ಹದಿನೈದು ವರ್ಷ ರಾಖಿ ಕಟ್ಟಿ ಸಹೋದರನಂತೆ ಕಂಡಿದ್ದ ಯುವಕನೊಂದಿಗೆ ಯುವತಿ ಓಡಿಹೋಗಿ ಮದುವೆಯಾದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಘಟನೆಯಿಂದ ಕುಟುಂಬಸ್ಥರು ಆಘಾತಗೊಂಡಿದ್ದು, ಮಗಳು ಸತ್ತಳೆಂದು ಅಂತ್ಯಕ್ರಿಯೆ ನಡೆಸಿದೆ. ಘಟನೆ ಹೇಗಾಯ್ತು? ಶಾಶ್ವತ್ ಗುಪ್ತಾ ಯಾರು? ಹೇಗೆ ಪರಿಚಯ?

ನಾವೆಂತಹ ಕಾಲದಲ್ಲಿ ಬದುಕುತ್ತಿದ್ದೇವೆ ಅಂತಾ ಅಶ್ಚರ್ಯವೂ, ಆಘಾತವೂ ಆಗುತ್ತಿದೆ. ತಂದೆಯಿಂದಲೇ ಮಗಳ ಮೇಲೆ ಬಲತ್ಕಾರವಾಗುತ್ತಿದೆ, ರಾಖಿ ಕಟ್ಟಿದ ಅಣ್ಣನೇ ತಂಗಿಯನ್ನ ಮದುವೆಯಾಗುತ್ತಿದ್ದಾನೆ. ಇದೆಲ್ಲ ನೋಡುವಾಗ ಈ ಕಾಲದಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮ ನಡುವಿನ ಪವಿತ್ರ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಹಲವು ವರ್ಷಗಳ ಕಾಲ ರಕ್ಷಾ ಬಂಧನ ದಿನದಂದು ರಾಖಿ ಕಟ್ಟಿದ ವ್ಯಕ್ತಿಯನ್ನೇ ಯುವತಿಯೊಬ್ಬಳು ಮದುವೆಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದಲ್ಲೆ ಮಗಳ ನಿರ್ಧಾರದಿದ ಪೋಷಕರೇ ಆಘಾತಗೊಂಡಿದ್ದಾರೆ.

15 ವರ್ಷ ಸಹೋದರನಂತೆ ಇದ್ದವನೇ ಪತಿ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 20 ವರ್ಷದ ಯುವತಿಯೊಬ್ಬಳು ಇಂಥ ನಿರ್ಧಾರದಿಂದ ಸಮಾಜ, ಪೋಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾಳೆ. ಸುಮಾರು 15 ವರ್ಷಗಳಿಂದ ಪರಿಚಯವಿದ್ದ 22 ವರ್ಷದ ಯುವಕನನ್ನು ಮದುವೆಯಾಗಿದ್ದಾಳೆ. ಯುವತಿ ಆತನಿಗೆ ಹಲವು ವರ್ಷಗಳಿಂದ ಸಹೋದರನಂತೆ ರಾಖಿ ಕಟ್ಟುತ್ತಿದ್ದಳು ಎಂದು ಆಕೆಯ ಕುಟುಂಬ ಹೇಳಿದೆ.

ನಂದಿನಿ ಪಾಂಡೆ-ಶಾಶ್ವತ್ ಗುಪ್ತಾ ಮದುವೆ ವೈರಲ್

ನಂದಿನಿ ಪಾಂಡೆ ಎಂಬ ಯುವತಿ ತನ್ನದೇ ಗ್ರಾಮದ ಶಾಶ್ವತ್ ಗುಪ್ತಾ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇದೇ ತಿಂಗಳು ವಾರದ ಹಿಂದೆಯಷ್ಟೇ ಅಂದರೆ ಸೆಪ್ಟೆಂಬರ್ 20ರಂದು ಇಬ್ಬರೂ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಾರೆ. ಮಗಳ ಈ ಕೃತ್ಯದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅಣ್ಣ ಅಣ್ಣ ಅಂತಿದ್ದವನನ್ನೇ ಮದುವೆಯಾಗಿರುವುದು ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.

15 ವರ್ಷಗಳಿಂದ ರಾಖಿ ಕಟ್ಟುತ್ತಿದ್ದಳು ಎಂದ ಕುಟುಂಬ

ಶಾಶ್ವತ್ ಎಂಬುವವನು ಬಹಳ ವರ್ಷಗಳಿಂದ ಪರಿಚಿತನಾಗಿದ್ದರಿಂದ ಆಗಾಗ ನಮ್ಮ ಮನೆಗೆ ಬರುತ್ತಿದ್ದ. ಮನೆಯಲ್ಲಿ ಅವನನ್ನು ಕುಟುಂಬದ ಸದಸ್ಯನಂತೆ ಕಾಣುತ್ತಿದ್ದೆವು. ಅಲ್ಲದೆ ನಂದಿನಿ ಹಲವು ವರ್ಷಗಳಿಂದ ರಕ್ಷಾ ಬಂಧನ ದಿನದಂದು ರಾಖಿ ಕಟ್ಟುತ್ತಿದ್ದಳು, ಹೀಗಾಗಿ ನಂದಿನಿ ಸಹೋದರನೆಂಬ ನಾವು ಭಾವಿಸಿದ್ದೆವು ಎಂದು ನಂದಿನಿಯ ತಾಯಿ ಹೇಳಿದ್ದಾರೆ.

ಮನೆಬಿಟ್ಟು ಹೋದ ಮೇಲೆಯೇ ಇಬ್ಬರ ಸಂಬಂಧ ಗೊತ್ತಾಯ್ತು!

ಅದುವರೆಗೆ ನಾವು ನಂದಿನಿ ಶಾಶ್ವತ್ ಇಬ್ಬರೂ ಅಣ್ಣ-ತಂಗಿಯರೆಂದೇ ಭಾವಿಸಿದ್ದೆವು. ನಮಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ನಂದಿನಿ ಶಾಶ್ವತ್ ಮನೆಬಿಟ್ಟು ಹೋದ ಮೇಲೆಯೇ ಅವರ ಸಂಬಂಧ ಬದಲಾಗಿರುವುದು ಗೊತ್ತಾಯ್ತು ಎಂದು ಕುಟುಂಬ ಹೇಳಿದೆ. ಅಲ್ಲದೆ, ಸಹೋದರನಂತೆ ಕಂಡಿದ್ದ ನಂದಿನಿಯನ್ನು ಶಾಶ್ವತ್ ಅವನೇ ಮನಸು ಬದಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಮದುವೆಯ ಬಳಿಕ ಆಕೆಯ ಭವಿಷ್ಯ ಮತ್ತು ಸುರಕ್ಷತೆ ಬಗ್ಗೆಯೂ ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ..

ಪ್ರೀತಿಸಿ ಮದುವೆಯಾಗಿದ್ದೇವೆ ಎಂದ ಯುವತಿ!

ಆದರೆ ಇನ್ನು ಆಘಾತಕಾರಿ ಸಂಗತಿಯೆಂದರೆ ಕುಟುಂಬದ ಆರೋಪಗಳನ್ನು ನಂದಿನಿ ತಳ್ಳಿಹಾಕಿದ್ದಾರೆ. ಮದುವೆಯ ಬಳಿಕ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ನಂದಿನಿ, ನಾನು ಶಾಶ್ವತ್ ಪರಸ್ಪರ ಪ್ರೀತಿಸುತ್ತಿದ್ದೆವು. ಇಬ್ಬರ ಒಪ್ಪಿಕೊಂಡೇ ಮದುವೆ ಮಾಡಿಕೊಂಡಿದ್ದೇವೆ. ನಾನು ಪತಿಯೊಂದಿಗೆ ಸಂತೋಷವಾಗಿದ್ದೇನೆ. ಹೀಗಾಗಿ ನನಗಾಗಲಿ, ನನ್ನ ಪತಿಗಾಗಲಿ ಕಿರುಕುಳ ನೀಡಬಾರದು ಎಂದು ಕುಟುಂಬಸ್ಥರಿಗೆ ಮನವಿ ಮಾಡಿದ್ದಾಳೆ.

ತಂದೆ ವಿರುದ್ಧವೇ ನಂದಿನಿ ಗಂಭೀರ ಆರೋಪ

ನಾನು ಮನೆಯಲ್ಲಿದ್ದಾಗ ನನ್ನ ತಂದೆಯಿಂದಲೇ ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದಾಗಿ ಗಂಭೀರ ಆರೋಪ ಮಾಡಿದ್ದಾಳೆ. ನಾನು ಮನೆಯಲ್ಲಿದ್ದಾಗ ಬಹಳ ದಿನಗಳಿಂದ ಅನಾರೋಗ್ಯದಿಂದ ಇದ್ದಾಗಲೂ ಸರಿಯಾಗಿ ಚಿಕಿತ್ಸೆ ಕೊಡಿಸಿರಲಿಲ್ಲ. ಈಗ ಮದುವೆ ಬಳಿಕ ಶಾಶ್ವತ್ ಮತ್ತು ಅವರ ಕುಟುಂಬ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ನಂದಿನಿ ವಿಡಿಯೋ ಮೂಲಕ ಹೇಳಿದ್ದಾಳೆ.

ನಮ್ಮ ಪಾಲಿಗೆ ಮಗಳು ಸತ್ತಳು ಎಂದ ಕುಟುಂಬ

ಸೆಪ್ಟೆಂಬರ್ 21ರಂದು ನಂದಿನಿ ಶಾಶ್ವತ್ ಜೊತೆ ಮದುವೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ, ನಮ್ಮ ಮಗಳು ಇಂದಿಗೆ ಸತ್ತಳು ಎಂದು ನಿರ್ಧಾರಕ್ಕೆ ಬಂದ ಕುಟುಂಬಸ್ಥರು, ನಂದಿನಿಯ ಸಾಂಕೇತಿಕ ಅಂತ್ಯಕ್ರಿಯೆ ವಿಧಿಗಳನ್ನು ನೆರವೇರಿಸುವ ಮೂಲಕ ಮಗಳು ಮೃತಪಟ್ಟಿದ್ದಾಳೆ ಎಂಬಂತೆ ಕುಟುಂಬ ನಡೆದುಕೊಂಡಿದ. ನಂದಿನಿಯೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ ಎಂದು ಆಕೆಯ ತಾಯಿ ಹೇಳಿದ್ದಾರೆ.

ನಂದಿನಿ ಮನೆಯಿಂದ ಓಡಿಹೋಗುವಾಗ ಮನೆಯಲ್ಲಿದ್ದ ₹2 ಲಕ್ಷ ತೆಗೆದುಕೊಂಡು ಹೋಗಿದ್ದಾಳೆ ಎಂದೂ ಕುಟುಂಬ ಆರೋಪಿಸಿದೆ. ಆದರೆ ಈ ಆರೋಪವನ್ನು ನಂದಿನಿ ತಳ್ಳಿಹಾಕಿದ್ದು, ಆ ಮನೆಯಲ್ಲಿ ಅಷ್ಟೊಂದು ಹಣವೇ ಇರಲಿಲ್ಲ ಎಂದು ಹೇಳಿದ್ದಾರೆ.