ಜೋಳ ಮಾರಾಟ ಮಾಡಿ ಪಡೆದ ₹17 ಸಾವಿರವನ್ನು ಜಮೀನಿನಲ್ಲಿ ಕಳೆದುಕೊಂಡಿದ್ದ ರೈತನಿಗೆ 4 ತಿಂಗಳ ಬಳಿಕ ಅದೇ ಹಣದ ಕಂತೆ ಮತ್ತೆ ಸಿಕ್ಕಿದೆ. ಗೆದ್ದಲು ತಿಂದಿದ್ದ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಿಸಿಕೊಳ್ಳುವ ಸಲಹೆ ನೀಡಿದ ಕುಟುಂಬದ ವಿಡಿಯೋ ವೈರಲ್ ಆಗಿದೆ.
ರೈತರೊಬ್ಬರು ತಾವು ಕೃಷಿ ಭೂಮಿಯಿಂದ ಬೆಳೆದ ಬೆಳೆಯನ್ನು ಮಾರಾಟ ಮಾಡಿ ಫಸಲಿನ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಜಮೀನಿಗೆ ಹೋಗಿದ್ದರು. ಆಗ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ 17 ಸಾವಿರ ರೂ. ಹಣ ಮಣ್ಣಿನಲ್ಲಿ ಬಿದ್ದು ಹೋಗಿತ್ತು. ಎಷ್ಟೇ ಹುಡುಕಿದರೂ ಕೂಡ ಹಣದ ಕಂತೆ ಎಲ್ಲಿ ಬಿದ್ದಿದೆ ಎಂದು ಗೊತ್ತಾಗಲೇ ಇಲ್ಲ. ಆಗ ರೈತ ನಾನು ಐದಾರು ತಿಂಗಳ ಕಾಲ ಜೋಳ ಬೆಳೆದು ಅದನ್ನು ಮಾರುಕಟ್ಟೆಗೆ ಮಾರಾಟ ಬಂದಿದ್ದ ಹಣ ಜೇಬಿನಲ್ಲಿ ಇಟ್ಟುಕೊಂಡಾಗ ಕಳೆದುಹೋಗಿದೆ ಎಂದು ಗೋಳಾಡಿದ್ದರು.
ಜೊತೆಗೆ ಅಕ್ಕ-ಪಕ್ಕದ ಜಮೀನಿನ ಜನರು ಹಾಗೂ ಅವರ ಜಮೀನಿಗೆ ಕೃಷಿ ಕೂಲಿ ಕೆಲಸಕ್ಕೆ ಬಂದವರ ಬಳಿಯೂ ಕೂಡ ತನ್ನ ಹಣ ಸಿಕ್ಕಿದ್ದರೆ ವಾಪಸ್ ಕೊಡಿ ಎಂದು ಕೈಮುಗಿದು ಬೇಡಿಕೊಂಡಿದ್ದರು. ಆದರೆ, ಅವರು ಕಳೆದುಕೊಂಡಿದ್ದ ಹಣ ಯಾರಿಗೂ ಸಿಕ್ಕಿರಲಿಲ್ಲ. ಹೀಗಾಗಿ ಯಾರಬಳಿ ಕೇಳಿದರೂ ನನಗೆ ಹಣ ಸಿಕ್ಕಿಲ್ಲ ಎಂದೇ ಹೇಳಿದ್ದರು.ರೈತ ಜಮೀನಿನಲ್ಲಿ ನೇಗಿಲು ಹೊಡೆಸುವಾಗ ಮಣ್ಣಿನ ಅಡಿಯಲ್ಲಿ ಬಿದ್ದು ಅದರ ಮೇಲೆ ಮಣ್ಣು ಮುಚ್ಚಿಕೊಂಡಿತ್ತು. ಇದರಿಂದ ಹಣ ಸಿಗದೇ ಕಣ್ಣೀರು ಹಾಕಿದರೂ, ಭೂತಾಯಿ ಕೊಟ್ಟರೂ ಲಕ್ಷ್ಮಿ ತನಗೆ ಒಲಿಯಲಿಲ್ಲ ಎಂದು ಸುಮ್ಮನಾಗಿದ್ದರು. ಯಾರಿಗೆ ಸಿಕ್ಕಿದರೂ ಅವರಾದರೂ ನಾಲ್ಕಾರು ದಿನ ಸುಖವಾಗಿರಲಿ ಎಂದು ಆಶಿಸಿ ಹಣವನ್ನೇ ಮರೆತುಬಿಟ್ಟಿದ್ದರು.
ಭೂಮಿ ಹದ ಮಾಡುವಾಗ ಸಿಕ್ಕ ನೋಟಿನ ಕಂತೆ
ಆದರೆ, ಇದೀಗ ಮಳೆಗಾಲ ಆರಂಭವಾಗಿದ್ದು, ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದೆ. ಇದರ ಬೆನ್ನಲ್ಲಿಯೇ ಜಮೀನಿನಲ್ಲಿ ಕೃಷಿ ಕಾರ್ಯವನ್ನು ಆರಂಭಿಸಿದ ರೈತ ಭೂಮಿಯನ್ನು ಹದ ಮಾಡಿಸುವುದಕ್ಕೆ ಜಮೀನಿಗೆ ಬಂದಿದ್ದಾರೆ. ಆಗ ಜಮೀನು ಕೆಲಸಮಾಡುತ್ತಿದ್ದಾಗ ಅವರು ಕಳೆದು ಕೊಂಡಿದ್ದ ನೋಟಿನ ಕಂತೆ ಅವರಿಗೇ ಸಿಕ್ಕಿದೆ. ಜಮೀನಿನ ಮಣ್ಣಲ್ಲಿ ಸಿಕ್ಕ ಹಣದ ಕಂತೆಯಲ್ಲಿದ್ದ ಎಲ್ಲ ನೋಟುಗಳು ಕೂಡ ಗೆದ್ದಲು ತಿನ್ನುವುದಕ್ಕೆ ಶುರುವಾಗಿದ್ದವು. ಕೆಲವು ನೋಟುಗಳು ಭಾಗಶಃ ಹಾಳಾಗಿದ್ದವು. ಆದರೆ, ನೋಟಿನ ಕಂತೆ ಮಡಚಿಕೊಂಡು ಬಿದ್ದಿದ್ದರಿಂದ ಅದು ಸಂಪೂರ್ಣವಾಗಿ ಹಾಳಾಗಿಲ್ಲ. ಹೀಗಾಗಿ ರಬ್ಬರ್‌ನಿಂದ ಕಟ್ಟಿ ಹೇಗೆ ನೋಟಿನ ಕಂತೆ ಬಿದ್ದಿತ್ತೋ ಹಾಗೆಯೇ ಹರಿದ ಮತ್ತು ತೂತು ಬಿದ್ದಿರುವ ಸ್ಥಿತಿಯಲ್ಲಿ ನೋಟುಗಳು ಸಿಕ್ಕಿವೆ. ಈ ನೋಟಿನ ಕಂತೆಯಲ್ಲಿ 500, 200, 100 ಹಾಗೂ 50 ರೂ. ನೋಟುಗಳಿದ್ದವು.
ಈ ಹರಿದ ನೋಟಿನ ಕಂತೆಯನ್ನು ನೋಡಿದ ರೈತನ ಮುಖದಲ್ಲಿ ಭಾರೀ ಖುಷಿಯಾಗಿದೆ. ಭೂಮಿ ತಾಯಿಯೇ ಕೊಟ್ಟ ಈ ಫಸಲಿನ ಹಣ ಆಕೆಯ ಮಡಿಲಿಗೆ ಬಿದ್ದರೂ ವಾಪಸ್ ತನಗೇ ಸಿಕ್ಕಿತಲ್ಲ ಎಂಬ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆ ಹರಿದ ನೋಟುಗಳನ್ನು ತನ್ನ ಮನೆಯವರಿಗೆ ತೋರಿಸಿ ಸಂತಸವನ್ನು ಹಂಚಿಕೊಳ್ಳುವ ಜೊತೆಗೆ ಇದನ್ನು ಹೇಗೆ ನಡೆಸಬೇಕು ಎಂದು ಸಲಹೆಯನ್ನೂ ಕೇಳಿದ್ದರು. ಆಗ ಅವರ ಅಣ್ಣನ ಮಗ ಬಂದು ವಿಡಿಯೋ ಮಾಡಿಕೊಳ್ಳುತ್ತಾ 4 ತಿಂಗಳ ಹಿಂದೆ ಬೆಳೆದ ಮಾರಿದ ಹಣವನ್ನು ಜಮೀನಿನಲ್ಲಿ ಬೀಳಿಸಿಕೊಂಡ ಘಟನೆಯನ್ನು ವಿವರಿಸಿದ್ದಾರೆ. ಜೊತೆಗೆ, ಬ್ಯಾಂಕ್‌ಗಳಿಗೆ ಈ ಹಣವನ್ನು ಕೊಟ್ಟರೆ, ನೋಟು ಎಷ್ಟು ಶೇಕಡಾ ಹಾಳಾಗಿದೆ ಎಂಬುದನ್ನು ನೋಡಿ ಹಾಗೂ ನೋಟಿನ ಮೇಲಿನ ಸೀರಿಯಲ್ ನಂಬರ್ ಆಧರಿಸಿ ಹಾಳಾದ ನೋಟಿಗೆ ಒಂದಷ್ಟು ಹಣವನ್ನು ಹಿಡಿದುಕೊಂಡು ಉಳಿದ ಎಲ್ಲ ಹಣವನ್ನು ನಿಮಗೆ ಕೊಡುತ್ತಾರೆ ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್‌ನಲ್ಲಿ ಹೊಸ ನೋಟು ಕೊಡುತ್ತಾರೆ
ಹಣ ಮಾಸಿದ್ದರೂ, ಹರಿದು ಹೋಗಿದ್ದರೂ ತಾನು ಕಳೆದುಕೊಂಡ ನೋಟಿನ ಕಂತೆ ವಾಪಸ್ ಸಿಕ್ಕಿದ್ದ ರೈತ ಈಗ ಅದು ತನಗೆ ಬ್ಯಾಂಕ್‌ನಿಂದ ಹೊಸ ನೋಟುಗಳು ಸಿಗುತ್ತವೆ ಎಂದು ಕೇಳಿ ಮತ್ತಷ್ಟು ಸಂತಸಗೊಳ್ಳುತ್ತಾರೆ. ಇನ್ನು ಈ ವಿಡಿಯೋವನ್ನು ರೈತ ಕುಟುಂಬದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ 'ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ಯಾವತ್ತೂ ನಮ್ಮಿಂದ ದೂರ ಆಗಲ್ಲ ಎನ್ನುವುದಕ್ಕೆ ಸಾಕ್ಷಿ ಇದು' ಎಂದು ಟ್ಯಾಗ್‌ಲೈನ್ ಬರೆದಿದ್ದಾರೆ.
ಇದಕ್ಕೆ ಹಲವರು ಕಾಮೆಂಟ್ ಕೂಡ ಮಾಡಿದ್ದು, ಭೂಮಿ ತಾಯಿ ಯಾವತ್ತೂ ರೈತನನ್ನು ಕೈಬಿಡಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಒಂದು ವಸ್ತು ಕಳೆದುಕೊಂಡಾಗ ಆಗುವ ನೋವಿಗಿಂತ ಅದೇ ವಸ್ತು ವಾಪಸ್ ಸಿಕ್ಕಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಕಾಮೆಂಟ್ ಮಾಡಿ ರೈತನಿಗೆ ಬೆಂಬಲವನ್ನ ವ್ಯಕ್ತಪಡಿಸಿದ್ದಾರೆ.


