ಚೀನಾದಲ್ಲಿ ಕುಸಿಯುತ್ತಿರುವ ಜನನ ದರವನ್ನು ಹೆಚ್ಚಿಸಲು ಸರ್ಕಾರ ಕಠಿಣ ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳ ಭಾಗವಾಗಿ, ಕಾಂಡೋಮ್‌ಗಳ ಮೇಲಿನ ತೆರಿಗೆ ವಿನಾಯಿತಿ ರದ್ದು ಮತ್ತು ಜಾಹೀರಾತು ನಿರ್ಬಂಧಗಳಿಂದಾಗಿ, ವಿಶ್ವದ ಪ್ರಮುಖ ಬ್ರ್ಯಾಂಡ್ ಡ್ಯುರೆಕ್ಸ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಹೊಂದಿದ್ದ ಚೀನಾ, ಈಗ ಜನನ ದರ ಕುಸಿತದಿಂದ ತೀವ್ರ ಕಂಗಾಲಾಗಿದೆ. ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದು ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಚೀನಾ ಸರ್ಕಾರ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಗರ್ಭನಿರೋಧಕ ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ. ಸರ್ಕಾರದ ಈ ಆಕ್ರಮಣಕಾರಿ ನಿರ್ಧಾರವು ವಿಶ್ವದ ನಂ.1 ಕಾಂಡೋಮ್ ಬ್ರ್ಯಾಂಡ್ 'ಡ್ಯುರೆಕ್ಸ್'ಗೆ ಚೀನಾ ಮಾರುಕಟ್ಟೆಯಲ್ಲಿ ಭಾರೀ ಆಘಾತ ನೀಡಿದೆ.
ಡ್ಯುರೆಕ್ಸ್ ಮಾರಾಟದಲ್ಲಿ ದಿಢೀರ್ ಕುಸಿತ
ಬ್ರಿಟಿಷ್ ಮೂಲದ ಕಂಪನಿ ರೆಕಿಟ್ ಬೆನ್‌ಕೀಸರ್‌ನ ಪ್ರಮುಖ ಉತ್ಪನ್ನವಾದ ಡ್ಯುರೆಕ್ಸ್, ಚೀನಾದಲ್ಲಿ ದಶಕಗಳಿಂದ ಏಕಸ್ವಾಮ್ಯ ಹೊಂದಿತ್ತು. ಆದರೆ, ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದಲ್ಲಿ ಡ್ಯುರೆಕ್ಸ್ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಮಾರುಕಟ್ಟೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದ್ದ ಕಂಪನಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
ಮಕ್ಕಳನ್ನು ಪಡೆಯಲು ಸರ್ಕಾರದ ಆಫರ್!
ಕಳೆದ ವರ್ಷ ಚೀನಾದಲ್ಲಿ ಕೇವಲ 79.2 ಲಕ್ಷ ಮಕ್ಕಳು ಮಾತ್ರ ಜನಿಸಿದ್ದಾರೆ. ಇದು 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, 2016ರಲ್ಲಿ ದಶಕಗಳ ಕಾಲ ಜಾರಿಯಲ್ಲಿದ್ದ 'ಒಂದೇ ಮಗು' ನೀತಿಯನ್ನು ಕೈಬಿಟ್ಟು ಈಗ 'ಮೂರು ಮಕ್ಕಳನ್ನು ಹೊಂದಬಹುದು' ಎಂಬ ಹೊಸ ಕಾನೂನು ತಂದಿದೆ. ಅಷ್ಟೇ ಅಲ್ಲದೆ, ಮೂರು ವರ್ಷದೊಳಗಿನ ಪ್ರತಿ ಮಗುವಿಗೆ ವಾರ್ಷಿಕ 3,600 ಯುವಾನ್ ಸಬ್ಸಿಡಿ ನೀಡುವ ಮೂಲಕ ಜನರನ್ನು ಮಕ್ಕಳನ್ನು ಪಡೆಯಲು ಉತ್ತೇಜಿಸುತ್ತಿದೆ.
ತೆರಿಗೆ ಏರಿಕೆ ಮತ್ತು ಜಾಹೀರಾತು ನಿಷೇಧದ ಬಿಸಿ
ಜನನ ದರ ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಕಾಂಡೋಮ್‌ಗಳ ಮೇಲೆ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಹಿಂಪಡೆದಿದೆ. 1993ರಿಂದ ಕಾಂಡೋಮ್‌ಗಳಿಗೆ ನೀಡಲಾಗುತ್ತಿದ್ದ ಮೌಲ್ಯವರ್ಧಿತ ತೆರಿಗೆ (VAT) ವಿನಾಯಿತಿಯನ್ನು ಈ ವರ್ಷದ ಜನವರಿಯಿಂದ ರದ್ದುಗೊಳಿಸಲಾಗಿದೆ. ಪ್ರಸ್ತುತ, ಈ ಉತ್ಪನ್ನಗಳ ಮೇಲೆ ಶೇ. 13ರಷ್ಟು ವ್ಯಾಟ್ ವಿಧಿಸಲಾಗುತ್ತಿದ್ದು, ಇದರಿಂದ ಬೆಲೆ ಹೆಚ್ಚಾಗಿ ಮಾರಾಟ ಕುಸಿದಿದೆ.
ಇದಲ್ಲದೆ, ಆನ್‌ಲೈನ್ ಜಾಹೀರಾತುಗಳ ಮೇಲೆ ಚೀನಾ ಸರ್ಕಾರ ಕಠಿಣ ಚಾಟಿ ಬೀಸಿದೆ. ಚೀನಾದ ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ 'ಡೊಯಿನ್' (Douyin), ಕಾಂಡೋಮ್‌ಗಳ ಲೈವ್ ಕಾಮರ್ಸ್ ಮಾರಾಟವನ್ನು ಬಹುತೇಕ ನಿಷೇಧಿಸಿದೆ. ಲೈವ್ ವಿಡಿಯೋಗಳಲ್ಲಿ ಉತ್ಪನ್ನ ಪ್ರದರ್ಶಿಸುವುದು ಅಥವಾ ಆಕರ್ಷಕ ಸ್ಲೋಗನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವುದಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಕಂಪನಿಯ ಪ್ರತಿಕ್ರಿಯೆ:
‘ಚೀನಾ ಮಾರುಕಟ್ಟೆಯಲ್ಲಿ ಮಾರಾಟವು ನಿರೀಕ್ಷೆಗಿಂತ ಕಳಪೆಯಾಗಿದೆ’ ಎಂದು ರೆಕಿಟ್ ಬೆನ್‌ಕೀಸರ್ ಕಂಪನಿಯ ಸಿಇಒ ಕ್ರಿಸ್ ಲಿಕ್ಟ್ ಒಪ್ಪಿಕೊಂಡಿದ್ದಾರೆ. ಹೊಸ ತೆರಿಗೆ ನೀತಿ ಮತ್ತು ಜಾಹೀರಾತು ನಿರ್ಬಂಧಗಳೇ ಈ ಹಿನ್ನಡೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ. ಆದರೂ, ಬ್ರ್ಯಾಂಡ್ ಮೇಲಿನ ಬೇಡಿಕೆ ಸಂಪೂರ್ಣವಾಗಿ ಕುಸಿದಿಲ್ಲ, ಇದೊಂದು ತಾತ್ಕಾಲಿಕ ಹಿನ್ನಡೆ ಎಂದು ಕಂಪನಿ ಆಶಾವಾದ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ, ಚೀನಾದ ಜನಸಂಖ್ಯಾ ಸಮತೋಲನ ಕಾಪಾಡುವ ಸರ್ಕಾರದ ಪ್ರಯತ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿವೆ.


