಕ್ಷ ಸಂಬಳ, ₹14 ಲಕ್ಷದ ಆಫರ್; ಆದರೂ ಕಡಿಮೆ ಸಂಬಳದ ಆಫರ್!

ಇನ್ಫೋಸಿಸ್‌ನಲ್ಲಿ ಉದ್ಯೋಗ ಪಡೆಯಲು ಮುಂದಾದ ಟೆಕ್ಕಿಯೊಬ್ಬರ ಹಳೆಯ ಉದ್ಯೋಗ ಹುಡುಕಾಟದ ಅನುಭವ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಈಗಾಗಲೇ ವರ್ಷಕ್ಕೆ ₹8.7 ಲಕ್ಷ ಸಂಬಳ ಪಡೆಯುತ್ತಿದ್ದ ಅವರಿಗೆ ಮತ್ತೊಂದು ಕಂಪನಿಯಿಂದ ಸುಮಾರು ₹14 ಲಕ್ಷದ ಆಫರ್ ಇದ್ದರೂ, ಇನ್ಫೋಸಿಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ನೇಮಕಾತಿದಾರರು ಆರಂಭದಲ್ಲೇ ಅವರ ಪ್ರಸ್ತುತ ಸಂಬಳ, ನಿರೀಕ್ಷಿತ ವೇತನ ಹಾಗೂ ಕೈಯಲ್ಲಿರುವ ಆಫರ್‌ಗಳ ಬಗ್ಗೆ ಮಾಹಿತಿ ಪಡೆದಿದ್ದರು ಎನ್ನಲಾಗಿದೆ.

ಎರಡು ರೌಂಡ್ ಇಂಟರ್ವ್ಯೂ ಪಾಸ್, ಆದರೂ ಆಫರ್ ಮಾತ್ರ ₹7.5 ಲಕ್ಷ!

ಅಭ್ಯರ್ಥಿ ಇನ್ಫೋಸಿಸ್‌ನ ಎರಡು ಹಂತದ ಸಂದರ್ಶನಗಳನ್ನು ಪೂರ್ಣಗೊಳಿಸಿ ಆಯ್ಕೆಯಾದರು. ಆದರೆ ನಂತರ ಅವರಿಗೆ ನೀಡಲಾಗಿದ್ದ ವೇತನ ಪ್ರಸ್ತಾವನೆ ₹7.5 ಲಕ್ಷ ವಾರ್ಷಿಕ ಎಂಬುದು ತಿಳಿದುಬಂದಿತು.

ಇದು ಅವರ ಪ್ರಸ್ತುತ ₹8.7 ಲಕ್ಷ ಸಂಬಳಕ್ಕಿಂತಲೂ ಕಡಿಮೆ. ಜೊತೆಗೆ ₹14 ಲಕ್ಷದ ಮತ್ತೊಂದು ಆಫರ್ ಕೈಯಲ್ಲಿದ್ದ ಸಂದರ್ಭದಲ್ಲಿ ಇಂತಹ ಪ್ರಸ್ತಾಪ ಬಂದಿದ್ದರಿಂದ ಅಭ್ಯರ್ಥಿ ಅಚ್ಚರಿಗೊಂಡರು. ಈ ಕುರಿತು ಪ್ರಶ್ನಿಸಿದಾಗ ನೇಮಕಾತಿ ತಂಡದಿಂದ ನಿರೀಕ್ಷಿತ ರೀತಿಯ ಸಮಾಧಾನಕರ ಉತ್ತರ ಸಿಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮೊದಲು ನಿರಾಕರಣೆ, ನಂತರ ಮತ್ತೆ ಆಫರ್ ಕೇಳಿದ ಟೆಕ್ಕಿ!

ಆರಂಭದಲ್ಲಿ ಅಭ್ಯರ್ಥಿ ₹7.5 ಲಕ್ಷದ ಆಫರ್‌ ಅನ್ನು ತಿರಸ್ಕರಿಸಿದರು. ಆದರೆ ಕೆಲವೇ ನಿಮಿಷಗಳ ಬಳಿಕ ನೇಮಕಾತಿದಾರರನ್ನು ಮತ್ತೆ ಸಂಪರ್ಕಿಸಿ ಆಫರ್ ಲೆಟರ್ ನೀಡುವಂತೆ ಕೇಳಿದರು. ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್ ಮತ್ತು ಭವಿಷ್ಯದಲ್ಲಿ ಆನ್‌ಸೈಟ್ ಅವಕಾಶಗಳ ನಿರೀಕ್ಷೆಯಿಂದ ಇನ್ಫೋಸಿಸ್‌ನಲ್ಲಿ ಆಸಕ್ತಿ ಹೊಂದಿದ್ದಾಗಿ ಅವರು ವಿವರಿಸಿದ್ದರು.

ಸುಮಾರು ಎರಡು ವಾರಗಳ ಬಳಿಕ ಆಫರ್ ಲೆಟರ್ ಬಂದರೂ, ಅಂತಿಮವಾಗಿ ಅವರು ಅದನ್ನು ಸ್ವೀಕರಿಸದೆ ತಿರಸ್ಕರಿಸಿದರು.

ಟೆಕ್ಕಿಯ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ!

ಆಫರ್ ತಿರಸ್ಕರಿಸಿದ ಬಳಿಕ ನೇಮಕಾತಿದಾರರಿಂದ ಹಲವು ಸಂದೇಶಗಳು ಹಾಗೂ ಮೇಲಧಿಕಾರಿಯಿಂದ ಇಮೇಲ್ ಬಂದಿದ್ದರೂ ತಾನು ಪ್ರತಿಕ್ರಿಯಿಸಲಿಲ್ಲ ಎಂದು ಟೆಕ್ಕಿ ಹೇಳಿಕೊಂಡಿದ್ದಾರೆ.

ಈ ಘಟನೆ ಆನ್‌ಲೈನ್‌ನಲ್ಲಿ ಬಲವಾದ ಚರ್ಚೆಗೆ ಕಾರಣವಾಗಿದೆ. ಕೆಲವರು ಕಂಪನಿಯು ಅಭ್ಯರ್ಥಿಯ ಸಂಬಳ ಮತ್ತು ಇತರ ಆಫರ್‌ಗಳ ಮಾಹಿತಿ ತಿಳಿದಿದ್ದರೂ ಕಡಿಮೆ ವೇತನ ಪ್ರಸ್ತಾಪಿಸಿರುವುದನ್ನು ಟೀಕಿಸಿದ್ದಾರೆ. ಮತ್ತೊಂದೆಡೆ, ಕೆಲವರು ಇಂತಹ ನಡೆ ಮುಂದಿನ ದಿನಗಳಲ್ಲಿ ಅಭ್ಯರ್ಥಿಯ ವೃತ್ತಿಜೀವನಕ್ಕೆ ವಿರುದ್ಧ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.