ಆಫೀಸ್ ಕೆಲ್ಸಕ್ಕೆ ರಜೆ ಹಾಕಿ ವಿಶ್ರಾಂತಿ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದ ಮಹಿಳೆಯೊಬ್ಬರಿಗೆ ಅಮ್ಮನ ಮನೆ ದುಬಾರಿಯಾಗಿದೆ. ಬಾಸ್ ಗಿಂತ ಡಬಲ್ ಕೆಲ್ಸ ಹೇಳುವ ಅಮ್ಮನಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಚಾಲೆಂಜ್ ಆಗಿದೆ. ಕೊನೆಯಲ್ಲಿ ಮಹಿಳೆ ಮಾಡಿದ್ದೇನು ಗೊತ್ತಾ?
ಆಫೀಸ್ನಲ್ಲಿ ಬಾಸ್ ಕೊಡುವ ಟಾರ್ಗೆಟ್, ಮೀಟಿಂಗ್ ಕಾಟ ಹೆಚ್ಚಾದಾಗ, ಮನಸ್ಸು ಸ್ವಲ್ಪ ದಿನ ರೆಸ್ಟ್ ಬೇಡುತ್ತೆ. ಆದ್ರೆ ಬೆಂಗಳೂರಿನ ಮಹಿಳೆಯೊಬ್ಬರಿಗೆ ರಜೆ ತೆಗೆದುಕೊಂಡಿದ್ದೇ ದೊಡ್ಡ ತಪ್ಪಾಗಿ ಹೋಗಿದೆ. ಆಫೀಸ್ ಒತ್ತಡಕ್ಕಿಂತ ಅಮ್ಮ ಕೊಡುವ ಕೆಲ್ಸದ ಒತ್ತಡ ಡಬಲ್ ಆಗಿ, ಮಹಿಳೆ ರಜೆ ಕ್ಯಾನ್ಸಲ್ ಮಾಡಿ ಮತ್ತೆ ಆಪೀಸ್ ಗೆ ಹಿಂದಿರುಗಿದ್ದಾರೆ. ಈ ತಮಾಷೆಯ ಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಆಫೀಸ್ನಲ್ಲಿ 5 ಕೆಲಸ, ಮನೆಯಲ್ಲಿ 15 ಟಾಸ್ಕ್
ಮಾಹಿತಿಯ ಪ್ರಕಾರ, ಆಫೀಸ್ನಲ್ಲಿ ಇವರ ಮ್ಯಾನೇಜರ್ ದಿನಕ್ಕೆ ಐದು ಕೆಲಸಗಳನ್ನು ವಹಿಸುತ್ತಾರಂತೆ. ಆದರೆ ಮನೆಯಲ್ಲಿರುವ ಅಮ್ಮನ ಲೆಕ್ಕವೇ ಬೇರೆ. ಬೆಳಗಿನ ತಿಂಡಿ ಮುಗಿಯುವ ಮೊದಲೇ 15 ಕೆಲಸಗಳ ಲಿಸ್ಟ್ ರೆಡಿಯಾಗಿರುತ್ತದೆಯಂತೆ. ಅಷ್ಟೇ ಅಲ್ಲ, ಒಂದು ಕೆಲಸ ಮುಗಿಸಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಕೆಲಸ ಪ್ರತ್ಯಕ್ಷ. ಅಮ್ಮನ ಕಣ್ಣಿಗೆ ಮಗಳು ಆರಾಮವಾಗಿ ಕುಳಿತಿರುವುದು ಕಂಡರೆ ಸಾಕು, ತಕ್ಷಣ ಹೊಸ ಟಾಸ್ಕ್ ಅಸೈನ್ ಆಗುತ್ತದೆಯಂತೆ. ಆಫೀಸ್ನಲ್ಲಿ ಕೆಲಸ ಮುಗಿದರೆ ಲಾಗ್ಔಟ್ ಮಾಡಬಹುದು. ಆದರೆ ಅಮ್ಮನ ಆಫೀಸ್ನಲ್ಲಿ ಲಾಗ್ಔಟ್ ಎನ್ನುವ ಆಯ್ಕೆಯೇ ಇಲ್ಲ ಎಂದಿದ್ದಾರೆ ಅವರು.
ವೀಕೆಂಡ್, ರಜೆ ಅಂದರೆ ಅಮ್ಮನಿಗೆ ಗೊತ್ತಿಲ್ಲ
ಆಫೀಸ್ನಲ್ಲಿ ಶನಿವಾರ, ಭಾನುವಾರ ರಜೆ ಇರುತ್ತದೆ. ಹಬ್ಬದ ದಿನಗಳಲ್ಲೂ ರಜೆ ಸಿಗುತ್ತದೆ. ಆದರೆ ಅಮ್ಮನ ಕಂಪನಿಯಲ್ಲಿ ಇಂತಹ ಯಾವುದೇ ನಿಯಮಗಳಿಲ್ಲ. ಭಾನುವಾರವಾಗಲಿ, ಸರ್ಕಾರಿ ರಜೆಯಾಗಲಿ, ಕೆಲಸ ಮಾತ್ರ ನಿಲ್ಲುವುದಿಲ್ಲ. ಇನ್ನು ವರ್ಕ್ ಫ್ರಂ ಹೋಮ್ ಅಂದರೆ ಮನೆಯಲ್ಲೇ ಕುಳಿತು ಕೆಲಸ ಮಾಡುವುದಲ್ಲ, ಮನೆಯ ಎಲ್ಲಾ ಕೆಲಸಗಳನ್ನೂ ಮಾಡುವುದೇ ಎಂಬುದು ಅಮ್ಮನ ಸಿದ್ಧಾಂತವಂತೆ. ರಜೆ ಹಾಕಿದರೆ ವಿಶ್ರಾಂತಿ ಸಿಗುತ್ತದೆ ಎಂದುಕೊಂಡಿದ್ದ ಮಗಳಿಗೆ, ಹೆಚ್ಚುವರಿ ಮನೆಗೆಲಸಗಳೇ ಉಡುಗೊರೆಯಾಗಿ ಸಿಗುತ್ತಿವೆಯಂತೆ.
ಮದುವೆಯಾಗುವ ಯೋಚನೆ
ಇಷ್ಟೆಲ್ಲಾ ಕೆಲಸಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ಒಂದು ಹಂತದಲ್ಲಿ ಮದುವೆಯಾಗುವ ಬಗ್ಗೆಯೂ ಯೋಚಿಸಿದ್ದರಂತೆ. ಆದರೆ ಅಲ್ಲಿಯೂ ಒಂದು ದೊಡ್ಡ ಸಮಸ್ಯೆ ಎದುರಾಗಿದೆ. ಅಮ್ಮನಿಂದ ತಪ್ಪಿಸಿಕೊಂಡರೆ ಮತ್ತೊಬ್ಬ ಮ್ಯಾನೇಜರ್ ಸಿಗಬಹುದು. ಅಂದರೆ ಗಂಡನ ರೂಪದಲ್ಲಿ ಇನ್ನೊಬ್ಬ ಬಾಸ್ ಬಂದುಬಿಟ್ಟರೆ ಗತಿಯೇನು ಎಂದು ಯೋಚಿಸಿ ಆ ನಿರ್ಧಾರವನ್ನೂ ಕೈಬಿಟ್ಟಿದ್ದಾರಂತೆ
ಆಫೀಸ್ನಲ್ಲೇ 14 ಗಂಟೆ ಕೆಲಸ ಮಾಡ್ತೀನಿ, ರಜೆ ಮಾತ್ರ ಬೇಡ
ಕೊನೆಗೆ ಈ ಮಹಿಳೆ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಮನೆಯಲ್ಲಿರುವ 24 ಗಂಟೆಗಳ ಡ್ಯೂಟಿಗಿಂತ ಆಫೀಸ್ನ 14 ಗಂಟೆಗಳ ಕೆಲಸವೇ ವಾಸಿ ಎಂದುಕೊಂಡಿದ್ದಾರಂತೆ. ಹೀಗಾಗಿ ವಾರಾಂತ್ಯದಲ್ಲೂ ಓವರ್ಟೈಮ್ ಕೆಲಸ ನೀಡುವಂತೆ ತಮ್ಮ ಮ್ಯಾನೇಜರ್ಗೆ ಮನವಿ ಮಾಡಿಕೊಂಡಿದ್ದಾರೆ. ಆಫೀಸ್ನಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಮನೆಯಲ್ಲಿನ 24 ಗಂಟೆಗಳ ಡ್ಯೂಟಿಗಿಂತ ಎಷ್ಟೋ ಉತ್ತಮ ಎಂಬುದು ಇವರ ಅರಿವಿಗೆ ಬಂದಿದೆ.






