ಕುರುಕ್ಷೇತ್ರದಲ್ಲಿ ಬ್ಲಿಂಕಿಟ್ ಡೆಲಿವರಿ ಯುವಕನೊಬ್ಬ ₹15ರ ವಸ್ತುವಿಗೆ ₹500 ಟಿಪ್ಸ್ ಪಡೆದಿದ್ದಾನೆ. ಈ ಅನಿರೀಕ್ಷಿತ ಉದಾರತೆಗೆ ಕೃತಜ್ಞತೆ ಸಲ್ಲಿಸಿ ಆತ ಹಂಚಿಕೊಂಡ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಹೃದಯ ಗೆದ್ದಿದೆ.

ಕೆಲವೊಮ್ಮೆ ಅದೃಷ್ಟಗಳು ಯಾವ ರೂಪದಲ್ಲಿ ಬರುತ್ತವೆ ಎಂದು ಹೇಳಲಿಕ್ಕೆ ಆಗುವುದೇ ಇಲ್ಲ. ನಿನ್ನ ಕೆಲಸ ನೀನು ಮಾಡು, ಫಲ ಅಪೇಕ್ಷಿಸಬೇಡ. ಉಳಿದವುಗಳನ್ನು ಅವನಿಗೆ ಬಿಡು ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿರುವುದನ್ನು ಭಗವದ್ಗೀತೆಯಲ್ಲಿ ಕಾಣಬಹುದು. ಅದು ಎಷ್ಟೋ ಮಂದಿಯ ಜೀವನದಲ್ಲಿ ನಿಜವಾಗುತ್ತದೆ. ಅಂಥದ್ದೇ ಒಂದು ಭಾವನಾತ್ಮಕ ವಿಡಿಯೋ ಒಂದನ್ನು ಬ್ಲಿಂಕ್‌ಇಟ್ ವಿತರಣಾ ಪಾಲುದಾರ ಯುವಕ ಹಂಚಿಕೊಂಡಿದ್ದು, ಈ ವಿಡಿಯೋ ಇದಾಗಲೇ ಕೋಟಿಗೂ ಅಧಿಕ ಮಂದಿ ನೋಡಿದ್ದು ಮಿಲಿಯನ್​ಗಟ್ಟಲೆ ಜನ ಕಮೆಂಟ್​ ಮಾಡಿದ್ದಾರೆ. ತನಗಾಗಿರುವ ಸಂತೋಷವನ್ನು ಈ ಯುವಕ ಹೇಳಿದ ಪರಿ, ಅನಿರೀಕ್ಷಿತವಾಗಿ ಸಿಕ್ಕ ಆ ಫಲ ಹಲವರ ಕಣ್ಣುಗಳನ್ನು ತೇವವಾಗಿಸಿವೆ.

500 ರೂಪಾಯಿ ಟಿಪ್ಸ್​

ಇದು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಘಟನೆ. ಅಷ್ಟಕ್ಕೂ ಈ ಯುವಕನಿಗೇನೂ ಕೋಟ್ಯಂತರ ರೂಪಾಯಿಗಳ ಲಾಟರಿ ಸಿಕ್ಕಿಲ್ಲ. ಬದಲಿಗೆ ಸಿಕ್ಕಿದ್ದು 500 ರೂಪಾಯಿಗಳ ಟಿಪ್ಸ್​. ಹಾಗೆಂದು ಈ 500 ರೂಪಾಯಿ ಅದೆಷ್ಟೋ ಜನರ ಪಾಲಿಗೆ ಕೋಟಿ ರೂಪಾಯಿಗೆ ಸಮನಾಗಿಯೂ ಇರುತ್ತದೆ ಎನ್ನುವುದು ಸುಳ್ಳಲ್ಲ. ಅದನ್ನೇ ಈ ಬ್ಲಿಂಕಿಟ್​ ಬಾಯ್​ ಶೇರ್​ ಮಾಡಿಕೊಂಡಿದ್ದಾನೆ. 15 ರೂಪಾಯಿಗಳ ವಸ್ತುವೊಂದನ್ನು ಆರ್ಡರ್​ ಮಾಡಿದ್ದ ಮಹಿಳೆ ಈ ಯುವಕನಿಗೆ 500 ರೂಪಾಯಿಗಳ ಟಿಪ್ಸ್​ ಕೊಟ್ಟಿದ್ದಾರೆ. ಮಹಿಳೆಗೆ ಧನ್ಯವಾದ ಹೇಳುವ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಈ ಯುವಕ. ಈ ವೀಡಿಯೊ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಾನು ಅಷ್ಟು ಸಂಪಾದಿಸುವುದಿಲ್ಲ

ವೀಡಿಯೊದಲ್ಲಿ, ಡೆಲಿವರಿ ಬಾಯ್​, ಗ್ರಾಹಕಿಗೆ ಪದೇ ಪದೇ ಧನ್ಯವಾದ ಹೇಳುತ್ತಾ, ಅವರನ್ನು "ದೀದಿ" ಎಂದು ಕರೆಯುವುದನ್ನು ನೋಡಬಹುದು. ತನ್ನ ಫೋನ್ ತೋರಿಸುತ್ತಾ, ₹500 ಟಿಪ್ ಸಾಮಾನ್ಯ ಡೆಲಿವರಿಯಿಂದ ಗಳಿಸುವುದಕ್ಕಿಂತ ಹೆಚ್ಚು ಎಂದು ಹೇಳಿದ್ದಾನೆ. ಆ ನಿರ್ದಿಷ್ಟ ಆರ್ಡರ್‌ನಿಂದ ತಾನು ಕೇವಲ 97 ರೂಪಾಯಿಗಳನ್ನು ಗಳಿಸಿದ್ದೆ. ಆದರೆ 500 ರೂಪಾಯಿ ಟಿಪ್ಸ್​ ಸಿಕ್ಕಿದೆ ಎಂದಿದ್ದಾನೆ.

ಈ ವಿಡಿಯೋಗೆ ಸಿಕ್ಕಾಪಟ್ಟೆ ಮಂದಿ ಕಮೆಂಟ್ಸ್ ಮಾಡಿದ್ದು, ಬಡತನದಿಂದ ಬಂದವರಿಗೆ ಅದರ ಬೆಲೆ ಗೊತ್ತಿರುತ್ತದೆ. ಆಕೆಯೂ ಅದೇ ರೀತಿ ಬಹುಶಃ ಬಂದಿರಬೇಕು. ಅದಕ್ಕಾಗಿ ಕಷ್ಟಪಟ್ಟು ದುಡಿಯುವ ಯುವಕನನ್ನು ನೋಡಿ ಕನಿಕರ ಬಂದಿದೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಆ ಮಹಿಳೆಯನ್ನೂ ತೋರಿಸಬೇಕಿತ್ತು. ನಿಜಕ್ಕೂ ಆಕೆಯ ಹೃದಯ ವಿಶಾಲವಾಗಿದೆ. ಆಕೆಯನ್ನು ದೇವರು ನೂರ್ಕಾಲ ಸುಖವಾಗಿ ಇಡಲಿ ಎಂದು ಎಲ್ಲರೂ ಆಶೀರ್ವದಿಸುತ್ತಿದ್ದಾರೆ.