ಯಾವುದೇ ಸಿನಿಮಾ ಆಗಲಿ, ವಿಜಯ್ ಚಿತ್ರ ಎಂದರೆ ಅಲ್ಲಿ ಹಬ್ಬದ ವಾತಾವರಣ ಗ್ಯಾರಂಟಿ. 'ಜನ ನಾಯಗನ್' ಚಿತ್ರ ಮೊದಲ ದಿನ ಭಾರತದಾದ್ಯಂತ ಬರೊಬ್ಬರಿ 42.7 ಕೋಟಿ ರೂಪಾಯಿ ಗಳಿಸುವ ಮೂಲಕ ಅಕ್ಷರಶಃ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿತು. ಈ ಸಿನಿಮಾ ಭರ್ಜರಿ ಆರಂಭವನ್ನೇ ಪಡೆದುಕೊಂಡಿತ್ತು. ಆದರೆ ಈಗ ಏನಾಗ್ತಿದೆ?

'ಜನ ನಾಯಗನ್' ಬಾಕ್ಸ್ ಆಫೀಸ್ ಗಳಿಕೆ: ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ದಳಪತಿ ವಿಜಯ್ ಸಿನಿಮಾ!

ದಕ್ಷಿಣ ಭಾರತದ ಚಿತ್ರರಂಗದ ಅಧಿಪತಿ, ಕೋಟ್ಯಂತರ ಅಭಿಮಾನಿಗಳ 'ದಳಪತಿ' ವಿಜಯ್ (Thalapathy Vijay) ಅವರ ಬೆಳ್ಳಿಪರದೆಯ ಪಯಣ ಅಂತ್ಯದ ಹಂತಕ್ಕೆ ಬಂದಿದೆ. ಅವರು ರಾಜಕೀಯಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ, ಅವರ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಮೇಲೆ ಇಡೀ ದೇಶದ ಕಣ್ಣಿತ್ತು. ಹಲವು ಕಾನೂನು ಹೋರಾಟಗಳು, ಬಿಡುಗಡೆಯ ಅಡೆತಡೆಗಳ ನಂತರ ಜುಲೈ 23ರಂದು ಅದ್ದೂರಿಯಾಗಿ ತೆರೆಕಂಡ ಈ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ಈ ಎರಡು ದಿನಗಳಲ್ಲಿ ವಿಜಯ್ ಸೃಷ್ಟಿಸಿದ ಮ್ಯಾಜಿಕ್ ಎಂತದ್ದು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಮೊದಲ ದಿನದ ಭರ್ಜರಿ ಓಪನಿಂಗ್:

ಯಾವುದೇ ಸಿನಿಮಾ ಆಗಲಿ, ವಿಜಯ್ ಚಿತ್ರ ಎಂದರೆ ಅಲ್ಲಿ ಹಬ್ಬದ ವಾತಾವರಣ ಗ್ಯಾರಂಟಿ. 'ಜನ ನಾಯಗನ್' ಚಿತ್ರ ಮೊದಲ ದಿನ ಭಾರತದಾದ್ಯಂತ ಬರೊಬ್ಬರಿ 42.7 ಕೋಟಿ ರೂಪಾಯಿ ಗಳಿಸುವ ಮೂಲಕ ಅಕ್ಷರಶಃ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿತು. ಅಭಿಮಾನಿಗಳ ಜೈಕಾರ, ಥಿಯೇಟರ್ ಮುಂದೆ ಹಾಲಿನ ಅಭಿಷೇಕಗಳ ನಡುವೆ ಸಿನಿಮಾ ಭರ್ಜರಿ ಆರಂಭವನ್ನೇ ಪಡೆದುಕೊಂಡಿತ್ತು.

ಎರಡನೇ ದಿನ ಕಲೆಕ್ಷನ್‌ನಲ್ಲಿ ತುಸು ಇಳಿಕೆ?

ಆದರೆ, ಮೊದಲ ದಿನದ ಅಬ್ಬರ ಎರಡನೇ ದಿನ ಅಂದರೆ ಶುಕ್ರವಾರದಂದು ಸ್ವಲ್ಪ ತಣ್ಣಗಾದಂತೆ ಕಾಣುತ್ತಿದೆ. ಟ್ರೇಡ್ ಅನಲಿಸ್ಟ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಎರಡನೇ ದಿನ ಚಿತ್ರವು ಸುಮಾರು 21.15 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಂದರೆ ಮೊದಲ ದಿನಕ್ಕೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಸುಮಾರು 50.5% ರಷ್ಟು ಕುಸಿತ ಕಂಡುಬಂದಿದೆ. ಇದಕ್ಕೆ ಕಾರಣ ಚಿತ್ರಕ್ಕೆ ಸಿಗುತ್ತಿರುವ ಮಿಶ್ರ ಪ್ರತಿಕ್ರಿಯೆ ಎನ್ನಲಾಗುತ್ತಿದೆ. ಆದರೂ, ಎರಡೇ ದಿನಕ್ಕೆ ಭಾರತದಲ್ಲಿ ಒಟ್ಟು 63.85 ಕೋಟಿ ರೂಪಾಯಿ ಲೂಟಿ ಮಾಡಿರುವ ದಳಪತಿ, ತಮ್ಮ ಪವರ್ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿಶ್ವದಾದ್ಯಂತ 100 ಕೋಟಿಯ ಗಡಿ ದಾಟಿದ 'ನಾಯಕ':

ಭಾರತದಲ್ಲಿ ಕಲೆಕ್ಷನ್ ತುಸು ಕುಸಿತ ಕಂಡಿರಬಹುದು, ಆದರೆ ವಿಶ್ವದಾದ್ಯಂತ 'ಜನ ನಾಯಗನ್' ಆರ್ಭಟ ಜೋರಾಗಿದೆ. ಕೇವಲ ಎರಡೇ ದಿನಗಳಲ್ಲಿ ಈ ಚಿತ್ರ ಜಾಗತಿಕವಾಗಿ 112.50 ಕೋಟಿ ರೂಪಾಯಿ ಗಳಿಸಿ 'ನೂರು ಕೋಟಿ ಕ್ಲಬ್'ಗೆ ರಾಜಗಾಂಭೀರ್ಯದಿಂದ ಪ್ರವೇಶ ಪಡೆದಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ವಿಜಯ್ ಅವರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.

ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಪ್ರವಾಹ ಹೇಗಿದೆ?

ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಶೇ. 44.33 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ವಿಶೇಷವೇನೆಂದರೆ ಬೆಳಗಿನ ಪ್ರದರ್ಶನಗಳಿಗಿಂತ ರಾತ್ರಿ ಪ್ರದರ್ಶನಗಳಿಗೆ ಜನ ಮುಗಿಬೀಳುತ್ತಿದ್ದಾರೆ. ರಾತ್ರಿ ಶೋಗಳಲ್ಲಿ ಶೇ. 60.31 ರಷ್ಟು ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ತಾರಾಬಳಗ:

ಹೆಚ್. ವಿನೋತ್ ನಿರ್ದೇಶನದ ಈ ಆಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ವಿಜಯ್ ಅವರಿಗೆ ಸಾಥ್ ನೀಡಲು ದೊಡ್ಡ ತಾರಾಬಳಗವೇ ಇದೆ. ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗಡೆ, ಮುಖ್ಯ ಪಾತ್ರಗಳಲ್ಲಿ ಮಮಿತಾ ಬೈಜು, ಬಾಲಿವುಡ್ ವಿಲನ್ ಬಾಬಿ ಡಿಯೋಲ್, ಪ್ರಕಾಶ್ ರಾಜ್ ಚಿತ್ರದಲ್ಲಿ ಮಿಂಚಿದ್ದಾರೆ. ವೀಕೆಂಡ್‌ನಲ್ಲಿ ಈ ಚಿತ್ರ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆಯಿದ್ದು, ಬಾಕ್ಸ್ ಆಫೀಸ್‌ನಲ್ಲಿ 'ಜನ ನಾಯಗನ್' ಯಾವ ಹೊಸ ದಾಖಲೆ ಬರೆಯಲಿದ್ದಾನೆ ಎಂದು ಕಾದು ನೋಡಬೇಕಿದೆ.

ಜನನಾಯಗನ್ ಸಿನಿಮಾ ಕಲೆಕ್ಷನ್‌ ಮಾಹಿತಿ ಅಧಿಕೃತವಾಗಿ ಚಿತ್ರತಂಡದಿಂದ ಇನ್ನಷ್ಟೇ ಬರಬೇಕಿದೆ. ಇಲ್ಲಿ ಕೊಟ್ಟಿರುವ ಅಂಕಿಅಂಶಗಳು ವಿಶ್ವಾಸಾರ್ಹ ಸುದ್ದಿಮೂಲದಿಂದ ಬಂದಿದ್ದು ಎಂಬುದು ಗಮನದಲ್ಲಿ ಇರಲಿ. ಮುಮದಿನ ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್ ಏರುತ್ತಾ ಅಥವಾ ಇಳಿಯುತ್ತಾ ಎಂಬುದನ್ನು ಭವಿಷ್ಯದ ದಿನಗಳಲ್ಲಿ ಕಾದು ನೋಡಬೇಕಿದೆ.