ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದ ಯುವಕ ಆಂಜನೇಯ ತನ್ನ ದುಡಿಮೆಯ ಹಣದಿಂದ 11 ಬಡ ಶಾಲಾ ಮಕ್ಕಳಿಗೆ ಸೈಕಲ್ ಉಡುಗೊರೆ ನೀಡಿದ್ದಾರೆ. ಪ್ರೌಢಶಾಲೆಗೆ 10 ಕಿ.ಮೀ. ನಡೆದು ಹೋಗುವ ಮಕ್ಕಳ ಕಷ್ಟ ನೋಡಿ ಈ ಸಹಾಯ ಹಸ್ತ ಚಾಚಿದ್ದಾರೆ. ಅವರ ಸ್ಟೋರಿ ಈಗ ವೈರಲ್ ಆಗಿದೆ.
ದೇವದುರ್ಗ: ಅವರ ಜೀವನ ನಡೆಯಬೇಕು ತುತ್ತಿನ ಚೀಲ ತುಂಬಬೇಕು ಎಂದರೆ ಅವರು ದಿನವೂ ದುಡಿಯಲೇಬೇಕು. ಪಿತ್ರಾರ್ಜಿತವಾಗಿ ಬಂದ ಆಸ್ತಿ ಅವರಿಗಿಲ್ಲ, ಆದರೂ ಅವರು ತೋರಿದ ಹೃದಯ ವೈಶಾಲ್ಯತೆ ಈಗ ಎಲ್ಲರಿಗೂ ಮಾದರಿಯಾಗಿದೆ. ತನ್ನ ದುಡಿಮೆಯಿಂದ ಭವಿಷ್ಯಕ್ಕಾಗಿ ಕೂಡಿಟ್ಟ ಸ್ವಲ್ಪ ಹಣದಲ್ಲೇ ಅವರು ತಮ್ಮ ಊರಿನ 11 ಬಡ ಶಾಲಾ ಮಕ್ಕಳಿಗೆ ಸೈಕಲ್ ಕೊಡಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಬಡವನಾದರೂ ತಾನು ತುಂಬಾ ಶ್ರೀಮಂತ ಎಂಬುದನ್ನು ಅವರು ಸಾಧಿಸಿ ತೋರಿಸಿದ್ದಾರೆ. ಅವರೇ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದ ಯುವಕ ಆಂಜನೇಯ.
ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ದುಡಿಮೆಯ ಸಣ್ಣ ಪಾಲೊಂದನ್ನು ದಾನ ಮಾಡುವುದು ಸಾಮಾನ್ಯ. ದುಬಾರಿ ಮೊತ್ತದ ತೆರಿಗೆಯಿಂದ ಪಾರಾಗುವುದಕ್ಕೆ ಉದ್ಯಮಿಗಳೆಲ್ಲಾ ಈ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಇದರ ಜೊತೆ ತೆರಿಗೆಯ ಹೊರತಾಗಿಯೂ ದಾನಕ್ಕೆ ಹೆಸರಾದ ಹಲವು ಉದ್ಯಮಿಗಳಿದ್ದಾರೆ. ಆದರೂ ಕೂಲಿ ಕಾರ್ಮಿಕರೊಬ್ಬರು ಈ ರೀತಿ ತನ್ನ ಉಳಿತಾಯದಿಂದ 11 ಮಕ್ಕಳಿಗೆ ಸೈಕಲ್ ನೀಡುವುದು ಎಂದರೆ ಅದು ಸಣ್ಣ ಸಾಧನೆಯಂತು ಅಲ್ಲ.
ಮಕ್ಕಳಿಗೆ ಸೈಕಲ್ ನೀಡುವುದಕ್ಕೆ ಕಾರಣ ಏನು?
ಆಂಜನೇಯ ಅವರು ಇರುವ ಮಲ್ಕಂದಿನ್ನಿ ಗ್ರಾಮದಲ್ಲಿ ಪ್ರೌಢ ಶಾಲೆ ಇಲ್ಲ. ಹೀಗಾಗಿ ಈ ಗ್ರಾಮದ ಮಕ್ಕಳು ಪ್ರತಿದಿನ 10 ಕಿಲೋ ಮೀಟರ್ ನಡೆದು ಹೋಗಬೇಕು. ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲೇ ಕೂಲಿ ಕೆಲಸಕ್ಕಾಗಿ ಮನೆಯಿಂದ ಹೊರಡುತ್ತಿದ್ದ ಆಂಜನೇಯ ಅವರಿಗೆ ಈ ಮಕ್ಕಳು ದಿನವೂ ಅಷ್ಟು ದೂರ ನಡೆದು ಹೋಗಿ ಕಷ್ಟಪಡುತ್ತಿರುವುದು ಗಮನಕ್ಕೆ ಬಂತು. ಹೀಗಾಗಿ ಅವರು ಈ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದರು. ಹಾಗು ಯಾರ ಸಲಹೆಗಾಗಿ ಅಥವಾ ಸಹಾಯಕ್ಕಾಗಿ ಕಾಯದೇ ತಮ್ಮ ಉಳಿತಾಯದಿಂದ 11 ಮಕ್ಕಳಿಗೆ ಸೈಕಲ್ ತೆಗೆಸಿ ಕೊಡುವ ನಿರ್ಧಾರ ಮಾಡಿದರು.
ಮಲ್ಕಂದಿನ್ನಿಯಿಂದ ಹೇಮನೂರು ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ.
ಮಲ್ಕಂದಿನ್ನಿಯಿಂದ ಪ್ರೌಢಶಾಲೆ ಇರುವ ಹೇಮನೂರು ಗ್ರಾಮಕ್ಕೆ ಬಸ್ ಸೌಲಭ್ಯವೂ ಇರಲಿಲ್ಲ, ಹೀಗಾಗಿ ನಡೆದು ಹೋಗುವುದಕ್ಕೆ ಸಾಧ್ಯವಾಗದೇ ಕೆಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ನಮ್ಮ ಹಳ್ಳಿಯ ಮಕ್ಕಳ ಈ ಕಷ್ಟವನ್ನು ನೋಡಲಾಗುತ್ತಿರಲಿಲ್ಲ, ಈ ದೂರದ ಕಾರಣಕ್ಕೆ 15ರಿಂದ 20 ಮಕ್ಕಳು ಪ್ರತಿವರ್ಷ ಶಾಲೆಯನ್ನು ಅರ್ಧಕ್ಕೆ ತೊರೆಯುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸೈಕಲ್ ತೆಗೆದುಕೊಡಲು ಮುಂದಾದೆ. ನನ್ನ ಈ ಸಣ್ಣ ಸಹಾಯದಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದಾದರೆ ಅದಕ್ಕಿಂತ ಹೆಚ್ಚು ನನಗೆ ಇನ್ನೇನು ಬೇಕು ಎಂದು ಆಂಜನೇಯ ಅವರು ತಮ್ಮ ಈ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಆರು ಹುಡುಗಿಯರು 5 ಹುಡುಗಿಯರಿಗೆ ಸೈಕಲ್
ಆಂಜನೇಯ ಮಲ್ಕಂದಿನ್ನಿ ಅವರು ಕಳೆದ ಮಾರ್ಚ್‌ನಲ್ಲಿ ಹೇಮನೂರು ಶಾಲೆಗೆ ಭೇಟಿ ನೀಡಿ ಅಲ್ಲಿನ ಮುಖ್ಯೋಪಾಧ್ಯಾಯರಿಗೆ ಒಟ್ಟು 11 ಸೈಕಲ್‌ಗಳನ್ನು ನೀಡಿದ್ದಾರೆ. ಈ ಸೈಕಲ್‌ಗಳನ್ನು ಮಲ್ಕಂದಿನ್ನಿಯ ಆರು ಹುಡುಗಿಯರು ಹಾಗೂ ಐದು ಹುಡುಗರಿಗೆ ಹಸ್ತಾಂತರ ಮಾಡಲಾಗಿದ್ದು. ಇದರಿಂದ ಈ ಮಕ್ಕಳು 10 ಕಿಲೋ ಮೀಟರ್ ನಡೆದು ಹೋಗುವ ತೊಂದರೆಯಿಂದ ಪಾರಾಗಿದ್ದಾರೆ.
ಉಚಿತ ಸೈಕಲ್ ಯೋಜನೆ ಜಾರಿಗೆ ತಂದಿದ್ದ ಯಡಿಯೂರಪ್ಪ
2006-07ರ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸರ್ಕಾರಿ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ನೀಡುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಎಷ್ಟು ಜನಪ್ರಿಯವಾಯ್ತು ಎಂದರೆ ಇದನ್ನು ಹುಡುಗರಿಗೂ ವಿಸ್ತರಿಸಬೇಕು ಎಂಬ ಕೂಗು ಕೇಳಿ ಬಂತು. ಆದರೆ ಈಗ ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಹಣ ಹರಿದು ಹೋಗಿರುವುದರಿಂದ ಮಕ್ಕಳಿಗೆ ಸೈಕಲ್ ಕೊಡಿಸಲು ಹಣವೇ ಇಲ್ಲದಾಗಿದೆ. ಹೀಗಾಗಿ ಈ ಬಾರಿ ಮಕ್ಕಳಿಗೆ ಸೈಕಲ್ ಸಿಗೋದು ಮರೀಚಿಕೆಯಾಗಿದೆ.
ಕೆಲ ಅಂದಾಜಿನ ಪ್ರಕಾರ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದಲ್ಲಿ ಸುಮಾರು 186 ಕಂದಾಯ ಗ್ರಾಮಗಳಿವೆ. ಇದರಲ್ಲಿ 50ಕ್ಕೂ ಹೆಚ್ಚು ಹಳ್ಳಿಗಳಿದ್ದು, 30 ಗುಡಿಸಲು ಮನೆಗಳಿವೆ. ಆದರೆ ದುರಾದೃಷ್ಟ ಏನೆಂದರೆ ಇಲ್ಲಿನ 100ಕ್ಕೂ ಹಳ್ಳಿಗಳಿಗೆ ಬಸ್ ಸೌಲಭ್ಯಗಳಿಲ್ಲದ ಕಾರಣ ಹೆಚ್ಚಿನ ಮಕ್ಕಳು ಪ್ರೌಢಾಶಾಲಾ ಶಿಕ್ಷಣಕ್ಕೆ ವಿದಾಯ ಹೇಳುತ್ತಿದ್ದಾರೆ. ಆದರೆ ಸರ್ಕಾರವೂ ಮತ್ತೆ ಈ ಹಳ್ಳಿಯ ಮಕ್ಕಳಿಗೆ ಉಚಿತ ಸೈಕಲ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರೆ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
