ಮದುವೆಯಾಗುವ ಭರವಸೆ ನೀಡಿ ವಿಚ್ಛೇದಿತ ಮಹಿಳೆಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸೈಬರ್ ಸೆಂಟರ್ ನಡೆಸುತ್ತಿದ್ದ ಆರೋಪಿ, ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ವಂಚಿಸಿದ್ದಾನೆ.
ಬೆಂಗಳೂರು (ಜೂ.18): ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವ ಭರವಸೆ ನೀಡಿ, ವಿಚ್ಛೇದಿತ ಮಹಿಳೆಯೊಬ್ಬರನ್ನು ದೈಹಿಕವಾಗಿ ಸಂಪರ್ಕ ಬೆಳೆಸಿ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್ ಬಂಧಿತ ಆರೋಪಿ. ತನ್ನದೇ ಸೈಬರ್ ಸೆಂಟರ್ ನಡೆಸುತ್ತಿದ್ದ ಆರೋಪಿ. ಕೆಲಸ ಕೇಳಿ ಬಂದಿದ್ದ ಸಂತ್ರಸ್ತ ಮಹಿಳೆಗೆ ಕೆಲಸ ನೀಡಿ, ಮದುವೆಯ ಭರವಸೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಏಕಾಂತ ಕ್ಷಣಗಳಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು, ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಡಿಮಾಂಡ್ ಮಾಡಿದ್ದಾನೆ. ಮಾನಕ್ಕೆ ಹೆದರಿ ಸಂತ್ರಸ್ತ ಮಹಿಳೆ ಚಿನ್ನಾಭರಣ, ನಗದು ಕೊಟ್ಟರೂ ಬ್ಲಾಕ್‌ಮೇಲ್ ಮುಂದುವರೆಸಿದ್ದ ಕಾಮುಕ. ಮಹಿಳೆಯ ಅಣ್ಣನಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದಲ್ಲದೆ, ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ರಚಿಸಿ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನುಶೇರ್ ಮುಂದಾಗಿದ್ದ ಆರೋಪಿ.
ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ಕೊಟ್ಟ ಸಂತ್ತಸ್ತೆ:
ಕಾಮುಕನ ಬ್ಲಾಕ್‌ಮೇಲ್‌ಗೆ ಬೇಸತ್ತ ಸಂತ್ರಸ್ತ ಮಹಿಳೆ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನನ್ವಯ ಕಾರ್ಯಾಚರಣೆಗಿಳಿದ ಕಾಡುಗೋಡಿ ಪೊಲೀಸರು ಆರೋಪಿ ಶ್ರೀನಿವಾಸ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮೊಬೈಲ್ ನೋಡಿ ಪೊಲೀಸರು ಶಾಕ್:
ಆರೋಪಿ ಶ್ರೀನಿವಾಸನನ್ನ ಬಂಧಿಸಿ ಅವನ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ ಪೊಲೀಸರು. ಮೊಬೈಲ್ ಪರಿಶೀಲನೆ ವೇಳೆ ಖಾಸಗಿ ಫೋಟೋ ಮತ್ತು ವಿಡಿಯೋಗಳು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಇತ್ತೀಚೆಗೆ ಮಹಿಳೆ ಶ್ರೀನಿವಾಸ್‌ನಿಂದ ದೂರವಿರಲು ಪ್ರಯತ್ನಿಸಿದರೂ, ಆತ ಆಕೆಯ ಮೇಲೆ ಅನುಮಾನದಿಂದ ಬ್ಲಾಕ್‌ಮೇಲ್ ಮುಂದುವರೆಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದ ದುರ್ಬಳಕೆ ಮತ್ತು ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
