ಒಬ್ಬ ಯುವಕ 20 ಯುವತಿಯರ ಜೊತೆಗೆ ಏಕಕಾಲದಲ್ಲಿ ಪ್ರೇಮ ಸಂಬಂಧ ಹೊಂದಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ ಮೂವರು ಯುವತಿಯರು ಸಹ ಈತನ ಬಲೆಗೆ ಬಿದ್ದಿದ್ದರು.

ಪ್ರೀತಿ ಎಂಬ ಹೆಸರಿನಲ್ಲಿ ಸುಮಾರು 20 ಯುವತಿಯರು ವಂಚನೆಗೆ ಒಳಗಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಯುವಕ ಒಂದೇ ಸಮಯದಲ್ಲಿ 20ಕ್ಕೂ ಹೆಚ್ಚು ಯುವತಿಯರೊಂದಿಗೆ ಪ್ರಣಯ ಸಂಬಂಧದಲ್ಲಿ ತೊಡಗಿದ್ದನು. ಅದರಲ್ಲಿಯೂ ವಿಶೇಷವೆಂದರೆ, ಆತನ ಕುತಂತ್ರದ ಪ್ರೀತಿಗೆ ಬಿದ್ದಿದ್ದ 20 ಯುವತಿಯರ ಪೈಕಿ 3 ಯುವತಿಯರು ಒಂದೇ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಆದರೆ, ಯಾರಿಗೂ ಈತನೇ ಸುಳಿವೇ ಸಿಗದಂತೆ ಮೇಂಟೇನ್ ಮಾಡಿದ್ದನು. ಈ ಎಲ್ಲ ಯುವತಿಯರನ್ನು ನಂಬಿಸಿ, ಈತ ಕೋಟ್ಯಂತರ ರೂಪಾಯಿ ಹಣವನ್ನೂ ಲಪಟಾಯಿಸಿದ್ದಾನೆ. ಈತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಬಂಧನವಾಗಿದೆ.

ಈ ಘಟನೆ ಚೀನಾದ ಝೆಂಗ್‌ಝೌನಲ್ಲಿ ನಡೆದಿದೆ. ಜಾಂಗ್ ನಾನ್ ಎಂಬ ಯುವಕ ಉನ್ನತ ಅಧಿಕಾರಿಯ ಮಗನಂತೆ ನಟಿಸಿ, ಈ ಎಲ್ಲಾ ಮಹಿಳೆಯರನ್ನು ಪ್ರೀತಿಸುವಂತೆ ನಟಿಸಿ ಅವರಿಂದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾನೆ. ಜಾಂಗ್ ನಾನ್ 2019ರಲ್ಲಿ ಕಾರ್ ವಾಶ್‌ ಶೋ ರೂಮಿನಲ್ಲಿ ಜಾಂಗ್ ಲಿ ಎಂಬ ಯುವತಿಯನ್ನು ಭೇಟಿಯಾಗುತ್ತಾನೆ. ಸ್ನೇಹದಿಂದ ಪ್ರಾರಂಭವಾದ ಸಂಬಂಧ, ಶೀಘ್ರದಲ್ಲೇ ಪ್ರಣಯದಲ್ಲಿ ಪರಿವರ್ತಿತವಾಗುತ್ತದೆ. ನಾನ್ ತನ್ನ ತಂದೆ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಸುಳ್ಳು ಕಥೆ ಹೇಳುತ್ತಾನೆ. ಲಿ ಸಹಾನುಭೂತಿಯಿಂದ 90 ಲಕ್ಷ ರೂಪಾಯಿ ನೀಡುತ್ತಾಳೆ. ಇದಲ್ಲದೆ, ರಾಜಕಾರಣಿಗಳಿಗೆ ಉಡುಗೊರೆ ನೀಡಿದರೆ ತನ್ನ ತಂದೆಗೆ ಬಡ್ತಿ ಸಿಗುತ್ತದೆ ಎಂಬ ನೆಪದಲ್ಲಿ ಇನ್ನೂ 30 ಲಕ್ಷ ರೂಪಾಯಿ ಪಡೆದಿದ್ದಾನೆ.

ವಂಚನೆ ಪತ್ತೆಯಾಗಿದ್ದು ಹೀಗೆ:

ಜಾಂಗ್ ನಾನ್‌ನ ಮತ್ತೊಬ್ಬ ಗೆಳತಿ ಲಿ ಮಿನ್, ಈತ ಹೇಳಿದ ಶ್ರೀಮಂತತನಕ್ಕೆ ಅನುಗುಣವಾದ ಮನೆ ಅಥವಾ ಆಸ್ತಿ ಇಲ್ಲವೆಂಬುದನ್ನು ಗಮನಿಸುತ್ತಾಳೆ. ವಿಚಾರಣೆ ನಡೆಸಿದಾಗ, ತಾನು ವಾಸಿಸುತ್ತಿದ್ದ ಅಪಾರ್ಟ್ಮೆಂಟ್‌ನಲ್ಲಿಯೇ ಇನ್ನಿಬ್ಬರು ಯುವತಿಯರೂ ಆತನನ್ನು ಪ್ರೀತಿ ಮಾಡುತ್ತಿರುವ ಪ್ರೇಮಿಗಳೆಂಬ ಮಾಹಿತಿ ದೊರೆತಾಗ ಬೆಚ್ಚಿಬಿದ್ದಾಳೆ. ನಂತರ ಈ ಯುವತಿಯರು ಎಲ್ಲರೂ ಒಂದು ಕಡೆಗೆ ಸೇರಿ ಪರಸ್ಪರ ಮಾತನಾಡಿ ತಮಗಾದ ಮೋಸ ಹಾಗೂ ಯುವಕನ ಕುತಂತ್ರದ ಸತ್ಯವನ್ನು ಅರಿಯುತ್ತಾರೆ.

ಬಂಧನ ಹಾಗೂ ಪೊಲೀಸರು ನೀಡಿರುವ ಎಚ್ಚರಿಕೆ:

ಪೊಲೀಸರ ತನಿಖೆಯಲ್ಲಿ ನಾನ್ ಒಟ್ಟು 20 ಯುವತಿಯರನ್ನು ಮೋಸಗೊಳಿಸಿದ್ದನು ಎಂಬ ಅಂಶ ಬಯಲಾಗಿದೆ. ತಾನು ಪ್ರೀತಿ ಮಾಡುವ ನಾಟಕವಾಡಿದ ಎಲ್ಲ ಯುವತಿಯರಿಂದ ಹಣ ಪಡೆದು, ಐಷಾರಾಮಿ ಕಾರು, ಉಡುಗೊರೆಗಳನ್ನು ಖರೀದಿಸಿ, ಮತ್ತೆ ಮಾರಾಟ ಮಾಡಿ ಹಣ ಹೂಡಿಕೆ ಮಾಡುತ್ತಿದ್ದನು. ಈತನನ್ನು ಬಂಧಿಸಿರುವ ಪೊಲೀಸರು, 'ಪ್ರೀತಿಯ ಹೆಸರಿನಲ್ಲಿ ಹಣ ಕೊಡುವ ಮುನ್ನ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು' ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಹದಿಹರೆಯದ ಯುವತಿಯರಿಂದ ವಯಸ್ಕ ಮಹಿಳೆಯರವರೆಗೆ ಮೋಸ :

ಭಾವನೆಗಳ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳಿಂದ ಎಚ್ಚರಿಕೆ ಅಗತ್ಯ. ಪ್ರೀತಿ ವ್ಯಕ್ತಿಗತ ವಿಷಯವಾದರೂ, ಅಂಧ ನಂಬಿಕೆಗೆ ಆಸ್ಪದ ನೀಡುವುದು ಹಾನಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಪೊಲೀಸರ ಆಶಯ. ಇನ್ನು ಪ್ರೀತಿ ಹೆಸರಿನಲ್ಲಿ ಹದಿಹರೆಯದ ಯುವತಿಯರಿಂದ ವಯಸ್ಕ ಮಹಿಳೆಯರವರೆಗೆ ಮೋಸ ಹೋಗುವ ಪ್ರಕರಣಗಳು ಭಾರತದಲ್ಲಿಯೂ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕುಟುಂಬ ಸದಸ್ಯರೂ ನಿಗಾವಹಿಸುವುದು ಅಗತ್ಯವಾಗಿದೆ.