ಅಯೋಧ್ಯೆಯಲ್ಲಿ ಮಹಿಳೆಯೊಬ್ಬಳ ಕೈಯಲ್ಲಿದ್ದ 42,105 ರೂಪಾಯಿ ಹಣದ ಕಂತೆಯನ್ನು ಕಿತ್ತುಕೊಂಡು ಹೋಗಿ ಮರ ಹತ್ತಿದ್ದ ಮಂಗನಿಗೆ ಪೊಲೀಸರು ಬಾಳೆಹಣ್ಣಿನ ಆಮಿಷ ತೋರಿಸಿ ಹಣ ವಾಪಸ್ ಪಡೆದಿದ್ದಾರೆ. ಪೊಲೀಸರ ಚಾಣಾಕ್ಷತನದಿಂದ ಹಣ ವಾಪಸ್ ಸಿಕ್ಕಿದ್ದು, ಈ ತಮಾಷೆಯ ಘಟನೆಯ ವಿಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅಯೋಧ್ಯೆ ಅಂದ್ರೆ ಅಲ್ಲಿ ಭಕ್ತಿ-ಭಾವ ಇರೋದು ಕಾಮನ್. ಆದ್ರೆ ಅಲ್ಲಿರೋ ಮಂಗಣ್ಣಗಳು ಮಾಡೋ ಅವಾಂತರ ಅಷ್ಟಿಷ್ಟಲ್ಲ! ಇಲ್ಲೊಬ್ಬ ಕಿಲಾಡಿ ಮಂಗಣ್ಣ ಅಕ್ಷರಶಃ 'ಮನಿ ಹೈಸ್ಟ್' (Money Heist) ಮಾಡಿದ್ದಾನೆ. ಮಹಿಳೆಯೊಬ್ಬಳ ಕೈಯಲ್ಲಿದ್ದ ಬರೋಬ್ಬರಿ 42 ಸಾವಿರ ರೂಪಾಯಿಯ ಕಂತೆಯನ್ನು ಎತ್ಕೊಂಡು ಓಡಿಹೋಗಿ ಮರದ ಮೇಲೆ ಕೂತುಬಿಟ್ಟಿದ್ದಾನೆ. ಆಮೇಲೆ ನಡೆದಿದ್ದೇ ಒಂದು ದೊಡ್ಡ ಕಾಮಿಡಿ ಸಿನಿಮಾ!

ಏನಿದು 'ಮಂಗಾಟ'?

ಅಯೋಧ್ಯೆಯ ಸಿವಿಲ್ ಲೈನ್ಸ್ ನಿವಾಸಿ ಅಂಜು ದೇವಿ ಅನ್ನೋರು ಪಾಪ, ಕೈಯಲ್ಲಿ 42,105 ರೂಪಾಯಿ ಇಟ್ಕೊಂಡು ಹೋಗ್ತಿದ್ರು. ಎಲ್ಲಿಂದ ಬಂತೋ ಗೊತ್ತಿಲ್ಲ, ಸಡನ್ ಆಗಿ ಎಂಟ್ರಿ ಕೊಟ್ಟ ಒಂದು ಮಂಗಣ್ಣ ಅಂಜು ದೇವಿ ಕೈಯಲ್ಲಿದ್ದ ಹಣದ ಕಂತೆಯನ್ನ 'ಪಕ್ಕಾ ಪ್ಲಾನ್' ಮಾಡಿ ಎತ್ಕೊಂಡು ಪರಾರಿಯಾಗಿದೆ. ಹಣ ಎತ್ಕೊಂಡಿದ್ದಲ್ಲದೆ ಸೀದಾ ಹೋಗಿ ಒಂದು ಮರದ ಮೇಲೆ ಕೂತು, ಕೆಳಗಿದ್ದವರಿಗೆ 'ವೆರೈಟಿ'ಯಾಗಿ ಫೋಸ್ ಕೊಡೋಕೆ ಶುರು ಮಾಡಿದೆ!

ತಕ್ಷಣ ಅಕ್ಕಪಕ್ಕದವರೆಲ್ಲ ಸೇರಿ ಹಣ ವಾಪಸ್ ಪಡೆಯೋಕೆ ಟ್ರೈ ಮಾಡಿದ್ರು. ಆದ್ರೆ ಮಂಗಣ್ಣ ಬಿಡ್ಬೇಕಲ್ಲ? ಯಾರಾದ್ರೂ ಹತ್ತಿರ ಹೋದ್ರೆ ಅದು ಹಣ ತಗೊಂಡು ಇನ್ನೊಂದು ಮರಕ್ಕೆ ಜಂಪ್ ಮಾಡ್ತಿತ್ತು. ಅಯ್ಯೋ ನನ್ನ ಹಣ ಹೋಯ್ತಲ್ಲ ಅಂತ ಅಂಜು ದೇವಿ ಗೋಳಾಡೋಕೆ ಶುರು ಮಾಡಿದ್ರು. ಕೊನೆಗೆ ಪೊಲೀಸರಿಗೆ ವಿಷಯ ತಿಳಿಸಿದ್ರು. ಸಬ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಮತ್ತು ಅವರ ಟೀಮ್ ಸ್ಪಾಟ್‌ಗೆ ಬಂತು.

ಕೆಲಸ ಮಾಡಿತು 'ಬಾಳೆಹಣ್ಣು' ಸ್ಟ್ರಾಟಜಿ!

ಪೊಲೀಸರು ಒಂದಂತೂ ಅರ್ಥ ಮಾಡ್ಕೊಂಡ್ರು, ಮಂಗಣ್ಣನ ಹತ್ರ ಬಲವಂತ ಮಾಡಿದ್ರೆ ಕೆಲಸ ಆಗಲ್ಲ. ಹಾಗಾಗಿ ಅವರು 'ಮೃದು ಧೋರಣೆ' ತಳೆದ್ರು. ಮಂಗನಿಗೆ ಏನು ಅಂದ್ರೆ ಇಷ್ಟ? ಬಾಳೆಹಣ್ಣು! ಪೊಲೀಸರು ತಕ್ಷಣ ಒಂದು ಬಾಳೆಹಣ್ಣು ತಂದು ಮಂಗನಿಗೆ ತೋರಿಸಿದ್ರು. ಮಂಗಣ್ಣನಿಗೆ ಹಣಕ್ಕಿಂತ ಬಾಳೆಹಣ್ಣು ಅಂದ್ರೆನೇ ಜಾಸ್ತಿ ಪ್ರೀತಿ ಅನ್ಸುತ್ತೆ. ಹಣದ ಕಂತೆಗಿಂತ ಬಾಳೆಹಣ್ಣಿನ ಕಡೆಗೆ ಅವನ ಗಮನ ಹೋಯ್ತು. ತಕ್ಷಣ ಕೈಯಲ್ಲಿದ್ದ ಹಣದ ಬಂಡಲ್ ಕೆಳಗೆ ಹಾಕಿ, ಬಾಳೆಹಣ್ಣು ಕಿತ್ಕೊಂಡು ತಿನ್ನೋಕೆ ಶುರು ಮಾಡ್ತು. ಅಷ್ಟೇ! ಕೆಳಗೆ ಬಿದ್ದಿದ್ದ 42,105 ರೂಪಾಯಿಯನ್ನು ಪೊಲೀಸರು ತಕ್ಷಣ ವಶಕ್ಕೆ ತಗೊಂಡ್ರು.

ಪೊಲೀಸರು ವಶಪಡಿಸಿಕೊಂಡ ಹಣವನ್ನೆಲ್ಲ ಎಣಿಸಿ ಅಂಜು ದೇವಿಗೆ ಹಸ್ತಾಂತರಿಸಿದ್ರು. ಸತ್ತೇ ಹೋಯ್ತು ಅನ್ಕೊಂಡಿದ್ದ ಹಣ ವಾಪಸ್ ಸಿಕ್ಕಿದ್ದಕ್ಕೆ ಮಹಿಳೆ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನ ಈ ವಿಡಿಯೋ ನೋಡಿ ಫುಲ್ ಎಂಜಾಯ್ ಮಾಡ್ತಿದ್ದಾರೆ. ಒಬ್ಬ ಯೂಸರ್ "ಇಷ್ಟೊಂದು ಹಣ ಇಟ್ಕೊಂಡು ಯಾರು ಓಡಾಡ್ತಾರೆ ಸ್ವಾಮಿ?" ಅಂತ ಕೇಳಿದ್ರೆ, ಇನ್ನೊಬ್ಬ "ನನ್ನ ಬ್ಯಾಗ್ ಅಲ್ಲಿ ಇಷ್ಟೊಂದು ಹಣ ಇರೋ ಕಾಲ ಯಾವಾಗ ಬರುತ್ತೋ?" ಅಂತ ತಮಾಷೆ ಮಾಡ್ತಿದ್ದಾನೆ. ಒಟ್ಟಿನಲ್ಲಿ ಅಯೋಧ್ಯೆಯ ಈ ಮಂಗಣ್ಣನ 'ಹೈಜಾಕ್' ಸಕ್ಸಸ್ ಆಗಿಲ್ಲ, ಯಾಕಂದ್ರೆ ನಮ್ಮ ಪೊಲೀಸಪ್ಪರು ಮಂಗನಿಗಿಂತಲೂ ಕಿಲಾಡಿಗಳು!

Scroll to load tweet…