ಭಾರತದ 37 ವರ್ಷದ ಉದ್ಯಮಿಯೊಬ್ಬರು, 34ನೇ ವಯಸ್ಸಿನಲ್ಲಿ ₹1 ಕೋಟಿ ಆಸ್ತಿಯಿಂದ, ಮಧ್ಯಪ್ರಾಚ್ಯದಲ್ಲಿ ತೆರಿಗೆ ರಹಿತ ಉದ್ಯೋಗ ಪಡೆದು ಕೇವಲ 3 ವರ್ಷಗಳಲ್ಲಿ ತಮ್ಮ ಸಂಪತ್ತನ್ನು ₹7.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಈ ಯಶಸ್ಸಿನ ಪಯಣ, ಹೂಡಿಕೆಯ ವಿವರಗಳು ಮತ್ತು ಸಂಪತ್ತು ಗಳಿಕೆಯ ರಹಸ್ಯವನ್ನು ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ 37 ವರ್ಷದ ಉದ್ಯಮಿಯೊಬ್ಬರು ತಮ್ಮ ವೃತ್ತಿಜೀವನದ ಜರ್ನಿ ಹಾಗೂ ಕೋಟ್ಯಂತರ ರೂಪಾಯಿ ಸಂಪತ್ತು ಗಳಿಸಿದ ಕಥೆಯನ್ನು ರೆಡ್ಡಿಟ್ (Reddit) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 34ನೇ ವಯಸ್ಸಿನಲ್ಲಿ 1 ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಇವರು, ಕೇವಲ ಮೂರೇ ಮೂರು ವರ್ಷಗಳಲ್ಲಿ ತಮ್ಮ ಸಂಪತ್ತನ್ನು ₹7.5ಕೋಟಿಗೆ ಏರಿಸಿಕೊಂಡಿದ್ದಾರೆ! '34 ರಿಂದ 7.5 ಕೋಟಿ ರೂ. 37 ರವರೆಗೆ ನನ್ನ ಮಧ್ಯಪ್ರಾಚ್ಯ ಸಲಹಾ ಪ್ರಯಾಣ ಎಂಬ ಶೀರ್ಷಿಕೆಯಲ್ಲಿ ಅವರು ಬರೆದುಕೊಂಡ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಶೂನ್ಯದಿಂದ ಆರಂಭವಾದ ವೃತ್ತಿ ಪಯಣ!
22ನೇ ವಯಸ್ಸು: ಗ್ರಾಜುಯೇಟ್ ಟ್ರೈನಿಯಾಗಿ ಕೆಲಸ ಆರಂಭ. ವಾರ್ಷಿಕ ಸಂಬಳ ₹10 ಲಕ್ಷ.
ಶೈಕ್ಷಣಿಕ ಅರ್ಹತೆ: ಭಾರತದ ಪ್ರತಿಷ್ಠಿತ ಸಂಸ್ಥೆಯಿಂದ ಎಂಜಿನಿಯರಿಂಗ್ ಹಾಗೂ ಎಂಬಿಎ (MBA) ಪೂರ್ಣ.
26ನೇ ವಯಸ್ಸು: ಎಂಬಿಎ ಮುಗಿಸಿ ನಿರ್ವಹಣಾ ಸಲಹಾ ವಲಯಕ್ಕೆ ಎಂಟ್ರಿ. ವಾರ್ಷಿಕ ಸಂಬಳ ₹25 ಲಕ್ಷ.
29 ರಿಂದ 34ನೇ ವಯಸ್ಸು: ಕಾರ್ಪೊರೇಟ್ ವಲಯಕ್ಕೆ ಕಾಲಿಟ್ಟು, ವಾರ್ಷಿಕ ₹40 ಲಕ್ಷದಿಂದ ₹65 ಲಕ್ಷದವರೆಗೆ ಸಂಬಳ ಗಳಿಸಲು ಶುರು ಮಾಡಿದರು.
₹1 ಕೋಟಿಯ ಮೊದಲ ಮೈಲಿಗಲ್ಲು!
ಬಂದ ಸಂಬಳವನ್ನು ಸುಮ್ಮನೆ ಖರ್ಚು ಮಾಡದೆ, ಅವರು ಭಾರತದಲ್ಲಿದ್ದಾಗಲೇ ಇಪಿಎಫ್ (EPF), ಚಿನ್ನ, ಷೇರು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್‌ಗಳಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರು. ಇದರ ಫಲವಾಗಿ 34ನೇ ವಯಸ್ಸಿಗೆ ಅವರು ₹1 ಕೋಟಿಯ ಆಸ್ತಿ ಕಟ್ಟಿಕೊಂಡಿದ್ದರು.
ಜೀವನವನ್ನೇ ಬದಲಿಸಿದ ಆ ಒಂದು ನಿರ್ಧಾರ!
34ನೇ ವಯಸ್ಸಿನಲ್ಲಿ ಅವರ ಜೀವನದಲ್ಲೊಂದು ದೊಡ್ಡ ತಿರುವು ಸಿಕ್ಕಿತು. ಮಧ್ಯಪ್ರಾಚ್ಯ ದೇಶವೊಂದರಲ್ಲಿ ಕನ್ಸಲ್ಟಿಂಗ್ ಕೆಲಸ ಸಿಕ್ಕಿ ವಿದೇಶಕ್ಕೆ ಹಾರಿದರು.
ವಾರ್ಷಿಕ ವೇತನ: ಬರೋಬ್ಬರಿ ₹3.5 ಕೋಟಿ (ಸುಮಾರು 4 ಲಕ್ಷ ಡಾಲರ್).
ವಿಶೇಷತೆ: ಈ ಬೃಹತ್ ಆದಾಯಕ್ಕೆ ಯಾವುದೇ ತೆರಿಗೆ (Tax-free Salary) ಇರಲಿಲ್ಲ!
ತೆರಿಗೆ ಇಲ್ಲದ ಕಾರಣ, ಕೇವಲ ಎರಡೂವರೆ ವರ್ಷಗಳಲ್ಲಿ ಅವರು ₹6.5 ಕೋಟಿ ರೂಪಾಯಿಯನ್ನು ನೇರವಾಗಿ ಉಳಿತಾಯ ಮಾಡಿದರು. ಹಿಂದಿನ ₹1 ಕೋಟಿ ಹೂಡಿಕೆ ಹಾಗೂ ವಿದೇಶದ ₹6.5 ಕೋಟಿ ಉಳಿತಾಯ ಸೇರಿ, 37ನೇ ವಯಸ್ಸಿಗೆ ಅವರ ಒಟ್ಟು ನಿವ್ವಳ ಮೌಲ್ಯ ₹7.5 ಕೋಟಿ ತಲುಪಿತು!
ಇಂದಿನ ಅವರ ಆಸ್ತಿ ವಿವರ ಇಲ್ಲಿದೆ!
ಮುಂಬೈನಲ್ಲಿ 3 ಸ್ವಂತ ಮನೆಗಳು: ಸಂಪೂರ್ಣ ಸಾಲ ಮುಕ್ತವಾದ 3 ಪ್ರಾಪರ್ಟಿಗಳು.
700 ಗ್ರಾಂ ಚಿನ್ನ: ಭೌತಿಕ ಚಿನ್ನ ಹಾಗೂ ಸಾರ್ವಭೌಮ ಚಿನ್ನದ ಬಾಂಡ್‌ಗಳ (SGB) ರೂಪದಲ್ಲಿದೆ.
ಷೇರು ಹೂಡಿಕೆ: ಈಕ್ವಿಟಿ ಶೇರುಗಳಲ್ಲಿ ₹30 ಲಕ್ಷ ಹೂಡಿಕೆ.
ಜನರ ಪ್ರತಿಕ್ರಿಯೆ ಹೇಗಿತ್ತು?
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಹೆಚ್ಚಿನ ಸಂಬಳದಿಂದ ಮಾತ್ರವಲ್ಲದೆ, ಆರಂಭದಲ್ಲೇ ಸರಿಯಾದ ಹೂಡಿಕೆ ಯೋಜನೆ ಮಾಡಿದ್ದಕ್ಕೆ ಜನರು ಶ್ಲಾಘಿಸಿದ್ದಾರೆ. ಕೆಲ ಬಳಕೆದಾರರು ಮಧ್ಯಪ್ರಾಚ್ಯ ದೇಶಗಳನ್ನು ಸಂಪತ್ತು ಗಳಿಕೆಗೆ "ಚೀಟ್ ಕೋಡ್" ಎಂದು ಬಣ್ಣಿಸಿದರೆ, ಇನ್ನು ಕೆಲವರು ನೆಟ್ವರ್ಕಿಂಗ್ ಹಾಗೂ ವಿದೇಶಿ ಕೆಲಸ ಗಿಟ್ಟಿಸಿಕೊಳ್ಳುವ ಬಗ್ಗೆ ಸಲಹೆಗಳನ್ನು ಕೇಳಿದ್ದಾರೆ.


