ಬೆಂಗಳೂರಿನ ಯುವ ಟೆಕ್ಕಿಯೊಬ್ಬರು ₹80 ಲಕ್ಷಕ್ಕೆ 1BHK ಫ್ಲ್ಯಾಟ್ ಖರೀದಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ಭಾವನಾತ್ಮಕ ನಿರ್ಧಾರ ಎಂದಿರುವ ಅವರು, ಭವಿಷ್ಯದ ಸಂಗಾತಿಯೊಂದಿಗೆ ಸೇರಿ ಕುಟುಂಬದ ಮನೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರವು 1BHK ಮತ್ತು 2BHK ನಡುವಿನ ಆಯ್ಕೆ, ಮರುಮಾರಾಟ ಮೌಲ್ಯ ಮತ್ತು ಭವಿಷ್ಯದ ಅಗತ್ಯತೆಗಳ ಕುರಿತು ವಾದ-ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು (ಜು.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಮನೆ (Own House) ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಆಸ್ತಿ ಮೌಲ್ಯದ (Property Prices) ನಡುವೆ, ಬಜೆಟ್‌ಗೆ ತಕ್ಕಂತೆ ಮನೆ ಆಯ್ಕೆ ಮಾಡಿಕೊಳ್ಳುವುದು ಬಹುದೊಡ್ಡ ಸವಾಲು. ಇತ್ತೀಚೆಗೆ ಬೆಂಗಳೂರಿನ ಯುವ ಟೆಕ್ಕಿಯೊಬ್ಬರು (Professional) ₹80 ಲಕ್ಷ ನೀಡಿ 1BHK ಅಪಾರ್ಟ್‌ಮೆಂಟ್ (1BHK Flat) ಖರೀದಿಸಿದ ಕುರಿತು ರೆಡ್ಡಿಟ್‌ನಲ್ಲಿ (Reddit) ಹಂಚಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭಾವನಾತ್ಮಕ ನಿರ್ಧಾರ ಎಂದ ಯುವಕ

ಬರೋಬ್ಬರಿ ಮೂರು ತಿಂಗಳ ಸುದೀರ್ಘ ಮನೆ ಹುಡುಕಾಟದ ನಂತರ, ಆ ಯುವಕ ತಮಗೆ ಸೂಕ್ತವೆನಿಸಿದ 1BHK ಫ್ಲ್ಯಾಟ್ ಖರೀದಿಸಿದ್ದಾರೆ. 'ನಾನು ಹೂಡಿಕೆಯ ರಿಟರ್ನ್ಸ್ (Returns) ಲೆಕ್ಕಹಾಕಿ ಈ ಮನೆ ತಗೊಂಡಿಲ್ಲ. ಬಾಡಿಗೆ ಮನೆಯಲ್ಲಿ ಬೆಳೆದ ನನಗೆ ಸ್ವಂತ ಮನೆ ಹೊಂದುವುದು ಭಾವನಾತ್ಮಕ ಕನಸಾಗಿತ್ತು (Emotional Decision). ಹಲವರು ಬಜೆಟ್ ಹೆಚ್ಚಿಸಿಕೊಂಡು 2BHK ಅಥವಾ 3BHK ತಗೋ ಎಂದು ಸಲಹೆ ನೀಡಿದರು. ಆದರೆ ನಾನು ಬೇಕೆಂದೇ 1BHK ಆಯ್ಕೆ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಕಾರಣವೂ ನೀಡಿದ್ದು, 'ನಾನಿನ್ನೂ ಸಿಂಗಲ್ (Single). ಭವಿಷ್ಯದ ಮದುವೆ ಮತ್ತು ಕುಟುಂಬದ ಮನೆ (Family Home) ಹೇಗಿರಬೇಕು ಎಂಬುದನ್ನು ನನ್ನ ಸಂಗಾತಿಯೊಂದಿಗೆ ಸೇರಿ ನಿರ್ಧರಿಸಲು ಬಯಸುತ್ತೇನೆ. ಇಂದಿನ ಬದಲಾದ ಕಾಲಘಟ್ಟದಲ್ಲಿ ಮದುವೆ ಎಂಬುದು ಹಳೆಯ ಕಾಲದಂತಿಲ್ಲ. ಅದಕ್ಕಾಗಿ ಈಗಲೇ ದೊಡ್ಡ ಮನೆಗೆ ಹಣ ಸುರಿಯುವ ಬದಲು ಪ್ರಸ್ತುತಕ್ಕೆ ತಕ್ಕಂತೆ ಬದುಕುವುದು ಸೂಕ್ತ' ಎಂದು ಅಭಿಪ್ರಾಯಪಟ್ಟಿದ್ದಾರೆ.

ರೆಡ್ಡಿಟ್‌ನಲ್ಲಿ ಶುರುವಾಯ್ತು ಭಾರಿ ಚರ್ಚೆ (Social Media Debate) 

ಈ ಪೋಸ್ಟ್ ಪ್ರಕಟವಾಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

1BHK ವಿರುದ್ಧದ ವಾದ: 40 ವರ್ಷ ದಾಟಿದ ನಂತರ 1BHK ಖರೀದಿಸಿದ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, 'ಸಿಂಗಲ್ ಇದ್ದಾಗ 1BHK ಸರಿ ಎನಿಸಬಹುದು. ಆದರೆ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬಂದಾಗ ಜಾಗದ ಅಭಾವ ಎದುರಾಗುತ್ತದೆ. ಕನಿಷ್ಠ 2BHK (2BHK Apartment) ಖರೀದಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ' ಎಂದಿದ್ದಾರೆ.

ಸ್ಥಳವೇ ಮುಖ್ಯ ಎಂದ ಕಮೆಂಟ್: ಮತ್ತೊಬ್ಬರು 1BHK ಬೆಂಬಲಿಸಿ, 'ನನಗೆ ಮನೆಯ ಗಾತ್ರಕ್ಕಿಂತ ಲೊಕೇಶನ್ (Location) ಮುಖ್ಯವಾಗಿತ್ತು. ₹1 ಕೋಟಿಗಿಂತ ಕಡಿಮೆ ಬಜೆಟ್‌ನಲ್ಲಿ ವೈಟ್‌ಫೀಲ್ಡ್‌ನಂತಹ (Whitefield) ಪ್ರಮುಖ ಪ್ರದೇಶದಲ್ಲಿ ಇರಲು 1BHK ಸಹಕಾರಿ' ಎಂದು ಬೆಂಬಲಿಸಿದ್ದಾರೆ.

ಮರುಮಾರಾಟದ ಮೌಲ್ಯ (Resale Value): ಇನ್ನು ಕೆಲವರು 2BHK ಮನೆಗೆ ಮರುಮಾರಾಟ ಮೌಲ್ಯ (Resale Value) ಮತ್ತು ಬಾಡಿಗೆ ಬೇಡಿಕೆ (Rental Demand) ಹೆಚ್ಚು. ಆದ್ದರಿಂದ ಬಜೆಟ್ ಸ್ವಲ್ಪ ಹೆಚ್ಚು ಮಾಡಿಕೊಂಡಾದರೂ 2BHK ಖರೀದಿಸುವುದು ಜಾಣತನ ಎಂದಿದ್ದಾರೆ.

ತಜ್ಞರ ಅಭಿಪ್ರಾಯವೇನು? (Expert Insights)

ರಿಯಲ್ ಎಸ್ಟೇಟ್ ತಜ್ಞರ (Real Estate Experts) ಪ್ರಕಾರ, ವಯಸ್ಸು ಮತ್ತು ಜೀವನಶೈಲಿಗೆ ಅನುಗುಣವಾಗಿ ಆಸ್ತಿಯ ಅಗತ್ಯತೆಗಳು ಬದಲಾಗುತ್ತವೆ.

ರಿಯಲ್ ಎಸ್ಟೇಟ್ ಸಲಹೆಗಾರ ಕಲ್ಪೇಶ್ ಪಾಟೀಲ್ ಅವರ ಪ್ರಕಾರ: 'ಇಂದಿನ ದಿನಗಳಲ್ಲಿ ಸಿಂಗಲ್ ಇರುವವರಿಗೆ 1BHK ಸೂಕ್ತ ಎನಿಸಿದರೂ, ಮದುವೆ, ಮಕ್ಕಳು, ವೃದ್ಧ ಪೋಷಕರು ಅಥವಾ 'ವರ್ಕ್ ಫ್ರಮ್ ಹೋಮ್' (Work From Home) ಅಗತ್ಯತೆಗಳು ಎದುರಾದಾಗ ಜಾಗದ ಕೊರತೆ ಕಾಡುತ್ತದೆ. ಆರ್ಥಿಕ ಸಾಮರ್ಥ್ಯವಿದ್ದರೆ ಮುಂಬರುವ ಕೆಲವು ವರ್ಷಗಳ ಅಗತ್ಯವನ್ನು ಕಲ್ಪಿಸಿಕೊಂಡು ಯೋಜನೆ ಮಾಡುವುದು ಉತ್ತಮ. ಆದರೆ, ಸಾಲ ಮಾಡಿ ಆರ್ಥಿಕ ಒತ್ತಡಕ್ಕೆ (Financial Stress) ಒಳಗಾಗಬಾರದು' ಎಂದು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ, ಗಗನಕ್ಕೇರುತ್ತಿರುವ ಬೆಂಗಳೂರಿನ ಆಸ್ತಿ ದರಗಳ ನಡುವೆ, ತಕ್ಷಣದ ಅಗತ್ಯಕ್ಕೆ ತಕ್ಕಂತೆ 1BHK ಖರೀದಿಸಬೇಕೋ ಅಥವಾ ಭವಿಷ್ಯದ ಕುಟುಂಬದ ಅಗತ್ಯಕ್ಕೆ ತಕ್ಕಂತೆ 2BHK ಖರೀದಿಸಬೇಕೋ ಎಂಬ ಗೊಂದಲ ಇಂದಿನ ಯುವ ಪೀಳಿಗೆಯನ್ನು ಕಾಡುತ್ತಿರುವುದಂತೂ ಸತ್ಯ.