Viral News: ಕಳೆದ 27 ವರ್ಷಗಳಿಂದ ಯಾರನ್ನು ಅಪ್ಪ-ಅಮ್ಮ ಎಂದು ನಂಬಿದ್ದಳು, ಅವರು ನಿಜವಾದ ಪೋಷಕರೇ ಅಲ್ಲ, ಬದಲಾಗಿ ಕಿಡ್ನಾಪರ್ ಗಳು ಎನ್ನುವ ಸತ್ಯ ಬಯಲಾಯ್ತು. ಒಂದು ಫೋಟೊದಿಂದ ಬಯಲಾಯ್ತು ಆಕೆಯ ಜೀವನದ ಬಹು ದೊಡ್ಡ ರಹಸ್ಯ. ಕೊನೆಗೂ ಆಕೆಗೆ ತಾಯಿ ಸಿಕ್ಕಿದಳೆ? ಮುಂದೇನಾಯ್ತು, ಇಲ್ಲಿದೆ ಕುತೂಹಲಕಾರಿ ಮಾಹಿತಿ.
27 ವರ್ಷ ಅಮ್ಮ-ಅಪ್ಪ ಎಂದು ನಂಬಿದ್ದವರು ಕಿಡ್ನ್ಯಾಪರ್‌ಗಳು
ಆಕೆ 27 ವರ್ಷಗಳ ಕಾಲ ಅವರನ್ನು ತನ್ನ ಸ್ವಂತ, ಹೆತ್ತ ತಂದೆ ತಾಯಿ ಎಂದೇ ನಂಬಿದ್ದಳು. ಅವರು ಪ್ರೀತಿಯಿಂದ ಸಾಕಿ ಸಲಹಿದ್ದರು. ಆದರೆ ಆ ಒಂದು ಫೋಟೊದಿಂದ ಬಯಲಾಯ್ತು ಆಕೆಯ ಜನ್ಮ ರಹಸ್ಯ, ತನ್ನನ್ನು ಇಷ್ಟು ದಿನ ಸಾಕಿದವರು. ತಾನು ಅಪ್ಪ, ಅಮ್ಮ ಎಂದು ಪ್ರೀತಿಯಿಂದ ಕರೆಯುತ್ತಿದ್ದವರು, ತನ್ನ ಪೋಷಕರೇ ಅಲ್ಲ ಬದಲಾಗಿ ತನ್ನ ಕಿಡ್ನಾಪರ್ ಗಳು ಎನ್ನುವ ಸತ್ಯ ಭರ ಸಿಡಿಲಿನಂತೆ ಆಕೆಯ ಎದುರು ಅನಾವರಣವಾಗಿತ್ತು. ಮುಂದೇನಾಯ್ತು? ಇಲ್ಲಿದೆ ಮೆಕ್ಸಿಕೋದಲ್ಲಿ ನಟಿ ಸಿನಿಮಾ ಸ್ಟೋರಿಯಂತ ಘಟನೆ.
ಮೂರನೇ ವಯಸ್ಸಿನಲ್ಲಿ ಮೆಕ್ಸಿಕೋದಿಂದ ನಾಪತ್ತೆ
ಮೆಕ್ಸಿಕೋ ಸಿಟಿಯ ಪ್ರಸಿದ್ಧ ಬೊಸ್ಕೆ ದೆ ಚಾಪುಲ್ಟೆಪೆಕ್ ಪಾರ್ಕ್‌ನಲ್ಲಿ ಕೇವಲ 3 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. 1995ರ ಅಕ್ಟೋಬರ್ 1ರಂದು ಲೊರೆನಾ ರಾಮಿರೆಜ್ ತಮ್ಮ ಪತಿ, ಮೂವರು ಮಕ್ಕಳು ಹಾಗೂ ಕುಟುಂಬದವರೊಂದಿಗೆ ಪಾರ್ಕ್‌ಗೆ ತೆರಳಿದ್ದರು. ಅಲ್ಲಿಂದ ಹೊರಡುವ ಸಮಯದಲಿ ಕ್ಷಣಕಾಲ ಪೋಷಕರ ಕೈ ತಪ್ಪಿದ ಜುವಾನಾ ರಾಮಿರೆಜ್ ಏಕಾಏಕಿ ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಪೊಲೀಸರಿಗೆ ದೂರು ಸಲ್ಲಿಸಿದರೂ ಸಹ ಪ್ರಯೋಜನವಾಗಲಿಲ್ಲ. ಆದರೆ ಲೊರೆನಾ ತನ್ನ ಮಗಳಿಗಾಗಿ ಸದಾ ಕಾಯುತ್ತಲೇ ಇದ್ದಳು. ಇನ್ನೊಂದೆಡೆ ಜುವಾನಾಳನ್ನು ಕಿಡ್ನಾಪ್ ಮಾಡಿದವರು ಆಕೆಯನ್ನು ಟೊಲುಕಾಗೆ ಕರೆದೊಯ್ದು, ಆಕೆಯ ಹೆಸರನ್ನು ‘ರೊಸಿಯೋ’ ಎಂದು ಬದಲಿಸಿದರು. ಅಲ್ಲದೆ, ಆಕೆಯ ಹುಟ್ಟಿದ ದಿನವನ್ನು ಬದಲಿಸಿ, ತಾವೇ ಆಕೆಯ ನಿಜವಾದ ತಂದೆ-ತಾಯಿ ಎಂದು ನಂಬಿಸಿದ್ದರು.
ಆದರೆ ಆಕೆಗೆ ಆ ಮನೆಯಲ್ಲಿ ಉತ್ತಮ ಜೀವನ ಸಿಗಲಿಲ್ಲ. ನೆರೆಹೊರೆಯವರು, ನೀನು ಅವರ ಸ್ವಂತ ಮಗಳು ಅಲ್ಲ, ದತ್ತು ಮಗಳು ಎಂದರು. ಅಪ್ಪ-ಅಮ್ಮನ ಬಳಿ ಅದನ್ನು ಕೇಳಿದಾಗ, ಹೌದು, ಪಾರ್ಕ್ ಒಂದರಲ್ಲಿ ಒಬ್ಬಳೇ ಅಳುತ್ತಾ ನಿಂತಿದ್ದೆ, ಎಲ್ಲರನ್ನೂ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ, ಹಾಗಾಗಿ ನಾವು ಕರೆದುಕೊಂಡು ಬಂದೆವು ಎಂದರು. ನಂತರ ತನ್ನ 17ನೇ ವಯಸ್ಸಿನಲ್ಲಿ ಜುವಾನಾ ಆ ಮನೆಯಿಂದ ತಪ್ಪಿಸಿಕೊಂಡು ತನ್ನದೇ ಜೀವನ ಕಟ್ಟಿಕೊಂಡಳು.ಬಳಿಕ ಮದುವೆ ಕೂಡ ಆದಳು.
27ವರ್ಷಗಳ ಬಳಿಕ ಅಪ್ಪನ ಮಡಿಲು ಸೇರಿದ ಜುವಾನಾ
ಸುಮಾರು 27 ವರ್ಷಗಳ ಬಳಿಕ ಸಾಮಾಜಿಕ ಜಾಲತಾಣವೇ ಈ ಕುಟುಂಬವನ್ನು ಮತ್ತೆ ಒಂದುಗೂಡಿಸಿತು. ಜುವಾನಾ ತನ್ನ ಬಾಲ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹಾಗೂ ತಾವು ಕಾಣೆಯಾಗಿರುವ ಬಗ್ಗೆ ಮಾಹಿತಿ ಕೂಡ ನೀಡಿದರು. ಆ ಫೋಟೋವನ್ನು ಲೊರೆನಾಳ ಮತ್ತೊಬ್ಬ ಮಗಳು ಅಂದರೆ ಜುವಾನಾಳ ಸಹೋದರಿ ಮಾರಿಯಾ ಜೋಸ್ ನೋಡಿ, ಜುವಾನಾಳನ್ನು ಸಂಪರ್ಕಿಸಿದರು. ಇಬ್ಬರ ನಡುವಿನ ಸಾಮ್ಯತೆ ಅನುಮಾನ ಹುಟ್ಟಿಸಿತು. ಬಳಿಕ ನಡೆದ DNA ಪರೀಕ್ಷೆಯಲ್ಲಿ ತಾಯಿ-ಮಗಳ ಸಂಬಂಧ ಶೇ.99.99ರಷ್ಟು ಖಚಿತವಾಯಿತು.
2022ರಲ್ಲಿ ಲೊರೆನಾ ಮತ್ತು ಜುವಾನಾ ಮತ್ತೆ ಭೇಟಿಯಾದರು. “ನೀವು ನನ್ನ ತಾಯಿ” ಎಂದು ಜುವಾನಾ ಹೇಳುತ್ತಿದ್ದಂತೆ ಇಬ್ಬರೂ ಕಣ್ಣೀರಿನಲ್ಲಿ ಮುಳುಗಿ, ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಬರೋಬ್ಬರಿ 27 ವರ್ಷಗಳ ಹಿಂದೆ ಕಳೆದು ಹೋದ ಮಗಳು ಮತ್ತೆ ಸಿಕ್ಕಿದ ಖುಷಿಯಲ್ಲಿ ತಾಯಿಯಿದ್ದರೆ, ತನ್ನ ನಿಜವಾದ ಪೋಷಕರನ್ನು ಪಡೆದ ಸಂತಸದಲ್ಲಿ ಜುವಾನ ಸಂಭ್ರಮಿಸಿದರು.


