ಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಮಹಿಳೆಯನ್ನು ಹೊರಹಾಕಿದ ಘಟನೆಯನ್ನು ಪ್ರವಾಸಿ ವ್ಲಾಗರ್ ರಾಹುಲ್ ವಿವರಿಸಿದ್ದಾರೆ. ಹಾಸ್ಟೆಲ್‌ನ ಚೆಕ್-ಔಟ್ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಇದು ಜನಾಂಗೀಯ ತಾರತಮ್ಯದ ಪ್ರಕರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲಂಡನ್‌ನ ಹಾಸ್ಟೆಲ್ ಒಂದರಿಂದ ಭಾರತೀಯ ಮಹಿಳೆಯೊಬ್ಬರನ್ನು ಹೊರಹಾಕಿದ ವೀಡಿಯೊವನ್ನು ಭಾರತೀಯ ಪ್ರವಾಸಿ ವ್ಲಾಗರ್ ರಾಹುಲ್ ಹಂಚಿಕೊಂಡಿದ್ದಾರೆ. ಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಹುಡುಗಿಯನ್ನು ಹೊರಹಾಕಲಾಯಿತು ಎಂಬ ಶೀರ್ಷಿಕೆಯೊಂದಿಗೆ ರಸ್ತೆಯಲ್ಲಿ ನಿಂತಿರುವ ಮಹಿಳೆಯ ದೃಶ್ಯಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಜನಾಂಗೀಯ ತಾರತಮ್ಯದ (Racism) ಘಟನೆಯಲ್ಲ, ಬದಲಿಗೆ ಹಾಸ್ಟೆಲ್ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ನಡೆದ ಕ್ರಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಭಾರತದಲ್ಲಿ ಜನರು ನಿಯಮಗಳನ್ನು ಪಾಲಿಸುವುದಿಲ್ಲ ಎಂಬ ಕಾರಣಕ್ಕೆ, ಇತರ ದೇಶಗಳಲ್ಲೂ ನಿಯಮಗಳನ್ನು ನಿರ್ಲಕ್ಷಿಸಬಹುದು ಎಂದರ್ಥವಲ್ಲ" ಎಂದು ತಮ್ಮ ಶೀರ್ಷಿಕೆಯಲ್ಲಿ ರಾಹುಲ್ ಬರೆದುಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿ ನಡೆದಿದ್ದೇನು?

ಯುಕೆ ರಾಜಧಾನಿ ಲಂಡನ್‌ನ ಹೆಚ್ಚಿನ ಹಾಸ್ಟೆಲ್‌ಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಚೆಕ್-ಔಟ್ (Check-out) ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಆದರೆ, ಈ ಮಹಿಳೆ ಬೆಳಿಗ್ಗೆ 10 ಗಂಟೆಯಾದರೂ ಕೊಠಡಿಯನ್ನು ಖಾಲಿ ಮಾಡಲು ನಿರಾಕರಿಸಿದ್ದರು. ಆ ಕೊಠಡಿಗೆ ಪ್ರವೇಶಿಸಲು ಇತರ ಪ್ರವಾಸಿಗರು ಹೊರಗೆ ಕಾಯುತ್ತಿದ್ದರು.

ಸಿಬ್ಬಂದಿ ಬಂದು ಕೊಠಡಿ ಖಾಲಿ ಮಾಡುವಂತೆ ವಿನಂತಿಸಿದಾಗ, ಹೌದು, ಈಗಲೇ ಖಾಲಿ ಮಾಡುತ್ತೇನೆ ಎಂದು ಹೇಳುತ್ತಾ ಸಮಯ ವಿಳಂಬ ಮಾಡುತ್ತಿದ್ದರು. ಹಲವು ಬಾರಿ ಕೋರಿದರೂ ಆಕೆ ಸ್ಪಂದಿಸದಿದ್ದಾಗ, ಕೊನೆಗೆ ಸಿಬ್ಬಂದಿ ಆಕೆಯನ್ನು ಬಲವಂತವಾಗಿ ಹಾಸ್ಟೆಲ್‌ನಿಂದ ಹೊರಹಾಕಬೇಕಾಯಿತು. ತಮ್ಮನ್ನು ಹೊರಹಾಕಲಾಗುತ್ತಿದೆ ಎಂದು ಅರಿವಾದ ತಕ್ಷಣ ಆ ಮಹಿಳೆ ವೀಡಿಯೊ ಚಿತ್ರೀಕರಣ ಮಾಡಲು ಪ್ರಾರಂಭಿಸಿದರು.

ಜನಾಂಗೀಯ ತಾರತಮ್ಯದ ಆರೋಪ ತಳ್ಳಿಹಾಕಿದ ವ್ಲಾಗರ್

ಈ ಇಡೀ ಘಟನೆಯನ್ನು ಕಣ್ಣಾರೆ ಕಂಡ ರಾಹುಲ್, ಸಾಮಾಜಿಕ ಜಾಲತಾಣಗಳಲ್ಲಿ ಹರಿಯುವ ಏಕಪಕ್ಷೀಯ ವೀಡಿಯೊಗಳನ್ನು ನೋಡಿ ತೀರ್ಮಾನಕ್ಕೆ ಬರಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಯಾವುದೇ ವೀಡಿಯೊವನ್ನು ನೋಡಿದ ತಕ್ಷಣ ಯಾರನ್ನೂ ಜಡ್ಜ್ ಮಾಡಬೇಡಿ. ನಾಣ್ಯದ ಎರಡೂ ಮುಖಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಾಸ್ಟೆಲ್ ಸಿಬ್ಬಂದಿ ಅತ್ಯಂತ ವಿನಮ್ರವಾಗಿಯೇ ಹಲವು ಬಾರಿ ಖಾಲಿ ಮಾಡಲು ಕೇಳಿಕೊಂಡರು. ಆದರೆ ಆಕೆ ಸಹಕರಿಸಲಿಲ್ಲ, ಹೀಗಾಗಿ ಆಕೆಯನ್ನು ಹೊರಗೆ ಕಳುಹಿಸಲಾಯಿತು ಎಂದು ರಾಹುಲ್ ವಿವರಣೆ ನೀಡಿದ್ದಾರೆ.

ಮುಂದುವರಿದು, ವೀಡಿಯೊ ವೈರಲ್ ಆದ ನಂತರ, ಲಂಡನ್‌ನಲ್ಲಿ ಜನಾಂಗೀಯ ತಾರತಮ್ಯವಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಜನಾಂಗೀಯ ತಾರತಮ್ಯ ನಡೆದಿಲ್ಲ. ನೀವು ವಿದೇಶಕ್ಕೆ ಹೋದಾಗ ಅಲ್ಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಅವರು ಸತ್ಯಾಂಶವನ್ನು ಹಂಚಿಕೊಂಡಿದ್ದಾರೆ.