ವಿದೇಶದಲ್ಲಿ ನೆಲೆಸುವ ಕನಸಿನ ವಾಸ್ತವವನ್ನು ಬಿಚ್ಚಿಡುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆದ ಭಾರತೀಯ ದಿನಸಿ ಅಂಗಡಿಯಲ್ಲಿ, ಭಾರತೀಯ ಉತ್ಪನ್ನಗಳಿಗಾಗಿ ಜನರು ಮುಗಿಬಿದ್ದು ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದೆ. ಇದು ವಿದೇಶದಲ್ಲಿ ಭಾರತೀಯ ವಸ್ತುಗಳಿಗೆ ಇರುವ ಅಗಾಧ ಬೇಡಿಕೆಯನ್ನು ತೋರಿಸುತ್ತದೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತಿದೆ. ಇದು ವಿದೇಶಗಳ ಕನಸು ಕಾಣುವ ಹಲವು ಯುವ ಸಮುದಾಯಕ್ಕೂ, ಅದರಲ್ಲಿಯೂ ವಿಶೇಷವಾಗಿ ತಮ್ಮ ಮಕ್ಕಳು ವಿದೇಶಕ್ಕೆ ಹಾರಲಿ ಎಂದು ಜೀವಬಿಟ್ಟು ದುಡಿಯುವ ಅಪ್ಪ-ಅಮ್ಮಂದಿರಿಗೆ ಅನ್ವಯ ಆಗುತ್ತದೆ. ಡಾಲರ್ಗಳಲ್ಲಿ ದುಡಿಯಬಹುದು ಎಂಬ ಆಸೆ ಹೊತ್ತು ತಮ್ಮವರನ್ನೆಲ್ಲಾ ತವರಲ್ಲಿ ಮರೆತು ಹೋಗುವ ಜನರನ್ನು ಒಮ್ಮೆ ಕೇಳಿನೋಡಿ... ಕೈತುಂಬಾ ಸಂಪಾದಿಸಬಹುದು ಎಂದು ದುಬೈಗೋ ಇನ್ನೆಲ್ಲೋ ಹಾರುವ ಜನರು ಅಲ್ಲಿ ಹೇಗಿದ್ದಾರೆ ಎಂದು ವಿಚಾರಿಸಿ ನೋಡಿ... ನಮ್ಮ ಮಗ ಅಮೆರಿಕದಲ್ಲಿ ಕೆಲ್ಸ ಮಾಡ್ತಾನೆ, ನಮ್ಮ ಮಗಳು ಇನ್ನಾವುದೋ ದೇಶದಲ್ಲಿ ವಾಸಿಸ್ತಾಳೆ ಎಂದು ಬೇರೆಯವರ ಮುಂದೆ ಹೆಮ್ಮೆಯಿಂದ ಕೊಂಡಾಡುವ ವೃದ್ಧ ಅಪ್ಪ-ಅಮ್ಮನನ್ನು ಪಕ್ಕಕ್ಕೆ ಕರೆಸಿ ಮಾತನಾಡಿಸಿ ನೋಡಿ... ಅಪ್ಪ-ಅಮ್ಮ ಸತ್ತಾಗ ಪಿಂಡದಾನ ಮಾಡಲೂ ಬರದ ಪರಿಸ್ಥಿತಿಯಲ್ಲಿ ಅದೆಷ್ಟು ಕುಟುಂಬಗಳಿವೆ ಎನ್ನೋದನ್ನೊಮ್ಮೆ ಕಣ್ಣಾಡಿಸಿ ನೋಡಿ...
ಇದು ಇಂದು ನಿನ್ನೆಯ ಕಥೆಯಲ್ಲ. ವಿದೇಶ ಅದರಲ್ಲಿಯೂ ಅಮೆರಿಕಕ್ಕೆ ಮಕ್ಕಳನ್ನು ಮುಂದೊಮ್ಮೆ ಕಳುಹಿಸಬೇಕು ಎಂದು ಮಗು ಗರ್ಭದಲ್ಲಿ ಇದ್ದಾಗಲೇ ಹಲವು ಅಪ್ಪ-ಅಮ್ಮ ಯೋಚನೆ ಮಾಡುವುದು ಉಂಟು. ಫಾರಿನ್ ರಿಟರ್ನ್ ಎಂದು ಹೇಳಿಕೊಳ್ಳುವ ಆಸೆ ಅವರದ್ದು. ಆದರೆ ಈಗಿನ ಸ್ಥಿತಿ ಬಿಡಿ. ಆಗುತ್ತಿರುವುದೇ ಬೇರೆ. ಫಾರಿನ್ ಎಂದರೆ ಸಾಕಪ್ಪಾ ಸಾಕು ಎಂದು ವಾಪಸ್ ತಾಯ್ನಾಡಿಗೆ ವಾಪಸಾಗುತ್ತಿರುವವರು ಹಲವರು. ಆದರೆ ಭಾರತ ಎಂದರೆ ಏನು ಎನ್ನುವುದಕ್ಕೆ ಈ ವಿಡಿಯೋ ಒಂದು ಸಾಕ್ಷಿಯಾಗಿದೆ.
ದಿನಸಿ ಅಂಗಡಿಯಲ್ಲಿ ಕಾಲ್ತುಳಿತ
ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆಯಲಾದ ಭಾರತೀಯ ದಿನಸಿ ಅಂಗಡಿಯೊಂದು ಉದ್ಘಾಟನೆ ಆಗುತ್ತಿದ್ದಂತೆಯೇ, ಭಾರತದ ತರಕಾರಿ, ದಿನಸಿ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಅಲ್ಲಿ ಕಾಲ್ತುಳಿತವೂ ಆಗಿದೆ. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ವಿಡಿಯೋದಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಕಿಕ್ಕಿರಿದ ಜನ ಸಮೂಹವನ್ನು ನೋಡಬಹುದು.
ಭಾರತೀಯ ಸೂಪರ್‌ಮಾರ್ಕೆಟ್‌ಗಳಿಗೆ ಹೆಚ್ಚಾದ ಬೇಡಿಕೆ
ಇದು ಅಮೆರಿಕದಲ್ಲಿ ಭಾರತೀಯ ಸೂಪರ್‌ಮಾರ್ಕೆಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತಿದೆ. ಭಾರತೀಯ ವಲಸೆಗಾರರು ಅಮೆರಿಕದಲ್ಲಿ ಹೆಚ್ಚುತ್ತಲೇ ಇರುವ ಕಾರಣ, ಭಾರತದಲ್ಲಿ ಸಿಗುವ ತಾಜಾ ತಾಜಾ ತರಕಾರಿಗಳಿಂದ ದೂರವಾಗಿರುವ ಜನರು, ಕಾಲ್ತುಳಿತವನ್ನೂ ಲೆಕ್ಕಿಸದೇ ಈ ಅಂಗಡಿಯ ಮುಂದೆ ಮುಗಿಬಿದ್ದಿದ್ದಾರೆ. ಭಾರತದ ಪ್ರಾದೇಶಿಕ ದಿನಸಿಗಳು, ಮಸಾಲೆಗಳು, ತಿಂಡಿಗಳು ಮತ್ತು ಪರಿಚಿತ ಭಾರತೀಯ ಬ್ರ್ಯಾಂಡ್‌ಗಳನ್ನು ಒಂದೇ ಸೂರಿನಡಿ ನೀಡುವ ಅಂಗಡಿಗಳನ್ನು ಹುಡುಕುತ್ತಿದ್ದಾರೆ.
ಈ ಭವ್ಯ ಉದ್ಘಾಟನೆಯು ಸಂಚಲನ ಮೂಡಿಸುತ್ತಲೇ ಇದೆ, ವಿಡಿಯೋಗಳು ವೈರಲ್ ಆಗುತ್ತಲೇ ಕಾಲ್ತುಳಿತ ನೋಡಿ, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನಮ್ಮ ಭಾರತದ ಮಹಿಮೆ ಎಂದು ಭಾರತೀಯರು ಹೇಳುತ್ತಿದ್ದರೆ, ಭಾರತದವರಿಗೆ ಮ್ಯಾನರ್ಸೇ ಇಲ್ಲ ಎನ್ನುತ್ತಿದ್ದಾರೆ ಅಮೆರಿಕನ್ನರು!


