ದೆಹಲಿಯ ಜಂತರ್ ಮಂತರ್ ಬಳಿ ಟ್ರಾಫಿಕ್ ಸಿಗ್ನಲ್ ಮಧ್ಯೆ ಮಹಿಳೆಯೊಬ್ಬರು ಮಲಗಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ತಮಿಳುನಾಡು ಸಿಎಂ, ನಟ ವಿಜಯ್ ಬಂದು ತನ್ನನ್ನು ಅಪ್ಪಿಕೊಳ್ಳುವವರೆಗೂ ಕದಲುವುದಿಲ್ಲ ಎಂದು ಆಕೆ ಪಟ್ಟು ಹಿಡಿದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟಿಜನ್ ಏನಂದ್ರು?
ಸಾಮಾನ್ಯ ಜನರು ಸಿನಿಮಾ ನಟರ ಬಗ್ಗೆ ಅದೆಷ್ಟು ಅಭಿಮಾನ ಬೆಳೆಸಿಕೊಂಡಿರುತ್ತಾರೆ ಎಂದರೆ ಅವರಿಗಾಗಿ ಏನಕ್ಕೂ ಸಿದ್ಧರಾಗಿರ್ತಾರೆ. ಕೆಲವರು ದೇವರ ಸಮಾನ ಕಂಡರೆ, ಕೆಲವರು ತನ್ನ ಮೆಚ್ಚಿನ ಹೀರೋ ಮೇಲೆಯೇ ಮೋಹ ಬೆಳೆಸಿಕೊಳ್ತಾರೆ. ಅದರಲ್ಲೂ ತಮಿಳನಾಡು ಜನರ ಅಭಿಮಾನವೆಂದರೆ ಕೇಳಬೇಕೇ? ಅಲ್ಲಿನ ಜನರು ಸಿನಿಮಾ ನಟರ ಬಗ್ಗೆ ತುಂಬಾ ಅಂದ್ರೆ ತುಂಬಾ ತೀವ್ರ ಭಾವನೆಗಳೊಂದಿಗೆ ಅಭಿಮಾನಿಗಳಾಗಿರ್ತಾರೆ. ಇದೇ ಅಭಿಮಾನಿಗಳಿಂದಲೇ ನಟ ವಿಜಯ್ ಟಿವಿಕೆ ಪಕ್ಷ ಕಟ್ಟಿ ಚುನಾವಣೆಯಲ್ಲಿ ಗೆದ್ದು ಇಂದು ತಮಿಳನಾಡಿನ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿರುವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಸಿಎಂ ವಿಜಯ್ ಅವರು ನನ್ನ ತಬ್ಬಿಕೊಳ್ಳಬೇಕು
ನಟ ವಿಜಯ್ ಎಂದರೆ ತಮಿಳುಗರು ಈಗಲೂ ಕೆಲವರು ಬಿದ್ದು ಸಾಯ್ತಾರೆ, ಕೆಲವರು ಒಂದೇ ಒಂದು ಹಗ್‌ಗೆ ಹಂಬಲಿಸಿ ರಸ್ತೆ ಮೇಲೆ ಉರುಳಾಡ್ತಾರೆ. ಹೌದು ಅಂತಹದೊಂದು ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಜಂತರ್ ಮಂತರ್ ಬಳಿಯ ಟ್ರಾಫಿಕ್ ಸಿಗ್ನಲ್ ಮಧ್ಯದಲ್ಲಿ ಮಲಗಿ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಲು ಒತ್ತಾಯಿಸಿದ್ದಾರೆ. ವೀಡಿಯೊ ನೋಡಿದ ಪೊಲೀಸರು ಅಲ್ಲಿಂದ ಸ್ಥಳಾಂತರಿಸಲು ಹರಸಾಹಸ ಪಟ್ಟಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸಿಎಂ ವಿಜಯ್ ಅಪ್ಪಿಕೊಳ್ಳುವವರೆಗೆ ಕದಲುವುದಿಲ್ಲ
ಟ್ರಾಫಿಕ್ ರಸ್ತೆ ಮಧ್ಯೆಯೇ ಮಹಿಳೆ ಮಲಗಿದ್ದಾಳೆ. ಈ ವೇಳೆ ಇಬ್ಬರು ಲೇಡಿ ಪೊಲೀಸರು ಮಹಿಳೆಯನ್ನು ಮನವೊಲಿಸುತ್ತಿರುವುದು ಕಂಡುಬಂದಿದೆ. ಆದರೆ ಆ ಮಹಿಳೆ ತನ್ನ ನಿಲುವು ಬದಲಾಯಿಸುತ್ತಿಲ್ಲ. ಅಲ್ಲಿ ಯಾಕೆ ಮಲಗಿದ್ದೀಯಾ ಎಂದು ಕೇಳಿದಾಗ, ತಳಪತಿ ವಿಜಯ್ ಬಂದು ನನ್ನನ್ನು ಅಪ್ಪಿಕೊಳ್ಳಬೇಕು, ಅಪ್ಪಿಕೊಳ್ಳುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎಂದು ವರಾತ ತೆಗೆದಿದ್ದಾಳೆ.
ನನ್ನ ಮುಟ್ಟಬೇಡಿ ವಿಜಯ್ ಅವರನ್ನ ಅಪ್ಪಿಕೊಳ್ಳೋದು ನನ್ನ ಹಕ್ಕು!
'ಇಲ್ಲಿ ಮಲಗಿ ಏನು ಪ್ರಯೋಜನ? ಇಲ್ಲಿ ವಾಹನಗಳಿಗೆ ತೊಂದರೆ ಆಗುತ್ತಿದೆ' ಎಂದು ಯುಟ್ಯೂಬರ್ ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆ ಮಹಿಳೆ 'ನನಗೆ ಈ ಬಗ್ಗೆ ಏನೂ ಹೇಳಲೂ ಇಷ್ಟವಿಲ್ಲ. ನನ್ನನ್ನ ಏನೂ ಕೇಳಬೇಡಿ, ನಾನು ವಿಜಯ್ ಅವರನ್ನು ಅಪ್ಪಿಕೊಳ್ಳಬೇಕು. ಅವರನ್ನ ಅಪ್ಪಿಕೊಂಡ ಬಳಿಕವೇ ಇಲ್ಲಿಂದ ಹೋಗುತ್ತೇನೆ ಎನ್ನುತ್ತಾಳೆ. ಮಹಿಳೆಯನ್ನ ಎಬ್ಬಿಸಲು ಪೊಲೀಸರು ಮುಂದಾದಾಗ, 'ನನ್ನನ್ನು ಮುಟ್ಟಬೇಡಿ, ಇದು ನನ್ನ ಹಕ್ಕು' ಎಂದು ಹೇಳುತ್ತಾಳೆ. ಮಹಿಳೆಯ ವಿಚಿತ್ರ ಬೇಡಿಕೆಗೆ ಪೊಲೀಸರಿಗೂ ಮುಂದೇನು ಮಾಡಬೇಕು ಎಂದು ತೋಚದಂತೆ ನಿಂತಿದ್ದಾರೆ. ಈ ನಡುವೆ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನಗಳು ಮುಂದೆ ಸಾಗಲು ಅಡ್ಡಿಯಾಗಿ ಸಾಲುಗಟ್ಟಲೇ ನಿಂತಿರೋದು ವಿಡಿಯೋದಲ್ಲಿ ಕಾಣಿಸಿದೆ.
ದೆಹಲಿಯಲ್ಲಲ್ಲ ಚೆನ್ನೈನಲ್ಲಿ ಮಕ್ಕೊ ಎಂದ ನೆಟಿಜನ್
syedqamarali74 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಬಹುತೇಕರು ಇದನ್ನ ತಮಾಷೆಯಾಗಿ ನೋಡಿದ್ದಾರೆ. ಇನ್ನು ಕೆಲವರು ಇದೊಳ್ಳೆ ಕಥೆ ಆಯ್ತು ಎಂದು ಉತ್ತರಿಸಿದ್ದಾರೆ. ಒಬ್ಬ, 'ಇದು ನನ್ನ ಹಕ್ಕು...ಇದು ಯಾವ ರೀತಿಯ ಹಕ್ಕು ಮಾರಾಯ್ತಿ? ಎಂದು ಕೇಳಿದ್ದಾರೆ, ಮತ್ತೊಬ್ಬ, 'ದೆಹಲಿಯಲ್ಲಿ ಮಲಗುವುದರಿಂದ ಏನು ಪ್ರಯೋಜನ? ನೀವು ಮಲಗಬೇಕಾದರೆ, ಹೋಗಿ ಚೆನ್ನೈನಲ್ಲಿ ಮಲಗಿ' ಎಂದು ಬರೆದಿದ್ದಾರೆ. ಮತ್ತೊಬ್ಬ 'ಎಂತಹ ದುರಂತ! ಇದಕ್ಕಾಗಿ ಆ ಬಡಪಾಯಿ ಪೊಲೀಸರಿಗೆ ತೊಂದರೆಯಾಗ್ತಿದೆ ಎಂದು ಬರೆದಿದ್ದಾರೆ.


