ರಿವರ್ ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ರಾಫ್ಟಿಂಗ್ ಗೈಡ್ ಮತ್ತು ತಂಡದವರು ಸಾಹಸದಿಂದ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೈಡ್‌ನ ಧೈರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ರಿವರ್ ರಾಫ್ಟಿಂಗ್ ರೋಮಾಂಚಕ ಅನುಭವ ನೀಡುವ ಸಾಹಸ ಕ್ರೀಡೆಯಾದರೂ, ಅಪಾಯಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಇತ್ತೀಚೆಗೆ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ. ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ರಾಫ್ಟಿಂಗ್ ಗೈಡ್ ಮತ್ತು ತಂಡದವರು ಸಾಹಸದಿಂದ ರಕ್ಷಿಸಿದ್ದಾರೆ.
ಉತ್ತರಾಖಂಡದ ಋಷಿಕೇಶದಲ್ಲಿ ಗಂಗೆಯ ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೈಫ್ ಜಾಕೆಟ್ ಧರಿಸಿದ್ದರೂ, ನೀರಿನ ರಭಸಕ್ಕೆ ಸಿಲುಕಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ರಾಫ್ಟಿಂಗ್ ತಂಡವು ರಕ್ಷಿಸಲು ಮುಂದಾಗುತ್ತದೆ. ರಾಫ್ಟಿಂಗ್ ಗೈಡ್ ಹಗ್ಗವನ್ನು ನೀರಿನಲ್ಲಿ ಎಸೆಯುತ್ತಾರೆ. ಹಗ್ಗ ಹಿಡಿದು ದೋಣಿ ಹತ್ತಿರ ಬಂದಾಗ, ಮತ್ತೊಬ್ಬ ವ್ಯಕ್ತಿಯೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಬಹುಶಃ ಮೊದಲ ವ್ಯಕ್ತಿ ಈ ವ್ಯಕ್ತಿಯನ್ನು ರಕ್ಷಿಸಲು ನೀರಿಗೆ ಹಾರಿದ್ದಿರಬಹುದು.
ಇನ್ನು ರಾಫ್ಟಿಂಗ್ ಗೈಡ್ ಮತ್ತು ಪ್ರವಾಸಿಗರು ಇಬ್ಬರನ್ನೂ ದೋಣಿಗೆ ಎಳೆದು ರಕ್ಷಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೈಡ್‌ನ ಧೈರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಈ ವಿಡಿಯೋವನ್ನು ಅಜಿತ್ ಸಿಂಗ್ ರಾಥಿ ಎನ್ನುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ವಿಡಿಯೋಗೆ ಸಂಬಂಧಿಸಿದಂತೆ ರಾಫ್ಟಿಂಗ್ ತುಂಬಾ ಅಪಾಯಕಾರಿ, ಆದರೆ ಜನರು ಅಪಾಯಗಳನ್ನು ತೆಗೆದುಕೊಳ್ಳುತ್ತಾರೆ. ಋಷಿಕೇಶದ ಮೇಲಿರುವ ಗಂಗಾ ನದಿಯಲ್ಲಿ ಒಬ್ಬ ವ್ಯಕ್ತಿ ಮುಳುಗುತ್ತಿದ್ದನು, ಆ ವ್ಯಕ್ತಿಯನ್ನು ಉಳಿಸುವುದು ತೆಪ್ಪದಲ್ಲಿದ್ದ ಜನರಿಗೆ ದೊಡ್ಡ ಸವಾಲಾಗಿತ್ತು. ಜನರು ಅವನನ್ನು ಹೇಗೆ ರಕ್ಷಿಸಿದರು ಎಂಬುದನ್ನು ನೋಡಲು ಈ ಸವಾಲಿನ ವೈರಲ್ ವೀಡಿಯೊವನ್ನು ನೋಡಿ' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ 5 ಜನರ ರಕ್ಷಣೆ, ಒಬ್ಬ ಸಾವು!
ಪ್ರಸಿದ್ಧ ಪ್ರವಾಸಿ ಗಮ್ಯಸ್ಥಳವಾದ ಋಷಿಕೇಶದಲ್ಲಿ ಏಪ್ರಿಲ್ 18ರಂದು ನಡೆದ ರಾಫ್ಟಿಂಗ್ ದುರಂತದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಗಾಯಾಳು ಸ್ಥಿತಿಯಲ್ಲಿ ಇದ್ದ ಐವರು ಪ್ರವಾಸಿಗರನ್ನು ಸಮಯೋಚಿತವಾಗಿ ರಕ್ಷಿಸಲಾಗಿದ್ದು, ಆಘಾತದ ಕ್ಷಣಗಳು ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಪತ್ರಿಕಾ ವರದಿಗಳ ಪ್ರಕಾರ, ಈ ತಂಡವು ಪ್ರವಾಹದ ಮಧ್ಯದಲ್ಲಿ ಸಮತೋಲನ ತಪ್ಪಿದ ಬಳಿಕ ನದಿಯ ಹರಿವಿನಲ್ಲಿ ರಾಫ್ಟಿಂಗ್ ಮಾಡುವವರು ನೀರಿನಲ್ಲಿ ಕೊಚ್ಚಿಹೋಗಿದ್ದರು. ಸ್ಥಳೀಯ ರಾಫ್ಟಿಂಗ್ ಮಾರ್ಗದರ್ಶಕ ಮತ್ತು ರಕ್ಷಣಾ ಸಿಬ್ಬಂದಿಯ ವೇಗದ ಪ್ರತಿಕ್ರಿಯೆಯಿಂದ ಐವರನ್ನು ಜೀವಂತವಾಗಿ ರಕ್ಷಣೆ ಮಾಡಿದರು. ಆದರೆ ದುರದೃಷ್ಟವಶಾತ್, ಒಬ್ಬ ಪ್ರವಾಸಿಗನನ್ನು ಕಾಪಾಡಲಾಗಲಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ರಾಫ್ಟಿಂಗ್ ಸಂಸ್ಥೆಗಳ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿವೆ. ಈ ಘಟನೆ ಪ್ರವಾಸೋದ್ಯಮಕ್ಕೆ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದು, ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
