- Home
- Karnataka Districts
- 40 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ
40 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ
ಕನಕಗಿರಿಯಲ್ಲಿ ಸುಮಾರು 40 ವರ್ಷಗಳಿಂದ ಮಾಳವ್ವ ಎಂಬ ಅಜ್ಜಿ ಹೋಟೆಲ್ ನಡೆಸುತ್ತಿದ್ದಾರೆ. ತಮ್ಮ ಕೈರುಚಿಯ ತಿಂಡಿ ಹಾಗೂ ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ಇವರು ಜನರ ಪ್ರೀತಿ ಗಳಿಸಿದ್ದು, ಸದ್ಯ ಇವರ ವಿಡಿಯೋ ವೈರಲ್ ಆಗಿದೆ.

ಮಾಳವ್ವ ಹೋಟೆಲ್
ಕೆಲವೊಂದು ಹೋಟೆಲ್‌ಗಳು ಕೇವಲ ಹಣಕ್ಕೆ ಆಹಾರವನ್ನು ಸರಬರಾಜು ಮಾಡಲ್ಲ. ಬದಲಿಗೆ ಸುತ್ತಲಿನ ಹಳ್ಳಿಗಳ ಜನರು ಹೋಟೆಲ್‌ಗಳ ಜೊತೆ ಅವಿನಾಭ ಸಂಬಂಧ ಹೊಂದಿರುತ್ತಾರೆ. ಅಂತಹುವುದೇ ಒಂದು ಹೋಟೆಲ್ ನಮ್ಮ ಕನಕಗಿರಿಯಲ್ಲಿ ನಿಮಗೆ ಸಿಗುತ್ತದೆ. ಕನಕಗಿರಿ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಯವರಿಗೆ ಮಾಳವ್ವ ಹೋಟೆಲ್ ಅಂದ್ರೆ ಏನು ಒಂದು ರೀತಿಯ ಖುಷಿ.
ಕನಕಗಿರಿಯಲ್ಲಿರುವ ಹೋಟೆಲ್
Mr.Chaaraniga ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಳವ್ವ ಹೋಟೆಲ್ ವಿಡಿಯೋ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾಳವ್ವ ಅವರ ಮಾತುಗಳಲ್ಲಿ ತಾಯಿ ಎಷ್ಟು ಸಿಂಪಲ್ ಅನ್ನೋದು ಗೊತ್ತಾಗುತ್ತದೆ. ಸುಮಾರು 40 ವರ್ಷಗಳಿಂದ ಕನಕಗಿರಿಯಲ್ಲಿ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ವಯಸ್ಸು ಎಷ್ಟು ಅಂತ ಕೇಳಿದ್ರೆ, ನನಗೆ ನನ್ನ ಮಕ್ಕಳು ವಯಸ್ಸು ಸಹ ಗೊತ್ತಿಲ್ಲ. ಗಣತಿಗೆ ಬಂದವರು ವಯಸ್ಸು ಕೇಳಿದ್ರೆ ನೀವೇ ಬರೆದುಕೊಳ್ಳಿ ಎಂದು ಹೇಳುತ್ತಾರೆ.
ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ
ಈ ಹೋಟೆಲ್‌ನಲ್ಲಿ ಬೆಳಗ್ಗೆ ಇಡ್ಲಿ, ಬೋಂಡಾ, ಮಿರ್ಚಿ ಬಜ್ಜಿ, ಅವಲಕ್ಕಿ, ಮಂಡಾಳು ಒಗ್ಗರಣೆ, ಉಪ್ಪಿಟ್ಟು, ಪುಲಾವ್ ಚಟ್ನಿ ಮಾಡುತ್ತಾರೆ. ಮಧ್ಯಾಹ್ನದ ನಂತರ ನಿಮಗೆ ಬಿಸಿ ಬಿಸಿ ಬಜ್ಜಿ ಮತ್ತು ಮಂಡಕ್ಕಿಯೂ ನಿಮಗೆ ಇಲ್ಲಿ ಸಿಗುತ್ತದೆ. ಮಾಳವ್ವ ಅಜ್ಜಿ ಕೇವಲ ಹೋಟೆಲ್ ನಡೆಸಿದ್ರೆ ಇಷ್ಟು ಫೇಮಸ್ ಅಗುತ್ತಿರಲಿಲ್ಲ. ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿಯೂ ಆಹಾರ ನೀಡುತ್ತಾರೆ.
ಊಟ ಮಾಡಿದ್ದ ನೆನಪು
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇಲ್ಲಿ ಬೋಂಡಾ ಸ್ಪೆಷಲ್ ಉಪ್ಪಿಟ್ಟು. ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಊಟ ಮಾಡಿದ್ದ ನೆನಪು, ಒಮ್ಮೆಯಂತೂ ಹಣವೇ ಇರಲಿಲ್ಲ. ಮರುದಿನ ನಾನಾಗಿಯೇ ಕೊಟ್ಟಾಗಲೇ ಹಣ ಪಡೆದುಕೊಂಡ್ರು. ಇವರು ನಮಗೆ ನಿಜವಾಗ್ಲೂ ಅನ್ನಪೂರ್ಣೇಶ್ವರಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಮಾಳವ್ವ ಅವರ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೈ ತುತ್ತು ತಿಂದಿದ್ದೀನಿ.
ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಚೆನ್ನಪ್ಪ ಗೌಡ ಎಂಬವರು, ಇದು ನಮ್ಮ ಅಮ್ಮ. ನಾನು ಇವರ ಕೈ ತುತ್ತು ತಿಂದಿದ್ದೀನಿ. ಸುಮಾರು 23ವರ್ಷ ಕನಕಗಿರಿಯಲ್ಲಿ ಇದ್ದು ಶಿಕ್ಷಕನಾಗಿ ದುಡಿದು ಈಗ ನನ್ನ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದೀನಿ. ನನ್ನ ಕೊಪ್ಪಳ ಜಿಲ್ಲೆಯನ್ನು ಅನ್ನ ಕೊಟ್ಟಿದೆ ಜೀವನ ಕೊಟ್ಟಿದೆ. ಜನರ ಪ್ರೀತಿ ಕೊಟ್ಟಿದೆ missyou ಕೊಪ್ಪಳ ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಶಿವಾಜಿ ರಾವ್ ಎಂಬವರು, ಇವರು ನಮ್ಮ ಕನಕಗಿರಿಯ ದೊಡ್ಡಮ್ಮನವರು ಅಂತ ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್
ರುಚಿ ಶುಚಿ
ಮಾಳವ್ವ ತಾಯಿ ಫೋಟೋ ಹಂಚಿಕೊಂಡಿರುವ Mr.Chaaraniga, ಕನಕಗಿರಿ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ ಊಟಕ್ಕೆ ಅಂಥ ಹೋದಾಗ ತಿಳಿದಿದ್ದು ಮಾಳವ್ವ ಹೋಟೆಲ್. ಅಜ್ಜಿ ಸುಮಾರು 40 ವರ್ಷದಿಂದ ನಡೆಸುತ್ತಿರುವ ಹೋಟೆಲ್. ಅಲ್ಲಿನ ರುಚಿ ಶುಚಿ ಬಗ್ಗೆ ಅಲ್ಲಿನ ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರಿನ ಜನರೇ ಹೇಳಿದಾಹಾಗೆ ರುಚಿ ಮಾತ್ರ ಸೂಪರ್ ಎಂದು ಬರೆದುಕೊಂಡಿದ್ದಾರೆ. ನೀವು ಮಾಳವ್ವ ಹೋಟೆಲ್‌ಗೆ ಹೋಗಿದ್ರೆ ನಿಮ್ಮ ಅನುಭವವನ್ನು ಕಮೆಂಟ್ ಮಾಡಿ.

