ಕೇರಳದ ವೃದ್ಧ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 79 ವರ್ಷದ ವಿಜಯರಾಘವನ್ ಹಾಗೂ 75 ವರ್ಷದ ಸುಲೋಚನಾ ಅವರು ಕೇರಳದಲ್ಲಿ ಸರ್ಕಾರಿ ಪ್ರಯೋಜಕತ್ವದ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದರು

ಆ ಇಬ್ಬರು ವೃದ್ಧರಿಗೆ ಮಕ್ಕಳಿದ್ದರೋ ಇಲ್ಲವೋ ಗೊತ್ತಿಲ್ಲ, ತಾವೇ ಬೆಳೆಸಿ ದೊಡ್ಡವರು ಮಾಡಿದ ಮಕ್ಕಳೇ ಅವರನ್ನು ವೃದ್ಧಾಶ್ರಮಕ್ಕೆ ತಂದು ಸೇರಿಸಿದರೋ ಗೊತ್ತಿಲ್ಲ. ಆದರೆ ಆ ಹಿರಿಯ ಜೀವಗಳು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಒಬ್ಬಂಟಿಗಳಾಗಿ ವೃದ್ಧಾಶ್ರಮ ಸೇರಿದರು. ಅವರಿಗೆ ಒಂಟಿತನ ಕಾಡುತ್ತಿತ್ತು. ಅಂತಹ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲಿ ಅವರ ಬದುಕಿನಲ್ಲಿ ಪ್ರೀತಿ ಚಿಗುರಿದೆ.

ಹೌದು ಕೇರಳದ ವೃದ್ಧ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 79 ವರ್ಷದ ವಿಜಯರಾಘವನ್ ಹಾಗೂ 75 ವರ್ಷದ ಸುಲೋಚನಾ ಅವರು ಕೇರಳದಲ್ಲಿ ಸರ್ಕಾರಿ ಪ್ರಯೋಜಕತ್ವದ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದರು. ಈಗ ಅವರ ಮಧ್ಯೆ ಪ್ರೀತಿಯಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅಪರೂಪದ ಕ್ಷಣದಲ್ಲಿ ಕೇರಳದ ಕೆಲ ಸಚಿವರು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ವೃದ್ಧ ಜೋಡಿಯ ಮದುವೆ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯರಾಘವನ್ ಅವರು 2019ರಿಂದಲೂ ವೃದ್ಧಾಶ್ರಮದ ನಿವಾಸಿಯಾಗಿದ್ದರು. ಇದೇ ವೃದ್ಧಾಶ್ರಮಕ್ಕೆ 2024ರಲ್ಲಿ ಸುಲೋಚನಾ ಅವರು ಬಂದಿದ್ದರು. ಇವರಿಬ್ಬರಿಗೆ ಹೀಗೆ ವೃದ್ಧಾಶ್ರಮದ ಕಾರಿಡಾರ್‌ಗಳಲ್ಲಿ ಭೇಟಿಯಾಗಿ ಪರಸ್ಪರ ಪರಿಚಯವಾಗಿದ್ದು, ಬಳಿಕ ಇಬ್ಬರ ಮಧ್ಯೆ ಒಳ್ಳೆಯ ಸ್ನೇಹವೂ ಚಿಗುರೊಡೆದಿದೆ. ನಂತರ ಈ ಸ್ನೇಹ ಪ್ರೀತಿಗೆ ತಿರುಗಿದ್ದು, ಇಬ್ಬರು ಮದ್ವೆಯಾಗಲು ನಿರ್ಧರಿಸಿದ್ದಾರೆ.

ಸೋಮವಾರ ಜುಲೈ 7 ರಂದು ವೃದ್ದಾಶ್ರಮದಲ್ಲೇ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ನಗರ ಮೇಯರ್ ಎಂ.ಕೆ. ವರ್ಗೀಸ್ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಅವರು ನವದಂಪತಿಗೆ ಶುಭ ಹಾರೈಸಿದರು. ಈ ದಂಪತಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಿದ್ದಾರೆ.

ತಮ್ಮ ಉಳಿದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ಈ ಜೋಡಿ ಅಧಿಕಾರಿಗಳ ಮುಂದೆ ಹೃತ್ಪೂರ್ವಕವಾಗಿ ವಿನಂತಿ ಮಾಡಿದ ಹಿನ್ನೆಲೆ ಕೇರಳದ ಸಾಮಾಜಿಕ ನ್ಯಾಯ ಇಲಾಖೆ ಈ ಮದುವೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತಿಳಿದು ಬಂದಿದೆ. ಈ ಸುಂದರ ಕ್ಷಣದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಗೌರವ ಎಂದು ಸಮಾಜಿಕ ನ್ಯಾಯ ಖಾತೆ ಸಚಿವೆ ಡಾ. ಬಿಂದು ಹೇಳಿಕೆ ನೀಡಿದ್ದಾರೆ.

ಡಾ. ಬಿಂದು, ಮೇಯರ್ ಎಂ.ಕೆ ವರ್ಗೀಸ್ ಸೇರಿದಂತೆ ಆರೈಕೆ ಗೃಹದ ಸೂಪರಿಂಟೆಂಡೆಂಟ್, ಸ್ಥಳೀಯ ಕೌನ್ಸಿಲರ್‌ಗಳು ಮತ್ತು ಇತರ ನಿವಾಸಿಗಳು ಈ ಮದುವೆಯಲ್ಲಿ ಕುಟುಂಬದವರಂತೆ ಭಾಗಿಯಾದರು. ಈ ಜೋಡಿಯ ಮುಂದಿನ ದಿನಗಳು ಪ್ರೀತಿ ಹಾಗೂ ಸಂತೋಷದಿಂದ ತುಂಬಿರಲಿ ಎಂದು ನವಜೋಡಿಗೆ ಫೇಸ್‌ಬುಕ್ ಮೂಲಕ ಸಚಿವೆ ಬಿಂದು ಶುಭ ಹಾರೈಸಿದ್ದಾರೆ.

ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಶುಭ ಹಾರೈಸಿದ್ದಾರೆ.

View post on Instagram