ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್ ಡಾನ್ಸ್ ವೀಡಿಯೋ ಈಗ ವೈರಲ್ ಆಗಿದೆ
ಸಾಮಾಜಿಕ ಜಾಲತಾಣದಲ್ಲಿ ಜಾಲಾಡುವರು ಇತ್ತೀಚೆಗೆ ಈ ಬಾಲಕನ ವೀಡಿಯೋವನ್ನು ನೋಡಿಯೇ ನೋಡಿರುತ್ತಿರಿ.ರಯ್ಯನ್ ಅರ್ಕನ್ ಧಿಕಾ ಹೆಸರಿನ ಇಂಡೋನೇಷ್ಯಾದ ಈ ಪುಟ್ಟ ಬಾಲಕನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹೀಗೆ ವೈರಲ್ ಆಗುತ್ತಿರುವುದಕ್ಕೆ ಕಾರಣ ಆತನ ವಿಶಿಷ್ಟವಾದ ಡಾನ್ಸ್ ಹಾಗೂ ಬ್ಯಾಲೆನ್ಸ್.
ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವಾಗ ಹೇಗೆ ವೈರಲ್ ಆಗುತ್ತಾರೆ ಎಂದು ಹೇಳಲಾಗುವುದಿಲ್ಲ, ಹಾಗೆಯೇ ಈ ಬಾಲಕ ತನ್ನ ವಿಶಿಷ್ಠ ಪ್ರತಿಭೆಯಿಂದಾಗಿ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾನೆ. ಇಂಡೋನೇಷ್ಯಾದ ಹುಡುಗ ರಯ್ಯನ್ ಅರ್ಕನ್ ಧಿಕಾ ಬೋಟ್ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ನಿಂತು ಮಾಡಿದ ಬ್ಯಾಲೆನ್ಸ್ಡ್ ಡಾನ್ಸ್ ವೀಡಿಯೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಬೋಟ್ ಸ್ಪರ್ಧೆ ಸ್ಥಳೀಯ ಸಂಪ್ರದಾಯವಾಗಿದ್ದು, ಇದರಲ್ಲಿ ಅಂತಿಮವಾಗಿ ಗಮನಸೆಳೆದಿದ್ದು ರಯ್ಯನ್ ಡಾನ್ಸ್, 11 ವರ್ಷದ ರಯ್ಯನ್‌ನನ್ನು ಅಲ್ಲಿನ ಜನ ಪ್ರೀತಿಯಿಂದ ದಿ ರೀಪರ್ ಎಂದು ಕರೆಯುತ್ತಾರೆ. 5ನೇ ಕ್ಲಾಸ್ ವಿದ್ಯಾರ್ಥಿಯಾಗಿರುವ ಇಂಡೋನೇಷ್ಯಾದ ಗ್ರಾಮವೊಂದರ ರಾಯನ್ ಈ ಬೋಟ್ ರೇಸ್ ನಂತರ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು, ವಿಶ್ವದೆಲ್ಲೆಡೆಯ ಅನೇಕ ಸೆಲೆಬ್ರಿಟಿಗಳು ಆತನ ಈ ಡಾನ್ಸ್ ಟ್ರೈ ಮಾಡ್ತಿದ್ದಾರೆ.
ಕ್ವಾಂಟನ್ ಸಿಂಗಿಂಗಿ ರೀಜೆನ್ಸಿಯಿಂದ ಬಂದ ರಯ್ಯನ್, ಈ ವರ್ಷ ಮೊದಲ ಬಾರಿಗೆ ಇಂಡೋನೇಷ್ಯಾದ ಸಾಂಪ್ರದಾಯಿಕ ಪಕು ಜಾಲೂರ್(ಬೋಟ್ ಸ್ಪರ್ಧೆ) ಉತ್ಸವದಲ್ಲಿ ಭಾಗವಹಿಸಿದರು. ಆದರೆ ಈ ಪ್ರದರ್ಶನದಲ್ಲಿ ಗಮನ ಸೆಳೆದದ್ದು ದೋಣಿ ಸ್ಪರ್ಧೆಯಲ್ಲ, ಬದಲಾಗಿ ವೇಗವಾಗಿ ಚಲಿಸುವ ದೋಣಿಯ ಮುಂಭಾಗದಲ್ಲಿ ಅವರ ಆಯತಪ್ಪದ ನೃತ್ಯ.
ವಯಸ್ಕರು ಭಾಗವಹಿಸುವ ಈ ದೋಣಿ ಸ್ಪರ್ಧೆಯಲ್ಲಿ, ಕಿರಿದಾದ ದೋಣಿಗಳನ್ನು ಓಡಿಸುವ ಪಕು ಜಾಲೂರ್ ಓಟದಲ್ಲಿ, ದೋಣಿಯ ಮುಂಭಾಗದಲ್ಲಿ 'ತೊಗಾಕ್ ಲುವಾನ್' ಎಂದು ಕರೆಯಲ್ಪಡುವ ನರ್ತಕಿಯೊಬ್ಬರನ್ನು ನಿಲ್ಲಿಸುತ್ತಾರೆ ತಂಡವನ್ನು ಪ್ರೇರೇಪಿಸುವುದು ಅವರ ಕೆಲಸ. ಅದೇ ರೀತಿ ರಯ್ಯನ್ ಅವರು ಒಂದು ದೋಣಿಯಲ್ಲಿ ನರ್ತಕರಾಗಿ ಭಾಗಿಯಾಗಿದ್ದರು.
ಈಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವ ಹುರುಪಿನಲ್ಲಿ ದೋಣಿಯಲ್ಲಿರುವವರು ವೇಗವಾಗಿ ದೋಣಿ ಓಡಿಸುತ್ತಾರೆ. ಈ ವೇಳೆ ದೋಣಿಯ ಮುಂಭಾಗದ ತುದಿಯಲ್ಲಿ ಬ್ಯಾಲೆನ್ಸ್ ಮಾಡುವುದೇ ಒಂದು ಸಾಹಸ ಆದರೆ ರಯ್ಯನ್ ಅವರು ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ವೇಗದ ನಡುವೆಯೂ ಸಮತೋಲನ ಸಾಧಿಸುತ್ತಾ ನೃತ್ಯ ಮಾಡುತ್ತಿದ್ದರು.
ರಯ್ಯನ್ ಅವರ ವಿಶಿಷ್ಟವೆನಿಸುವ ನೃತ್ಯ ಈಗ ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. 'ಔರಾ ಫಾರ್ಮಿಂಗ್ ಕಿಡ್' ಮತ್ತು 'ಬೋಟ್ ರೇಸ್ ಕಿಡ್ ಔರಾ' ನಂತಹ ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಈತನ ಡಾನ್ಸ್ ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿದ್ದು, ಪ್ಯಾರಿಸ್ ಸೇಂಟ್-ಜರ್ಮೈನ್ ಫುಟ್ಬಾಲ್ ಆಟಗಾರರು, ಎನ್‌ಎಫ್‌ಎಲ್ ತಾರೆ ಟ್ರಾವಿಸ್ ಕೆಲ್ಸೆ ಅವರು ರಯ್ಯನ್ ಅವರ ನೃತ್ಯವನ್ನು ಮಾಡಲು ಟ್ರೈ ಮಾಡಿದ್ದಾರೆ. ಇವರ ಈ ಡಾನ್ಸ್ ವೀಡಿಯೋ ಟಿಕ್‌ಟಾಕ್‌ನಲ್ಲಿ 14 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ ಎಂದು ವರದಿಯಾಗಿದೆ. F1 ಚಾಲಕ ಅಲೆಕ್ಸ್ ಆಲ್ಬನ್ ಕೂಡ ಈ ಹುಡುಗನ ಹೊಸ ಡಾನ್ಸ್ ಅನ್ನು ಟ್ರೈ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾಲಕನನ್ನು ಬಿಬಿಸಿ ಕೂಡ ಸಂದರ್ಶನ ಮಾಡಿದ್ದು, ಪುಟ್ಟ ಬಾಲಕ ನಗುನಗುತ್ತಲೇ ತನಗೆ ತನಗಾದ ಅನುಭವವನ್ನು ಹೇಳಿಕೊಂಡಿದ್ದಾನೆ. ಪ್ರತಿ ಬಾರಿಯೂ ನನ್ನ ಸ್ನೇಹಿತರು ನನ್ನನ್ನು ನೋಡಿದಾಗ ಅವರು ನೀನು ವೈರಲ್ ಆಗ್ತಿಯಾ ಎಂದು ಹೇಳುತ್ತಿದ್ದರು ಎಂದು ಹೇಳಿಕೊಂಡಿದ್ದಾನೆ. ಬಿಬಿಸಿ ವರದಿಯ ಪ್ರಕಾರ, ಇಂಡೋನೇಷ್ಯಾದ ಸಂಸ್ಕೃತಿ ಸಚಿವರು ರಯ್ಯನ್ ಅವರ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ವೇಗವಾಗಿ ಚಲಿಸುವ ದೋಣಿಯ ತುದಿಯಲ್ಲಿ ನಿಂತು ನೃತ್ಯ ಮಾಡಲು ಸಮತೋಲನ, ಆತ್ಮವಿಶ್ವಾಸ ಮತ್ತು ತರಬೇತಿಯ ಅಗತ್ಯವಿರುತ್ತದೆ, ಇದು ಬಹುಶಃ ವಯಸ್ಕರಿಗಿಂತ ಮಕ್ಕಳಿಗೆ ಸುಲಭವಾಗಿದೆ ಎಂದು ಹೇಳಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಬಾಲಕನ ತಾಯಿ ರಾಣಿ ರಿದ್ವತಿ ಮಾತನಾಡಿದ್ದು, ಮಗ ರಯ್ಯನ್ ಪ್ರತಿ ಬಾರಿ ದೋಣಿ ಏರಿದಾಗಲು ನನಗೆ ಭಯವಾಗುತ್ತದೆ. ಅವನೇನಾದರು ಬಿದ್ದರೆ ಅಲ್ಲಿ ರಕ್ಷಣಾ ತಂಡ ಆತನ ರಕ್ಷಣೆಗೆ ಸದಾ ಸಿದ್ಧವಿರುತ್ತದೆ. ಆದರೆ ಆದರೂ ನನಗೆ ಭಯವಾಗುತ್ತದೆ ಎಂದು ರಯ್ಯನ್ ತಾಯಿ ರಾಣಿ ರಿದ್ವತಿ ಹೇಳಿದ್ದಾರೆ.
ಈಗ ರಯ್ಯನ್ ಇಂಡೋನೇಷ್ಯಾದ ಸ್ಟಾರ್ ಸೆನ್ಸೇಷನ್ ಆಗಿದ್ದು, ಅವರನ್ನು ರಿಯಾವು ರಾಜ್ಯಪಾಲರು ಸಾಂಸ್ಕೃತಿಕ ರಾಯಭಾರಿಯಾಗಿ ನೇಮಿಸಿದ್ದಾರೆ. ಹೀಗೆ ಕೂಲ್ ಆಗಿ ಡಾನ್ಸ್ ಮಾಡುತ್ತಾ ಎಲ್ಲರ ರಂಜಿಸುತ್ತಿರುವ ರಯ್ಯನ್‌ಗೆ ಮುಂದೆ ಪೊಲೀಸ್ ಅಧಿಕಾರಿಯಾಗುವ ಆಸೆ ಇದೆ ಅಂತೆ.
