ಜಾರ್ಖಂಡ್‌ನ ರಾಂಚಿಯಲ್ಲಿ ಗರ್ಭಿಣಿ ಕೋತಿಯೊಂದು ಮದ್ಯದ ಅಂಗಡಿಗೆ ನುಗ್ಗಿ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ನಂತರ ವೋಡ್ಕಾ ಕುಡಿದು ಮದ್ಯದ ಬಾಕ್ಸ್‌ಗಳ ಮೇಲೆಯೇ ನಿದ್ರೆಗೆ ಜಾರಿದೆ. ಈ ವಿಲಕ್ಷಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ರಾಂಚಿ (ಸೆ.26): ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಗರ್ಭಿಣಿ ಕೋತಿಯೊಂದು ಮದ್ಯದ ಅಂಗಡಿಗೆ ನುಗ್ಗಿ, ಅಲ್ಲಿದ್ದ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ, ಬಳಿಕ ಕ್ವಾರ್ಟರ್ ವೋಡ್ಕಾ ಕುಡಿದು ಮದ್ಯದ ಬಾಕ್ಸ್‌ಗಳ ಮೇಲೆಯೇ ನಿದ್ರೆಗೆ ಜಾರಿದೆ. ರಾಂಚಿಯ ಒರ್ಮಾಂಝಿ ಬ್ಲಾಕ್ ಚೌಕ್ ಬಳಿ ಇರುವ ಮದ್ಯದ ಮಾರಾಟ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸ್ತುತ ಮದ್ಯ ಕುಡಿದು ನೆಮ್ಮದಿಯಾಗಿ ತೂಕಡಿಸುತ್ತಿರುವ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸೇಲ್ಸ್‌ಮ್ಯಾನ್ ಮೇಲೆಯೇ ದಾಳಿ, ಬಳಿಕ ವೋಡ್ಕಾ ಖಾಲಿ!

ಸ್ಥಳೀಯರು ಹಾಗೂ ಅಂಗಡಿ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಈ ಗರ್ಭಿಣಿ ಕೋತಿ ಹಿಂದಿನ ದಿನವೇ ಮದ್ಯದ ಅಂಗಡಿಯ ಆವರಣಕ್ಕೆ ನುಗ್ಗಿತ್ತು. ಅಂಗಡಿಯಲ್ಲಿದ್ದ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಅವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು.

ಅಂಗಡಿಯೊಳಗೆ ಬೀಡುಬಿಟ್ಟಿದ್ದ ಈ ಕೋತಿ, ಅಲ್ಲಿದ್ದ ವೋಡ್ಕಾ ಬಾಟಲಿಯನ್ನು ತೆರೆದು ಸುಮಾರು ಕಾಲು ಭಾಗದಷ್ಟು (Quarter) ವೋಡ್ಕಾವನ್ನು ಕುಡಿದಿದೆ. ಮದ್ಯ ಸೇವಿಸಿದ ಅಮಲಿನಲ್ಲಿ ಅದು ಅಂಗಡಿಯಲ್ಲಿದ್ದ ಮದ್ಯದ ಕಾರ್ಟನ್ ಬಾಕ್ಸ್‌ಗಳ ಮೇಲೆಯೇ ಆರಾಮವಾಗಿ ಮಲಗಿದೆ.

ವೀಡಿಯೋ ವೈರಲ್

ಘಟನೆಯನ್ನು ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ಮದ್ಯದ ಬಾಕ್ಸ್‌ಗಳ ಮೇಲೆ ಪ್ರಶಾಂತವಾಗಿ ಮಲಗಿರುವ ಕೋತಿಯ ಬಳಿ ತೆರಳಿದಾಗ, ಅದು ಒಮ್ಮೆ ಕಣ್ಣು ಬಿಟ್ಟು ನೋಡಿ ಮತ್ತೆ ನಿದ್ರೆಗೆ ಜಾರಿದೆ. ವೀಡಿಯೋದಲ್ಲಿ ಕೋತಿ ಕುಡಿದಿದ್ದ ಅರ್ಧ ಖಾಲಿಯಾಗಿದ್ದ ವೋಡ್ಕಾ ಬಾಟಲಿಯನ್ನು ತೋರಿಸಲಾಗಿದ್ದು, ವೀಡಿಯೋ ಮಾಡುವ ವ್ಯಕ್ತಿಯು ಕೋತಿಯೇ ಈ ವೋಡ್ಕಾವನ್ನು ಹೀರಿದೆ ಎಂದು ವಿವರಿಸಿದ್ದಾನೆ. ವೀಡಿಯೋ ರೆಕಾರ್ಡ್ ಮಾಡುವ ಸಮಯದಲ್ಲೂ ಕೋತಿ ಮದ್ಯದ ಅಂಗಡಿಯೊಳಗೆ ಬಾಕ್ಸ್ ಮೇಲೆ ಮಲಗಿ ನಿದ್ರಿಸುತ್ತಿತ್ತು. ಮೃಗಾಲಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಲಾಗಿದ್ದು, ಕೋತಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Scroll to load tweet…