2.7 ಕೋಟಿ ರೂಪಾಯಿ ಸಂಬಳದ ಕೆಲಸವನ್ನು 22 ವರ್ಷದ ಡೇನಿಯಲ್ ಮಿನ್ ತಿರಸ್ಕರಿಸಿದ್ದಾರೆ. ಪ್ರತಿದಿನ 12 ಗಂಟೆಗಳ ಕಾಲದ ಕಠಿಣ ಕೆಲಸದ ಹೊರೆಯೇ ಉದ್ಯೋಗ ತೊರೆಯಲು ಕಾರಣ ಎಂದು ಯುವಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

ಕೋಟ್ಯಂತರ ರೂಪಾಯಿ ಸಂಬಳ, ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ - ಇವು ಅನೇಕರ ಪಾಲಿನ 'ಡ್ರೀಮ್ ಜಾಬ್'. ಆದರೆ, 22 ವರ್ಷದ ಯುವಕನೊಬ್ಬ ಇಂತಹ ಸುವರ್ಣಾವಕಾಶವನ್ನೇ ಕಿತ್ತೆಸೆದಿದ್ದಾನೆ. ಅಮೆರಿಕದ ಎಐ ಸ್ಟಾರ್ಟ್‌ಅಪ್ 'ಕ್ಲೂಲಿ'ಯ (Cluly) ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿದ್ದ ಡೇನಿಯಲ್ ಮಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ.

2.7 ಕೋಟಿಯ ಆಫರ್ ಬೇಡ ಎಂದ ಯುವಕ!

ಡೇನಿಯಲ್ ಮಿನ್ ಕೇವಲ 21ನೇ ವಯಸ್ಸಿನಲ್ಲಿ ವಾರ್ಟನ್ ಸ್ಕೂಲ್‌ನಿಂದ ಪದವಿ ಮುಗಿಸಿ, ವಾರ್ಷಿಕ 3 ಲಕ್ಷ ಡಾಲರ್ ಅಂದರೆ ಅಂದಾಜು 2.7 ಕೋಟಿ ರೂಪಾಯಿ ಸಂಬಳದ ಕೆಲಸಕ್ಕೆ ಸೇರಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿಎಂಒ ಆಗಿ ನೇಮಕಗೊಂಡಿದ್ದ ಮಿನ್ ಅವರ ಸಾಧನೆ ಅದ್ಭುತವಾಗಿತ್ತು. ಆದರೆ, ಕಳೆದ ಮೇ ತಿಂಗಳಲ್ಲಿ ಈ ಕೆಲಸಕ್ಕೆ ಸೇರಿದ್ದ ಅವರು ಕೇವಲ ಎಂಟು ತಿಂಗಳಲ್ಲೇ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಜೀವನದ ಸಣ್ಣ ಸಣ್ಣ ಕ್ಷಣಗಳಿಗೂ ಸಿಗಲಿಲ್ಲ ಸಮಯ

ಸಂಬಳ ದೊಡ್ಡದಿದ್ದರೂ ಆ ಕೆಲಸ ನೀಡುತ್ತಿದ್ದ ಒತ್ತಡ ಅಷ್ಟೇ ಭೀಕರವಾಗಿತ್ತು. ಡೇನಿಯಲ್ ದಿನಕ್ಕೆ ಸತತ 12 ಗಂಟೆಗಳ ಕಾಲ ಕಠಿಣ ಕೆಲಸ ಮಾಡಬೇಕಿತ್ತು. ಈ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರಿಗೆ ತಮ್ಮ ವೈಯಕ್ತಿಕ ಜೀವನಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಸ್ನೇಹಿತರೊಂದಿಗೆ ಊಟ ಮಾಡಲು ಅಥವಾ ಸ್ವಂತ ಸಹೋದರನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡುವಂತಹ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಮಿನ್ ಬೇಸರದಿಂದ ಹೇಳಿಕೊಂಡಿದ್ದಾರೆ.

ಆರಂಭದ ಖುಷಿ ಬೇಸರಕ್ಕೆ ತಿರುಗಿದಾಗ...

ಆರಂಭದಲ್ಲಿ ಡೇನಿಯಲ್ ಈ ಕೆಲಸವನ್ನು ತುಂಬಾನೇ ಇಷ್ಟಪಟ್ಟಿದ್ದರು. ಆದರೆ ಕೇವಲ ನಾಲ್ಕು ತಿಂಗಳು ಕಳೆಯುವುದರೊಳಗೆ ಕೆಲಸದ ಹೊರೆ ಅವರ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡಿತು. ಕೆಲಸದಲ್ಲಿ ನಿರಂತರ ಬೇಸರ ಮೂಡಲಾರಂಭಿಸಿತು. "ದುಡ್ಡಿಗಿಂತ ನೆಮ್ಮದಿ ಮುಖ್ಯ" ಎಂಬ ಸತ್ಯ ಅವರಿಗೆ ಅರಿವಾಗತೊಡಗಿತು. ತಾವು ಪಡುತ್ತಿದ್ದ ಕಷ್ಟದ ಬಗ್ಗೆ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

View post on Instagram

ಸಿಇಒ ನೀಡಿದ ಅನಿರೀಕ್ಷಿತ ಬೆಂಬಲ

ಡೇನಿಯಲ್ ಅವರ ಕೆಲಸದ ಮೇಲಿನ ಅಸಮಾಧಾನವನ್ನು ಕಂಪನಿಯ ಸಿಇಒ ರಾಯ್ ಲೀ ಗಮನಿಸಿದ್ದರು. ಮಿನ್ ಅವರ ಜೊತೆ ಮಾತನಾಡಿದ ಸಿಇಒ, ಅವರ ಅಳಲನ್ನು ಕೇಳಿ ಆಶ್ಚರ್ಯಕರವಾಗಿ ಸ್ಪಂದಿಸಿದರು. ಕೆಲಸ ಬಿಡುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಸಿಇಒ, 'ನಿಮಗೆ ಯಾವ ವಿಷಯ ಸಂತೋಷ ನೀಡುತ್ತದೆಯೋ ಅದನ್ನೇ ಆಯ್ಕೆ ಮಾಡಿ' ಎಂದು ಪ್ರೋತ್ಸಾಹಿಸಿದರು. ಮೇಲಧಿಕಾರಿಯ ಈ ಬೆಂಬಲದಿಂದ ಡೇನಿಯಲ್ ನಿರಾಳವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದರು.

ವೈರಲ್ ಆದ ಡೇನಿಯಲ್ ಮಿನ್ ವಿಡಿಯೋ

ಯುವಕನ ಈ ಧೈರ್ಯದ ನಿರ್ಧಾರ ಈಗ ಜಗತ್ತಿನಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕಂಟೆಂಟ್ ಕ್ರಿಯೇಟರ್ ಕೂಡ ಆಗಿರುವ ಮಿನ್, "ಯಶಸ್ಸು ಎಂದರೆ ಕೇವಲ ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ನಮ್ಮ ನೆಮ್ಮದಿ" ಎಂಬ ಸಂದೇಶವನ್ನು ಯುವ ಪೀಳಿಗೆಗೆ ನೀಡಿದ್ದಾರೆ. ಹೆಚ್ಚಿನ ಸಂಬಳಕ್ಕಾಗಿ ತಮ್ಮ ಆರೋಗ್ಯ ಮತ್ತು ಸಂಬಂಧಗಳನ್ನು ಬಲಿ ಕೊಡುತ್ತಿರುವ ಇಂದಿನ ಕಾರ್ಪೊರೇಟ್ ಜಗತ್ತಿಗೆ ಈ ಘಟನೆ ಒಂದು ಕನ್ನಡಿಯಂತಿದೆ.