ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯ ಕೆನ್ನೆಗೆ ಆಟೋ ಚಾಲಕನೊಬ್ಬ ಹೊಡೆದು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಬಾಲಕಿಗೆ ನೆರವು ನೀಡಲು ಹೋದ ಬೈಕ್ ಸವಾರನಿಂದಲೂ ಆಕೆ ಸಹಾಯ ಸ್ವೀಕರಿಸಲಿಲ್ಲ.
ಬೆಂಗಳೂರು (ಜು.15): ಬಡ ಕುಟುಂಬದಲ್ಲಿ ಜನಿಸಿದ ಹುಡುಗಿ ಬೆಳಗ್ಗೆ ಶಾಲೆಗೂ ಹೋಗುವ ಮುನ್ನ ತಮ್ಮ ಮನೆಯವರಿಗೆ ನೆರವಾಗಲೆಂದು ಅಮ್ಮ ಕೊಟ್ಟ ಗುಲಾಬಿ ಹೂವಿನ ಗೊಂಚಲೊಂದನ್ನು ರಸ್ತೆಯ ಡಿವೈಡರ್ ಬಳಿ ನಿಂತು ಮಾರಾಟ ಮಾಡುತ್ತಿದ್ದಳು. ಆ ರಸ್ತೆಯಲ್ಲಿ ಬಂದ ಆಟೋಗೆ ಹೂ ತಗೊಳ್ಳಿ ಎಂದು ಬಾಲಕಿ ಕೇಳಿದೆ. ಆದರೆ, ಆಟೋ ಡ್ರೈವರ್ ಹೂ ಮಾರುವ ಹುಡುಗಿಯ ಕೆನ್ನೆಗೆ ಜೋರಾಗಿ ಹೊಡೆದು ಕುಚೋದ್ಯ ಮೆರೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನಿಗೆ ಶಿಕ್ಷೆ ಆಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಹೌದು, ಈ ಘಟನೆ ಪುಣೆ ನಗರದಲ್ಲಿ ನಡೆದಿದೆ. ರಸ್ತೆಯ ಬದಿಯಲ್ಲಿ ತನ್ನ ಪಾಡಿಗೆ ಗುಲಾಬಿ ಹೂವಿನ ಬೊಕ್ಕೆ ಮಾರಾಟ ಮಾಡುತ್ತಿದ್ದ ಪುಟ್ಟ ಬಾಲಕಿ ಮೇಲೆ ಆಟೋ ಚಾಲಕನೊಬ್ಬ ಕೆನ್ನೆಗೆ ಹೊಡೆದ ದೃಶ್ಯವನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಶಿಖರ್ ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್‌ಸ್ಟಾಗ್ರಾಂ ಖಾತೆ @ride_with_shikharನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಹುಡುಗಿ ಅಳುತ್ತಾ ರಸ್ತೆ ಬದಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ವಿಡಿಯೋ ಆರಂಭದಲ್ಲಿ, ಆಟೋ ಚಾಲಕನು ಆಕೆಗೆ ಹೊಡೆದನು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಜೋರಾಗಿ ಅಳುತ್ತಾ, ಕಣ್ಣೀರಿಡುತ್ತಿದ್ದ ಬಾಲಕಿ ಭಯಭೀತಳಾಗಿ ನಿಂತಿರುವುದು ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಬೈಕ್ ರೈಡರ್ ಶಿಖರ್‌ನ ಪ್ರತಿಕ್ರಿಯೆ:
ಈ ವಿಡಿಯೋದಲ್ಲಿ ಶಿಖರ್ ಬೈಕ್‌ನಲ್ಲಿ ಹೋಗುವಾಗ ಈ ಘಟನೆಗೆ ಸಾಕ್ಷಿಯಾಗುತ್ತಾರೆ. ಹುಡುಗಿಯ ಅಳುವನ್ನು ನೋಡಿ ಆಕೆಯ ಬಳಿಗೆ ಹೋಗಿ ಏನಾಗಿದೆ ಎಂದು ಕೇಳುತ್ತಾರೆ. ಆದರೆ ಆಕೆ ಏನು ಉತ್ತರಿಸದೆ ನಿರಂತರವಾಗಿ ಅಳುತ್ತಿರುತ್ತಾಳೆ. ನಂತರ ಆಟೋ ಚಾಲಕ ತಾನು ಹೊಡೆದ ಬಳಿಕ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಶಿಖರ್ ಹೇಳಿದ್ದಾರೆ. ಪಾಪ ಹುಡುಗಿಯ ನೋವಿಗೆ ಭಾವುಕರಾದ ಶಿಖರ್, ಆಕೆಯಲ್ಲಿದ್ದ ಗುಲಾಬಿಯನ್ನು ಖರೀದಿಸಲು ಮುಂದಾಗುತ್ತಾರೆ. ಹಣ ನೀಡುವ ಪ್ರಯತ್ನವನ್ನೂ ಮಾಡುತ್ತಾರೆ. ಆದರೆ , ಯಾವುದೇ ತಪ್ಪನ್ನೂ ಮಾಡದೆ ತನ್ನ ದುಡಿಮೆಗಾಗಿ ಗುಲಾಬಿ ಹೂವನ್ನು ಮಾರುತ್ತಿದ್ದ ತನಗೆ ಸುಖಾಸುಮ್ಮನೆ ಹೊಡೆದರಲ್ಲ ಎಂದು ಆಕೆಯ ಮನಸ್ಸಿಗೆ ತುಂಬಾ ಘಾಸಿಯಾದ ಕಾರಣ, ಅವರು ನೀಡಿದ ಹಣವನ್ನೂ ತೆಗೆದುಕೊಳ್ಳಲು ನಿರಾಕರಿಸುತ್ತಾಳೆ.
ಶಿಖರ್‌ನಿಂದ ಸಾಂತ್ವನ:
ಇನ್‌ಸ್ಟಾಗ್ರಾಂನಲ್ಲಿ ಶಿಖರ್ ತಮ್ಮ ಅನುಭವವನ್ನು ಹಂಚಿಕೊಂಡು, 'ಅವಳಿಗೆ ಸಹಾಯ ಮಾಡಲು ನನಗೆ ಏನು ಮಾಡಬೇಕೆಂದು ಗೊತ್ತಾಗಲೇ ಇಲ್ಲ. ನಾನು ಹಣ ಕೊಟ್ಟೆ, ಆದರೆ ಅವಳು ತೆಗೆದುಕೊಂಡಿಲ್ಲ. ಆಕೆ ಅಳುತ್ತಿದ್ದಳು, ಅದು ಅಷ್ಟೇ. not for money, but for the hurt the world gave her' ಎಂಬ ಅರ್ಥದ ಭಾವನಾತ್ಮಕ ಮಾತುಗಳನ್ನು ಬರೆದಿದ್ದಾರೆ. ಶಿಖರ್ ಆಕೆಗೆ ಧೈರ್ಯ ನೀಡಲು ತಲೆಯ ಮೇಲೆ ಕೈ ಇಟ್ಟು, 'ಹೂ ಮಾರಾಟ ಮಾಡುವಾಗ ಒಂದೇ ವಾಹನದ ಹಿಂದೆ ಈ ರೀತಿ ಓಡಬೇಡ' ಎಂದು ಸಲಹೆ ಕೂಡ ನೀಡಿದ್ದಾರೆ. ಆದರೂ ಆಕೆ ಸಹಾಯ ಸ್ವೀಕರಿಸದಿರುವುದು ಶಿಖರ್ ಅವರಲ್ಲಿಯೂ ತೀವ್ರ ಬೇಸರ ಉಂಟುಮಾಡಿದೆ.
ಸಾರ್ವಜನಿಕ ಪ್ರತಿಕ್ರಿಯೆ:
ಈ ವಿಡಿಯೋ ಈಗಾಗಲೇ 42 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಲವಾರು ಜನ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, 'ಅವಳು ಹಣ ತೆಗೆದುಕೊಳ್ಳಲಿಲ್ಲ ಎಂಬುದೇ ಆಕೆಯ ನೋವು ಎಷ್ಟಿದೆ ಎಂಬುದನ್ನು ತೋರುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಆಟೋ ಚಾಲಕನ ತಕ್ಷಣ ಬಂಧನವಾಗಬೇಕು. ಈ ರೀತಿಯ ವರ್ತನೆ ಸಹನೀಯವಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, 'ಆಕೆ ಬೀದಿಯಲ್ಲಿ ಇರಬಾರದು. ಎನ್‌ಜಿಒಗಳು ಮುಂದೆ ಬಂದು ಸಹಾಯ ಮಾಡಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಆಕೆಯ ಹಿಂದೆ ಇದ್ದ ಕಾರಣಗಳತ್ತಲೂ ಕಣ್ಣಾರಿಸಿದ್ದಾರೆ. 'ಯಾರು ಈ ಕೆಲಸಕ್ಕೆ ಅವಳನ್ನು ತಳ್ಳಿದ್ದಾರೆ? ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಹೇಳಿದ್ದಾರೆ.
ಈ ದೃಶ್ಯವು ಒಂದು ಪುಟ್ಟ ಬಾಲಕಿಯ ಕಣ್ಣೀರಲ್ಲಿ ಬೀದಿಯ ಬದುಕಿನ ಕಠಿಣತೆಯ ಕಥನವನ್ನು ಬಿಚ್ಚಿಡುತ್ತದೆ. ಈ ಘಟನೆ ರಾಜ್ಯದ ಮಕ್ಕಳ ಸುರಕ್ಷತೆ ಹಾಗೂ ಬೀದಿ ಮಕ್ಕಳ ಹಕ್ಕುಗಳ ಬಗ್ಗೆ ಮತ್ತೊಮ್ಮೆ ಅವಲೋಕನ ಮಾಡುವಂತೆ ಮಾಡಿದೆ.


