ಯುವಕನೊಬ್ಬ ಮದುವೆಯಾಗಲು ನಡುರಸ್ತೆಯ ಬಿಲ್‌ಬೋರ್ಡ್‌ನಲ್ಲಿ ತನ್ನ ಬಯೋಡೇಟಾ ಪ್ರದರ್ಶಿಸಿದ್ದಾನೆ. ತನ್ನ ಬಳಿ ಕಾರು, ಫ್ಲಾಟ್ ಇಲ್ಲ ಮತ್ತು ಸಂಬಳ ಕಡಿಮೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು, ಈ ವಿಚಿತ್ರ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇಂದಿನ ಕಾಲದಲ್ಲಿ ಮದುವೆಯಾಗಲು ಗಂಡು-ಹೆಣ್ಣು ಹುಡುಕುವುದು ಅಷ್ಟು ಸುಲಭದ ಮಾತಲ್ಲ. ಮ್ಯಾಟ್ರಿಮೋನಿಯಲ್ ಸೈಟ್ ಅಥವಾ ಮದುವೆ ಬ್ಯೂರೋಗಳ ಮೊರೆ ಹೋಗುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಪುಣೆಯ ಯುವಕನೊಬ್ಬ ಮದುವೆಯಾಗಲು ಕಂಡುಕೊಂಡ ಹಾದಿ ಮಾತ್ರ ಅತ್ಯಂತ ವಿಭಿನ್ನ ಮತ್ತು ವಿಚಿತ್ರವಾಗಿದೆ. ತನ್ನ ಬಯೋಡೇಟಾವನ್ನು ನಡುರಸ್ತೆಯ ಬೃಹತ್ ಬಿಲ್‌ಬೋರ್ಡ್ (Billboard) ಮೇಲೆ ಹಾಕುವ ಮೂಲಕ ಈ ಯುವಕ ಈಗ ಇಡೀ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ.

ನೈಜತೆ ಮತ್ತು ಪ್ರಾಮಾಣಿಕತೆಗೆ ಮಾರುಹೋದ ಜನ:

ಪುಣೆಯ ಪಿಂಪ್ಲೆ ಸೌದಾಗರ್‌ನ ಕೇಟ್ ಪಾಟೀಲ್ ಚೌಕ್ ಬಳಿ ಈ ಬೃಹತ್ ಜಾಹೀರಾತು ಫಲಕ ಕಾಣಿಸಿಕೊಂಡಿದೆ. ಇದರಲ್ಲಿ ರಾಘವ ವಿಶ್ವಾಸರಾವ್ ಶಿಂಧೆ (30) ಎಂಬ ಯುವಕ ತನ್ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ. ವಿಶೇಷವೆಂದರೆ, ಆತ ತನ್ನಲ್ಲಿ ಇಲ್ಲದಿರುವ ವಿಷಯಗಳ ಬಗ್ಗೆಯೂ ಅತ್ಯಂತ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾನೆ.

‘ನನಗೆ ಸ್ವಂತ ಕಾರು ಇಲ್ಲ, ಸ್ವಂತ ಫ್ಲಾಟ್ ಇಲ್ಲ ಮತ್ತು ಕೃಷಿ ಭೂಮಿಯೂ ಇಲ್ಲ. ನನ್ನ ಮಾಸಿಕ ಸಂಬಳ ಕೇವಲ 25,000 ರೂಪಾಯಿಗಳು’ ಎಂದು ಬಿಲ್‌ಬೋರ್ಡ್‌ನಲ್ಲಿ ಬರೆಯಲಾಗಿದೆ. ಕೊನೆಯಲ್ಲಿ, ‘ಯಾರಿಗಾದರೂ ಸೂಕ್ತವಾದ ವಧು ತಿಳಿದಿದ್ದರೆ ದಯವಿಟ್ಟು ತಿಳಿಸಿ’ ಎಂಬ ವಿನಂತಿಯನ್ನೂ ಮಾಡಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ:

ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಆತನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ‘ಈ ತಿಂಗಳ ಸಂಬಳವನ್ನೆಲ್ಲಾ ಜಾಹೀರಾತು ಫಲಕಕ್ಕೇ ಖರ್ಚು ಮಾಡಿದಂತಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಫೋನ್ ನಂಬರ್ ಏಕೆ ಹಾಕಿಲ್ಲ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇದು ನಿಜವೇ ಅಥವಾ ಮಾರ್ಕೆಟಿಂಗ್ ಗಿಮಿಕ್ಕೇ?

ಈ ಜಾಹೀರಾತು ಫಲಕವು ನಿಜವಾಗಿಯೂ ಮದುವೆಗಾಗಿ ಹಾಕಿದ್ದೇ ಅಥವಾ ಯಾವುದಾದರೂ ಸಿನಿಮಾ, ವೆಬ್ ಸಿರೀಸ್ ಪ್ರಚಾರಕ್ಕಾಗಿ ಮಾಡಿದ ತಂತ್ರವೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಸಾಮಾನ್ಯವಾಗಿ ಇಂತಹ ವಿಚಿತ್ರ ಜಾಹೀರಾತುಗಳು ಇತ್ತೀಚಿನ ದಿನಗಳಲ್ಲಿ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿವೆ. ಆದರೆ, ರಾಘವ ಶಿಂಧೆ ಎಂಬುವವರು ನಿಜವಾಗಿಯೂ ವಧುವಿನ ಹುಡುಕಾಟದಲ್ಲಿದ್ದಾರೆಯೇ ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ.

ಸತ್ಯ ಏನೇ ಇರಲಿ, ‘ನನ್ನ ಹತ್ತಿರ ಏನೂ ಇಲ್ಲ’ ಎಂದು ಬಹಿರಂಗವಾಗಿ ಘೋಷಿಸಿಕೊಂಡು ಮದುವೆಗೆ ಮುಂದಾದ ಈ ಯುವಕನ ಧೈರ್ಯಕ್ಕೆ ಮಾತ್ರ ನೆಟ್ಟಿಗರು ಫಿದಾ ಆಗಿದ್ದಾರೆ.

View post on Instagram