ಬುಲಂದ್‌ಶಹರ್ ಜಿಲ್ಲಾ ನ್ಯಾಯಾಲಯದ ಬಳಿ, ಮಂಗವೊಂದು ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಸಿದು ಮರವೇರಿದೆ. ನಂತರ ಬ್ಯಾಗ್‌ನಲ್ಲಿದ್ದ ನೋಟುಗಳನ್ನು ಹರಿದು ಕೆಳಗೆ ಎಸೆದಿದ್ದು, ಸ್ಥಳೀಯರ ಸಹಾಯದಿಂದ ಮಾಲೀಕರು ಸುಮಾರು ₹1.98 ಲಕ್ಷ ಹಣವನ್ನು ಮರಳಿ ಪಡೆದರು.
ಬುಲಂದ್‌ಶಹರ್ (ಮೇ.31): ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಶನಿವಾರ ಆಶ್ಚರ್ಯಕರ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿದ್ದ ಮಂಗ, ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಬರೋಬ್ಬರಿ 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್‌ಅನ್ನು ಕಸಿದುಕೊಂಡು, ಮರ ಹತ್ತಿ ಆಕಾಶದಿಂದ ನೋಟುಗಳ ಮಳೆ ಸುರಿಸಿದ ಪ್ರಸಂಗ ಜರುಗಿದೆ. ಮರದಿಂದ ನೋಟುಗಳು ಬೀಳುತ್ತಿದ್ದಂತೆ ಕೆಳಗಿದ್ದ ಸಾರ್ವಜನಿಕರು ಹಣವನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದು, ಇಡೀ ಪ್ರದೇಶದಲ್ಲಿ ಕೆಲಕಾಲ ಭಾರಿ ಗದ್ದಲ ಸೃಷ್ಟಿಯಾಯಿತು.
ಸ್ಥಳೀಯ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಆಸ್ತಿ ಖರೀದಿ ಸಂಬಂಧಿಸಿದ ದಾಖಲೆ ಪತ್ರಗಳ ಕೆಲಸವನ್ನು ಪೂರ್ಣಗೊಳಿಸಲು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಇರುವ ವಕೀಲರ ಚೇಂಬರ್‌ಗೆ ಆಗಮಿಸಿದ್ದರು. ಅವರ ಕೈಯಲ್ಲಿ ಸುಮಾರು 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್ ಇತ್ತು. ಅವರು ವಕೀಲರ ಕಚೇರಿಯ ಬಳಿ ನಿಂತಿದ್ದಾಗ, ಅಲ್ಲಿಗೆ ಹಠಾತ್ ಆಗಿ ನುಗ್ಗಿದ ಮಂಗ ಕೈಯಲ್ಲಿದ್ದ ಹಣದ ಬ್ಯಾಗ್‌ಅನ್ನು ಕಸಿದುಕೊಂಡು ಮಿಂಚಿನಂತೆ ಮರ ಹತ್ತಿದೆ.
ತಿಂಡಿ ಅಂದುಕೊಂಡು ನೋಟಿನ ಕಂತೆಗಳನ್ನು ಹರಿದು ಹಾಕಿದ ಕೋತಿ!
ಬ್ಯಾಗ್ ಕಸಿದುಕೊಂಡ ಮಂಗ ಮರಹತ್ತಿ, ಬ್ಯಾಗ್ ಒಳಗಡೆ ತಿನ್ನಲು ಏನಾದರೂ ಆಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅದನ್ನು ಜಾಲಾಡಲು ಆರಂಭಿಸಿದೆ. ಆದರೆ ಅದಕ್ಕೆ ಸಿಕ್ಕಿದ್ದು ಆಹಾರದ ಬದಲಾಗಿ ₹500 ಮುಖಬೆಲೆಯ ನೋಟಿನ ಕಂತೆಗಳು.
ಬ್ಯಾಗ್‌ನಲ್ಲಿ ತಿಂಡಿ ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡಿತೋ ಅಥವಾ ಕುತೂಹಲದಿಂದಲೋ ಗೊತ್ತಿಲ್ಲ, ಆ ಮಂಗ ₹500 ನೋಟುಗಳ ಕಂತೆಗಳನ್ನು ಒಂದೊಂದಾಗಿ ಹರಿದು ಗಾಳಿಯಲ್ಲಿ ತೂರಲು ಪ್ರಾರಂಭಿಸಿತು. ಮರದಿಂದ ನೋಟುಗಳು ಕೆಳಗೆ ಬೀಳುತ್ತಿದ್ದ ದೃಶ್ಯವು ಆಕಾಶದಿಂದ ಹಣದ ಮಳೆಯೇ ಸುರಿಯುತ್ತಿರುವಂತೆ ಭಾಸವಾಗುತ್ತಿತ್ತು. ಕೆಲವೇ ನಿಮಿಷಗಳಲ್ಲಿ, ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದ ತುಂಬಾ ಕರೆನ್ಸಿ ನೋಟುಗಳು ಹಾರಾಡುತ್ತಿರುವುದನ್ನು ಕಂಡು ಕೋರ್ಟ್ ಆವರಣದಲ್ಲಿದ್ದ ನೂರಾರು ಜನರ ದಂಡೇ ಮರದ ಕೆಳಗೆ ಜಮಾಯಿಸಿತು.
ಮಂಗನ ಈ ವಿಶಿಷ್ಟ 'ಹಣದ ಮಳೆ'ಯ ಇಡೀ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ಘಟನೆಯ 53 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು (Views) ಗಳಿಸುತ್ತಿದೆ.
ಸ್ಥಳೀಯರ ಪ್ರಾಮಾಣಿಕತೆ: ಮರಳಿ ಸಿಕ್ಕಿತು ₹1.98 ಲಕ್ಷ ಹಣ!
ತಮ್ಮ ಕಣ್ಣೆದುರೇ ಕಷ್ಟದ ಹಣ ಗಾಳಿಯಲ್ಲಿ ತೇಲಿ ಹೋಗುತ್ತಿರುವುದನ್ನು ಕಂಡು ಬ್ಯಾಗ್ ಮಾಲೀಕರು ಜೋರಾಗಿ ಕೂಗಾಡಿ ನೆರವಿಗಾಗಿ ಚೀರಾಡಿದರು. ಇದನ್ನು ಗಮನಿಸಿದ ನೋಂದಣಿ ಕಚೇರಿಯ ಆವರಣದಲ್ಲಿದ್ದ ಇತರ ವಕೀಲರು, ಮುನ್ಸಿಪಾಲಿಟಿ ಸಿಬ್ಬಂದಿ ಹಾಗೂ ದಾರಿಹೋಕರು ತಕ್ಷಣವೇ ಕಾರ್ಯಪ್ರವೃತ್ತರಾದರು. ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದರಾದರೂ, ಕೊನೆಯಲ್ಲಿ ಸ್ಥಳೀಯರ ಸಹಾಯದಿಂದ ಬ್ಯಾಗ್ ಮಾಲೀಕರು ನಿರಾಳರಾಗಿದ್ದಾರೆ.
ಹಣದ ಮಾಲೀಕನ ಆಕ್ರಂದನಕ್ಕೆ ಕರಗಿದ ಸ್ಥಳೀಯರು ತಾವು ಆಯ್ದುಕೊಂಡ ಹಣವನ್ನೆಲ್ಲಾ ಅವರಿಗೆ ಮರಳಿ ಒಪ್ಪಿಸಿದ್ದಾರೆ. ಮಂಗ ರಸ್ತೆಗೆ ಎಸೆದಿದ್ದ ₹2 ಲಕ್ಷ ಒಟ್ಟು ಹಣದಲ್ಲಿ ಬರೋಬ್ಬರಿ ₹1.98 ಲಕ್ಷ ಹಣ ಯಶಸ್ವಿಯಾಗಿ ಮಾಲೀಕನ ಕೈ ಸೇರಿದ್ದು, ಕೇವಲ 2 ಸಾವಿರ ರೂಪಾಯಿಗಳಷ್ಟೇ ಕೈತಪ್ಪಿ ಹೋಗಿದೆ.


