ಮುಂಬೈನಲ್ಲಿ ಪಿಟ್‌ಬುಲ್ ನಾಯಿಯೊಂದು ಬಾಲಕನ ಮೇಲೆ ದಾಳಿ ಮಾಡಿದ ಘಟನೆ ನಡೆದಿದ್ದು, ನಾಯಿ ಮಾಲೀಕ ಬಾಲಕನನ್ನು ರಕ್ಷಿಸುವ ಬದಲು ನಗುತ್ತಾ ವಿಕೃತ ಖುಷಿ ಪಟ್ಟಿದ್ದಾನೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಿ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೆಲವರಿಗೆ ಬೇರೆಯವರಿಗೆ ಕಷ್ಟ ಕೊಟ್ಟು ವಿಕೃತ ಆನಂದಪಡುವುದರಲ್ಲಿ ಅದೇನೂ ಖುಷಿ, ಅದರಿಂದ ಅವರಿಗೇನು ಸಿಗುವುದೋ ಗೊತ್ತಿಲ್ಲ. ಅದೇ ರೀತಿ ಇಲ್ಲೊಬ್ಬ ಅಪಾಯಕಾರಿ ಶ್ವಾನವಾದ ತನ್ನ ಸಾಕುನಾಯಿ ಪಿಟ್‌ಬುಲ್ ನಾಯಿಯಿಂದ ಬಾಲಕನಿಗೆ ಕಚ್ಚಿಸಿದ್ದು, ಈ ವೇಳೆ ಆ ಬಾಲಕ ಅಳುತ್ತಿದ್ದರೆ ಈ ವ್ಯಕ್ತಿ ನಗುತ್ತಾ ವಿಕೃತ ಖುಷಿ ಪಟ್ಟಿದ್ದಾನೆ. ಮಹಾರಾಷ್ಟ್ರ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪಿಟ್‌ಬುಲ್ ಶ್ವಾನದ ಮಾಲೀಕನ ವಿರುದ್ಧ ಈಗ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ.

ನಾಯಿ ಮಾಲೀಕನ ವಿಕೃತ ಆನಂದ

ಅಂದಹಾಗೆ ಮುಂಬೈನಲ್ಲಿ ಪಾರ್ಕ್ ಮಾಡಿದ್ದ ಆಟೋದಲ್ಲಿ ಈ ಘಟನೆ ನಡೆದಿದೆ. ಆಟೋದಲ್ಲಿ ಈ ಪಿಟ್ಬುಲ್ ನಾಯಿ ಅದರ ಮಾಲೀಕ ಹಾಗೂ ಪಕ್ಕದಲ್ಲಿ ಬಾಲಕ ಕುಳಿತಿದ್ದಾನೆ. ನಾಯಿ ಮಾಲೀಕ ಉದ್ದೇಶಪೂರ್ವಕವಾಗಿ ಬಾಲಕನತ್ತ ನಾಯಿಯನ್ನು ರೊಚ್ಚಿಗೆಬ್ಬಿಸಿದ್ದು ಬಾಲಕನ ಮೇಲೆ ಆಟೋದಲ್ಲಿಯೇ ನಾಯಿ ದಾಳಿ ಮಾಡಿದೆ. ಈ ವೇಳೆ ಮಾಲೀಕ ನಾಯಿಯಿಂದ ಬಾಲಕನನ್ನು ರಕ್ಷಿಸುವುದು ಬಿಟ್ಟು ವಿಕೃತವಾಗಿ ನಕ್ಕಿದ್ದಾನೆ. ಅಲ್ಲದೇ ಆರಂಭದಲ್ಲಿ ಆತ ನಾಯಿಯನ್ನು ರಕ್ಷಿಸುವ ಪ್ರಯತ್ನವನ್ನು ಮಾಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಆದರೆ ನಂತರದಲ್ಲಿ ಬಾಲಕ ಜೋರಾಗಿ ಕಿರುಚಲು ಶುರು ಮಾಡಿದ್ದು, ಇತ್ತ ನಾಯಿ ಬಾಲಕನನ್ನು ಕಚ್ಚಲು ಆತನ ಗಲ್ಲದ ಮೇಲೆ ಹಾರಿದೆ. ಬಾಲಕನ ಬಟ್ಟೆಯನ್ನು ನಾಯಿ ಕಚ್ಚಿ ಹಿಡಿದುಕೊಂಡಿದ್ದು, ಆದರೂ ಬಾಲಕ ಶ್ವಾನದ ಹಿಡಿತದಿಂದ ಬಿಡಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ. ಮುಂಬೈನ ಮನ್ಖುರ್ದ್ ಪ್ರದೇಶದಲ್ಲಿ ಗುರುವಾರ ಘಟನೆ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Scroll to load tweet…

ರಕ್ಷಣೆ ಬಿಟ್ಟು ವೀಡಿಯೋ ಮಾಡುತ್ತಾ ನಿಂತ ಜನ

ನಾಯಿ ನನ್ನನ್ನು ಕಚ್ಚಿತ್ತು ಅದು ನನ್ನ ಬಟ್ಟೆಯನ್ನೂ ಕಚ್ಚಿ ಹಿಡಿದುಕೊಂಡಿತ್ತು. ಆದರೂ ನಾನು ಓಡಿ ಪಾರಾದೆ, ನಾನು ನಾಯಿಯ ಮಾಲೀಕರ ಬಳಿ ಶ್ವಾನದಿಂದ ನನ್ನನ್ನು ರಕ್ಷಿಸುವಂತೆ ಕೇಳಿದೆ. ಆದರೆ ಆತ ನಗಲು ಶುರು ಮಾಡಿದ ರಕ್ಷಣೆ ಮಾಡಲಿಲ್ಲ. ಹಾಗೆಯೇ ಯಾರೊಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ ಅವರೆಲ್ಲರೂ ನಾಯಿ ನನ್ನ ಮೇಲೆ ದಾಳಿ ಮಾಡುತ್ತಿದ್ದಿದ್ದನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರು, ಇದೊಂದು ಭಯಾನಕ ಘಟನೆಯಾಗಿತ್ತು ಎಂದು ನಾಯಿಯಿಂದ ಕಡಿತಕ್ಕೊಳಗಾದ ಬಾಲಕ ಹಮ್ಜಾ ಹೇಳಿಕೊಂಡಿದ್ದಾನೆ.

ನಾಯಿ ಮಾಲೀಕನ ವಿರುದ್ಧ ಕೇಸ್

ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಪೊಲೀಸರು ಆರೋಪಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಆರೋಪಿ ನಾಯಿ ಮಾಲೀಕ ಸೊಹೈಲ್ ಹಸನ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಾರ್ಕಿಂಗ್ ಮಾಡಿದ್ದ ಆಟೋ ರಿಕ್ಷಾದ ಒಳಗೆ ಆಟವಾಡುತ್ತಿದ್ದ ಬಾಲಕನ ಮೇಲೆ ತನ್ನ ನಾಯಿ ದಾಳಿ ಮಾಡುವುದಕ್ಕೆ ಅದರ ಮಾಲೀಕ ಸೊಹೈಲ್ ಹಸನ್ ಪ್ರೇರಣೆ ನೀಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 291, 125, 125(ಎ) ಸೇರಿದಂತೆ ಹಲವು ಸೆಕ್ಷನ್‌ಗಳಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಟ್‌ಬುಲ್‌ಗೆ ಭಾರತದಲ್ಲಿದೆ ನಿಷೇಧ

ಅಂದಹಾಗೆ ಪಿಟ್‌ಬುಲ್ ಶ್ವಾನಗಳು ಅತ್ಯಂತ ಅಪಾಯಕಾರಿ ಶ್ವಾನಗಳಾಗಿದ್ದು, ಈ ಹಿಂದೆಯೂ ಬಿಟ್‌ಬುಲ್ ದಾಳಿಗೆ ಸಿಲುಕಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಭಾರತದಲ್ಲಿ ನಿಷೇಧಕ್ಕೊಳಗಾದ ನಾಯಿ ಪ್ರಭೇದಗಳಲ್ಲಿ ಈ ಪಿಟ್‌ಬುಲ್ ಶ್ವಾನವೂ ಒಂದು. ಭಾರತದಲ್ಲಿ ಈ ಶ್ವಾನವನ್ನು ಸಾಕುವುದಕ್ಕೆ ಅನುಮತಿ ಇಲ್ಲ, ಆದರೂ ಕೆಲವರು ಈ ಶ್ವಾನವನ್ನು ಸಾಕುತ್ತಿದ್ದಾರೆ.