ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳವಿದ್ದರೂ, 27 ವರ್ಷದ ಟೆಕ್ಕಿ ಮದುವೆ ಬಳಿಕ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಮದುವೆ, ಹೊಸ ಮನೆಗೆ ಸ್ಥಳಾಂತರ ಮತ್ತು ಪತ್ನಿಯ ಉದ್ಯೋಗ ನಷ್ಟದ ನಂತರ, ಅವರ ಉಳಿತಾಯ ಶೂನ್ಯವಾಗಿದ್ದು, ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲಗಳಿಂದ ಬಳಲುತ್ತಿದ್ದಾರೆ. ಏನದು ಘಟನೆ ತಿಳಿಯಿರಿ.
ಇಂದಿನ ಕಾಲದಲ್ಲಿ ತಿಂಗಳಿಗೆ 2 ಲಕ್ಷ ರೂ. ಸಂಬಳ (₹2 Lakh Salary) ಬರುತ್ತದೆ ಎಂದರೆ, ಆತನ ಜೀವನ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ಐಷಾರಾಮಿಯಾಗಿ ಸಾಗುತ್ತಿರುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ, ಎಷ್ಟೇ ದೊಡ್ಡ ಮೊತ್ತದ ಸಂಬಳವಿದ್ದರೂ ಹಣಕಾಸಿನ ಶಿಸ್ತು (Financial planning) ಮತ್ತು ಖರ್ಚಿನ ಮೇಲೆ ಹಿಡಿತವಿಲ್ಲದಿದ್ದರೆ ಜೀವನ ಹೇಗೆ ಬೀದಿಗೆ ಬರುತ್ತದೆ ಎಂಬುದಕ್ಕೆ 27 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಕಥೆಯೇ ಸಾಕ್ಷಿ. ರೆಡ್ಡಿಟ್ (Reddit) ವೇದಿಕೆಯಲ್ಲಿ ಈತ ಹಂಚಿಕೊಂಡಿರುವ ಸಾಲದ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Story) ಆಗುತ್ತಿದೆ.
2 ಲಕ್ಷದ ಸಂಬಳ, ಆದ್ರೂ ತಲೆ ಮೇಲೆ ಸಾಲದ ಬೆಟ್ಟ!
ತಿಂಗಳಿಗೆ 2 ಲಕ್ಷ ರೂ. ದುಡಿಯುವ ಈ ಯುವಕನ ಬಳಿ ಇಂದು ಬಿಡಿಗಾಸಿನ ಉಳಿತಾಯವಿಲ್ಲ (Zero Savings). ತುರ್ತು ಪರಿಸ್ಥಿತಿಗೆಂದು ಇಟ್ಟಿದ್ದ ಎಮರ್ಜೆನ್ಸಿ ಫಂಡ್ (Emergency fund) ಕೂಡ ಖಾಲಿಯಾಗಿದೆ. ತಲೆ ಮೇಲೆ ಕೇವಲ ಇಎಂಐ (EMI) ಮತ್ತು ಸಾಲದ ದೊಡ್ಡ ಬೆಟ್ಟವೇ ನಿರ್ಮಾಣವಾಗಿದೆ.
ಮದುವೆ, ಹೊಸ ಊರು, ಹೆಂಡತಿಯ ಕೆಲಸ ಹೋಯ್ತು!
ತನ್ನ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿರುವ ಟೆಕ್ಕಿ, 'ಮದುವೆಯಾದ (Married life) ಬಳಿಕ ನನ್ನ ಜೀವನದಲ್ಲಿ ದಿಢೀರ್ ಬದಲಾವಣೆಗಳಾದವು. ಪೋಷಕರ ಮನೆ ಬಿಟ್ಟು ಪತ್ನಿಯೊಂದಿಗೆ ಹೊಸ ಊರಿಗೆ ಶಿಫ್ಟ್ ಆಗಬೇಕಾಯಿತು. ಹೊಸ ಬಾಡಿಗೆ ಮನೆ, ಅಡ್ವಾನ್ಸ್, ಫರ್ನಿಚರ್, ಹೋಮ್ ಅಪ್ಲೈಯನ್ಸಸ್ ಅಂತ ಲೆಕ್ಕವಿಲ್ಲದೆ ಹಣ ಖರ್ಚಾಯಿತು. ಈ ಯಾವ ಖರ್ಚಿಗೂ ನನ್ನ ಬಳಿ ಯಾವುದೇ ಪ್ಲಾನಿಂಗ್ ಇರಲಿಲ್ಲ. ಇದೆಲ್ಲದರ ಮಧ್ಯೆ ದುರಾದೃಷ್ಟವಶಾತ್ ನನ್ನ ಪತ್ನಿಯ ಕೆಲಸವೂ (Job loss) ಹೋಯ್ತು. ಇಡೀ ಮನೆಯ ನಿರ್ವಹಣೆಯ ಜವಾಬ್ದಾರಿ ನನ್ನೊಬ್ಬನ ಸಂಬಳದ (Single income household) ಮೇಲೆ ಬಿತ್ತು' ಎಂದಿದ್ದಾನೆ.
ಕ್ರೆಡಿಟ್ ಕಾರ್ಡ್, ಕೈ ಸಾಲದ ಸುಳಿ
ಈತನ ಸಾಲದ ಪಟ್ಟಿ ನೋಡಿದರೆ ಯಾರಿಗಾದರೂ ತಲೆ ತಿರುಗುವುದು ಖಂಡಿತ. ಸಂಬಂಧಿಕರೊಬ್ಬರ ಬಳಿ 20 ಲಕ್ಷ ರೂ. ಸಾಲ ಮಾಡಿದ್ದು, ಅದಕ್ಕೆ ಪ್ರತಿ ತಿಂಗಳು 25,000 ರೂ. ಕಂತು ಕಟ್ಟುತ್ತಿದ್ದಾನೆ. ಕ್ರೆಡಿಟ್ ಕಾರ್ಡ್ (Credit card debt) ಮತ್ತು ಪರ್ಸನಲ್ ಲೋನ್ ಇಎಂಐ ಅಂತಲೇ ತಿಂಗಳಿಗೆ 30,000 ರೂ. ಕಟ್ಟುತ್ತಿದ್ದಾನೆ. ಇಷ್ಟೇ ಅಲ್ಲದೆ, ತನ್ನ ಬಳಿಯಿದ್ದ 6 ಲಕ್ಷ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಅನ್ನು ಅಡವಿಟ್ಟು 2.2 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾನೆ.
ಪರಿಹಾರ ಕೇಳಿದ ಟೆಕ್ಕಿಗೆ ನೆಟ್ಟಿಗರ ಸಲಹೆ
'ನಾನು ಸಿಂಪತಿ ಗಿಟ್ಟಿಸಲು ಈ ಪೋಸ್ಟ್ ಹಾಕುತ್ತಿಲ್ಲ, ಬದಲಾಗಿ ನಾನು ಮಾಡಿದ ಆರ್ಥಿಕ ತಪ್ಪುಗಳನ್ನು ಒಪ್ಪಿಕೊಂಡು, ಈ ಸಾಲದ ಸುಳಿಯಿಂದ ಹೊರಬರಲು ದಾರಿ ಹುಡುಕುತ್ತಿದ್ದೇನೆ. ಮುಂದಿನ 2-3 ವರ್ಷಗಳಲ್ಲಿ ನಾನು ಏನು ಮಾಡಬೇಕು?' ಎಂದು ಆತ ರೆಡ್ಡಿಟ್ ಬಳಕೆದಾರರನ್ನು ಕೇಳಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. 'ಮೊದಲು ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸು. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕು. ಅತಿ ಹೆಚ್ಚು ಬಡ್ಡಿ ಇರುವ ಸಾಲವನ್ನು ಮೊದಲು ತೀರಿಸು (Debt Snowball Strategy). ಜೊತೆಗೆ ನಿನ್ನ ಪತ್ನಿಗೆ ಆದಷ್ಟು ಬೇಗ ಹೊಸ ಕೆಲಸ ಹುಡುಕಲು ಹೇಳು, ಮನೆಯಲ್ಲಿ ಇಬ್ಬರ ಆದಾಯ (Double income) ಶುರುವಾದರೆ ಮಾತ್ರ ಈ ಸಂಕಷ್ಟದಿಂದ ಪಾರಾಗಬಹುದು' ಎಂದು ಕಿವಿಮಾತು ಹೇಳಿದ್ದಾರೆ. ಹಣಕಾಸಿನ ನಿರ್ವಹಣೆ ಸರಿಯಿಲ್ಲದಿದ್ದರೆ ಎಷ್ಟೇ ಸಂಬಳವಿದ್ದರೂ ಸಾಲಗಾರರಾಗುವುದು ಗ್ಯಾರಂಟಿ.


