ಕೋರ್ಟ್ ಆವರಣಕ್ಕೆ 2 ಲಕ್ಷ ರೂಪಾಯಿ ಬ್ಯಾಗ್ ಹಿಡಿದು ಬಂದ ಲಾಯರ್ ಮೇಲೆ ಕೋತಿ ದಾಳಿ ಮಾಡಿದೆ. ಹಣವಿದ್ದ ಬ್ಯಾಗ್ ಎತ್ತಿ ಮರದ ಮೇಲೆಕ್ಕೆ ಹೋದ ಕೋತಿ ಬಳಿಕ ಬ್ಯಾಗ್ ತೆರೆದು ಕಂತೆ ಕಂತೆ ನೋಟುಗಳ ಮಳೆ ಸುರಿಸಿದ ಘಟನೆ ನಡೆದಿದೆ.
ಬುಲಂದ್‌ಶಹರ್ (ಜೂ.01) ಶಿಸ್ತು ಪಾಲಿಸುವ ಸ್ಥಳಗಳ ಪೈಕಿ ಕೋರ್ಟ್ ಆವರಣ ಮುಂಚೂಣಿಯಲ್ಲಿದೆ. ಇಲ್ಲಿ ಜನಸಾಮಾನ್ಯರಿಂದ ಹಿಡಿದು, ಪೊಲೀಸರು, ಅಧಿಕಾರಿಗಳು ಎಲ್ಲರೂ ಶಿಸ್ತು ಪಾಲಿಸುತ್ತಾರೆ. ಇದೇ ಕೋರ್ಟ್ ಆವರಣದಲ್ಲಿ ಕೋತಿಯ ಮಂಗನಾಟಕ್ಕೆ ವಕೀರಲೊಬ್ಬರು ಸುಸ್ತಾಗಿದ್ದು ಮಾತ್ರವಲ್ಲ ಆತಂಕ ಎದುರಿಸಿದ ಘಟನೆ ನಡೆದಿದೆ. ವಕೀರಲು ತಮ್ಮ ಬ್ಯಾಗ್‌ನಲ್ಲಿ 2 ಲಕ್ಷ ರೂಪಾಯಿ ನಗದು ಹಣ ಇಟ್ಟು ಆಗಮಿಸಿದ್ದರು. ಆದರೆ ಕೋತಿ ದಾಳಿ ಮಾಡಿ ಲಾಯರ್ ಕೈಯಲ್ಲಿದ್ದ ಬ್ಯಾಗ್ ಎಳೆದೊಯ್ದಿದೆ. ಮರದ ಮೇಲಕ್ಕೆ ತೆರಳಿದ ಕೋತಿ ಬ್ಯಾಗ್‌ನಲ್ಲಿದ್ದ ನೋಟುಗಳನ್ನು ಮಳೆ ರೀತಿ ಸುರಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಕೋರ್ಟ್ ಆವರಣದಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
ಭಾರಿ ಚರ್ಚೆಯಾಗುತ್ತಿರುವ ಘಟನೆ
ವಕೀಲರೊಬ್ಬರು ತಮ್ಮ ಕ್ಲೈಂಟ್‌ನ ಆಸ್ತಿ ನೋಂದಣಿ ಹಾಗೂ ಸ್ಟಾಂಪ್ ಪೇಪರ್ ಡ್ಯೂಟಿ ಪ್ರಕ್ರಿಯೆ ಪೂರ್ಣಗೊಳಿಸಲು 2 ಲಕ್ಷ ರೂಪಾಯಿ ನಗದು ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ತಂದಿದ್ದರು. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಛೇಂಬರ್ ಪಕ್ಕ ಕಾಯುತ್ತಾ ನಿಂತಿದ್ದರು. ಈ ವೇಳೆ ಕೋತಿಯೊಂದು ದಾಳಿ ಮಾಡಿದೆ.
ನೋಟಿನ ಮಳೆ ಸುರಿಸಿದು ಕೋತಿ
ಕೋತಿ ದಾಳಿಗೆ ಬೆದರಿದ ಲಾಯರ್ ದೂರ ಸರಿಯುವಷ್ಟರಲ್ಲೇ ಕೈಯಲ್ಲಿದ್ದ ಹಣದ ಬ್ಯಾಗ್‌ನ್ನು ಕೋತಿ ಎಗರಿಸಿಕೊಂಡು ಜಿಗಿದಿದೆ. ಕೋರ್ಟ್ ಚೇಂಬರ್ ಬಳಿಯಿಂದ ಪಕ್ಕದಲ್ಲಿದ್ದ ಮರದ ಮೇಲಕ್ಕೆ ಕೋತಿ ಜಿಗಿದು ತೆರಳಿದೆ. ಮರದ ಮೇಲಕ್ಕೆ ತೆರಳಿದ ಕೋತಿ ಬ್ಯಾಗ್‌ನಲ್ಲಿ ತಿನ್ನುವ ವಸ್ತು ಇರಬಹುದು ಎಂದು ತೆರೆಯುವ ಪ್ರಯತ್ನ ಮಾಡಿದೆ. ಆದರೆ ಜಿಪ್ ಹಾಕಿದ್ದ ಕಾರಣ ತೆರೆಯಲು ಸಾಧ್ಯವಾಗಲಿಲ್ಲ. ಬಳಿಕ ಕೋತಿ ಬ್ಯಾಗ್ ಹರಿದಿದೆ. ಅದರೊಳಗಿದ್ದ ಕಂತೆ ಕಂತೆ ನೋಟುಗಳನ್ನು ನೋಡಿ ಕೋತಿ ನಿರಾಸೆಯಾಗಿದೆ. ತಿನ್ನುವ ವಸ್ತು ಹುಡುಕಿದ ಕೋತಿಗೆ ಕಾಗದಗಳು ಕಂಡಿದೆ. ಹೀಗಾಗಿ ಈ ಕಂತೆ ಕಂತೆ ನೋಟುಗಳನ್ನು ಮೇಲಿನಿಂದ ಕೆಲಕ್ಕೆ ಹಾಕಿದೆ.
ನೋಟು ಹೆಕ್ಕಿದ ಹಲವರು
500 ರೂಪಾಯಿ ನೋಟಗಳು ಕೋರ್ಟ್ ಆವರಣದ ಒಳಗಿದ್ದ ಮರದ ಮೇಲಿನಿಂದ ಮಳೆಯಂತೆ ಕೆಳಕ್ಕೆ ಬಂದಿದೆ. ಇತ್ತ ಹಲವು ನೋಟುಗಳು ಕೋರ್ಟ್ ಆವರಣದಿಂದ ಹೊರಕ್ಕೆ ಬಿದ್ದಿದೆ. ಹಲವರು ಈ ನೋಟುಗಳನ್ನು ಹೆಕ್ಕಿದ್ದಾರೆ. ಕೆಲವರು ಮಾತ್ರ ವಕೀಲರಿಗೆ ಹಿಂದುರುಗಿಸಿದರೆ ಬಹುತೇಕರು ಕೋರ್ಟ್ ಆವರಣದ ಹೊರಬಿದ್ದ ನೋಟುಗಳನ್ನು ಹೆಕ್ಕಿ ತಮ್ಮ ಜೇಬಿಗೆ ಇಳಿಸಿದ್ದಾರೆ. ಇದರ ನಡುವೆ ವಕೀಲ ಕೈಮುಗಿದು ಹಣ ಹಿಂದಿರುಗಿಸುವಂತೆ ಮನವಿ ಮಾಡಿದರೂ ಯಾರು ಕೇಳದಂತೆ ಹೊರಟು ಹೋಗಿದ್ದಾರೆ.
2 ಲಕ್ಷ ಪೈಕಿ ಸಿಕ್ಕಿದ್ದು 1.95 ಲಕ್ಷ ರೂ ಮಾತ್ರ
ಮರದ ಮೇಲೆ ಕುಳಿತ ಕೋತಿ ತಿನ್ನುವ ವಸ್ತು ಸಿಗಬಹುಹುದು ಎಂದು ಕಂತೆ ಕಂತೆ ನೋಟುಗಳನ್ನು ತೆಗೆದು ಹೊರಕ್ಕೆ ಹಾಕುತ್ತಾ ಹೋಗಿದೆ. ಈ ನೋಟುಗಳು ಮಳೆಯಂತೆ ಸುರಿದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಹೀಗೆ ಲಾಯರ್ ಹಾಗೂ ಇತರರ ನೋಟು ಹೆಕ್ಕಿದ್ದಾರೆ. 2 ಲಕ್ಷ ರೂಪಾಯಿ ಇದ್ದ ಬ್ಯಾಗ್‌ನಿಂದ ನೋಟುಗಳನ್ನು ಕೋತಿ ಸಂಪೂರ್ಣ ಕೆಳಕ್ಕೆ ಹಾಕಿದೆ. ಆದರೆ ಹಲವು ಹೆಕ್ಕಿದ ಕಾರಣ ಕೊನೆಗೆ ಲೆಕ್ಕ ಹಾಕಿದಾಗ 1.95 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ. 5000 ರೂಪಾಯಿ ಮೌಲ್ಯದ ನೋಟುಗಳು ಸಿಗಲೇ ಇಲ್ಲ. ಈ ಪೈಕಿ ಹಲವು ನೋಟುಗಳು ಹಲವರು ಜೇಬು ಸೇರಿದರೆ ಮತ್ತೆ ಕೆಲ ನೋಟುಗಳು ಮರದ ಮೇಲೆ ಎಲೆಗಳ ನಡುವೆ, ಕೊಂಬೆಗಳ ಮೇಲೆ ಉಳಿದುಕೊಂಡಿದೆ.


